ರಿಷಭ್ ಪಂತ್ (Rishabh Pant) ಅನುಪಸ್ಥಿತಿಯಲ್ಲಿ ಭಾರತ ಟೆಸ್ಟ್ ತಂಡಕ್ಕೆ ಸೂಕ್ತ ವಿಕೆಟ್ ಕೀಪರ್ ಬ್ಯಾಟ್ಸ್ಮನ್ನನ್ನು ಹುಡುಕುತ್ತಿರುವ ಆಯ್ಕೆ ಮಂಡಳಿಗೆ ಇಶಾನ್ ಕಿಶನ್ (Ishan Kishan) ರೂಪದಲ್ಲಿ ಒಬ್ಬ ಸೂಕ್ತ ಆಟಗಾರ ಸಿಕ್ಕಿದ್ದಾನೆ. ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಭಾರತ ಟೆಸ್ಟ್ (India vs West Indies) ತಂಡದಲ್ಲಿ ಆಡುವ ಅವಕಾಶ ಗಿಟ್ಟಿಸಿಕೊಂಡಿರುವ ಯುವ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಕಿಶನ್ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡಿದ್ದಾರೆ. ಡೊಮಿನಿಕಾದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಖಾತೆ ತೆರೆಯಲು ಸಾಕಷ್ಟು ಎಸೆತಗಳನ್ನು ತೆಗೆದುಕೊಂಡು ನಾಯಕನ ಕೋಪಕ್ಕೆ ಗುರಿಯಾಗಿದ್ದ ಕಿಶನ್, ಎರಡನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ಸ್ಫೋಟಕ ಅರ್ಧಶತಕ ಸಿಡಿಸಿ ಟೆಸ್ಟ್ ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ.
ಪೋರ್ಟ್ ಆಫ್ ಸ್ಪೇನ್‌ನಲ್ಲಿ ನಡೆಯುತ್ತಿರುವ ಮಳೆ ಪೀಡಿತ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ, ವಿಂಡೀಸ್ ವಿರುದ್ಧ ಮೇಲುಗೈ ಸಾಧಿಸಿದೆ. ಇದಕ್ಕೆ ಪ್ರಮುಖ ಕಾರಣ ತಂಡದ ಸ್ಫೋಟಕ ಬ್ಯಾಟಿಂಗ್. ಇದಕ್ಕೆ ಮೊದಲು ನಾಂದಿ ಹಾಡಿದ್ದ ನಾಯಕ ರೋಹಿತ್ ಶರ್ಮಾ ತಮ್ಮ ಟೆಸ್ಟ್ ವೃತ್ತಿ ಬದುಕಿನಲ್ಲಿ ವೇಗದ ಅರ್ಧಶತಕ ಸಿಡಿಸಿ ಮಿಂಚಿದರೆ, ಕೊಹ್ಲಿ ಸ್ಥಾನದಲ್ಲಿ ಬ್ಯಾಟಿಂಗ್ಗೆ ಇಳಿದ ಇಶಾನ್ ಕಿಶನ್, ನಾಲ್ಕು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳ ಸಹಾಯದಿಂದ ಕೇವಲ 33 ಎಸೆತಗಳಲ್ಲಿ ತಮ್ಮ ಚೊಚ್ಚಲ ಟೆಸ್ಟ್ ಅರ್ಧಶತಕವನ್ನು ಪೂರೈಸಿದರು. ಇದರೊಂದಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ವೇಗದ ಅರ್ಧಶತಕ ಸಿಡಿಸಿದ ಭಾರತದ ಆಟಗಾರರಾದ ರಿಷಭ್ ಪಂತ್, ವೀರೇಂದ್ರ ಸೆಹ್ವಾಗ್, ಕಪಿಲ್ ದೇವ್, ಹರ್ಭಜನ್ ಮತ್ತು ಎಂಎಸ್ ಧೋನಿ ಅವರಂತಹ ಆಟಗಾರರ ಪಟ್ಟಿಗೆ ಕಿಶನ್ ಸೇರ್ಪಡೆಗೊಂಡರು.
IND vs WI: ಒಂದೇ ಕೈಯಲ್ಲಿ ಸಿಕ್ಸರ್! ಅರ್ಧಶತಕದ ಇನ್ನಿಂಗ್ಸ್ನಲ್ಲಿ ಪಂತ್ರನ್ನು ನೆನಪಿಸಿದ ಕಿಶನ್; ವಿಡಿಯೋ ನೋಡಿ
ಈ ಹಿಂದೆ ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ 34 ಎಸೆತಗಳಲ್ಲಿ ಸಿಡಿಸಿದ ಅಧರ್ಶತಕ ದಾಖಲೆಯನ್ನು 33 ಎಸೆತಗಳಲ್ಲಿ ಅರ್ಧಶತಕ ದಾಖಲಿಸುವುದರೊಂದಿಗೆ ಕಿಶನ್ ಮುರಿದರು. ಈ ಮೂಲಕ ಈ ದಾಖಲೆ ಬರೆದ ಟೀಂ ಇಂಡಿಯಾದ ಎರಡನೇ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಎನಿಸಿಕೊಂಡರು. ಅಲ್ಲದೆ ಕಿಶನ್ ಅವರು ನರೇನ್ ತಮ್ಹಾನೆ, ಬುಧಿ ಕುಂದರನ್, ಫಾರೋಖ್ ಇಂಜಿನಿಯರ್, ಸೈಯದ್ ಕಿರ್ಮಾನಿ ಮತ್ತು ನಯನ್ ಮೊಂಗಿಯಾ ಅವರ ನಂತರ ಟೆಸ್ಟ್ ಕ್ರಿಕೆಟ್‌ನಲ್ಲಿ 4 ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿದ ಆರನೇ ಭಾರತೀಯ ವಿಕೆಟ್‌ಕೀಪರ್ ಬ್ಯಾಟರ್ ಎನಿಸಿಕೊಂಡರು
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:41 am, Mon, 24 July 23