ಜೇಟ್ಲಿ ಮೈದಾನದಲ್ಲಿ ರಾಷ್ಟ್ರಗೀತೆಗೂ ಮೊದಲು ಮೊಳಗಿದ ವಂದೇ ಮಾತರಂ
ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೊದಲ T20 ಪಂದ್ಯದಲ್ಲಿ ರಾಷ್ಟ್ರಗೀತೆ 'ಜನ ಗಣ ಮನ' ಆರಂಭವಾಗುವ ಮುನ್ನ 'ವಂದೇ ಮಾತರಂ' ಹಾಡಲಾಯಿತು. ಇತ್ತೀಚೆಗೆ ವಂದೇ ಮಾತರಂಗೆ ರಾಷ್ಟ್ರಗೀತೆಯ ಸ್ಥಾನಮಾನ ನೀಡಿ, ರಾಷ್ಟ್ರಗೀತೆಯೊಂದಿಗೆ ಅದನ್ನು ಹಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಎರಡೂ ರಾಷ್ಟ್ರಗೀತೆಗಳನ್ನು ಹಾಡಲಾಯಿತು.

ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಮೂರು ಪಂದ್ಯಗಳ ಟಿ20 ಸರಣಿಗೆ ಇಂದಿನಿಂದ ಚಾಲನೆ ಸಿಕ್ಕಿದೆ. ಉಭಯ ತಂಡಗಳ ನಡುವಿನ ಮೊದಲ ಟಿ20 ಪಂದ್ಯ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಇದಾದ ಬಳಿಕ ಉಭಯ ತಂಡಗಳ ಆಟಗಾರರು ರಾಷ್ಟ್ರಗೀತೆಗಾಗಿ ಮೈದಾನಕ್ಕೆ ಆಗಮಿಸಿದರು. ವಾಡಿಕೆಯಂತೆ ಮೊದಲಿಗೆ ರಾಷ್ಟ್ರಗೀತೆ ಜನ ಗಣ ಮನ ಆರಂಭವಾಗಬೇಕಿತ್ತು. ಆದರೆ ಎಲ್ಲರಿಗೂ ಅಚ್ಚರಿ ಎಂಬಂತೆ ಮೊದಲಿಗೆ ರಾಷ್ಟ್ರಗೀತೆಯನ್ನು ಹಾಡುವುದಕ್ಕೂ ಮೊದಲು ವಂದೇ ಮಾತರಂ ಹಾಡಲಾಯಿತು.
ಜನ ಗಣ ಮನದ ಜೊತೆಗೆ ವಂದೇ ಮಾತರಂ
ಸಾಮಾನ್ಯವಾಗಿ ಯಾವುದೇ ಅಂತರರಾಷ್ಟ್ರೀಯ ಪಂದ್ಯಗಳು ಶುರುವಾಗುವ ಮೊದಲು ಉಭಯ ತಂಡಗಳ ರಾಷ್ಟ್ರಗೀತೆಯನ್ನು ಹಾಡಲಾಗುತ್ತದೆ. ಅದರಂತೆ ಇಲ್ಲಿಯವರೆಗೆ ಭಾರತದ ರಾಷ್ಟ್ರಗೀತೆಯನ್ನು ಮಾತ್ರ ಹಾಡಲಾಗುತ್ತಿತ್ತು. ಆದರೆ ಅಫ್ಘಾನಿಸ್ತಾನ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಮೊದಲಿಗೆ ವಂದೇ ಮಾತರಂ ಗೀತೆಯನ್ನು ಹಾಡಿದ ಬಳಿಕ ರಾಷ್ಟ್ರಗೀತೆಯನ್ನು ಹಾಡಲಾಯಿತು. ಇದರೊಂದಿಗೆ ಟೀಂ ಇಂಡಿಯಾ ತನ್ನ ಹಳೆಯ ಸಂಪ್ರದಾಯವನ್ನು ಬದಲಾಯಿಸಿತು.
3 minutes 10 seconds of Vande Mataram, 52 seconds of Janagana Mana- approx 5 minutes to finish Indians National Anthem + Song Combo…!!! Felt like a satsang..!!#INDvsAFG pic.twitter.com/hjIvXP8VoE
— AMEESH SAMALOPANAN (@AmeeshSaman) September 13, 2026
ಸಂಸತ್ತಿನಲ್ಲಿ ಅನುಮೋದನೆ
ಅಷ್ಟಕ್ಕೂ ಈ ಪಂದ್ಯದಲ್ಲಿ ರಾಷ್ಟ್ರಗೀತೆಗೂ ಮೊದಲು ವಂದೇ ಮಾತರಂ ಹಾಡಲು ಕಾರಣವೂ ಇದೆ. ಇತ್ತೀಚೆಗೆ ವಂದೇ ಮಾತರಂಗೆ ರಾಷ್ಟ್ರಗೀತೆಯ ಸ್ಥಾನಮಾನ ನೀಡಿ, ರಾಷ್ಟ್ರಗೀತೆಯೊಂದಿಗೆ ಅದನ್ನು ಹಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಇತ್ತೀಚೆಗೆ ನಡೆದ ಮುಂಗಾರು ಅಧಿವೇಶನದಲ್ಲಿ ವಂದೇ ಮಾತರಂಗೆ, ರಾಷ್ಟ್ರಗೀತೆ ಜನ ಗಣ ಮನದಷ್ಟೇ ಕಾನೂನಾತ್ಮಕ ಗೌರವ ಮತ್ತು ರಕ್ಷಣೆ ನೀಡುವ ‘ರಾಷ್ಟ್ರೀಯ ಗೌರವಕ್ಕೆ ಅಪಮಾನ ತಡೆ (ತಿದ್ದುಪಡಿ) ವಿಧೇಯಕ – 2026′ ಲೋಕಸಭೆಯಲ್ಲಿ ಅಂಗೀಕಾರಗೊಳ್ಳುವ ಮೂಲಕ ಸಂಸತ್ತಿನಲ್ಲಿ ಅನುಮೋದನೆ ಪಡೆದುಕೊಂಡಿತ್ತು.
ಅಂದಿನಿಂದ ಕೇಂದ್ರ ಸರ್ಕಾರವು ಎಲ್ಲಾ ಅಧಿಕೃತ ಕಾರ್ಯಕ್ರಮಗಳು, ಶಾಲೆಗಳು ಮತ್ತು ಸರ್ಕಾರಿ ಸಮಾರಂಭಗಳಲ್ಲಿ ರಾಷ್ಟ್ರಗೀತೆ ‘ಜನ ಗಣ ಮನ’ ನುಡಿಸುವ ಮುನ್ನ ವಂದೇ ಮಾತರಂನ ಎಲ್ಲಾ 6 ಚರಣಗಳನ್ನು ಕಡ್ಡಾಯವಾಗಿ ನುಡಿಸಬೇಕು ಎಂದು ಆದೇಶ ಹೊರಡಿಸಿದೆ. ಅದರಂತೆ ಇಂದು ನಡೆದ ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಮೊದಲ ಟಿ20 ಪಂದ್ಯ ಆರಂಭಕ್ಕೂ ಮುನ್ನ ಎರಡೂ ರಾಷ್ಟ್ರಗೀತೆಗಳನ್ನು ಹಾಡಲಾಯಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:01 pm, Sun, 13 September 26




