IPL 2025: ಕರ್ನಾಟಕ ಸರ್ಕಾರದಿಂದ ಒತ್ತಡ: ಬದಲಾಗುತ್ತಾ RCB?
IPL 2025 Meg Auction: ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿಗೂ ಮುನ್ನ ಪ್ರತಿ ಫ್ರಾಂಚೈಸಿಗಳು ಒಟ್ಟು 6 ಆಟಗಾರರನ್ನು ರಿಟೈನ್ ಮಾಡಿಕೊಳ್ಳಬಹುದು. ಹೀಗೆ ಉಳಿಸಿಕೊಂಡ 6 ಆಟಗಾರರಲ್ಲಿ ಒಬ್ಬರು ಅನ್ಕ್ಯಾಪ್ಡ್ ಪ್ಲೇಯರ್ ಇರಲೇಬೇಕು. ಇಲ್ಲಿ ಆರ್ಸಿಬಿ ತಂಡದಲ್ಲಿ ಅನ್ಕ್ಯಾಪ್ಡ್ ಕನ್ನಡಿಗರಾಗಿ ವಿಜಯಕುಮಾರ್ ವೈಶಾಕ್ ಹಾಗೂ ಮನೋಜ್ ಬಾಂಢಗೆ ಇದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಮೆಗಾ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮೇಲೆ ಕರ್ನಾಟಕ ಸರ್ಕಾರ ಒತ್ತಡ ಹೇರಿದೆಯಾ? ಇಂತಹದೊಂದು ಪ್ರಶ್ನೆಗೆ ಕಾರಣವಾಗಿದ್ದು ಟೈಮ್ ಆಫ್ ಇಂಡಿಯಾ ಪ್ರಕಟಿಸಿರುವ ವರದಿ. ಈ ವರದಿಯ ಪ್ರಕಾರ, ರಾಜ್ಯ ಸರ್ಕಾರ ಸ್ಥಳೀಯ ಆಟಗಾರರಿಗೆ ಅವಕಾಶ ನೀಡುವಂತೆ RCB ಮೇಲೆ ಒತ್ತಡ ಹೇರಿದೆಯಂತೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಕನ್ನಡಿಗರಿಗೆ ಅವಕಾಶ ನೀಡುತ್ತಿಲ್ಲ ಎಂಬ ಟೀಕೆಗಳು ಕಳೆದ ಕೆಲ ವರ್ಷಗಳಿಂದ ಕೇಳಿ ಬರುತ್ತಿದೆ. ಇದಾಗ್ಯೂ ಸ್ಥಳೀಯ ಆಟಗಾರರಿಗೆ ಆರ್ಸಿಬಿ ಮಣೆ ಹಾಕಿದ್ದು ತುಂಬಾ ವಿರಳ. ಅದರಲ್ಲೂ ಕಳೆದ ಬಾರಿಯ ತಂಡದಲ್ಲಿದ್ದದ್ದು ಕರ್ನಾಟಕದ ಇಬ್ಬರು ಆಟಗಾರರು ಮಾತ್ರ.
ಇವರಲ್ಲಿ ವಿಜಯಕುಮಾರ್ ವೈಶಾಕ್ 4 ಪಂದ್ಯಗಳನ್ನಾಡಿದರೆ, ಮನೋಜ್ ಭಾಂಡಗೆ ಬೆಂಚ್ ಕಾದಿದ್ದೇ ಬಂತು. ಇತ್ತ ಮಹಾರಾಜ ಟಿ20 ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಭಾಂಡಗೆ ತನ್ನ ಸಾಮರ್ಥ್ಯವನ್ನು ತೆರೆದಿಟ್ಟಿದ್ದರು. ಇದರ ಬೆನ್ನಲ್ಲೇ ಯುವ ಆಟಗಾರನನ್ನು ಇಡೀ ಸೀಸನ್ನಲ್ಲಿ ಬೆಂಚ್ ಕಾಯಿಸಿದ ಆರ್ಸಿಬಿ ಫ್ರಾಂಚೈಸಿಯ ನಡೆಯ ಬಗ್ಗೆ ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರಹಾಕಿದ್ದರು.
ಇದೀಗ ಐಪಿಎಲ್ನ 18ನೇ ಆವೃತ್ತಿಗಾಗಿ ಸಿದ್ಧತೆಗಳು ಶುರುವಾಗಿದೆ. ಈ ಸಿದ್ಧತೆಗಳ ನಡುವೆ ಸ್ಥಳೀಯ ಆಟಗಾರರಿಗೆ ಅವಕಾಶ ನೀಡುವಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ರಾಜ್ಯ ಸರ್ಕಾರದ ಮೂಲಗಳು ಸೂಚಿಸಿವೆ ಎಂದು ವದಿಯಾಗಿದೆ.
ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಐಪಿಎಲ್ ಮೆಗಾ ಹರಾಜಿನ ರಿಟೆನ್ಷನ್ಗೂ ಮುನ್ನ ಆರ್ಸಿಬಿ ಫ್ರಾಂಚೈಸಿ ಸಂಕಷ್ಟಕ್ಕೆ ಸಿಲುಕಿದೆ. ಇಲ್ಲಿ ಮುಖ್ಯವಾಗಿ ಆರ್ಸಿಬಿ ರಾಜ್ಯ ಸರ್ಕಾರದಿಂದ “ಗಣನೀಯ ಒತ್ತಡವನ್ನು” ಎದುರಿಸುತ್ತಿದೆ ತಿಳಿಸಲಾಗಿದೆ. ಇದರರ್ಥ RCB ತಮ್ಮ ತಂಡದಲ್ಲಿ ಹೆಚ್ಚಿನ ಕರ್ನಾಟಕದ ಆಟಗಾರರನ್ನು ನೇಮಿಸಿಕೊಳ್ಳಬೇಕಾಗುತ್ತದೆ.
ಐಪಿಎಲ್ ಇತಿಹಾಸದಲ್ಲಿ ಆರ್ಸಿಬಿ ತಂಡವು ಎಂದಿಗೂ ಸ್ಥಳೀಯ ಪ್ರತಿಭೆಗಳನ್ನು ಗುರಿಯಾಗಿಸಿಕೊಂಡಿಲ್ಲ. ಹೀಗಾಗಿಯೇ ಬೆಂಗಳೂರು ಫ್ರಾಂಚೈಸಿ ತಂಡದಲ್ಲಿ ರಾಜ್ಯದ ಆಟಗಾರರ ಕೊರತೆ ಎದ್ದು ಕಾಣುತ್ತಿರುತ್ತದೆ. ಆದರೆ ಈ ಬಾರಿ ಆರ್ಸಿಬಿ ಫ್ರಾಂಚೈಸಿಯ ವ್ಯವಹಾರಗಳಲ್ಲಿ ಕರ್ನಾಟಕ ಸರ್ಕಾರ ಮಧ್ಯಪ್ರವೇಶಿಸಲು ನಿರ್ಧರಿಸಿದೆ. ಇದರಿಂದ ಐಪಿಎಲ್ ಮೆಗಾ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಕಾರ್ಯತಂತ್ರಗಳನ್ನು ಬದಲಿಸಬೇಕಾಗಿ ಬರಬಹುದು ಎಂದು ವರದಿಯಲ್ಲಿ ಹೇಳಲಾಗಿದೆ.
ಈ ವರದಿಯ ಪ್ರಕಾರ, ಆರ್ಸಿಬಿ ತಂಡದಲ್ಲಿ ಕರ್ನಾಟಕದ ಕ್ರಿಕೆಟಿಗರಿಗೆ ಮಣೆ ಹಾಕಲು ತಿಳಿಸಲಾಗಿದೆ. ಇದರಿಂದಾಗಿಯಾದರೂ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಹೆಚ್ಚಿನ ಕನ್ನಡಿಗರು ಕಾಣಿಸಿಕೊಳ್ಳಲಿದ್ದಾರಾ ಕಾದು ನೋಡಬೇಕಿದೆ.
ಐಪಿಎಲ್ ರಿಟೈನ್ ನಿಯಮವೇನು?
ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿಗೂ ಮುನ್ನ ಪ್ರತಿ ಫ್ರಾಂಚೈಸಿಗಳು ಒಟ್ಟು 6 ಆಟಗಾರರನ್ನು ರಿಟೈನ್ ಮಾಡಿಕೊಳ್ಳಬಹುದು. ಹೀಗೆ ಉಳಿಸಿಕೊಂಡ 6 ಆಟಗಾರರಲ್ಲಿ ಒಬ್ಬರು ಅನ್ಕ್ಯಾಪ್ಡ್ ಪ್ಲೇಯರ್ ಇರಲೇಬೇಕು. ಇಲ್ಲಿ ಆರ್ಸಿಬಿ ತಂಡದಲ್ಲಿ ಅನ್ಕ್ಯಾಪ್ಡ್ ಕನ್ನಡಿಗರಾಗಿ ವಿಜಯಕುಮಾರ್ ವೈಶಾಕ್ ಹಾಗೂ ಮನೋಜ್ ಬಾಂಢಗೆ ಇದ್ದಾರೆ. ಹೀಗಾಗಿ ಇವರಿಬ್ಬರಲ್ಲಿ ಒಬ್ಬರು ರಿಟೈನ್ ಆದರೂ ಅಚ್ಚರಿಪಡಬೇಕಿಲ್ಲ.
ಇದನ್ನೂ ಓದಿ: RCB ಉಳಿಸಿಕೊಂಡ ಆರು ಆಟಗಾರರು ಯಾರೆಲ್ಲಾ ಗೊತ್ತಾ?
ಹಾಗೆಯೇ ಹೀಗೆ 6 ಆಟಗಾರರನ್ನು ಉಳಿಸಿಕೊಂಡರೆ ಒಟ್ಟು 79 ಕೋಟಿ ರೂ. ಖರ್ಚು ಮಾಡಬೇಕಾಗುತ್ತದೆ. ಇನ್ನು ಐವರು ಆಟಗಾರರನ್ನು ಮಾತ್ರ ರಿಟೈನ್ ಮಾಡಿಕೊಂಡರೆ 75 ಕೋಟಿ ರೂ. ವ್ಯಯಿಸಬೇಕೆಂದು ತಿಳಿಸಲಾಗಿದೆ. ಈ ಮೊತ್ತವನ್ನು ಒಟ್ಟು ಹರಾಜು ಮೊತ್ತದಿಂದ, ಅಂದರೆ 120 ಕೋಟಿ ರೂ.ನಿಂದ ಕಡಿತ ಮಾಡಲಾಗುತ್ತದೆ.
Published On - 11:10 am, Tue, 22 October 24