
ಶ್ರೀಲಂಕಾದ ದಂಬುಲ್ಲಾ ಕ್ರೀಡಾಂಗಣದಲ್ಲಿ ನಡೆದ ಭಾರತ ಎ ಹಾಗೂ ಶ್ರೀಲಂಕಾ ಎ (India A vs Sri Lanka A) ತಂಡಗಳ ನಡುವಿನ ತ್ರಿಕೋನ ಏಕದಿನ ಸರಣಿಯ ಫೈನಲ್ ಪಂದ್ಯದಲ್ಲಿ ಆತಿಥೇಯ ತಂಡವನ್ನು ಸೋಲಿಸಿದ ಭಾರತ ಎ ತಂಡ ತ್ರಿಕೋನ ಸರಣಿಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಈ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಎ ತಂಡ ವೈಭವ್ ಸೂರ್ಯವಂಶಿ (Vaibhav Sooryavanshi) ಅವರ ಸ್ಫೋಟಕ ಬ್ಯಾಟಿಂಗ್ನಿಂದಾಗಿ ನಿಗದಿತ 50 ಓವರ್‌ಗಳಲ್ಲಿ 378 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಶ್ರೀಲಂಕಾ ನಿಯಮಿತ ಅಂತರಗಳಲ್ಲಿ ವಿಕೆಟ್ ಕಳೆದುಕೊಂಡು ಸೋಲಿಗೆ ಶರಣಾಯಿತು. ಈ ಮೂಲಕ ಭಾರತ ತಂಡ ಸತತ 7ನೇ ತ್ರಿಕೋನ ಸರಣಿಯನ್ನು ಗೆದ್ದ ದಾಖಲೆಯೊಂದಿಗೆ ಈ ಪ್ರವಾಸವನ್ನು ಅಂತ್ಯಗೊಳಿಸಿದೆ.
ಈ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಎ ತಂಡವು 50 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 377 ರನ್‌ಗಳ ಬೃಹತ್ ಮೊತ್ತವನ್ನು ಗಳಿಸಿತು. ತಂಡದ ಪರ ವೈಭವ್ ಸೂರ್ಯವಂಶಿ ಕೇವಲ 29 ಎಸೆತಗಳಲ್ಲಿ 10 ಬೌಂಡರಿ ಮತ್ತು 8 ಸಿಕ್ಸರ್‌ಗಳನ್ನು ಒಳಗೊಂಡಂತೆ 94 ರನ್ ಗಳಿಸಿದರು. ಅವರ ಸ್ಟ್ರೈಕ್ ರೇಟ್ 324 ಕ್ಕಿಂತ ಹೆಚ್ಚಿತ್ತು. ಮತ್ತೊಬ್ಬ ಆರಂಭಿಕ ಪ್ರಿಯಾಂಶ್ ಆರ್ಯ ಕೂಡ 39 ರನ್ ಗಳಿಸಿದರು. ನಾಯಕ ತಿಲಕ್ ವರ್ಮಾ ಕೂಡ 67 ರನ್‌ಗಳ ಉಪಯುಕ್ತ ಇನ್ನಿಂಗ್ಸ್ ಆಡಿದರು. ಕೊನೆಯಲ್ಲಿ ಅನುಕುಲ್ ರಾಯ್ 15 ಎಸೆತಗಳಲ್ಲಿ 39 ರನ್ ಬಾರಿಸಿ ತಂಡದ ಸ್ಕೋರ್ ಅನ್ನು 377 ರನ್‌ಗಳಿಗೆ ಕೊಂಡೊಯ್ದರು.
ಇತ್ತ ಈ ಪಂದ್ಯದಲ್ಲಿ ಶ್ರೀಲಂಕಾ ಎ ತಂಡದ ಬೌಲಿಂಗ್ ಸಾಕಷ್ಟು ದುಬಾರಿಯಾಗಿತ್ತು. ವನುಜಾ ಸಹನ್, ಕುಗಥಾಸ್ ಮಥುಲನ್ ಮತ್ತು ರವಿಂಡು ಫರ್ನಾಂಡೊ ತಲಾ ಎರಡು ವಿಕೆಟ್ ಪಡೆದರೂ, ಉಳಿದ ಬೌಲರ್‌ಗಳು ಪರಿಣಾಮ ಬೀರುವಲ್ಲಿ ವಿಫಲರಾದರು, ಇದನ್ನು ಭಾರತೀಯ ಬ್ಯಾಟ್ಸ್‌ಮನ್‌ಗಳು ಸದುಪಯೋಗಪಡಿಸಿಕೊಂಡರು.
68, 175, 67, 96, 94..! ನಿರ್ಣಾಯಕ ಪಂದ್ಯಗಳಲ್ಲಿ ಅಬ್ಬರಿಸುವ ವೈಭವ್ ಸೂರ್ಯವಂಶಿ
ಈ ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾ ಎ ತಂಡ ಕಳಪೆ ಆರಂಭ ಪಡೆದುಕೊಂಡಿತು. ಮಧ್ಯಮ ಓವರ್‌ಗಳಲ್ಲಿ ಪ್ರತಿರೋಧ ತೋರಿತ್ತಾದರೂ ಭಾರತೀಯ ಬೌಲರ್‌ಗಳ ಒತ್ತಡಕ್ಕೆ ಮಣಿದು 47.1 ಓವರ್‌ಗಳಲ್ಲಿ ಕೇವಲ 311 ರನ್‌ಗಳಿಗೆ ಆಲ್ ಔಟ್ ಆಯಿತು. ತಂಡದ ಪರ ವನಜಾ ಸಹನ್ 62 ರನ್ ಬಾರಿಸಿದರೆ, ಸದೇರಾ ಸಮರವಿಕ್ರಮ 52 ರನ್ ಗಳಿಸಿದರು. ವಿಜಯಕಾಂತ್ ವ್ಯಾಸಕಾಂತ್ 39 ಮತ್ತು ನಾಯಕ ಸಹನ್ ಅರಚ್ಚಿಗೆ 38 ರನ್‌ಗಳ ಕಾಣಿಕೆ ನೀಡಿದರಾದರೂ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಸಾಧ್ಯವಾಗಲಿಲ್ಲ.
ಮತ್ತೊಂದೆಡೆ, ಭಾರತದ ಪರ ಯಶ್ ಠಾಕೂರ್ ಮತ್ತು ವಿಪ್ರಜ್ ನಿಗಮ್ ಅದ್ಭುತ ಬೌಲಿಂಗ್ ಮಾಡಿದರು. ಇಬ್ಬರೂ ಬೌಲರ್‌ಗಳು ತಲಾ ಮೂರು ವಿಕೆಟ್ ಪಡೆದರು. ಅನುಕುಲ್ ರಾಯ್ ಕೂಡ ಎರಡು ವಿಕೆಟ್ ಪಡೆದರು. ಅಶೋಕ್ ಶರ್ಮಾ ಮತ್ತು ತಿಲಕ್ ವರ್ಮಾ ಕೂಡ ತಲಾ ಒಂದು ವಿಕೆಟ್ ಪಡೆದರು.
Published On - 6:03 pm, Sun, 21 June 26