ಇಂದೋರ್ನ ಹೋಲ್ಕರ್ ಸ್ಟೇಡಿಯಂನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ 3 ಪಂದ್ಯಗಳ ಏಕದಿನ ಸರಣಿಯನ್ನು ಟೀಮ್ ಇಂಡಿಯಾ 2-0 ಅಂತರದಿಂದ ವಶಪಡಿಸಿಕೊಂಡಿದೆ. ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ಹಂಗಾಮಿ ನಾಯಕ ಸ್ಟೀವ್ ಸ್ಮಿತ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಶುಭ್ಮನ್ ಗಿಲ್ ಜೊತೆ ಇನಿಂಗ್ಸ್ ಆರಂಭಿಸಿದ ರುತುರಾಜ್ ಗಾಯಕ್ವಾಡ್ ಕೇವಲ 8 ರನ್ಗಳಿಸಿ ವಿಕೆಟ್ ಒಪ್ಪಿಸಿದರು.
ಈ ವೇಳೆ ಕಣಕ್ಕಿಳಿದ ಶ್ರೇಯಸ್ ಅಯ್ಯರ್ ಶುಭ್ಮನ್ ಗಿಲ್ ಜೊತೆಗೂಡಿ ಇನಿಂಗ್ಸ್ ಕಟ್ಟುವ ಕಾಯಕಕ್ಕೆ ಕೈ ಹಾಕಿದರು. ಅತ್ಯುತ್ತಮ ಜೊತೆಯಾಟ ಪ್ರದರ್ಶಿಸಿದ ಈ ಜೋಡಿ ಆಸೀಸ್ ಬೌಲರ್ಗಳ ಬೆಂಡೆತ್ತಿದರು. ಪರಿಣಾಮ 25 ಓವರ್ ಮುಕ್ತಾಯದ ವೇಳೆಗೆ ಟೀಮ್ ಇಂಡಿಯಾ 187 ರನ್ ಕಲೆಹಾಕಿತು.
ಇದಾದ ಬಳಿಕ ಅಬ್ಬರ ಮುಂದುವರೆಸಿದ ಶ್ರೇಯಸ್ ಅಯ್ಯರ್ 86 ಎಸೆತಗಳಲ್ಲಿ ಶತಕ ಪೂರೈಸಿದ್ದರು. ಆದರೆ ಶತಕದ ಬೆನ್ನಲ್ಲೇ ಬಿರುಸಿನ ಆಟಕ್ಕೆ ಮುಂದಾಗಿ 90 ಎಸೆತಗಳಲ್ಲಿ 11 ಫೋರ್ ಹಾಗೂ 3 ಸಿಕ್ಸ್ಗಳೊಂದಿಗೆ 105 ರನ್ಗಳ ಇನಿಂಗ್ಸ್ ಅಂತ್ಯಗೊಳಿಸಿದರು.
ಇತ್ತ ಅಯ್ಯರ್ ಔಟಾಗಿ ನಿರ್ಗಮಿಸುತ್ತಿದ್ದಂತೆ 92 ಎಸೆತಗಳಲ್ಲಿ ಶುಭ್ಮನ್ ಗಿಲ್ ಶತಕ ಪೂರೈಸಿದರು. ಅಲ್ಲದೆ 97 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ 104 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಅಷ್ಟರಲ್ಲಾಗಲೇ ಟೀಮ್ ಇಂಡಿಯಾ ಮೊತ್ತ 35 ಓವರ್ಗಳಲ್ಲಿ 243 ಕ್ಕೆ ಬಂದು ನಿಂತಿತ್ತು.
ಇನ್ನು ಅಂತಿಮ 15 ಓವರ್ಗಳ ವೇಳೆ ಬ್ಯಾಟ್ ಬೀಸಿದ ಕೆಎಲ್ ರಾಹುಲ್ 38 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 3 ಫೋರ್ಗಳೊಂದಿಗೆ 52 ರನ್ ಬಾರಿಸಿ ನಿರ್ಗಮಿಸಿದರು. ಮತ್ತೊಂದೆಡೆ ಸಿಡಿಲಬ್ಬರ ಶುರು ಮಾಡಿದ ಸೂರ್ಯಕುಮಾರ್ ಯಾದವ್ ಕೇವಲ 37 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ ಅಜೇಯ 72 ರನ್ ಚಚ್ಚಿದರು. ಇದರೊಂದಿಗೆ 50 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಟೀಮ್ ಇಂಡಿಯಾ ಮೊತ್ತ 399 ಕ್ಕೆ ಬಂದು ನಿಂತಿತು.
ಟೀಮ್ ಇಂಡಿಯಾ ನೀಡಿದ 400 ರನ್ಗಳ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡಕ್ಕೆ ಕನ್ನಡಿಗ ಪ್ರಸಿದ್ಧ್ ಕೃಷ್ಣ ಆರಂಭಿಕ ಆಘಾತ ನೀಡಿದರು. 2ನೇ ಓವರ್ನಲ್ಲಿ ಮ್ಯಾಥ್ಯೂ ಶಾರ್ಟ್ ಹಾಗೂ ಸ್ಟಿವ್ ಸ್ಮಿತ್ರನ್ನು ಔಟ್ ಮಾಡಿ ಭಾರತ ತಂಡಕ್ಕೆ ಆರಂಭದಲ್ಲೇ ಯಶಸ್ಸು ತಂದುಕೊಟ್ಟರು. ಈ ವೇಳೆ ಮಳೆ ಬಂದಿದ್ದರಿಂದ ಕೆಲ ಕಾಲ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು. ಆ ಬಳಿಕ ಪಂದ್ಯ ಶುರುವಾದಾಗ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಓವರ್ ಕಡಿತಗಳೊಂದಿಗೆ ಆಸ್ಟ್ರೇಲಿಯಾ ತಂಡಕ್ಕೆ 33 ಓವರ್ಗಳಲ್ಲಿ 317 ರನ್ಗಳ ಟಾರ್ಗೆಟ್ ನೀಡಲಾಯಿತು.
ಆದರೆ ಅದಾಗಲೇ 9 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 56 ರನ್ ಕಲೆಹಾಕಿದ್ದ ಆಸ್ಟ್ರೇಲಿಯಾ ತಂಡಕ್ಕೆ ರವಿಚಂದ್ರನ್ ಅಶ್ವಿನ್ ಬ್ಯಾಕ್ ಟು ಬ್ಯಾಕ್ ಆಘಾತ ನೀಡಿದರು. ಮೊದಲು ಮಾರ್ನಸ್ ಲಾಬುಶೇನ್ (27) ರನ್ನು ಬೌಲ್ಡ್ ಮಾಡಿದ ಅಶ್ವಿನ್, ಆ ಬಳಿಕ ಅರ್ಧಶತಕ ಬಾರಿಸಿ ಅಪಾಯಕಾರಿಯಾಗುವ ಸೂಚನೆ ನೀಡಿದ್ದ ಡೇವಿಡ್ ವಾರ್ನರ್ (53) ಎಲ್ಬಿ ಬಲೆಗೆ ಬೀಳಿಸಿದರು. ಇದರ ಬೆನ್ನಲ್ಲೇ ಜೋಶ್ ಇಂಗ್ಲಿಸ್ (6) ಕೂಡ ಅಶ್ವಿನ್ಗೆ ವಿಕೆಟ್ಗೆ ಒಪ್ಪಿಸಿದರು.
ಇನ್ನು ಅಲೆಕ್ಸ್ ಕ್ಯಾರಿ (14) ಹಾಗೂ ಆ್ಯಡಂ ಝಂಪಾ (5) ರನ್ನು ರವೀಂದ್ರ ಜಡೇಜಾ ಕ್ಲೀನ್ ಬೌಲ್ಡ್ ಮಾಡಿದರು. ಇದರ ನಡುವೆ ಕ್ಯಾಮರೋನ್ ಗ್ರೀನ್ (19) ಅವರನ್ನು ಇಶಾನ್ ಕಿಶನ್ ರನೌಟ್ ಮಾಡಿದರು. ಆದರೆ 9ನೇ ವಿಕೆಟ್ಗೆ ಜೊತೆಯಾದ ಶಾನ್ ಅಬಾಟ್ (54) ಹಾಗೂ ಜೋಶ್ ಹ್ಯಾಝಲ್ವುಡ್ (23) 77 ರನ್ಗಳ ಜೊತೆಯಾಟವಾಡಿದರು.
ಇದಾಗ್ಯೂ 28.2 ಓವರ್ಗಳಲ್ಲಿ 217 ರನ್ಗಳಿಗೆ ಆಲೌಟ್ ಆಗುವ ಮೂಲಕ ಆಸ್ಟ್ರೇಲಿಯಾ ತಂಡವು ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ 99 ರನ್ಗಳ ಹೀನಾಯವಾಗಿ ಸೋಲೊಪ್ಪಿಕೊಂಡಿತು. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡಿದೆ. ಇನ್ನು ಮೂರನೇ ಏಕದಿನ ಪಂದ್ಯ ಸೆಪ್ಟೆಂಬರ್ 27 ರಂದು ನಡೆಯಲಿದೆ.
ಭಾರತ (ಪ್ಲೇಯಿಂಗ್ XI): ಶುಭ್ಮನ್ ಗಿಲ್, ರುತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ನಾಯಕ), ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಪ್ರಸಿದ್ಧ್ ಕೃಷ್ಣ.
ಇದನ್ನೂ ಓದಿ: ಭರ್ಜರಿ ಶತಕ ಸಿಡಿಸಿ ವಿಶ್ವ ದಾಖಲೆ ಬರೆದ ಶುಭ್ಮನ್ ಗಿಲ್
ಆಸ್ಟ್ರೇಲಿಯಾ (ಪ್ಲೇಯಿಂಗ್ XI): ಡೇವಿಡ್ ವಾರ್ನರ್, ಮ್ಯಾಥ್ಯೂ ಶಾರ್ಟ್, ಸ್ಟೀವನ್ ಸ್ಮಿತ್ (ನಾಯಕ), ಮಾರ್ನಸ್ ಲಾಬುಶೇನ್, ಜೋಶ್ ಇಂಗ್ಲಿಸ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಕ್ಯಾಮರೋನ್ ಗ್ರೀನ್, ಶಾನ್ ಅಬಾಟ್, ಆ್ಯಡಂ ಝಂಪಾ, ಜೋಶ್ ಹ್ಯಾಝಲ್ವುಡ್, ಸ್ಪೆನ್ಸರ್ ಜಾನ್ಸನ್.
Published On - 10:07 pm, Sun, 24 September 23