Virat Kohli: ಪ್ರಸ್ತುತ ಕ್ರಿಕೆಟ್​ನಲ್ಲಿ ಸ್ಮಿತ್, ರೂಟ್, ವಿಲಿಯಮ್ಸನ್​ಗಿಂತ ಕಿಂಗ್ ಕೊಹ್ಲಿಯೇ ಬೆಸ್ಟ್! ಹೇಗೆ ಗೊತ್ತಾ?

|

Updated on: Jul 20, 2023 | 2:39 PM

IND vs WI: 100ನೇ ಟೆಸ್ಟ್ ಪಂದ್ಯವನ್ನು ಗೆಲ್ಲುವ ಫೆವರೆಟ್ ಎನಿಸಿಕೊಂಡಿರುವ ಟೀಂ ಇಂಡಿಯಾ, ಈ ಪಂದ್ಯವನ್ನು ಗೆದ್ದು ಕಿಂಗ್ ಕೊಹ್ಲಿಗೆ ಗೆಲುವಿನ ಉಡುಗೊರೆ ನೀಡುವ ತವಕದಲ್ಲಿದೆ.

Virat Kohli: ಪ್ರಸ್ತುತ ಕ್ರಿಕೆಟ್​ನಲ್ಲಿ ಸ್ಮಿತ್, ರೂಟ್, ವಿಲಿಯಮ್ಸನ್​ಗಿಂತ ಕಿಂಗ್ ಕೊಹ್ಲಿಯೇ ಬೆಸ್ಟ್! ಹೇಗೆ ಗೊತ್ತಾ?
ರೂಟ್, ಸ್ಮಿತ್, ವಿಲಿಯಮ್ಸನ್, ಕೊಹ್ಲಿ
Follow us on

ಪ್ರಸ್ತುತ ವೆಸ್ಟ್ ಇಂಡೀಸ್ ಪ್ರವಾದಲ್ಲಿರುವ ಟೀಂ ಇಂಡಿಯಾ (India vs West Indies) ಇಂದು ಎರಡನೇ ಟೆಸ್ಟ್ ಪಂದ್ಯದಲ್ಲಿ ವಿಂಡೀಸ್ ತಂಡವನ್ನು ಎದುರಿಸಲು ಸಜ್ಜಾಗಿದೆ. ಉಭಯ ತಂಡಗಳ ನಡುವಿನ ನಿರ್ಣಾಯಕ ಟೆಸ್ಟ್ ಕದನ ಇಂದಿನಿಂದ ಪೋರ್ಟ್ ಆಫ್ ಸ್ಪೇನ್​ನಲ್ಲಿ ಆರಂಭವಾಗಲಿದೆ. ಎರಡು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ 1-0 ಅಂತರದಿಂದ ಮುನ್ನಡೆ ಸಾಧಿಸಿರುವುದರಿಂದ ಈ ಪಂದ್ಯ ಎರಡೂ ತಂಡಗಳಿಗೂ ಬಹಳ ಮುಖ್ಯವಾಗಿದೆ. ಒಂದೆಡೆ ಭಾರತ ತಂಡ (Team India) ಎರಡನೇ ಟೆಸ್ಟ್ ಗೆದ್ದು, ಸರಣಿ ಕೈವಶ ಮಾಡಿಕೊಳ್ಳುವ ತವಕದಲ್ಲಿದ್ದರೆ, ಇನ್ನೊಂದೆಡೆ ವಿಂಡೀಸ್ ಬಳಗ ಸರಣಿಯನ್ನು ಡ್ರಾದಲ್ಲಿ ಅಂತ್ಯಗೊಳಿಸಲು ತಯಾರಿ ನಡೆಸುತ್ತಿದೆ. ಏಕೆಂದರೆ ಈ ಪಂದ್ಯ ಉಭಯ ತಂಡಗಳ ನಡುವಿನ 100ನೇ ಟೆಸ್ಟ್ ಪಂದ್ಯವಾಗಿರುವುದರಿಂದ ಸ್ಮರಣೀಯ ಪಂದ್ಯದಲ್ಲಿ ಸೋಲುವುದನ್ನು ಯಾವ ತಂಡವು ಬಯಸುವುದಿಲ್ಲ. ಹಾಗೆಯೇ 100ನೇ ಟೆಸ್ಟ್ ಪಂದ್ಯವನ್ನು ಗೆಲ್ಲುವ ಫೆವರೆಟ್ ಎನಿಸಿಕೊಂಡಿರುವ ಟೀಂ ಇಂಡಿಯಾ, ಈ ಪಂದ್ಯವನ್ನು ಗೆದ್ದು ಕಿಂಗ್ ಕೊಹ್ಲಿಗೆ (Virat Kohli) ಗೆಲುವಿನ ಉಡುಗೊರೆ ನೀಡುವ ತವಕದಲ್ಲಿದೆ.

ವಾಸ್ತವವಾಗಿ ಇಂದಿನ ಟೆಸ್ಟ್ ಪಂದ್ಯ ವಿರಾಟ್ ಕೊಹ್ಲಿಯವರ 100ನೇ ಅಂತಾರಾಷ್ಟ್ರೀಯ ಪಂದ್ಯವಾಗಿದೆ. ವಿಂಡೀಸ್ ವಿರುದ್ಧ ಕಣಕ್ಕಿಳಿದ ಕೂಡಲೇ 500ನೇ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ ನಾಲ್ಕನೇ ಭಾರತೀಯ ಎಂಬ ದಾಖಲೆ ಬರೆಯುವ ಕಿಂಗ್ ಕೊಹ್ಲಿ, ಈ ಸಾಧನೆ ಮಾಡಿದ ವಿಶ್ವದ 10ನೇ ಆಟಗಾರ ಎನಿಸಿಕೊಳ್ಳಲಿದ್ದಾರೆ. ಪ್ರಸ್ತುತ ಕ್ರಿಕೆಟ್​ ಲೋಕದಲ್ಲಿ ರನ್ ಸಾಮ್ರಾಟನಾಗಿ ಸಾಕಷ್ಟು ದಾಖಲೆಗಳನ್ನು ಬರೆಯುವ ಹೊಸ್ತಿಲಿನಲ್ಲಿರುವ ವಿರಾಟ್ ಕೊಹ್ಲಿಗೆ ಈ ಪಂದ್ಯ ಸಾಕಷ್ಟು ಮಹತ್ವದಾಗಿದೆ. ಏಕೆಂದರೆ ಆಧುನಿಕ ಕ್ರಿಕೆಟ್‌ನ ಫ್ಯಾಬ್ ಫೋರ್ (ಆಧುನಿಕ ಕ್ರಿಕೆಟ್​ನ ನಾಲ್ವರು ಬೆಸ್ಟ್ ಟೆಸ್ಟ್ ಬ್ಯಾಟರ್ಸ್​​) ಎನಿಸಿಕೊಂಡಿರುವ ಆಟಗಾರರಲ್ಲಿ ಕಿಂಗ್ ಕೊಹ್ಲಿ ಕೂಡ ಒಬ್ಬರಾಗಿದ್ದಾರೆ. ಆದರೆ ಕೇವಲ ಟೆಸ್ಟ್ ಕ್ರಿಕೆಟ್​ನಲ್ಲಿ ನೀಡುವ ಪ್ರದರ್ಶನದ ಆದಾರದ ಮೇಲೆ ಕೆಲವರು ಕೊಹ್ಲಿಯನ್ನು ಫ್ಯಾಬ್ ಫೋರ್​ನಿಂದ ಹೊರಗಿಡಲು ಯತ್ನಿಸುತ್ತಿದ್ದಾರೆ. ಹೀಗಾಗಿ ಈ ಪಂದ್ಯದಲ್ಲಿ ವಿರಾಟ್ ತಮ್ಮ ಬ್ಯಾಟ್ ಮೂಲಕ ಟೀಕಕಾರರಿಗೆ ಉತ್ತರಿಸುವ ತವಕದಲ್ಲಿದ್ದಾರೆ.

IND vs WI: ಕಿಂಗ್ ಕೊಹ್ಲಿಯ 500ನೇ ಪಂದ್ಯದ ನೇರ ಪ್ರಸಾರ ಯಾವ ಚಾನೆಲ್​ನಲ್ಲಿ? ಇಲ್ಲಿದೆ ಪೂರ್ಣ ಮಾಹಿತಿ

ಫ್ಯಾಬ್ ತ್ರಿ ಎಂದಿದ್ದ ಚೋಪ್ರಾ

ಡಬ್ಲ್ಯುಟಿಸಿ ಫೈನಲ್ ಬಳಿಕ ಫ್ಯಾಬ್ ಫೋರ್ ಬಗ್ಗೆ ಮಾತನಾಡಿದ್ದ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಪ್ರಸ್ತುತ ಫ್ಯಾಬ್ ಫೋರ್ ಬದಲು ಫ್ಯಾಬ್ ತ್ರಿ ಎಂಬುದು ಸೂಕ್ತ. ಏಕೆಂದರೆ ಈ ಪಟ್ಟಿಯಲ್ಲಿ ಸ್ಥಾನ ಪಡೆಯಲು ಕೊಹ್ಲಿ ಅರ್ಹರಲ್ಲ ಎಂದಿದ್ದರು. ಈ ಬಗ್ಗೆ ಪರ- ವಿರೋದದ ಚರ್ಚೆಯೂ ನಡೆದಿತ್ತು. ಆದರೆ ಕೇವಲ ಟೆಸ್ಟ್ ಕ್ರಿಕೆಟ್​ ಅನ್ನು ಮಾತ್ರ ಪರಿಗಣಿಸದೆ ಮೂರು ಮಾದರಿಯ ಕ್ರಿಕೆಟ್​ನಲ್ಲಿ ವಿರಾಟ್ ಕೊಹ್ಲಿಯ ಪ್ರದರ್ಶನವನ್ನು ಗಮನಿಸಿದಾಗ ಮಾತ್ರ, ವಿರಾಟ್ ಈ ಮೂವರಿಗಿಂತ ಎಷ್ಟು ಭಿನ್ನ ಎಂಬುದನ್ನು ಕಾಣಬಹುದಾಗಿದೆ.

ಕಿಂಗ್ ಕೊಹ್ಲಿಯ ಸನಿಹವೂ ಇಲ್ಲ

ಫ್ಯಾಬ್ ಫೋರ್​ ಕ್ರಿಕೆಟಿಗರು ಎನಿಸಿಕೊಂಡಿರುವವರಲ್ಲಿ ಕೊಹ್ಲಿ ಮಾತ್ರ 500 ನೇ ಅಂತಾರಾಷ್ಟ್ರೀಯ ಪಂದ್ಯವನ್ನಾಡುವ ಹೊಸ್ತಿಲಿನಲ್ಲಿದ್ದಾರೆ. ಉಳಿದ ಮೂವರಾದ ಸ್ಮಿತ್, ರೂಟ್, ವಿಲಿಯಮ್ಸನ್​ 500ನೇ ಅಂತಾರಾಷ್ಟ್ರೀಯ ಪಂದ್ಯದ ಹತ್ತಿರಕ್ಕೂ ಸುಳಿದಿಲ್ಲ. ಇನ್ನು ಕಂಪ್ಲೀಟ್ ಕ್ರಿಕೆಟಿಗನ ವಿಚಾರಕ್ಕೆ ಬಂದರೆ ಯಾವುದೇ ಒಂದು ಫಾರ್ಮೆಟ್ ಆಧಾರದಲ್ಲಿ ಆಟಗಾರನನ್ನು ತೂಗಬಾರದು. ಬದಲಿಗೆ ಎಲ್ಲಾ ಮಾದರಿಯಲ್ಲಿ ಆತನ ಪ್ರದರ್ಶನ ಹೇಗಿದೆ ಎಂಬುದನ್ನು ಗಮನಿಸಬೇಕು ಎಂಬುದು ಕೆಲವು ಕ್ರಿಕೆಟ್ ಪಂಡಿತರ ವಾದವಾಗಿದೆ. ಇದರ ಪೂರಕವಾಗಿಯೇ ನಾವು ಗಮನಿಸುವುದಾದರೆ, ಒಟ್ಟಾರೆ ಅಂತರಾಷ್ಟ್ರೀಯ ಕ್ರಿಕೆಟ್‌ ಬದುಕಿನಲ್ಲಿ ವಿರಾಟ್ ಕೊಹ್ಲಿ 75 ಶತಕಗಳನ್ನು ಬಾರಿಸಿದ್ದಾರೆ. ಆದರೆ ಇಂಗ್ಲೆಂಡ್ ತಂಡದ ಮಾಜಿ ನಾಯಕ ರೂಟ್ ಕೇವಲ 46 ಶತಕಗಳನಷ್ಟೇ ಸಿಡಿಸಿದ್ದಾರೆ. ಇನ್ನು ಸ್ಮಿತ್ ವಿಚಾರಕ್ಕೆ ಬರುವುದಾದರೆ, ಈ ಆಸೀಸ್ ಬ್ಯಾಟರ್​ ಖಾತೆಯಲ್ಲಿರುವುದು ಕೂಡ 44 ಶತಕಗಳು ಮಾತ್ರ. ಹಾಗೆಯೇ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ ಖಾತೆಯಲ್ಲೂ 41 ಶತಕಗಳಷ್ಟೇ ಇವೆ.

ಅಷ್ಟೇ ಅಲ್ಲ, ಸ್ಮಿತ್, ರೂಟ್ ಮತ್ತು ವಿಲಿಯಮ್ಸನ್‌ಗೆ ಹೋಲಿಸಿದರೆ ವಿರಾಟ್ ದೊಡ್ಡ ಮ್ಯಾಚ್ ವಿನ್ನರ್ ಎಂಬುದನ್ನು ನಾವು ಅಂಕಿ ಅಂಶಗಳಿಂದ ಕಂಡುಕೊಳ್ಳಬಹುದಾಗಿದೆ. ಇದಕ್ಕೆ ಮತ್ತೊಂದು ಸಾಕ್ಷಿಯಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೊಹ್ಲಿ ಗೆದ್ದಿರುವ ಪಂದ್ಯಶ್ರೇಷ್ಠ ಪ್ರಶಸ್ತಿಗಳೇ ಇದಕ್ಕೆ ಸಾಕ್ಷಿ. ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇದುವರೆಗೆ 63 ಬಾರಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಆದರೆ ವಿಲಿಯಮ್ಸನ್ 28 ಬಾರಿ ಈ ಪ್ರಶಸ್ತಿಯನ್ನು ಗೆದ್ದಿದ್ದರೆ, ಸ್ಮಿತ್ 26 ಹಾಗೂ ರೂಟ್ 25 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ

ಮೂರು ಮಾದರಿಯಲ್ಲೂ ವಿರಾಟ್ ಎಲ್ಲರಿಗಿಂತ ಉತ್ತಮ

ಇದೆಲ್ಲದರ ಹೊರತಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ ಫ್ಯಾಬ್ ಫೋರ್‌ನಲ್ಲಿ ಅತಿ ಹೆಚ್ಚು ದ್ವಿಶತಕ ಸಿಡಿಸಿರುವ ಆಟಗಾರರ ಪೈಕಿ ವಿರಾಟ್​ಗೆ ಮೊದಲ ಸ್ಥಾನ. ಟೆಸ್ಟ್‌ನಲ್ಲಿ ತಮ್ಮ ಮೊದಲ ದ್ವಿಶತಕ ಸಿಡಿಸಿದ ಅದೇ ಮೈದಾನದಲ್ಲಿ ಕೊಹ್ಲಿ ಇಂದು ತಮ್ಮ 500 ನೇ ಅಂತರರಾಷ್ಟ್ರೀಯ ಪಂದ್ಯವನ್ನು ಆಡಲಿದ್ದಾರೆ. ಅದೇ ರೀತಿ ಏಕದಿನ ಕ್ರಿಕೆಟ್‌ನಲ್ಲಿ ಸ್ಮಿತ್, ರೂಟ್ ಮತ್ತು ವಿಲಿಯಮ್ಸನ್ ಮೂವರು ಸೇರಿ ಒಟ್ಟಾಗಿ 17701 ರನ್ ಕಲೆ ಹಾಕಿದ್ದಾರೆ. ಆದರೆ ವಿರಾಟ್ ಕೊಹ್ಲಿ ಒಬ್ಬರೆ 12898 ರನ್ ಗಳಿಸಿದ್ದಾರೆ. ಅದೇ ರೀತಿ ಟಿ20ಯಲ್ಲಿ ರನ್ ಶಿಖರ್ ಕಟ್ಟಿರುವ ವಿರಾಟ್ ಇದುವರೆಗೆ 4008 ರನ್ ಬಾರಿಸಿದ್ದರೆ, ಸ್ಮಿತ್, ರೂಟ್, ವಿಲಿಯಮ್ಸನ್ ಈ ಅಂಕಿ ಅಂಶದ ಹತ್ತಿರವೂ ಸುಳಿದಿಲ್ಲ.

ಹೀಗಾಗಿ ಉಳಿದ ಮೂವರಿಗೆ ಹೋಲಿಸಿ ಕಿಂಗ್ ಕೊಹ್ಲಿಯನ್ನು ತೆಗಳುವವರು ಕೇವಲ ಟೆಸ್ಟ್ ಕ್ರಿಕೆಟ್​ನಲ್ಲಿನ ಪ್ರದರ್ಶನವನ್ನು ಆಧಾರವಾಗಿಟ್ಟುಕೊಳ್ಳುವುದನ್ನು ಬಿಟ್ಟು, ಕ್ರಿಕೆಟ್​ನ ಮೂರು ಮಾದರಿಯನ್ನು ಪರಿಗಣಿಸಿ ಮಾತನಾಡುವುದು ಸೂಕ್ತ ಎಂಬುದು ಕೆಲವು ಕ್ರಿಕೆಟ್ ಪಂಡಿತರ ವಾದವಾಗಿದೆ. ಹಾಗೆಯೇ ಕೊಹ್ಲಿಯನ್ನು ಮೂರು ಮಾದರಿಯ ಕ್ರಿಕೆಟ್​ನಲ್ಲಿ ವಿಶ್ಲೇಷಿಸಿದಾಗ ಮಾತ್ರ, ವಿರಾಟ್. ಸ್ಮಿತ್, ರೂಟ್, ವಿಲಿಯಮ್ಸನ್ ಅವರಿಗಿಂತ ಎಷ್ಟು ಭಿನ್ನ ಎಂಬುದನ್ನು ಕಾಣಬಹುದಾಗಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:35 pm, Thu, 20 July 23