IND vs WI: ಶುಭ್​ಮನ್ ಗಿಲ್ ಬೇಜವಬ್ದಾರಿ ಆಟಕ್ಕೆ ಸೋಲಿನ ಬೆಲೆ ತೆತ್ತ ಭಾರತ..! ವಿಡಿಯೋ ನೋಡಿ

|

Updated on: Aug 14, 2023 | 8:14 AM

Shubman Gill: ಕಳೆದ ಪಂದ್ಯದಲ್ಲಿ ತಲಾ ಅರ್ಧಶತಕ ಸಿಡಿಸಿ ಮಿಂಚಿದ್ದ ಗಿಲ್ ಹಾಗೂ ಜೈಸ್ವಾಲ್ ಇನ್ನಿಂಗ್ಸ್​ನ ಮೂರನೇ ಓವರ್ ಮುಗಿಯುವುದರೊಳಗೆ ವಿಕೆಟ್ ಒಪ್ಪಿಸಿದರು. ಅದರಲ್ಲೂ ಮೂರನೇ ಓವರ್​ನಲ್ಲಿ ಎಲ್ಬಿಡಬ್ಲ್ಯೂಗೆ ಬಲಿಯಾದ ಗಿಲ್, ಇರುವ ಡಿಆರ್​ಎಸ್​ ಅನ್ನು ಸದುಪಯೋಗ ಪಡಿಸಿಕೊಳ್ಳದೆ ಸುಲಭವಾಗಿ ವಿಕೆಟ್ ಕೈಚೆಲ್ಲಿದರು.

IND vs WI: ಶುಭ್​ಮನ್ ಗಿಲ್ ಬೇಜವಬ್ದಾರಿ ಆಟಕ್ಕೆ ಸೋಲಿನ ಬೆಲೆ ತೆತ್ತ ಭಾರತ..! ವಿಡಿಯೋ ನೋಡಿ
ಶುಭ್​ಮನ್ ಗಿಲ್
Follow us on

ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಹಾಗೂ ಏಕದಿನ ಸರಣಿಯನ್ನು ಗೆದ್ದುಕೊಂಡಿದ್ದ ಟೀಂ ಇಂಡಿಯಾ (India vs West Indies) ಟಿ20 ಸರಣಿಯನ್ನು ಗೆಲ್ಲುವಲ್ಲಿ ವಿಫಲವಾಗಿದೆ. ಮೊದಲೆರಡು ಪಂದ್ಯಗಳ ಸೋಲಿನೊಂದಿಗೆ ಟಿ20 ಸರಣಿಯನ್ನು ಆರಂಭಿಸಿದ ಹಾರ್ದಿಕ್ ಪಡೆ, ಆ ಬಳಿಕ ನಡೆದ ಎರಡೂ ಪಂದ್ಯಗಳನ್ನು ಗೆಲ್ಲುವುದರೊಂದಿಗೆ ಸರಣಿಯಲ್ಲಿ ಕಂಬ್ಯಾಕ್ ಮಾಡಿತ್ತು. ಹೀಗಾಗಿ ಟಿ20 ಸರಣಿಯೂ ಭಾರತದ ಮಡಿಲಿಗೆ ಬೀಳಲಿದೆ ಎಂಬ ನಿರೀಕ್ಷೆ ಹೆಚ್ಚಿತ್ತು. ಅದಕ್ಕೆ ಪೂರಕವಾಗಿ ಟಾಸ್ ಕೂಡ ಟೀಂ ಇಂಡಿಯಾ (Team India) ಕಡೆ ವಾಲಿತ್ತು. ಆದರೆ ತಂಡದಲ್ಲಿ ಹೊಸ ಹೊಸ ಪ್ರಯೋಗಗಳಿಗೆ ಮುಂದಾಗಿರುವ ಮುಖ್ಯ ಕೋಚ್ ರಾಹುಲ್ ದ್ರಾವಿಡ್ (Rahul Dravid) ಹಾಗೂ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಆದರೆ ನಾಯಕನ ನಿರೀಕ್ಷೆಗೆ ತಕ್ಕಂತೆ ಆರಂಭ ನೀಡುವಲ್ಲಿ ಆರಂಭಿಕರು ವಿಫಲರಾದರು. ಕಳೆದ ಪಂದ್ಯದಲ್ಲಿ ತಲಾ ಅರ್ಧಶತಕ ಸಿಡಿಸಿ ಮಿಂಚಿದ್ದ ಗಿಲ್ (Shubman Gill) ಹಾಗೂ ಜೈಸ್ವಾಲ್ ಇನ್ನಿಂಗ್ಸ್​ನ ಮೂರನೇ ಓವರ್ ಮುಗಿಯುವುದರೊಳಗೆ ವಿಕೆಟ್ ಒಪ್ಪಿಸಿದರು. ಅದರಲ್ಲೂ ಮೂರನೇ ಓವರ್​ನಲ್ಲಿ ಎಲ್ಬಿಡಬ್ಲ್ಯೂಗೆ ಬಲಿಯಾದ ಗಿಲ್, ಇರುವ ಡಿಆರ್​ಎಸ್​ ಅನ್ನು ಸದುಪಯೋಗ ಪಡಿಸಿಕೊಳ್ಳದೆ ಸುಲಭವಾಗಿ ವಿಕೆಟ್ ಕೈಚೆಲ್ಲಿದರು.

ಟೀಂ ಇಂಡಿಯಾಕ್ಕೆ ಆರಂಭದಲ್ಲೇ ಬ್ಯಾಕ್ ಟು ಬ್ಯಾಕ್ ಆಘಾತ ನೀಡಿದ ವಿಂಡೀಸ್ ಸ್ಪಿನ್ನರ್ ಅಕೀಲ್ ಹೊಸೈನ್, ಆರಂಭಿಕರಿಬ್ಬರನ್ನು ಪೆವಿಲಿಯನ್​ಗಟ್ಟಿದರು. ವಿಂಡೀಸ್ ಪರ ಬೌಲಿಂಗ್ ಆರಂಭಿಸಿದ ಅಕಿಲ್ ಹೊಸೈನ್ ಮೊದಲ ಓವರ್‌ನಲ್ಲಿ ಯಶಸ್ವಿ ಜೈಸ್ವಾಲ್ ಅವರನ್ನು ಔಟ್ ಮಾಡಿದರು. 5 ರನ್ ಬಾರಿಸಿದ್ದ ಯಶಸ್ವಿ ಅಕಿಲ್ ಅವರಿಗೆ ಕ್ಯಾಚಿತ್ತು ಔಟಾದರು. ಅಕಿಲ್ ನಂತರ ಟೀಂ ಇಂಡಿಯಾ ಇನ್ನಿಂಗ್ಸ್‌ನ ಮೂರನೇ ಓವರ್ ಮತ್ತು ಅವರ ಕೋಟಾದ ಎರಡನೇ ಓವರ್​ನ ಐದನೇ ಎಸೆತದಲ್ಲಿ ಗಿಲ್​ರನ್ನು ಬಲೆಗೆ ಬೀಳಿಸಿದರು. ವಾಸ್ತವವಾಗಿ ಶುಭ್​ಮನ್ ಗಿಲ್ ಐದನೇ ಎಸೆತವನ್ನು ರಿವರ್ಸ್ ಸ್ವೀಪ್ ಮಾಡಲು ಯತ್ನಿಸಿದರು. ಆದರೆ ಶುಭ್‌ಮನ್ ಅವರ ಪ್ರಯತ್ನ ವಿಫಲವಾಗಿ ಚೆಂಡು ನೇರವಾಗಿ ಪ್ಯಾಡ್‌ಗೆ ಬಡಿಯಿತು.

ಡಿಆರ್​ಎಸ್​ ತೆಗೆದುಕೊಳ್ಳುವ ಅವಕಾಶವಿತ್ತು

ಚೆಂಡು ಪ್ಯಾಡ್‌ಗೆ ತಾಗುತ್ತಿದ್ದಂತೆ ಅಕಿಲ್ ಎಲ್ಬಿಡಬ್ಲ್ಯೂಗೆ ಮನವಿ ಮಾಡಿದರು. ಅಂಪೈರ್ ಒಂದು ಕ್ಷಣವೂ ತಡ ಮಾಡದೆ ಗಿಲ್ ಔಟೆಂದು ತೀರ್ಪು ನೀಡಿದರು. ಆದರೆ ಇಲ್ಲಿ ಶುಭ್‌ಮನ್​ಗೆ ಡಿಆರ್​ಎಸ್​ ತೆಗೆದುಕೊಳ್ಳುವ ಅವಕಾಶವಿತ್ತು. ಅಲ್ಲದೆ ಅದು ಭಾರತದ ಇನ್ನಿಂಗ್ಸ್ ಆರಂಭವಾಗಿದ್ದರಿಂದ 2 ಡಿಆರ್​ಎಸ್​ಗಳು ಹಾಗೆ ಉಳಿದಿದ್ದವು. ಇದರಲ್ಲಿ ಒಂದು ಡಿಆರ್​ಎಸ್​ ಅನ್ನು ತಂಡ ಕಳೆದುಕೊಂಡಿದ್ದರು ಯಾವುದೇ ಸಮಸ್ಯೆ ಆಗುತ್ತಿರಲಿಲ್ಲ. ಆದರೆ ಡಿಆರ್​ಎಸ್ ಸೌಲಭ್ಯದ ಲಾಭ ಪಡೆಯದ ಗಿಲ್, ಡಿಆರ್​ಎಸ್ ತೆಗೆದುಕೊಳ್ಳದೆ ಪೆವಿಲಿಯನ್ನತ್ತ ಹೆಜ್ಜೆ ಹಾಕಿದರು. ಆದರೆ ಗಿಲ್ ಡಗೌಟ್​ಗೆ ಮರಳಿದ ನಂತರ ರಿವ್ಯೂವ್ ತೋರಿಸಿದಾಗ ಚೆಂಡು ಸ್ಟಂಪ್​ನಿಂದ ಹೊರಹೋಗುತ್ತಿರುವುದು ಕಂಡುಬಂತು. ಹೀಗಾಗಿ ಮೊದಲ ಓವರ್​ನಲ್ಲೇ ಜೈಸ್ವಾಲ್ ವಿಕೆಟ್​ನಿಂದ ಆಘಾತಕ್ಕೊಳಗಾಗಿದ್ದ ಟೀಂ ಇಂಡಿಯಾಕ್ಕೆ ಮೂರನೇ ಓವರ್​ನಲ್ಲಿ ಗಿಲ್​ ವಿಕೆಟ್​ ಉರುಳಿದ್ದು ಆರಂಭದಲ್ಲೇ ಹಿನ್ನಡೆಯನ್ನುಂಟು ಮಾಡಿತು. ತಮ್ಮ ಇನ್ನಿಂಗ್ಸ್​ನಲ್ಲಿ 9 ಎಸೆತಗಳನ್ನು ಎದುರಿಸಿದ ಗಿಲ್, 9 ರನ್ ಬಾರಿಸಲಷ್ಟೇ ಶಕ್ತರಾದರು. ಶುಭ್​ಮನ್ ಔಟಾಗುವುದರೊಂದಿಗೆ ಟೀಂ ಇಂಡಿಯಾ 2.5 ಓವರ್​ಗಳಲ್ಲಿ 2 ವಿಕೆಟ್ ನಷ್ಟಕ್ಕೆ 17 ರನ್ ಕಲೆಹಾಕಿತು.

IND vs WI: ಹಾರ್ದಿಕ್ ಹಾಕಿದ ಸವಾಲಿಗೆ ತಕ್ಕ ಪ್ರತ್ಯುತ್ತರ ನೀಡಿದ ಪೂರನ್..! ವಿಡಿಯೋ ನೋಡಿ

ವಿಂಡೀಸ್ ಪ್ರವಾಸದಲ್ಲಿ ಗಿಲ್ ಸಪ್ಪೆ ಪ್ರದರ್ಶನ

ಗಿಲ್ ಅವರ ಈ ಬೇಜವಬ್ದಾರಿತನದ ನಡೆ ಟೀಂ ಇಂಡಿಯಾವನ್ನು ಆರಂಭದಲ್ಲಿ ಸರಾಗವಾಗಿ ರನ್ ಕಲೆಹಾಕುವುದನ್ನು ತಪ್ಪಿಸಿತು. ಇನ್ನು ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಸಪ್ಪೆ ಪ್ರದರ್ಶನ ನೀಡಿದ ಗಿಲ್, ಇಡೀ ಪ್ರವಾಸದಲ್ಲಿ ಕೇವಲ 2 ಅರ್ಧಶತಕ ಬಾರಿಸಲಷ್ಟೇ ಶಕ್ತರಾದರು. ಈ ಎರಡು ಅರ್ಧಶತಕಗಳಲ್ಲಿ ಒಂದು ಏಕದಿನ ಸರಣಿಯಲ್ಲಿ ಬಂದರೆ, ಇನ್ನೊಂದು ಟಿ20 ಸರಣಿಯ ನಾಲ್ಕನೇ ಪಂದ್ಯದಲ್ಲಿ ಬಂತು. ಇದನ್ನು ಹೊರತುಪಡಿಸಿ ಗಿಲ್, ಟೆಸ್ಟ್, ಏಕದಿನ, ಟಿ20 ಸರಣಿಯಲ್ಲಿ ಸತತ ವೈಫಲ್ಯ ಅನುಭವಿಸಿದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:11 am, Mon, 14 August 23