IND vs ZIM: 110 ಮೀ. ಸಿಕ್ಸರ್; ಸಂಜು ಸಿಡಿಲಬ್ಬರಕ್ಕೆ ಬೇರೆ ಬಾಲ್ ತರಿಸಿದ ಅಂಪೈರ್! ವಿಡಿಯೋ ನೋಡಿ

|

Updated on: Jul 14, 2024 | 6:34 PM

Sanju Samson: ಸಂಜು ಸ್ಯಾಮ್ಸನ್ 45 ಎಸೆತಗಳಲ್ಲಿ 1 ಬೌಂಡರಿ ಹಾಗೂ 4 ಭರ್ಜರಿ ಸಿಕ್ಸರ್​ಗಳ ನೆರವಿನಿಂದ 58 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಸಂಜು ಸಿಡಿಸಿದ 4 ಸಿಕ್ಸರ್​ಗಳಲ್ಲಿ ಒಂದು ಸಿಕ್ಸರ್ ಇಡೀ ಕ್ರೀಡಾಂಗಣವೇ ಅಚ್ಚರಿಯಿಂದ ನೋಡುವಂತೆ ಮಾಡಿತು. ಅಷ್ಟಕ್ಕೂ ಸಂಜು ಸಿಡಿಸಿದ ಈ ಸಿಕ್ಸರ್ ಬರೋಬ್ಬರಿ 110 ಮೀಟರ್ ದೂರ ಹೋಗಿ ಕ್ರೀಡಾಂಗಣದ ಛಾವಣಿಯ ಮೇಲೆ ಬಿದ್ದಿತು. ಇದರಿಂದಾಗಿ ಅಂಪೈರ್ ಬೇರೆ ಚೆಂಡನ್ನು ತೆಗೆದುಕೊಳ್ಳಬೇಕಾಯಿತು.

IND vs ZIM: 110 ಮೀ. ಸಿಕ್ಸರ್; ಸಂಜು ಸಿಡಿಲಬ್ಬರಕ್ಕೆ ಬೇರೆ ಬಾಲ್ ತರಿಸಿದ ಅಂಪೈರ್! ವಿಡಿಯೋ ನೋಡಿ
ಸಂಜು ಸ್ಯಾಮ್ಸನ್
Follow us on

ಹರಾರೆಯಲ್ಲಿ ಭಾರತ ಮತ್ತು ಜಿಂಬಾಬ್ವೆ ನಡುವೆ ನಡೆಯುತ್ತಿರುವ ಐದು ಪಂದ್ಯಗಳ ಟಿ20 ಸರಣಿಯ ಐದನೇ ಪಂದ್ಯದಲ್ಲಿ ಆತಿಥೇಯ ತಂಡ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 167 ರನ್ ಕಲೆಹಾಕಿದೆ. ಈ ಮೂಲಕ ಜಿಂಬಾಬ್ವೆ ಗೆಲುವಿಗೆ 168 ರನ್​ಗಳ ಗುರಿ ನೀಡಿದೆ. ತಂಡದ ಪರ ಸಂಜು ಸ್ಯಾಮ್ಸನ್ 45 ಎಸೆತಗಳಲ್ಲಿ 1 ಬೌಂಡರಿ ಹಾಗೂ 4 ಭರ್ಜರಿ ಸಿಕ್ಸರ್​ಗಳ ನೆರವಿನಿಂದ 58 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಸಂಜು ಸಿಡಿಸಿದ 4 ಸಿಕ್ಸರ್​ಗಳಲ್ಲಿ ಒಂದು ಸಿಕ್ಸರ್ ಇಡೀ ಕ್ರೀಡಾಂಗಣವೇ ಅಚ್ಚರಿಯಿಂದ ನೋಡುವಂತೆ ಮಾಡಿತು. ಅಷ್ಟಕ್ಕೂ ಸಂಜು ಸಿಡಿಸಿದ ಈ ಸಿಕ್ಸರ್ ಬರೋಬ್ಬರಿ 110 ಮೀಟರ್ ದೂರ ಹೋಗಿ ಕ್ರೀಡಾಂಗಣದ ಛಾವಣಿಯ ಮೇಲೆ ಬಿದ್ದಿತು. ಇದರಿಂದಾಗಿ ಅಂಪೈರ್ ಬೇರೆ ಚೆಂಡನ್ನು ತೆಗೆದುಕೊಳ್ಳಬೇಕಾಯಿತು.

110 ಮೀಟರ್ ಉದ್ದದ ಸಿಕ್ಸರ್

ಜಿಂಬಾಬ್ವೆ ವೇಗಿ ಬ್ರಾಂಡನ್ ಮಾವುಟಾ ಎಸೆದ 12 ನೇ ಓವರ್‌ನಲ್ಲಿ ಸಂಜು ಸತತ ಎರಡು ಸಿಕ್ಸರ್‌ಗಳನ್ನು ಬಾರಿಸಿದರು. ಇದರಲ್ಲಿ ಓವರ್​ನ ಮೂರನೇ ಎಸೆತದಲ್ಲಿ ಬಾರಿಸಿದ ಸ್ಟ್ರೈಟ್ ಹಿಟ್ ಸಿಕ್ಸರ್ ಬರೋಬ್ಬರಿ 110 ಮೀಟರ್ ದೂರ ಹೋಗಿ ಬಿದ್ದಿತು. ಈ ಪಂದ್ಯದಲ್ಲಿ ಸಂಜು ಅರ್ಧಶತಕದ ಇನ್ನಿಂಗ್ಸ್ ಆಡಿದಲ್ಲದೆ, ರಿಯಾನ್ ಪರಾಗ್ ಜೊತೆಗೂಡಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಪಂದ್ಯದಲ್ಲಿ ತಂಡ ಆರಂಭದಲ್ಲೇ ಅಂದರೆ ಪವರ್ ಪ್ಲೇ ಮುಗಿಯುವ ವೇಳೆಗೆ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಅಲ್ಲಿಂದ ಸಂಜು ಮತ್ತು ರಿಯಾನ್ ಪರಾಗ್ ತಂಡದ ಇನ್ನಿಂಗ್ಸ್ ನಿಭಾಯಿಸಿದರು.

ಭಾರತದ ಇನ್ನಿಂಗ್ಸ್ ಹೀಗಿತ್ತು

ಈ ಪಂದ್ಯದಲ್ಲಿ ಭಾರತ ಉತ್ತಮ ಆರಂಭ ಪಡೆದಿತ್ತು. ಯಶಸ್ವಿ ಜೈಸ್ವಾಲ್ ಇನ್ನಿಂಗ್ಸ್‌ನ ಮೊದಲ ಎಸೆತದಲ್ಲಿ 13 ರನ್ ಬಾರಿಸಿದರು. ವಾಸ್ತವವಾಗಿ, ಸಿಕಂದರ್ ರಜಾ ಬೌಲಿಂಗ್ ಮಾಡಿದ ಮೊದಲ ಎಸೆತದಲ್ಲಿ ಜೈಸ್ವಾಲ್ ಸಿಕ್ಸರ್ ಬಾರಿಸಿದರು. ಇದಾದ ಬಳಿಕ ಫ್ರೀ ಹಿಟ್​ನ ಲಾಭ ಪಡೆದು ಮತ್ತೊಂದು ಸಿಕ್ಸರ್ ಬಾರಿಸಿದರು. ಆದರೆ, ಈ ಓವರ್‌ನ ನಾಲ್ಕನೇ ಎಸೆತದಲ್ಲಿ ರಾಝಾ, ಜೈಸ್ವಾಲ್​ರನ್ನು ಔಟ್ ಮಾಡಿದರು. ಇದಾದ ಬಳಿಕ ಕೇವಲ 14 ರನ್ ಗಳಿಸಲಷ್ಟೇ ಶಕ್ತರಾದ ಅಭಿಷೇಕ್ ಶರ್ಮಾ 2ನೇ ವಿಕೆಟ್ ರೂಪದಲ್ಲಿ ಪೆವಿಲಿಯನ್ ಸೇರಿಕೊಂಡರು. ಕ್ಯಾಪ್ಟನ್ ಗಿಲ್ ಕೂಡ 13 ರನ್ ಗಳಿಸಲಷ್ಟೇ ಶಕ್ತರಾದರು. ಹೀಗಾಗಿ ಪವರ್‌ಪ್ಲೇಯಲ್ಲಿ ಭಾರತ ಮೂರು ವಿಕೆಟ್ ಕಳೆದುಕೊಂಡಿತು.

ಇದಾದ ನಂತರ ಸಂಜು ಸ್ಯಾಮ್ಸನ್ ಮತ್ತು ರಿಯಾನ್ ಪರಾಗ್ ತಂಡದ ಇನ್ನಿಂಗ್ಸ್ ನಿಭಾಯಿಸಿದರು. ಇವರಿಬ್ಬರ ನಡುವೆ ನಾಲ್ಕನೇ ವಿಕೆಟ್‌ಗೆ 65 ರನ್‌ಗಳ ಜೊತೆಯಾಟವಿತ್ತು. 15ನೇ ಓವರ್​ನಲ್ಲಿ ಪರಾಗ್ 22 ರನ್ ಗಳಿಸಿ ಔಟಾದರು. ಆದರೆ, ಸಂಜು ಸ್ಯಾಮ್ಸನ್ 58 ರನ್‌ಗಳ ಬಿರುಸಿನ ಇನ್ನಿಂಗ್ಸ್‌ನ ನಂತರ ಪೆವಿಲಿಯನ್‌ಗೆ ಮರಳಿದರು. ಈ ಪಂದ್ಯದಲ್ಲಿ ಶಿವಂ ದುಬೆ 26 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರೆ, ರಿಂಕು 11 ರನ್ ಗಳಿಸಿ ಅಜೇಯರಾಗಿ ಉಳಿದರು. ಜಿಂಬಾಬ್ವೆ ಪರ ಮುಜರಬಾನಿ ಎರಡು ವಿಕೆಟ್ ಪಡೆದರೆ, ರಾಝಾ ರಿಚರ್ಡ್ ಮತ್ತು ಮಾವುಟಾ ತಲಾ ಒಂದು ವಿಕೆಟ್ ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:21 pm, Sun, 14 July 24