ಆಸೀಸ್ ವಿರುದ್ಧದ ಏಕದಿನ ಸರಣಿಯಿಂದ ಹಾರ್ದಿಕ್ ಔಟ್; ಬದಲಿಯಾಗಿ ಬಂದಿದ್ಯಾರು?
ಭಾರತ ಎ ಹಾಗೂ ಆಸ್ಟ್ರೇಲಿಯಾ ಎ ನಡುವಿನ ಅನಧಿಕೃತ ಏಕದಿನ ಸರಣಿ ನಾಳೆಯಿಂದ ಆರಂಭವಾಗಲಿದೆ. ಈ ಸರಣಿಯಿಂದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಗಾಯದಿಂದ ಹೊರಬಿದ್ದಿದ್ದು, ಸೂರ್ಯಾಂಶ್ ಶೆಡ್ಗೆ ತಂಡ ಸೇರಿದ್ದಾರೆ. ರುತುರಾಜ್ ಗಾಯಕ್ವಾಡ್ ಭಾರತ ಎ ತಂಡವನ್ನು ಮುನ್ನಡೆಸಲಿದ್ದು, ದೇವದತ್ ಪಡಿಕ್ಕಲ್ ಉಪನಾಯಕರಾಗಿದ್ದಾರೆ. ಭಾರತ ಎ ತಂಡ ಟೆಸ್ಟ್ ಸರಣಿ ಗೆದ್ದ ಬಳಿಕ, ಏಕದಿನ ಸರಣಿಯಲ್ಲೂ ಉತ್ತಮ ಪ್ರದರ್ಶನ ನೀಡಲು ಸಜ್ಜಾಗಿದೆ.

ಪ್ರಸ್ತುತ ಆಸ್ಟ್ರೇಲಿಯಾ ಎ ತಂಡ ಭಾರತ ಪ್ರವಾಸದಲ್ಲಿದೆ. ಭಾರತ ಎ ಹಾಗೂ ಆಸ್ಟ್ರೇಲಿಯಾ ಎ ನಡುವೆ ನಡೆದ ಎರಡು ಪಂದ್ಯಗಳ ಅನಧಿಕೃತ ಟೆಸ್ಟ್ ಸರಣಿಯನ್ನು ಭಾರತ ಎ ತಂಡ 1-0 ಅಂತರದಿಂದ ಗೆದ್ದುಕೊಂಡಿತು. ಇದೀಗ ಉಭಯ ತಂಡಗಳ ನಡುವೆ ಮೂರು ಪಂದ್ಯಗಳ ಅನಧಿಕೃತ ಏಕದಿನ ಸರಣಿ ಇದೇ ಅಕ್ಟೋಬರ್ 6 ರಿಂದ ಅಂದರೆ ನಾಳೆಯಿಂದ ಆರಂಭವಾಗಲಿದೆ. ಈ ಸರಣಿಗಾಗಿ ಈಗಾಗಲೇ ಉಭಯ ತಂಡಗಳನ್ನು ಆಯ್ಕೆ ಮಾಡಲಾಗಿತ್ತು. ಆದರೀಗ ಎರಡೂ ತಂಡಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಆತಿಥೇಯ ಭಾರತ ತಂಡದಲ್ಲಿ 2 ಬದಲಾವಣೆಯನ್ನು ಮಾಡಲಾಗಿದ್ದು, ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಗಾಯದಿಂದ ಚೇತರಿಸಿಕೊಳ್ಳದ ಕಾರಣ ತಂಡದಿಂದ ಹೊರಬಿದ್ದಿದ್ದಾರೆ. ಹಾಗೆಯೇ ನಮನ್ ಧೀರ್ ಅವರನ್ನು ಸಹ ಈ ಸರಣಿಯಿಂದ ಕೈಬಿಡಲಾಗಿದೆ.
ಹಾರ್ದಿಕ್ಗೆ ಮತ್ತೆ ಗಾಯ
ಭಾರತ ಎ ಏಕದಿನ ತಂಡದಿಂದ ಹಾರ್ದಿಕ್ ಪಾಂಡ್ಯ ಬದಲಿಗೆ ಸೂರ್ಯಾಂಶ್ ಶೆಡ್ಗೆ ಮತ್ತು ನಮನ್ ಧೀರ್ ಬದಲಿಗೆ ಅನುಕುಲ್ ರಾಯ್ ಆಯ್ಕೆಯಾಗಿದ್ದಾರೆ. ಟಿ20 ವಿಶ್ವಕಪ್ ಬಳಿಕ ಭಾರತ ತಂಡದಿಂದ ಹೊರಗಿರುವ ಹಾರ್ದಿಕ್ ಪಾಂಡ್ಯ ಬೆಂಗಳೂರಿನ ಎನ್ಸಿಎ ನಲ್ಲಿ ಚೇತರಿಸಿಕೊಳ್ಳುತ್ತಿದ್ದರು. ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರವೇ ಅವರನ್ನು ಭಾರತ ಎ ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಆದರೆ ಸರಣಿ ಆರಂಭಕ್ಕೂ ಮುನ್ನವೇ ಹಾರ್ದಿಕ್ ಮತ್ತೆ ಹೊಸ ಗಾಯಕ್ಕೆ ತುತ್ತಾಗಿದ್ದಾರೆ. ಹೀಗಾಗಿ ಅವರನ್ನು ಈ ಸರಣಿಯಿಂದ ಹೊರಗಿಡಲಾಗಿದೆ.
ಇನ್ನು ಹಾರ್ದಿಕ್ ಬದಲಿಗೆ ಆಯ್ಕೆಯಾಗಿರುವ 23 ವರ್ಷದ ಸೂರ್ಯಾಂಶ್ ಶೆಡ್ಗೆ ಭಾರತ ಎ ಪರ ಇದುವರೆಗೆ ಮೂರು ಟಿ20 ಮತ್ತು 15 ಲಿಸ್ಟ್ ಎ ಪಂದ್ಯಗಳಲ್ಲಿ ಅರ್ಧದಷ್ಟು ಪಂದ್ಯಗಳನ್ನು ಆಡಿದ್ದಾರೆ. ಕಳೆದ ಜೂನ್‌ನಲ್ಲಿ ದಂಬುಲ್ಲಾದಲ್ಲಿ ನಡೆದ ಶ್ರೀಲಂಕಾ ಎ ವಿರುದ್ಧದ ಪಂದ್ಯದಲ್ಲಿ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಶೆಡ್ಗೆ 66 ಎಸೆತಗಳಲ್ಲಿ 72 ರನ್ ಬಾರಿಸಿದರು, ಇದು ಅವರ ವೃತ್ತಿಜೀವನದ ಅತ್ಯುತ್ತಮ ಸ್ಕೋರ್ ಆಗಿದೆ.
ಭಾರತ ‘ಎ’ ತಂಡಕ್ಕೆ ರುತುರಾಜ್ ನಾಯಕ
ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ತಂಡದ ಭಾಗವಾಗಿದ್ದ ರುತುರಾಜ್ ಗಾಯಕ್ವಾಡ್ ಇದೀಗ ಆಸ್ಟ್ರೇಲಿಯಾ ಎ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ ಎ ತಂಡವನ್ನು ಮುನ್ನಡೆಸಲಿದ್ದಾರೆ. ಹಾಗೆಯೇ ಕನ್ನಡಿಗ ದೇವದತ್ ಪಡಿಕ್ಕಲ್ ಅವರನ್ನು ಉಪನಾಯಕನನ್ನಾಗಿ ನೇಮಿಸಲಾಗಿದೆ. ಕಳೆದ ರೆಡ್-ಬಾಲ್ ಸರಣಿಯ ಸಮಯದಲ್ಲಿ ಪಡಿಕ್ಕಲ್ ಭಾರತ ಎ ತಂಡದ ನಾಯಕತ್ವವಹಿಸಿದ್ದರು. ತಮ್ಮ ನಾಯಕತ್ವದಲ್ಲಿ ತಂಡಕ್ಕೆ ಸರಣಿಯನ್ನು ಗೆದ್ದುಕೊಟ್ಟಿದ್ದರು.
ಭಾರತ ಎ ತಂಡ: ರುತುರಾಜ್ ಗಾಯಕ್‌ವಾಡ್ (ನಾಯಕ), ದೇವದತ್ ಪಡಿಕ್ಕಲ್ (ಉಪನಾಯಕ), ಪ್ರಿಯಾಂಶ್ ಆರ್ಯ, ಕುಮಾರ್ ಕುಶಾಗ್ರ (WK), ರಜತ್ ಪಾಟಿದಾರ್, ಪ್ರಭುಸಿಮ್ರಾನ್ ಸಿಂಗ್, ಬಿ ಸಾಯಿ ಸುದರ್ಶನ್, ಅನುಕೂಲ್ ರಾಯ್, ಅರ್ಶಿನ್ ಕುಲಕರ್ಣಿ, ನಿಶಾಂತ್ ಸಿಂಧು, ಸೂರ್ಯಾಂಶ್ ಶೆಡ್ಗೆ, ಅರ್ಷದ್ ಖಾನ್, ಗುರ್ಜಪ್ನೀತ್ ಸಿಂಗ್, ವಿಪ್ರಜ್ ನಿಗಮ್, ಯಶ್ ಠಾಕೂರ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:05 pm, Mon, 5 October 26




