
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಏಕದಿನ ಪಂದ್ಯ ಸೆಪ್ಟೆಂಬರ್ 27 ರಂದು ನಡೆಯಲಿದೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಬಹಳ ಸಮಯದ ನಂತರ ತಿರುವನಂತಪುರದಲ್ಲಿ ನಡೆಯುವ ಈ ಪಂದ್ಯದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದೇ ಸಮಯದಲ್ಲಿ, ರವೀಂದ್ರ ಜಡೇಜಾ ಕೂಡ ಹಲವು ತಿಂಗಳುಗಳ ನಂತರ ಭಾರತೀಯ ಏಕದಿನ ತಂಡಕ್ಕೆ ಮರಳಲಿದ್ದಾರೆ. ಶ್ರೇಯಸ್ ಅಯ್ಯರ್ ಈ ಏಕದಿನ ಸರಣಿಯಲ್ಲಿ ಭಾಗವಹಿಸದ ಕಾರಣ, ರುತುರಾಜ್ ಗಾಯಕ್ವಾಡ್‌ಗೆ 4 ನೇ ಕ್ರಮಾಂಕದಲ್ಲಿ ಅವಕಾಶ ಸಿಗಬಹುದು. ಜಮ್ಮು ಮತ್ತು ಕಾಶ್ಮೀರದ ಅಕಿಬ್ ನಬಿ ಕೂಡ ಈ ಸರಣಿಯಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡುವ ಸಾಧ್ಯತೆಯಿದೆ. ಇನ್ನು ಈ ಸರಣಿಯಲ್ಲಿ ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಇತಿಹಾಸ ಸೃಷ್ಟಿಸುವ ಅವಕಾಶ ಹೊಂದಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಇತಿಹಾಸದಲ್ಲಿ ಅತಿ ಹೆಚ್ಚು ಶತಕ ಗಳಿಸಿದ ಆಟಗಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ ಇದುವರೆಗೆ ವೆಸ್ಟ್ ಇಂಡೀಸ್ ವಿರುದ್ಧ 41 ಇನ್ನಿಂಗ್ಸ್‌ಗಳಲ್ಲಿ 9 ಶತಕಗಳನ್ನು ಬಾರಿಸಿದ್ದಾರೆ. ಬಾಬರ್ ಆಝಂ ಐದು ಶತಕಗಳೊಂದಿಗೆ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ ಮೊದಲ ಏಕದಿನ ಪಂದ್ಯದಲ್ಲಿ 100 ರನ್ ಗಳಿಸಿದರೆ, ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 10 ಶತಕಗಳನ್ನು ಸಿಡಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ.
ಇಲ್ಲಿಯವರೆಗೆ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ 142 ಏಕದಿನ ಪಂದ್ಯಗಳು ನಡೆದಿವೆ. ಅಂಕಿಅಂಶಗಳ ಪ್ರಕಾರ, ರವೀಂದ್ರ ಜಡೇಜಾ ಮತ್ತು ಕೋರ್ಟ್ನಿ ವಾಲ್ಷ್ ಎರಡೂ ದೇಶಗಳ ಪರ ಅತಿ ಹೆಚ್ಚು ವಿಕೆಟ್ ಪಡೆದಿದ್ದಾರೆ. ಪ್ರಸ್ತುತ ಇಬ್ಬರು ತಲಾ 44 ವಿಕೆಟ್‌ಗಳೊಂದಿಗೆ ಸಮಬಲ ಸಾಧಿಸಿದ್ದಾರೆ. ಮೊದಲ ಏಕದಿನ ಪಂದ್ಯದಲ್ಲಿ ಜಡೇಜಾ ವಿಕೆಟ್ ಪಡೆದರೆ ಈ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುತ್ತಾರೆ. ಹಾಗೆಯೇ ಈ ಸರಣಿಯಲ್ಲಿ 6 ವಿಕೆಟ್‌ಗಳನ್ನು ಪಡೆದರೆ ವೆಸ್ಟ್ ಇಂಡೀಸ್ ವಿರುದ್ಧ 50 ಏಕದಿನ ವಿಕೆಟ್‌ಗಳನ್ನು ಪೂರೈಸಿದ ಮೊದಲ ಭಾರತೀಯ ಬೌಲರ್ ಎಂಬ ದಾಖಲೆಯೂ ಜಡೇಜಾ ಪಾಲಾಗಲಿದೆ.
ಭಾರತ- ವಿಂಡೀಸ್ ಪಂದ್ಯಕ್ಕೆ ಮಳೆ ಅಡ್ಡಿ? ಇಲ್ಲಿದೆ ಹವಾಮಾನ ವರದಿ
ಅಂತರರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಒಟ್ಟು 20 ಆಟಗಾರರು 2,000 ಅಥವಾ ಅದಕ್ಕಿಂತ ಹೆಚ್ಚು ಬೌಂಡರಿಗಳನ್ನು ಹೊಡೆದಿದ್ದಾರೆ. ಕೇವಲ 5 ಭಾರತೀಯ ಬ್ಯಾಟ್ಸ್‌ಮನ್‌ಗಳು ಮಾತ್ರ ಈ ಸಾಧನೆ ಮಾಡಿದ್ದಾರೆ. ಇದೀಗ ರೋಹಿತ್ ಶರ್ಮಾ 2,000 ಬೌಂಡರಿಗಳನ್ನು ಹೊಡೆದ ಆರನೇ ಭಾರತೀಯ ಬ್ಯಾಟ್ಸ್‌ಮನ್ ಆಗಬಹುದು. ರೋಹಿತ್ ಇಲ್ಲಿಯವರೆಗೆ 1,982 ಬೌಂಡರಿಗಳನ್ನು ಹೊಡೆದಿದ್ದಾರೆ. ತಮ್ಮ ಮೊದಲ ಏಕದಿನ ಪಂದ್ಯದಲ್ಲಿ 18 ಬೌಂಡರಿಗಳನ್ನು ಹೊಡೆಯುವುದು ಕಷ್ಟಕರವಾಗಿರುತ್ತದೆ. ಆದರೆ, ರೋಹಿತ್ ಶರ್ಮಾ ಈ ಮೊದಲು ಒಂದು ಇನ್ನಿಂಗ್ಸ್‌ನಲ್ಲಿ 20 ಮತ್ತು 30 ಬೌಂಡರಿಗಳನ್ನು ಹೊಡೆದಿದ್ದಾರೆ. ಹೀಗಾಗಿ ರೋಹಿತ್ ಕೂಡ ಮತ್ತೊಂದು ಮೈಲಿಗಲ್ಲಿನ ಸನಿಹದಲ್ಲಿದ್ದಾರೆ.
Published On - 8:08 pm, Sat, 26 September 26