ವೆಸ್ಟ್ ಇಂಡೀಸ್ ವಿರುದ್ಧ ಇಂದು ನಡೆಯುತ್ತಿರುವ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ವನಿತಾ ಪಡೆ 314 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದೆ. ತಂಡ ಇಷ್ಟು ಬೃಹತ್ ಮೊತ್ತ ಕಲೆಹಾಕುವಲ್ಲಿ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಅವರ ಕೊಡುಗೆ ಅಪಾರವಾಗಿತ್ತು. ತಂಡದ ಪರ ಸ್ಫೋಟಕ ಬ್ಯಾಟಿಂಗ್ ಮಾಡಿದ ಮಂಧಾನ ಕೇವಲ ಒಂಬತ್ತು ರನ್‌ಗಳಿಂದ ಶತಕ ವಂಚಿತರಾದರು. ಆದಾಗ್ಯೂ ಇಡೀ ವರ್ಷ ಅದ್ಭುತವಾಗಿ ಬ್ಯಾಟ್ ಬೀಸಿರುವ ಸ್ಮೃತಿ ಈ ವರ್ಷ ಎಲ್ಲಾ ಮಾದರಿಯ ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಮೊದಲ ಮಹಿಳಾ ಬ್ಯಾಟರ್ ಎಂಬ ದಾಖಲೆ ಬರೆದಿದ್ದಾರೆ.
ಈ ವರ್ಷ ಮೂರು ಮಾದರಿಯ ಕ್ರಿಕೆಟ್ನಲ್ಲಿ 1602 ರನ್ ಕಲೆಹಾಕಿದ್ದು, ಅಧಿಕ ರನ್ ಕಲೆಹಾಕಿದವರ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ. ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾದ ಲಾರಾ ವೊಲ್ವಾರ್ಡ್ಟ್ ಇದುವರೆಗೆ 1593 ರನ್ ಕಲೆಹಾಕಿದ್ದಾರೆ. ಒಂದು ವೇಳೆ ಮಂಧಾನ ಈ ಪಂದ್ಯದಲ್ಲಿ 100 ರನ್ ಗಳಿಸಿದ್ದರೆ ಅದು ಈ ವರ್ಷ ಅವರ ಆರನೇ ಶತಕವಾಗುತ್ತಿತ್ತು. ಹಾಗೆಯೇ ಏಕದಿನದಲ್ಲಿ ದಾಖಲೆಯ 10ನೇ ಶತಕವಾಗುತ್ತಿತ್ತು. ಆದರೆ ಕೇವಲ ಒಂಬತ್ತೇ ಒಂಬತ್ತು ರನ್‌ಗಳಿಂದ ಸ್ಮೃತಿ ಸುವರ್ಣಾವಕಾಶವನ್ನು ಕೈಚೆಲ್ಲಿದರು.
ಇನ್ನು ಪಂದ್ಯದ ವಿಚಾರಕ್ಕೆ ಬರುವುದಾದರೆ.. ವಡೋದರಾದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಸ್ಮೃತಿ ಮಂಧಾನ 102 ಎಸೆತಗಳನ್ನು ಎದುರಿಸಿ 91 ರನ್‌ಗಳ ಇನಿಂಗ್ಸ್ ಆಡಿದರು. ಸ್ಮೃತಿ ತಮ್ಮ ಇನ್ನಿಂಗ್ಸ್‌ನಲ್ಲಿ 13 ಬೌಂಡರಿಗಳನ್ನು ಬಾರಿಸಿದರು. ಸ್ಮೃತಿ ಜೊತೆಗೆ ಚೊಚ್ಚಲ ಏಕದಿನ ಪಂದ್ಯವನ್ನಾಡಿದ ಪ್ರತೀಕಾ ರಾವಲ್ ಮೊದಲ ವಿಕೆಟ್‌ಗೆ 110 ರನ್‌ಗಳ ಜೊತೆಯಾಟವನ್ನಾಡಿದರು. ಪ್ರತೀಕಾ 69 ಎಸೆತಗಳಲ್ಲಿ 40 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರೆ, ಇದಾದ ಬಳಿಕ ಮಂಧಾನ ಮತ್ತು ಹರ್ಲಾನಿ ಎರಡನೇ ವಿಕೆಟ್‌ಗೆ 50 ರನ್‌ಗಳ ಜೊತೆಯಾಟವಾಡಿದರು.
ಈ ವೇಳೆ 91 ರನ್‌ಗಳ ವೈಯಕ್ತಿಕ ಸ್ಕೋರ್‌ನಲ್ಲಿ ಸ್ಮೃತಿ ವಿಕೆಟ್ ಒಪ್ಪಿಸಿದರೆ, ಹರ್ಲೀನ್ ಡಿಯೋಲ್ ಕೂಡ 44 ರನ್‌ಗಳ ಕಾಣಿಕೆ ನೀಡಿದರು. ನಾಯಕಿ ಹರ್ಮನ್‌ಪ್ರೀತ್ ಕೌರ್ 34 ರನ್ ಬಾರಿಸಿ ಪೆವಿಲಿಯನ್ ಸೇರಿಕೊಂಡರೆ, ಬಂದ ಕೂಡಲೇ ಹೊಡಿಬಡಿ ಆಟಕ್ಕೆ ಮುಂದಾದ ರಿಚಾ ಘೋಷ್ 26 ರನ್‌ಗಳ ಇನ್ನಿಂಗ್ಸ್ ಆಡಿದರು. ಕೊನೆಯಲ್ಲಿ ಮಿಂಚಿದ ಜೆಮಿಮಾ ರಾಡ್ರಿಗಸ್ 31 ರನ್ ಬಾರಿಸಿದರು. ತಂಡದ ಟಾಪ್ ಆರ್ಡರ್ ನೀಡಿದ ಈ ಅಮೋಘ ಬ್ಯಾಟಿಂಗ್ ಪ್ರದರ್ಶನಿಂದ ಭಾರತ ವನಿತಾ ಪಡೆ 9 ವಿಕೆಟ್ ಕಳೆದುಕೊಂಡು 314 ರನ್ ಕಲೆಹಾಕಿತು.
ಭಾರತ ತಂಡ: ಸ್ಮೃತಿ ಮಂಧಾನ, ಪ್ರತೀಕಾ ರಾವಲ್, ಹರ್ಲೀನ್ ಡಿಯೋಲ್, ಜೆಮಿಮಾ ರಾಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ರಿಚಾ ಘೋಷ್ (ವಿಕೆಟ್ ಕೀಪರ್), ದೀಪ್ತಿ ಶರ್ಮಾ, ಸೈಮಾ ಠಾಕೋರ್, ಟಿಟಾಸ್ ಸಾಧು, ಪ್ರಿಯಾ ಮಿಶ್ರಾ, ರೇಣುಕಾ ಠಾಕೂರ್ ಸಿಂಗ್.
ವೆಸ್ಟ್ ಇಂಡೀಸ್: ಹೇಲಿ ಮ್ಯಾಥ್ಯೂಸ್ (ನಾಯಕ), ಕಿಯಾನಾ ಜೋಸೆಫ್, ಶಮೈನ್ ಕ್ಯಾಂಪ್‌ಬೆಲ್ (ವಿಕೆಟ್ ಕೀಪರ್), ಡಿಯಾಂಡ್ರಾ ಡಾಟಿನ್, ರಶಾದಾ ವಿಲಿಯಮ್ಸ್, ಝೈದಾ ಜೇಮ್ಸ್, ಶಬಿಕಾ ಗಜಾನ್ಬಿ, ಅಲಿಯಾ ಅಲ್ಲೆನ್, ಶಾಮಿಲಿಯಾ ಕಾನ್ನೆಲ್, ಅಫಿ ಫ್ಲೆಚರ್, ಕರಿಷ್ಮಾ ರಾಮ್‌ಹರಾಕ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ