ಡೊಮಿನಿಕಾದ ವಿಂಡ್ಸರ್ ಪಾರ್ಕ್ ಮೈದಾನದಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ಟೀಂ ಇಂಡಿಯಾದ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ತಮ್ಮ ಚೊಚ್ಚಲ ಟೆಸ್ಟ್ ಶತಕ ಬಾರಿಸಿ, ವೃತ್ತಿ ಜೀವನವಕ್ಕೆ ಅದ್ಭುತವಾದ ಆರಂಭ ನೀಡಿದ್ದಾರೆ.
ಆರಂಭದಿಂದಲೂ ತಾಳ್ಮೆಯ ಆಟಕ್ಕೆ ಮುಂದಾಗಿದ್ದ ಯಶಸ್ವಿ, 215 ಎಸೆತಗಳಲ್ಲಿ ತಮ್ಮ ಶತಕ ಪೂರೈಸಿದರು. ಎರಡನೇ ದಿನದಾಟದಂತ್ಯಕ್ಕೆ 143 ರನ್ ಬಾರಿಸಿ ಅಜೇಯರಾಗಿ ಉಳಿದಿರುವ ಜೈಸ್ವಾಲ್ ನಾಯಕ ರೋಹಿತ್ ಜೊತೆಗೂಡಿ ದಾಖಲೆಯ ಜೊತೆಯಾಟವನ್ನು ಹಂಚಿಕೊಂಡರು. ಇದಲ್ಲದೆ ಹಲವು ದಾಖಲೆಗಳನ್ನು ತನ್ನ ಖಾತೆಗೆ ಜಮಾ ಮಾಡಿಕೊಂಡರು.
ಚೊಚ್ಚಲ ಟೆಸ್ಟ್‌ನಲ್ಲಿ ಶತಕ ಬಾರಿಸಿರುವ ಜೈಸ್ವಾಲ್, ಈ ಸಾಧನೆ ಮಾಡಿದ ಭಾರತದ ನಾಲ್ಕನೇ ಅತ್ಯಂತ ಕಿರಿಯ ಬ್ಯಾಟರ್ (21 ವರ್ಷ 196 ದಿನ) ಎನಿಸಿಕೊಂಡಿದ್ದಾರೆ. ಜೈಸ್ವಾಲ್ಗೂ ಮುನ್ನ 18 ವರ್ಷ 329 ದಿನಗಳಲ್ಲಿ ಶತಕ ಸಿಡಿಸುವುದರೊಂದಿಗೆ ಪೃಥ್ವಿ ಶಾ ಈ ದಾಖಲೆಯನ್ನು ತನ್ನದಾಗಿಸಿಕೊಂಡಿದ್ದರು. ಇವರಲ್ಲದೆ ಅಬ್ಬಾಸ್ ಅಲಿ ಬೇಗ್ (20 ವರ್ಷ 126 ದಿನಗಳು), ಮತ್ತು ಗುಂಡಪ್ಪ ವಿಶ್ವನಾಥ್ (20 ವರ್ಷ 276 ದಿನಗಳು) ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿದ್ದಾರೆ
ಹಾಗೆಯೇ ಆರಂಭಿಕನಾಗಿ ಕಣಕ್ಕಿಳಿದು ಮೊದಲ ಪಂದ್ಯದಲ್ಲೇ ಶತಕ ಸಿಡಿಸಿದ ಮೂರನೇ ಭಾರತೀಯ ಬ್ಯಾಟರ್ ಎಂಬ ದಾಖಲೆಯೂ ಜೈಸ್ವಾಲ್ ಪಾಲಾಗಿದೆ. ಯಶಸ್ವಿಗೂ ಮುನ್ನ ಪೃಥ್ವಿ ಶಾ (2018) ಮತ್ತು ಶಿಖರ್ ಧವನ್ (2013) ಚೊಚ್ಚಲ ಪಂದ್ಯದಲ್ಲೇ ಆರಂಭಿಕರಾಗಿ ಶತಕ ಸಿಡಿಸಿದ್ದರು.
ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ವಿಂಡೀಸ್ ವಿರುದ್ಧ ಶತಕ ಸಿಡಿಸಿದ ಮೂರನೇ ಬ್ಯಾಟರ್ ಯಶಸ್ವಿ ಜೈಸ್ವಾಲ್. ಅವರಿಗೂ ಮುನ್ನ ಪೃಥ್ವಿ ಶಾ ಮತ್ತು ರೋಹಿತ್ ಶರ್ಮಾ ವೆಸ್ಟ್ ಇಂಡೀಸ್ ವಿರುದ್ಧ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿದ್ದರು.
ಈ ಚೊಚ್ಚಲ ಟೆಸ್ಟ್ ಶತಕದೊಂದಿಗೆ ವಿದೇಶಿ ನೆಲದಲ್ಲಿ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿ, ಶತಕ ಬಾರಿಸಿದ ಭಾರತದ ಮೊದಲ ಆರಂಭಿಕ ಬ್ಯಾಟರ್ ಎಂಬ ದಾಖಲೆಗೆ ಯಶಸ್ವಿ ಕೊರಳೊಡ್ಡಿದ್ದಾರೆ.
ಹಾಗೆಯೇ ವಿದೇಶಿ ನೆಲದಲ್ಲಿ ಚೊಚ್ಚಲ ಟೆಸ್ಟ್‌ನಲ್ಲಿ ಶತಕ ಸಿಡಿಸಿದ ಏಳನೇ ಭಾರತೀಯ ಬ್ಯಾಟ್ಸ್‌ಮನ್ ಎಂಬ ದಾಖಲೆಯೂ ಯಶಸ್ವಿ ಪಾಲಾಗಿದೆ.
ಅಲ್ಲದೆ ಯಶಸ್ವಿ ಜೈಸ್ವಾಲ್, ನಾಯಕ ರೋಹಿತ್ ಶರ್ಮಾ ಅವರೊಂದಿಗೆ 229 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು. ಇದು ಏಷ್ಯಾದ ಹೊರಗೆ ಭಾರತದ ಅತಿದೊಡ್ಡ ಆರಂಭಿಕ ಪಾಲುದಾರಿಕೆಗೆ ಹೊಸ ದಾಖಲೆಯಾಗಿದೆ.
Published On - 6:39 am, Fri, 14 July 23