ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಇಂದಿನಿಂದ ಆರಂಭವಾಗಿರುವ ಅಡಿಲೇಡ್ ಡೇ ನೈಟ್ ಟೆಸ್ಟ್‌ನ ಮೊದಲ ದಿನದ ಆಟ ಮುಕ್ತಾಯಗೊಂಡಿದೆ. ಈ ಮೊದಲ ದಿನದಾಟದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 180 ರನ್‌ಗಳಿಗೆ ಆಲೌಟ್ ಆಯಿತು. ಇದಕ್ಕೆ ಉತ್ತರವಾಗಿ ಆಸ್ಟ್ರೇಲಿಯಾ ದಿನದಾಟದ ಅಂತ್ಯಕ್ಕೆ ತನ್ನ ಮೊದಲ ಇನಿಂಗ್ಸ್‌ನಲ್ಲಿ ಒಂದು ವಿಕೆಟ್‌ಗೆ 86 ರನ್ ಗಳಿಸಿದೆ. ಸದ್ಯ ಮಾರ್ನಸ್ ಲಬುಶೇನ್ 20 ರನ್ ಹಾಗೂ ನಾಥನ್ ಮೆಕ್‌ಸ್ವೀನಿ 38 ರನ್‌ಗಳಿಸಿ ಕ್ರೀಸ್‌ನಲ್ಲಿದ್ದಾರೆ. ಇವರಿಬ್ಬರ ನಡುವೆ ಇದುವರೆಗೆ 62 ರನ್‌ಗಳ ಜೊತೆಯಾಟವಿದೆ. ಆಸ್ಟ್ರೇಲಿಯಾ ದಿನದಾಟದಂತ್ಯಕ್ಕೆ ಕೇವಲ 1 ವಿಕೆಟ್ ಕಳೆದುಕೊಂಡಿದ್ದು, ಆರಂಭಿಕ ಉಸ್ಮಾನ್ ಖವಾಜಾ ಜಸ್ಪ್ರೀತ್ ಬುಮ್ರಾ ಬೌಲಿಂಗ್ನಲ್ಲಿ ರೋಹಿತ್ ಶರ್ಮಾಗೆ ಕ್ಯಾಚಿತ್ತು ನಿರ್ಗಮಿಸಿದರು.
ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಯಶಸ್ವಿ ಪಂದ್ಯದ ಮೊದಲ ಎಸೆತದಲ್ಲೇ ಎಲ್‌ಬಿಡಬ್ಲ್ಯೂ ಆಗಿ ಔಟಾದರು. ಅವರು ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಇದಾದ ಬಳಿಕ ಕೆಎಲ್ ರಾಹುಲ್ ಮತ್ತು ಶುಭ್ಮನ್ ಗಿಲ್ ನಡುವೆ ಎರಡನೇ ವಿಕೆಟ್‌ಗೆ 69 ರನ್‌ಗಳ ಜೊತೆಯಾಟವಿತ್ತು. ಸ್ಟಾರ್ಕ್ ಈ ಜೊತೆಯಾಟವನ್ನು ಮುರಿದರು. ಆರಂಭಿಕ ರಾಹುಲ್ 37 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು.
Nathan McSweeney and Marnus Labuschagne held fort for Australia, slashing almost half the deficit in the final session 👏 #WTC25 | 📝 #AUSvIND: https://t.co/fq7nnvPgWw pic.twitter.com/69vexV17Tx
— ICC (@ICC) December 6, 2024
ರಾಹುಲ್ ಔಟಾದ ಕೂಡಲೇ ಟೀಂ ಇಂಡಿಯಾದ ವಿಕೆಟ್‌ಗಳ ಸುರಿಮಳೆಯಾಯಿತು. 4ನೇ ಕ್ರಮಾಂಕದಲ್ಲಿ ಬಂದ ವಿರಾಟ್ ಕೊಹ್ಲಿ ಏಳು ರನ್ ಗಳಿಸಿ ಔಟಾದರೆ, ಶುಭ್ಮನ್ ಗಿಲ್ 31 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಾಯಕ ರೋಹಿತ್ ಶರ್ಮಾ ಮೂರು ರನ್ ಗಳಿಸಿ ಔಟಾದರು. ಒಂದು ಸಮಯದಲ್ಲಿ ಭಾರತದ ಸ್ಕೋರ್ ಒಂದು ವಿಕೆಟ್‌ಗೆ 69 ರನ್ ಆಗಿದ್ದರೆ, ಸ್ವಲ್ಪ ಸಮಯದ ನಂತರ ಅದು ಐದು ವಿಕೆಟ್‌ಗೆ 87 ರನ್ ಆಯಿತು. ಅಂದರೆ ಭಾರತ 18 ರನ್ ಗಳಿಸುವಷ್ಟರಲ್ಲಿ ಇನ್ನೂ ನಾಲ್ಕು ವಿಕೆಟ್ ಕಳೆದುಕೊಂಡಿತ್ತು.
ಇದಾದ ಬಳಿಕ ರಿಷಬ್ ಪಂತ್ ಕೂಡ 21 ರನ್ ಗಳಿಸಿ ಔಟಾದರು. ಅಶ್ವಿನ್, ನಿತೀಶ್ ರೆಡ್ಡಿ ಅವರೊಂದಿಗೆ ಇನ್ನಿಂಗ್ಸ್ ನಿಭಾಯಿಸಲು ಪ್ರಯತ್ನಿಸಿದರು ಮತ್ತು ಏಳನೇ ವಿಕೆಟ್‌ಗೆ 32 ರನ್‌ಗಳ ಜೊತೆಯಾಟವನ್ನು ಮಾಡಿದರು. ಆದರೆ ಮತ್ತೆ ದಾಳಿಗಿಳಿದ ಸ್ಟಾರ್ಕ್ ಅಶ್ವಿನ್ ವಿಕೆಟ್ ಉರುಳಿಸಿ ಈ ಜೊತೆಯಾಟ ಮುರಿದರು. ಹರ್ಷಿತ್ ರಾಣಾ ಮತ್ತು ಜಸ್ಪ್ರೀತ್ ಬುಮ್ರಾ ಖಾತೆ ತೆರೆಯದೆ ಔಟಾದರು. ಕೊನೆಯಲ್ಲಿ 54 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳ ಸಹಾಯದಿಂದ 42 ರನ್ ಗಳಿಸಿದ ನಿತೀಶ್ ಸ್ಟಾರ್ಕ್‌ಗೆ ಆರನೇ ಬಲಿಯಾಗುವ ಮೂಲಕ ಭಾರತದ ಇನ್ನಿಂಗ್ಸ್ಗೆ ಅಂತ್ಯ ಹಾಡಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:28 pm, Fri, 6 December 24