WCL 2025: ಶಿಖರ್ ಧವನ್ ಸಿಡಿಲಬ್ಬರದ ನಡುವೆಯೂ ಸೋತ ಇಂಡಿಯಾ ಚಾಂಪಿಯನ್ಸ್

WCL 2025: 2025 ರ ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್‌ ಲೀಗ್​ನಲ್ಲಿ ಭಾರತ ಚಾಂಪಿಯನ್ಸ್ ತಂಡ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿತು. ಶಿಖರ್ ಧವನ್ (91 ರನ್) ಮತ್ತು ಯೂಸುಫ್ ಪಠಾಣ್ (52 ರನ್) ಅದ್ಭುತ ಬ್ಯಾಟಿಂಗ್ ಮಾಡಿದರೂ, ಆಸ್ಟ್ರೇಲಿಯಾದ ಕ್ಯಾಲಮ್ ಫರ್ಗುಸನ್ (70 ರನ್) ಅವರ ಅದ್ಭುತ ಪ್ರದರ್ಶನದಿಂದಾಗಿ ಆಸ್ಟ್ರೇಲಿಯಾ ಗೆಲುವು ಸಾಧಿಸಿತು. ಈ ಸೋಲಿನೊಂದಿಗೆ ಭಾರತ ತಂಡ ಪಾಯಿಂಟ್ ಪಟ್ಟಿಯ ಕೊನೆಯ ಸ್ಥಾನದಲ್ಲಿದೆ.

WCL 2025: ಶಿಖರ್ ಧವನ್ ಸಿಡಿಲಬ್ಬರದ ನಡುವೆಯೂ ಸೋತ ಇಂಡಿಯಾ ಚಾಂಪಿಯನ್ಸ್
India Champions

Updated on: Jul 26, 2025 | 9:55 PM

2025 ರ ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್‌ನ (World Championship of Legends) 10 ನೇ ಪಂದ್ಯದಲ್ಲಿ, ಇಂಡಿಯಾ ಚಾಂಪಿಯನ್ಸ್, ಆಸ್ಟ್ರೇಲಿಯಾ ಚಾಂಪಿಯನ್ಸ್ ತಂಡವನ್ನು (India Champions vs Australia Champions) ಎದುರಿಸಿತು. ಈ ಪಂದ್ಯದಲ್ಲಿ ಇಂಡಿಯಾ ಚಾಂಪಿಯನ್ಸ್ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿ 203 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಚಾಂಪಿಯನ್ಸ್ 6 ವಿಕೆಟ್ ಕಳೆದುಕೊಂಡು ಕೊನೆಯ ಓವರ್​ನಲ್ಲಿ ಗೆಲುವಿನ ದಡ ಸೇರಿತು. ಇಂಡಿಯಾ ಚಾಂಪಿಯನ್ಸ್ ಪರ ಶಿಖರ್ ಧವನ್ (Shikhar Dhawan) ಬಿರುಗಾಳಿಯ ಇನ್ನಿಂಗ್ಸ್ ಆಡಿ ತಂಡದ ಸ್ಕೋರ್ ಅನ್ನು 200 ರನ್‌ಗಳ ಗಡಿ ದಾಟಿಸಿದರು. ಆದಾಗ್ಯೂ ತಂಡಕ್ಕೆ ಗೆಲುವು ಧಕ್ಕಲಿಲ್ಲ. ಇದು ಈ ಪಂದ್ಯಾವಳಿಯಲ್ಲಿ ತಂಡದ ಸತತ ಎರಡನೇ ಸೋಲಾಗಿದ್ದು, ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲೇ ಉಳಿದುಕೊಂಡಿದೆ.

ಶಿಖರ್ ಧವನ್ ಸಿಡಿಲಬ್ಬರ

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಇಂಡಿಯಾ ಚಾಂಪಿಯನ್ಸ್ ಪರ ಆರಂಭಿಕ ಶಿಖರ್ ಧವನ್ ಒಟ್ಟು 60 ಎಸೆತಗಳನ್ನು ಎದುರಿಸಿ 151.67 ಸ್ಟ್ರೈಕ್ ರೇಟ್‌ನಲ್ಲಿ ಅಜೇಯ 91 ರನ್ ಗಳಿಸಿದರು. ಈ ಸಮಯದಲ್ಲಿ ಅವರು 12 ಬೌಂಡರಿ ಮತ್ತು 1 ಸಿಕ್ಸರ್ ಬಾರಿಸಿದರು. ಧವನ್ ಹೊರತುಪಡಿಸಿ ಯೂಸುಫ್ ಪಠಾಣ್ ಕೂಡ ಅದ್ಭುತ ಇನ್ನಿಂಗ್ಸ್ ಆಡಿದರು. ಯೂಸುಫ್ ಪಠಾಣ್ ಕೇವಲ 23 ಎಸೆತಗಳಲ್ಲಿ 226.09 ಸ್ಟ್ರೈಕ್ ರೇಟ್‌ನಲ್ಲಿ ಅಜೇಯ 52 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್‌ಗಳು ಸೇರಿದ್ದವು. ಅದೇ ಸಮಯದಲ್ಲಿ, ರಾಬಿನ್ ಉತ್ತಪ್ಪ ಕೂಡ ತಂಡಕ್ಕೆ ಉತ್ತಮ ಆರಂಭವನ್ನು ನೀಡಿ 21 ಎಸೆತಗಳಲ್ಲಿ 37 ರನ್‌ಗಳ ಕೊಡುಗೆ ನೀಡಿದರು. ಇದರಲ್ಲಿ 3 ಬೌಂಡರಿ ಮತ್ತು 3 ಸಿಕ್ಸರ್‌ಗಳು ಸೇರಿದ್ದವು.

ಗೆಲುವು ಕಸಿದ ಫರ್ಗುಸನ್

ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಚಾಂಪಿಯನ್ಸ್ ತಂಡಕ್ಕೆ ಸಾಧಾರಣ ಆರಂಭ ಸಿಕ್ಕಿತು. ಆದರೆ ಕೆಳಕ್ರಮಾಂಕದಲ್ಲಿ ಕ್ಯಾಲಮ್ ಫರ್ಗುಸನ್ ಸ್ಫೋಟಕ ಬ್ಯಾಟಿಂಗ್ ಮಾಡುವ ಮೂಲಕ ಟೀಂ ಇಂಡಿಯಾ ಕೈಯಿಂದ ಗೆಲುವು ಕಸಿದುಕೊಂಡರು. ಫರ್ಗುಸನ್ ಕೇವಲ 38 ಎಸೆತಗಳಲ್ಲಿ 5 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಅಜೇಯ 70 ರನ್ ಬಾರಿಸಿದರೆ, ಡೇನಿಯಲ್ ಕ್ರಿಶ್ಚಿಯನ್ ಕೂಡ 39 ರನ್​ಗಳ ಕಾಣಿಕೆ ನೀಡಿದರು.

ಮುಂದಿನ ಹಾದಿ ಮತ್ತಷ್ಟು ಕಠಿಣ

ಈ ಸೋಲಿನೊಂದಿಗೆ ಪಂದ್ಯಾವಳಿಯಲ್ಲಿ ಇದುವರೆಗೆ 3 ಪಂದ್ಯಗಳನ್ನಾಡಿರುವ ಇಂಡಿಯಾ ಚಾಂಪಿಯನ್ಸ್ ತಂಡ, ಪಾಕಿಸ್ತಾನ ಚಾಂಪಿಯನ್ಸ್ ವಿರುದ್ಧದ ಪಂದ್ಯವನ್ನು ರದ್ದುಗೊಳಿಸಿತ್ತು. ಆ ಬಳಿಕ ನಡೆದಿದ್ದ ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸೋಲನುಭವಿಸಿತ್ತು. ಇದೀಗ ಆಸ್ಟ್ರೇಲಿಯಾ ಚಾಂಪಿಯನ್ಸ್ ವಿರುದ್ಧ ಸೋತಿದ್ದು ತಂಡದ ಬಳಿ ಕೇವಲ 1 ಅಂಕ ಮಾತ್ರ ಇದೆ. ಹೀಗಾಗಿ ಉಳಿದಿರುವ ಎರಡು ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿ ತಂಡವಿದೆ. ಆದಾಗ್ಯೂ ಈ ಪಂದ್ಯಗಳನ್ನು ಗೆದ್ದರೂ ಭಾರತದ ಮುಂದಿನ ಹಾದಿ ಇತರ ತಂಡಗಳ ಫಲಿತಾಂಶದ ಮೇಲೆ ಅವಲಂಬಿತವಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ