ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯನ್ನು ಕ್ಲೀಸ್ಸ್ವೀಪ್ ಮಾಡಿ ಮೆರೆದಿರುವ ಭಾರತ (India vs Sri Lanka) ತಂಡ ಇದೀಗ ಟೆಸ್ಟ್ ಸರಣಿಗೆ ಸಜ್ಜಾಗುತ್ತಿದೆ. ಮೊಹಾಲಿಯ ಪಂಜಾಬ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆಯಲಿದ್ದು, ಮಾರ್ಚ್ 4 ನಾಳೆಯಿಂದ ಆರಂಭವಾಗಲಿದೆ. ಪ್ರಮುಖವಾಗಿ ಮೂರು ವಿಚಾರಗಳಿಗೆ ಈ ಟೆಸ್ಟ್ ಸಾಕಷ್ಟು ಕುತೂಹಲ ಕೆರಳಿಸಿದೆ. ಮೊದಲನೆಯದಾಗಿ ರೋಹಿತ್ ಶರ್ಮಾ (Rohit Sharma) ಪರಿಪೂರ್ಣ ನಾಯಕನಾಗಿ ಇದೇ ಮೊದಲ ಬಾರಿಗೆ ಭಾರತ ಟೆಸ್ಟ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಏಕದಿನ ಮತ್ತು ಟಿ20 ಯಲ್ಲಿ ಹಿಟ್ಮ್ಯಾನ್ ನಾಯಕತ್ವದಡಿಯಲ್ಲಿ ಬೊಂಬಾಟ್ ಪ್ರದರ್ಶನ ನೀಡಿರುವ ಟೀಮ್ ಇಂಡಿಯಾ ಟೆಸ್ಟ್ನಲ್ಲಿ ಹೇಗೆ ಆಟವಾಡುತ್ತೇ ಎಂಬುದು ನೋಡಬೇಕಿದೆ. ಎರಡನೇಯದಾಗಿ ಮೊಹಾಲಿ ಟೆಸ್ಟ್ ವಿರಾಟ್ ಕೊಹ್ಲಿಗೆ 100ನೇ ಟೆಸ್ಟ್ (Kohli 100th Test). ಶತಕದ ಟೆಸ್ಟ್ ಪಂದ್ಯದಲ್ಲಿ ಶತಕ ಬರಲಿದೆ ಎಂಬ ನಿರೀಕ್ಷೆಯಿದೆ. ಮೂರನೇಯದಾಗಿ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ, ಟಿ20 ಜೊತೆಗೆ ಶ್ರೀಲಂಕಾ ವಿರುದ್ಧದ ಟಿ20 ಸರಣಿ ವಶಪಡಿಸಿಕೊಂಡು ಸೋಲಿಲ್ಲದ ಸರದಾರನಾಗಿ ಮೆರೆಯುತ್ತಿರುವ ಟೀಮ್ ಇಂಡಿಯಾ ತನ್ನ ಗೆಲುವಿನ ಓಟ ಮುಂದುವರೆಸುತ್ತಾ ಎಂಬ ಕುತೂಹಲ ಕೂಡ ಇದೆ.
ಕೊಹ್ಲಿ 100ನೇ ಟೆಸ್ಟ್ಗಿಲ್ಲ ನಿರ್ಬಂಧ:
ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ 100ನೇ ಟೆಸ್ಟ್ ಗೆ ಯಾವುದೇ ರೀತಿಯ ನಿರ್ಬಂಧಗಳಿರುವುದಿಲ್ಲ. ಪ್ರೇಕ್ಷಕರ ಉಪಸ್ಥಿತಿಯಲ್ಲೇ ಮೊಹಾಲಿ ಟೆಸ್ಟ್ ನಡೆಯಲಿದೆ ಎಂದು ಬಿಸಿಸಿಐ ತಿಳಿಸಿದೆ. ಈ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಮಾಹಿತಿ ನೀಡಿದ್ದು, ಈ ಹಿಂದಿನ ವರದಿಯಂತೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ 100ನೇ ಟೆಸ್ಟ್ ಪಂದ್ಯವನ್ನು ಮೊಹಾಲಿಯಲ್ಲಿ ಮುಚ್ಚಿದ ಬಾಗಿಲುಗಳಲ್ಲಿ ಆಡಲಾಗುವುದಿಲ್ಲ. ಬದಲಿಗೆ ಪ್ರೇಕ್ಷಕರ ಉಪಸ್ಥಿತಿಯಲ್ಲೇ ನಡೆಯಲಿದೆ. ಪ್ರೇಕ್ಷಕರನ್ನು ಮೈದಾನಕ್ಕೆ ಅನುಮತಿಸುವ ನಿರ್ಧಾರವು ರಾಜ್ಯ ಕ್ರಿಕೆಟ್ ಸಂಸ್ಥೆಗಳು ತೆಗೆದುಕೊಳ್ಳುತ್ತವೆ. ವಿವಿಧ ಅಂಶಗಳ ಆಧಾರದ ಮೇಲೆ, ನಾನು ಪಿಸಿಎ ಪದಾಧಿಕಾರಿಗಳೊಂದಿಗೆ ಮಾತನಾಡಿದ್ದೇನೆ ಮತ್ತು ವಿರಾಟ್ ಕೊಹ್ಲಿ ತಮ್ಮ 100 ನೇ ಟೆಸ್ಟ್ ಪಂದ್ಯವನ್ನು ಆಡುವ ಐತಿಹಾಸಿಕ ಕ್ಷಣವನ್ನು ಕ್ರಿಕೆಟ್ ಅಭಿಮಾನಿಗಳು ವೀಕ್ಷಿಸಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.
ಮೊಹಾಲಿ ಪಿಚ್ ಹೇಗಿದೆ?:
ದೇಶದ ಇತರ ನಗರಗಳ ಮೈದಾನಗಳಿಗೆ ಹೋಲಿಸಿದರೆ ಪಂಜಾಬ್ ಕ್ರಿಕೆಟ್ ಅಸೋಸಿಯೇಶನ್‌ನ ಈ ಪಿಚ್ ಹೆಚ್ಚು ಹಸಿರಿನಿಂದ ಕೂಡಿದೆ. ಹೀಗಾಗಿ ವೇಗದ ಬೌಲರ್‌ಗಳು ಈ ಪಿಚ್‌ನಿಂದ ಹೆಚ್ಚಿನ ನೆರವನ್ನು ನಿರೀಕ್ಷಿಸಬಹುದು. ಅಲ್ಲದೆ ಬೌನ್ಸ್ ಕೂಡ ವೇಗಿಗಳಿಗೆ ನೆರವಾಗುವ ಸಾಧ್ಯತೆಯಿದೆ. ಆದರೆ ಪಿಚ್‌ನಲ್ಲಿ ಬಿರುಕುಂಟಾಗುವ ಕಾರಣ ಪಂದ್ಯದ ಅಂತಿಮ ಎರಡು ದಿನಗಳಲ್ಲಿ ಸ್ಪಿನ್ನರ್‌ಗಳು ಮಹತ್ವದ ಪಾತ್ರವಹಿಸುವ ಸಾಧ್ಯತೆಯಿದೆ. ಎರಡು ತಂಡಗಳು ಕೂಡ ಪ್ರತಿಭಾವಂತ ಸ್ಪಿನ್ನರ್‌ಗಳನ್ನು ಹೊಂದಿರುವ ಕಾರಣ ಸಾಕಷ್ಟು ಕುತೂಹಲ ಮೂಡಿಸಿದೆ.
ಶ್ರೀಲಂಕಾ ಮಾಸ್ಟರ್ ಪ್ಲಾನ್:
ಟೆಸ್ಟ್ ಮಾದರಿಯಲ್ಲಿ ಅತ್ಯಂತ ಬಲಿಷ್ಠವಾಗಿರುವ ಭಾರತ ತಂಡವನ್ನು ದಿಟ್ಟವಾಗಿ ಎದುರಿಸಲು ಶ್ರೀಲಂಕಾ ಪಡೆ ರಣತಂತ್ರಗಳನ್ನು ಹೆಣೆಯುತ್ತಿದ್ದು ಅದಕ್ಕಾಗಿ ಮಹತ್ವದ ನಿರ್ಧಾರವೊಂದ ಲಂಕಾ ಪಡೆ ಮುಂದಾಗಿದೆ ಎನ್ನಲಾಗಿದೆ. ಭಾರತ ವಿರುದ್ಧದ ಟಿ20 ಸರಣಿಯಲ್ಲಿ ಶ್ರೀಲಂಕಾದ ಸೀಮಿತ ಓವರ್‌ಗಳ ನಾಯಕ ದಸುನ್ ಶನಕಾ ಅಮೋಘ ಪ್ರದರ್ಶನ ನೀಡಿದ್ದರು. ಆದರೆ ಶನಕಾ ಶ್ರೀಲಂಕಾದ ಟೆಸ್ಟ್ ಸರಣಿಯಲ್ಲಿ ಸ್ಥಾನವನ್ನು ಪಡೆದುಕೊಂಡಿಲ್ಲ. ಶನಕ ಶ್ರೀಲಂಕಾದ ಟೆಸ್ಟ್ ಸ್ಕ್ವಾಡ್‌ನಲ್ಲಿ ಇಲ್ಲದಿದ್ದರೂ ಈ ಸಂದರ್ಭದಲ್ಲಿ ಅವರ ಅತ್ಯುತ್ತಮ ಫಾರ್ಮ್ ಟೆಸ್ಟ್ ಸರಣಿಯಲ್ಲಿ ತಂಡಕ್ಕೆ ನೆರವಾಗಬಹುದು ಎಂಬ ಲೆಕ್ಕಾಚಾರದಲ್ಲಿ ಶ್ರೀಲಂಕಾ ಮ್ಯಾನೇಜ್‌ಮೆಂಟ್ ಇದೆ. ಹೀಗಾಗಿ ಭಾರತ ವಿರುದ್ಧದ ಟೆಸ್ಟ್ ಸರಣಿಗೆ ದಸುನ್ ಶನಕ ಅವರನ್ನು ಸೇರ್ಪಡೆಗೊಳಿಸುವ ಸಾಧ್ಯತೆಯಿದೆ.
BCCI contracts: ರಹಾನೆ, ಪೂಜಾರ, ಹಾರ್ದಿಕ್ಗೆ ಎ ಗ್ರೇಡ್ನಿಂದ ಹಿಂಬಡ್ತಿ! ಉಳಿದಂತೆ ಗ್ರೇಡ್ ಲೆಕ್ಕಾಚಾರ ಹೀಗಿದೆ