
2025 ರ ಏಷ್ಯಾಕಪ್‌ನಲ್ಲಿ (Asia Cup 2025) ರನ್‌ಗಳ ಮಳೆ ಹರಿಸಿದ್ದ ಭಾರತದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾಗೆ (Abhishek Sharma) ಭಾರತ ಏಕದಿನ ತಂಡದಲ್ಲಿ ಆಡುವ ಅವಕಾಶ ಸಿಕ್ಕಿದೆ. ವಾಸ್ತವವಾಗಿ ಭಾರತ ಎ ಹಾಗೂ ಆಸ್ಟ್ರೇಲಿಯಾ ಎ (India A vs Australia A) ನಡುವೆ ನಡೆಯುತ್ತಿರುವ ಅನಧಿಕೃತ ಏಕದಿನ ಸರಣಿಯ ಎರಡನೇ ಏಕದಿನ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಆಡುವ ಅವಕಾಶ ಪಡೆದಿದ್ದರು. ಆದರೆ ಏಕದಿನ ಮಾದರಿಯಲ್ಲಿ ಅಭಿಷೇಕ್ಗೆ ನಿರೀಕ್ಷಿತ ಆರಂಭ ಸಿಕ್ಕಿಲ್ಲ. ಇಂದಿನ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ಅಭಿಷೇಕ್ ತಾನು ಎದುರಿಸಿದ ಮೊದಲ ಪಂದ್ಯದಲ್ಲೇ ವಿಕೆಟ್ ಒಪ್ಪಿಸಿದರು. ಅಂದರೆ ಅಭಿಷೇಕ್ಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಇಲ್ಲಿ ಗಮನಿಸಬೇಕಾದ ಇನ್ನೊಂದು ಸಂಗತಿಯೆಂದರೆ ಅಭಿಷೇಕ್ ಶರ್ಮಾ ಅವರ ಅಕ್ಕ ಕೋಮಲ್ ಶರ್ಮಾ ಅವರ ಮದುವೆ ಶುಕ್ರವಾರ ಅಂದರೆ ಅಕ್ಟೋಬರ್ 3 ರಂದು ಅಮೃತಸರದಲ್ಲಿ ನಡೆಯಲಿದೆ. ಆದರೆ ಈ ಸಮಾರಂಭವನ್ನು ಬಿಟ್ಟು ದೇಶದ ಪರ ಆಡಲು ಕಣಕ್ಕಿಳಿದಿದ್ದ ಅಭಿಷೇಕ್ಗೆ ಗಮನಾರ್ಹ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ.
ಆಸ್ಟ್ರೇಲಿಯಾ ಎ ವಿರುದ್ಧದ ಮೊದಲ ಅನಧಿಕೃತ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದ್ದ ಭಾರತ ಎ ತಂಡ, ಎರಡನೇ ಪಂದ್ಯದಲ್ಲಿ ಕಳಪೆ ಆರಂಭ ಕಂಡಿತು. ತಂಡದ ಮೂವರು ಬ್ಯಾಟ್ಸ್‌ಮನ್‌ಗಳು ಕೇವಲ 21 ರನ್‌ಗಳಿಗೆ ಔಟಾದರು. 2025 ರ ಏಷ್ಯಾಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದ ಅಭಿಷೇಕ್ ಶರ್ಮಾ ಈ ಪಂದ್ಯದಲ್ಲಿ ಕೇವಲ ಒಂದು ಎಸೆತ ಆಡಿ ರನ್ ಗಳಿಸದೆ ಪೆವಿಲಿಯನ್ ಸೇರಿಕೊಂಡರು.
ಏಷ್ಯಾಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಅಭಿಷೇಕ್ ಆಡಿದ ಏಳು ಪಂದ್ಯಗಳಲ್ಲಿ 44.85 ಸರಾಸರಿಯಲ್ಲಿ 3 ಅರ್ಧಶತಕಗಳ ಸಹಿತ 314 ರನ್ ಬಾರಿಸಿದ್ದರು. ಇದಕ್ಕಾಗಿ ಅವರಿಗೆ ಟೂರ್ನಮೆಂಟ್‌ನ ಆಟಗಾರ ಪ್ರಶಸ್ತಿಯೂ ಲಭಿಸಿತು. ಆದರೆ ಆಸ್ಟ್ರೇಲಿಯಾ ಎ ವಿರುದ್ಧ ಅವರ ಆಟ ಸಪ್ಪೆಯಾಗಿತ್ತು. ಅಭಿಷೇಕ್ ಮಾತ್ರವಲ್ಲದೆ ಇದೇ ಆಸ್ಟ್ರೇಲಿಯಾ ಎ ವಿರುದ್ಧದ ಹಿಂದಿನ ಪಂದ್ಯದಲ್ಲಿ ಅದ್ಭುತ ಶತಕ ಗಳಿಸಿದ್ದ ಶ್ರೇಯಸ್ ಅಯ್ಯರ್ ಕೂಡ ಬೇಗನೆ ಔಟಾದರು.
ಸಹೋದರಿಯ ಮದುವೆಯಲ್ಲಿ ಭರ್ಜರಿ ಸ್ಟೆಪ್ಸ್ ಹಾಕಿದ ಅಭಿಷೇಕ್ ಶರ್ಮಾ; ವಿಡಿಯೋ
ಆಸ್ಟ್ರೇಲಿಯಾ ಎ ವಿರುದ್ಧದ ಈ ಪಂದ್ಯದಲ್ಲಿ ಭಾರತ ಎ ತಂಡ ಕಳಪೆ ಆರಂಭ ಕಂಡಿದ್ದು, ಕೇವಲ 6 ರನ್‌ಗಳಿಗೆ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿತು. ಅಭಿಷೇಕ್ ಶರ್ಮಾ ಅವರಲ್ಲದೆ, ಹಿಂದಿನ ಪಂದ್ಯದಲ್ಲಿ ಅದ್ಭುತ ಅರ್ಧಶತಕ ಗಳಿಸಿದ್ದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಪ್ರಭ್ಸಿಮ್ರಾನ್ ಸಿಂಗ್ ಕೂಡ ಕೇವಲ 1 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಭಾರತ ಎ ತಂಡದ ನಾಯಕ ಶ್ರೇಯಸ್ ಅಯ್ಯರ್ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿತ್ತು, ಆದರೆ ಅವರು ಕೂಡ 13 ಎಸೆತಗಳಲ್ಲಿ ಕೇವಲ 8 ರನ್ ಬಾರಿಸಿ ಔಟಾದರು.
ಹಿಂದಿನ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ 83 ಎಸೆತಗಳಲ್ಲಿ 12 ಬೌಂಡರಿ ಮತ್ತು 4 ಸಿಕ್ಸರ್‌ಗಳೊಂದಿಗೆ 110 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರೆ, ಪ್ರಿಯಾಂಶ್ ಆರ್ಯ 84 ಎಸೆತಗಳಲ್ಲಿ 11 ಬೌಂಡರಿ ಮತ್ತು 5 ಸಿಕ್ಸರ್‌ಗಳೊಂದಿಗೆ 101 ರನ್ ಬಾರಿಸಿದ್ದರು. ಪ್ರಭ್ಸಿಮ್ರಾನ್ ಸಿಂಗ್ 53 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್‌ಗಳೊಂದಿಗೆ 56 ರನ್ ಕಲೆಹಾಕಿದ್ದರು. ಇವರ ಆಟದಿಂದಾಗಿ ಭಾರತ ಎ ತಂಡವು 50 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 413 ರನ್‌ಗಳನ್ನು ಕಲೆಹಾಕಿತು. ಇದಕ್ಕೆ ಉತ್ತರವಾಗಿ, ಆಸ್ಟ್ರೇಲಿಯಾ ಎ ತಂಡವು 33.1 ಓವರ್‌ಗಳಲ್ಲಿ ಕೇವಲ 242 ರನ್‌ಗಳಿಗೆ ಆಲೌಟ್ ಆಯಿತು. ಹೀಗಾಗಿ, ಭಾರತ ಎ ತಂಡವು ಮೊದಲ ಪಂದ್ಯವನ್ನು 171 ರನ್‌ಗಳಿಂದ ಗೆದ್ದುಕೊಂಡಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ