ಕೆರಿಬಿಯನ್ ನಾಡಲ್ಲಿ 52 ವರ್ಷಗಳ ಹಿಂದೆ ಸುನಿಲ್ ಗವಾಸ್ಕರ್ (Sunil Gavaskar) ಮಾಡಲು ಸಾಧ್ಯವಾಗದ, 12 ವರ್ಷಗಳ ಹಿಂದೆ ವಿರಾಟ್ ಕೊಹ್ಲಿ (Virat Kohli) ಮಾಡಲು ಸಾಧ್ಯವಾಗದ ಕೆಲಸವನ್ನು 21 ವರ್ಷದ ಯಶಸ್ವಿ ಜೈಸ್ವಾಲ್ (Yashasvi Jaiswal) ಮಾಡಿ ತೋರಿದ್ದಾರೆ. ಟೀಂ ಇಂಡಿಯಾದಲ್ಲಿ (Team India) ಅಂತರಾಷ್ಟ್ರೀಯ ವೃತ್ತಿ ಜೀವನ ಆರಂಭಿಸುತ್ತಿರುವ ಯಶಸ್ವಿ ಜೈಸ್ವಾಲ್ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಪಂದ್ಯದಲ್ಲೇ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಡೊಮಿನಿಕಾದಲ್ಲಿ ಆರಂಭವಾಗಿರುವ ಮೊದಲ ಟೆಸ್ಟ್ನ ಎರಡನೇ ದಿನದಂದು ದಾಖಲೆಯ ಶತಕ ಸಿಡಿಸಿದ ಯಶಸ್ವಿ, ಇದರೊಂದಿಗೆ ಸೌರವ್ ಗಂಗೂಲಿ, ವೀರೇಂದ್ರ ಸೆಹ್ವಾಗ್, ರೋಹಿತ್ ಶರ್ಮಾ ಅವರಂತಹ ಅನುಭವಿಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡುವ ಮುನ್ನ ದೇಶೀ ಟೂರ್ನಿಯಲ್ಲಿ ರನ್ ಶಿಖರ ಕಟ್ಟಿದ ಯಶಸ್ವಿ, ಆಯ್ಕೆ ಮಂಡಳಿ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ರಣಜಿ ಟ್ರೋಫಿ, ದುಲೀಪ್ ಟ್ರೋಫಿ, ಇರಾನಿ ಕಪ್ ಮತ್ತು ಇಂಡಿಯಾ ಎ ಪರ ಕೇವಲ 15 ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ ಯಶಸ್ವಿ, ಇದರಲ್ಲಿ ಬರೋಬ್ಬರಿ 9 ಶತಕಗಳನ್ನು ಬಾರಿಸಿದ್ದಾರೆ. ಅಂತಹ ಅಮೋಘ ಪ್ರದರ್ಶನದ ನಂತರ ಟೀಂ ಇಂಡಿಯಾಗೆ ಎಂಟ್ರಿ ಕೊಟ್ಟಿದ್ದ ಜೈಸ್ವಾಲ್, ಇಲ್ಲೂ ಕೂಡ ತನ್ನ ಹಳೆಯ ಫಾರ್ಮ್ ಅನ್ನು ಮುಂದುವರೆಸಿದ್ದಾರೆ.
IND vs WI: 5 ವಿಕೆಟ್, ಅಂಡರ್ಸನ್ ದಾಖಲೆ ಉಡೀಸ್! ಮೊದಲ ದಿನವೇ ಹಲವು ದಾಖಲೆ ಬರೆದ ಅಶ್ವಿನ್..!
ಮೊದಲ ದಿನದಾಟದಂತ್ಯಕ್ಕೆ 40 ರನ್ ಬಾರಿಸಿ ಅಜೇಯರಾಗಿ ಉಳಿದಿದ್ದ ಯಶಸ್ವಿ, ಎರಡನೇ ದಿನದಾಟದಲ್ಲಿ ಇಲ್ಲಿಂದ ತಮ್ಮ ಇನ್ನಿಂಗ್ಸ್ ಮುಂದುವರೆಸಿದರು. ನಿದಾನಗತಿಯ ಬ್ಯಾಟಿಂಗ್ ಮೂಲಕ ಮೊದಲ ಸೆಷನ್‌ನಲ್ಲಿ ತಮ್ಮ ಅರ್ಧಶತಕವನ್ನು ಪೂರ್ಣಗೊಳಿಸಿದರು. 104 ಎಸೆತಗಳಲ್ಲಿ ತಮ್ಮ ಚೊಚ್ಚಲ ಅರ್ಧಶತಕ ಪೂರೈಸಿದ ಯಶಸ್ವಿ, ಎರಡನೇ ಸೆಷನ್‌ನಲ್ಲಿ ಕೊಂಚ ರನ್ ವೇಗ ಹೆಚ್ಚಿಸಿದರು. ಬಳಿಕ ಅಲಿಕ್ ಎತಾನಾಜೆ ಅವರ ಚೆಂಡನ್ನು ಸ್ಕ್ವೇರ್ ಲೆಗ್ ಕಡೆಗೆ ಆಡುವ ಮೂಲಕ ಸಿಂಗಲ್ ತೆಗೆದುಕೊಂಡು ಸ್ಮರಣೀಯ ಶತಕವನ್ನು (215 ಎಸೆತ) ಪೂರ್ಣಗೊಳಿಸಿದರು.
ಈ ಶತಕದೊಂದಿಗೆ ಯಶಸ್ವಿ ಜೈಸ್ವಾಲ್ ತಮ್ಮ ಹೆಸರಿನಲ್ಲಿ ವಿಶೇಷ ದಾಖಲೆಯನ್ನೂ ಬರೆದರು. ಚೊಚ್ಚಲ ಟೆಸ್ಟ್‌ನಲ್ಲಿ ಶತಕ ಬಾರಿಸಿದ ಭಾರತದ 17 ನೇ ಬ್ಯಾಟ್ಸ್‌ಮನ್ ಎನಿಸಿಕೊಂಡರೆ, ವೆಸ್ಟ್ ಇಂಡೀಸ್‌ನಲ್ಲಿ ಚೊಚ್ಚಲ ಶತಕ ಸಿಡಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ದಾಖಲೆ ಬರೆದರು. 1971 ರಲ್ಲಿ, ವೆಸ್ಟ್ ಇಂಡೀಸ್ ವಿರುದ್ಧ ತಮ್ಮ ಚೊಚ್ಚಲ ಪಂದ್ಯವನ್ನಾಡಿದ್ದ ಸುನಿಲ್ ಗವಾಸ್ಕರ್ಗೆ ಮೊದಲ ಪಂದ್ಯದಲ್ಲಿ ಶತಕ ಬಾರಿಸಲು ಸಾಧ್ಯವಾಗಿರಲಿಲ್ಲ. ಅದೇ ಸಮಯದಲ್ಲಿ, 2011 ರಲ್ಲಿ ವಿಂಡೀಸ್ ನೆಲದಲ್ಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಕಿಂಗ್ ಕೊಹ್ಲಿಗೂ ಕೂಡ ಶತಕ ಸಿಡಿಸಲು ಸಾಧ್ಯವಾಗಿರಲಿಲ್ಲ. ಆದರೆ ಈ ಇಬ್ಬರು ದಿಗ್ಗಜರು ಮಾಡಲಾಗದ್ದನ್ನು, ಯುವ ಬ್ಯಾಟರ್ ಮಾಡಿ ಇತಿಹಾಸ ನಿರ್ಮಿಸಿದ್ದಾರೆ.
ಯಶಸ್ವಿ ಅವರ ಈ ಶತಕ ವಿಶೇಷವಷ್ಟೇ ಅಲ್ಲ, ಇನ್ನು ಕೆಲವು ಸಾಧನೆಗಳೂ ಅವರ ಖಾತೆ ಸೇರಿವೆ. ಈ ಚೊಚ್ಚಲ ಶತಕದೊಂದಿಗೆ ವಿದೇಶಿ ನೆಲದಲ್ಲಿ ಟೆಸ್ಟ್‌ಗೆ ಪಾದಾರ್ಪಣೆ ಮಾಡಿ ಶತಕ ಬಾರಿಸಿದ ಭಾರತದ ಮೊದಲ ಆರಂಭಿಕ ಬ್ಯಾಟರ್ ಎಂಬ ದಾಖಲೆಗೆ ಯಶಸ್ವಿ ಕೊರಳೊಡ್ಡಿದ್ದಾರೆ. ಹಾಗೆಯೇ ವಿದೇಶಿ ನೆಲದಲ್ಲಿ ಚೊಚ್ಚಲ ಟೆಸ್ಟ್‌ನಲ್ಲಿ ಶತಕ ಸಿಡಿಸಿದ ಏಳನೇ ಭಾರತೀಯ ಬ್ಯಾಟ್ಸ್‌ಮನ್ ಕೂಡ. ಈ ಸಮಯದಲ್ಲಿ, ಯಶಸ್ವಿ ನಾಯಕ ರೋಹಿತ್ ಶರ್ಮಾ ಅವರೊಂದಿಗೆ 229 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು, ಇದು ಏಷ್ಯಾದ ಹೊರಗೆ ಭಾರತದ ಅತಿದೊಡ್ಡ ಆರಂಭಿಕ ಪಾಲುದಾರಿಕೆಗೆ ಹೊಸ ದಾಖಲೆಯಾಗಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:35 am, Fri, 14 July 23