ಭಾರತ ಮತ್ತು ನ್ಯೂಝಿಲೆಂಡ್ ನಡುವಣ ದ್ವಿತೀಯ ಟೆಸ್ಟ್ ಪಂದ್ಯಕ್ಕೂ ಕೇನ್ ವಿಲಿಯಮ್ಸನ್ ಅಲಭ್ಯರಾಗಲಿದ್ದಾರೆ. ತೊಡೆಸಂದು ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಅವರು ಬೆಂಗಳೂರಿನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದರು. ಇದೀಗ ಪುಣೆಯಲ್ಲಿ ಜರುಗಲಿರುವ 2ನೇ ಪಂದ್ಯಕ್ಕೂ ಅಲಭ್ಯರಾಗಿದ್ದಾರೆ.
ಭಾರತ ಮತ್ತು ನ್ಯೂಝಿಲೆಂಡ್ ನಡುವಣ ದ್ವಿತೀಯ ಟೆಸ್ಟ್ ಪಂದ್ಯವು ಅಕ್ಟೋಬರ್ 24 ರಿಂದ ಶುರುವಾಗಲಿದೆ. ಈ ಪಂದ್ಯವು ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ನಡೆಯಲಿದೆ. ಇದೀಗ ಈ ಪಂದ್ಯಕ್ಕೆ ವಿಲಿಯಮ್ಸನ್ ಅಲಭ್ಯರಾಗಿರುವ ಕಾರಣ ವಿಲ್ ಯಂಗ್ ತಂಡದಲ್ಲೇ ಮುಂದುವರೆಯಲಿದ್ದಾರೆ.
ಪುಣೆಯಲ್ಲಿ ನಡೆಯಲಿರುವ ದ್ವಿತೀಯ ಟೆಸ್ಟ್ ಪಂದ್ಯವು ಭಾರತ ತಂಡದ ಪಾಲಿಗೆ ನಿರ್ಣಾಯಕ. ಏಕೆಂದರೆ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಮ್ಯಾಚ್ನಲ್ಲಿ ನ್ಯೂಝಿಲೆಂಡ್ ತಂಡ 8 ವಿಕೆಟ್ಗಳ ಜಯ ಸಾಧಿಸಿದೆ. ಇದೀಗ ದ್ವಿತೀಯ ಟೆಸ್ಟ್ ಪಂದ್ಯ ಗೆದ್ದರೆ ಸರಣಿ ವಶಪಡಿಸಿಕೊಳ್ಳಬಹುದು.
ಅತ್ತ ಸರಣಿ ಆಸೆಯನ್ನು ಜೀವಂತವಿರಿಸಿಕೊಳ್ಳಬೇಕಿದ್ದರೆ ಟೀಮ್ ಇಂಡಿಯಾ ದ್ವಿತೀಯ ಟೆಸ್ಟ್ ಪಂದ್ಯವನ್ನು ಗೆಲ್ಲಲೇಬೇಕು. ಅಥವಾ ಸರಣಿ ಸೋಲನ್ನು ತಪ್ಪಿಸಿಕೊಳ್ಳಬೇಕಿದ್ದರೆ 2ನೇ ಪಂದ್ಯದಲ್ಲಿ ಕನಿಷ್ಠ ಡ್ರಾ ಸಾಧಿಸಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಒಂದಾರ್ಥದಲ್ಲಿ ಟೀಮ್ ಇಂಡಿಯಾ ಪಾಲಿಗೆ ಪುಣೆ ಟೆಸ್ಟ್ ಮಾಡು ಇಲ್ಲವೇ ಮಡಿ ಪಂದ್ಯ ಎನ್ನಬಹುದು.
ನ್ಯೂಝಿಲೆಂಡ್ ತಂಡವು ಈವರೆಗೆ ಭಾರತ ತಂಡದಲ್ಲಿ ಸರಣಿ ಗೆದ್ದಿಲ್ಲ. ಅದರಲ್ಲೂ ಭಾರತದಲ್ಲಿ ಇದುವರೆಗೆ ಗೆದ್ದಿರುವುದು ಕೇವಲ ಮೂರು ಟೆಸ್ಟ್ ಪಂದ್ಯಗಳನ್ನು ಮಾತ್ರ. ಇದೀಗ 36 ವರ್ಷಗಳ ಬಳಿಕ ಭಾರತದಲ್ಲಿ ಟೆಸ್ಟ್ ಪಂದ್ಯ ಗೆದ್ದಿರುವ ನ್ಯೂಝಿಲೆಂಡ್ಗೆ ಇತಿಹಾಸ ನಿರ್ಮಿಸಲು ಉತ್ತಮ ಅವಕಾಶವಿದೆ.
ಇದಕ್ಕಾಗಿ 2ನೇ ಅಥವಾ 3ನೇ ಟೆಸ್ಟ್ ಪಂದ್ಯಗಳಲ್ಲಿ ಜಯ ಸಾಧಿಸಿದರೆ ಸಾಕು. ಅಥವಾ ಎರಡೂ ಪಂದ್ಯಗಳನ್ನು ಡ್ರಾನಲ್ಲಿ ಅಂತ್ಯಗೊಳಿಸಿದರೂ ನ್ಯೂಝಿಲೆಂಡ್ ತಂಡವು 1-0 ಅಂತರದಿಂದ ಸರಣಿ ಗೆಲ್ಲಬಹುದು. ಹೀಗಾಗಿಯೇ ಟೀಮ್ ಇಂಡಿಯಾ ಪಾಲಿಗೆ ಮುಂದಿನ ಎರಡೂ ಮ್ಯಾಚ್ಗಳು ತುಂಬಾ ಮಹತ್ವದ್ದು.
ಇದನ್ನೂ ಓದಿ: RCB ಉಳಿಸಿಕೊಂಡ ಆರು ಆಟಗಾರರು ಯಾರೆಲ್ಲಾ ಗೊತ್ತಾ?
ನ್ಯೂಝಿಲೆಂಡ್ ಟೆಸ್ಟ್ ತಂಡ: ಟಾಮ್ ಲ್ಯಾಥಮ್ (ನಾಯಕ), ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ಮಾರ್ಕ್ ಚಾಪ್ಮನ್, ಡೆವೊನ್ ಕಾನ್ವೇ, ಮ್ಯಾಟ್ ಹೆನ್ರಿ, ಡೇರಿಲ್ ಮಿಚೆಲ್, ವಿಲ್ ಓ’ರೂರ್ಕ್, ಅಜಾಝ್ ಪಟೇಲ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ಜೇಕೊಬ್ ಡಫಿ, ವಿಲ್ ಯಂಗ್, ಮೈಕೆಲ್ ಬ್ರೇಸ್‌ವೆಲ್, ಇಶ್ ಸೋಧಿ, ಕೇನ್ ವಿಲಿಯಮ್ಸನ್ (ಅಲಭ್ಯ).