17 ನಗರ, 22 ಪಂದ್ಯಗಳು; ಟೀಂ ಇಂಡಿಯಾದ ತವರು ಸರಣಿಗಳ ವೇಳಾಪಟ್ಟಿ ಪ್ರಕಟ

BCCI Unveils India's 2026-27 Home Cricket Schedule: ಬಿಸಿಸಿಐ 2026-27ರ ಭಾರತ ಪುರುಷರ ತಂಡದ ತವರು ಅಂತರರಾಷ್ಟ್ರೀಯ ಪಂದ್ಯಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ವೆಸ್ಟ್ ಇಂಡೀಸ್, ಶ್ರೀಲಂಕಾ, ಜಿಂಬಾಬ್ವೆ ಮತ್ತು ಆಸ್ಟ್ರೇಲಿಯಾ ತಂಡಗಳು ಭಾರತಕ್ಕೆ ಪ್ರವಾಸ ಕೈಗೊಳ್ಳಲಿವೆ. 17 ನಗರಗಳಲ್ಲಿ ಒಟ್ಟು 22 ಪಂದ್ಯಗಳು ನಡೆಯಲಿದ್ದು, ಇದರಲ್ಲಿ ಟೆಸ್ಟ್, ಏಕದಿನ ಮತ್ತು ಟಿ20 ಸರಣಿಗಳು ಸೇರಿವೆ. ಸೆಪ್ಟೆಂಬರ್ 2026 ರಿಂದ ಜನವರಿ 2027 ರವರೆಗೆ ಈ ಸರಣಿಗಳು ನಡೆಯಲಿವೆ.

17 ನಗರ, 22 ಪಂದ್ಯಗಳು; ಟೀಂ ಇಂಡಿಯಾದ ತವರು ಸರಣಿಗಳ ವೇಳಾಪಟ್ಟಿ ಪ್ರಕಟ
Team India

Updated on: Mar 26, 2026 | 3:18 PM

19ನೇ ಆವೃತ್ತಿಯ ಐಪಿಎಲ್ (IPL 2026) ಇದೇ ಮಾರ್ಚ್​ 28 ರಿಂದ ಪ್ರಾರಂಭವಾಗುತ್ತಿದೆ. ಈ ಲೀಗ್​ಗೆ ಬಿಸಿಸಿಐ (BCCI) ಕೂಡ ಸರ್ವ ತಯಾರಿಯನ್ನು ಮಾಡಿಕೊಂಡಿದೆ. ಇತ್ತ ಎಲ್ಲಾ ಫ್ರಾಂಚೈಸಿಗಳು ತಮ್ಮ ತಮ್ಮ ಸಿದ್ಧತೆಗಳನ್ನು ಅಂತಿಮಗೊಳಿಸಿಕೊಂಡಿವೆ. ಟೂರ್ನಿಯ ಮೊದಲ ಪಂದ್ಯ ಹಾಲಿ ಚಾಂಪಿಯನ್ ಆರ್​ಸಿಬಿ ಹಾಗೂ ಸನ್‌ರೈಸರ್ಸ್ ಹೈದರಾಬಾದ್ (RCB vs SRH) ನಡುವೆ ನಡೆಯಲಿದೆ. ಇದೆಲ್ಲದರ ನಡುವೆ ಬಿಸಿಸಿಐ, ಟೀಂ ಇಂಡಿಯಾದ ತವರು ಸರಣಿಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ.

2026-27ರ ಕ್ರೀಡಾ ಕ್ಯಾಲೆಂಡರ್​ನಲ್ಲಿ ಭಾರತ ಪುರುಷರ ತಂಡ ತನ್ನ ತವರಿನಲ್ಲಿ ಆಡಲಿರುವ ಅಂತಾರಾಷ್ಟ್ರೀಯ ಪಂದ್ಯಗಳ ವೇಳಾಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದೆ. ಈ ವೇಳಾಪಟ್ಟಿಯ ಪ್ರಕಾರ ನಾಲ್ಕು ಬಲಿಷ್ಠ ತಂಡಗಳು ಭಾರತಕ್ಕೆ ಬರಲಿವೆ. ಅವುಗಳಲ್ಲಿ ವೆಸ್ಟ್ ಇಂಡೀಸ್, ಶ್ರೀಲಂಕಾ, ಜಿಂಬಾಬ್ವೆ ಮತ್ತು ಆಸ್ಟ್ರೇಲಿಯಾ ತಂಡಗಳು ಸೇರಿದ್ದು, ಈ ತಂಡಗಳು ಭಾರತದಲ್ಲಿ ಬಹು-ಸ್ವರೂಪದ ಸರಣಿಯನ್ನು ಆಡಲಿವೆ. ಈ ನಾಲ್ಕು ತಂಡಗಳಿಗೆ ಭಾರತದ 17 ನಗರಗಳು ಆತಿಥ್ಯವಹಿಸಲಿದ್ದು, ಇದರಲ್ಲಿ ಒಟ್ಟಾರೆ 22 ಅಂತರರಾಷ್ಟ್ರೀಯ ಪಂದ್ಯಗಳು ನಡೆಯಲಿವೆ.

ವೆಸ್ಟ್ ಇಂಡೀಸ್ ಪ್ರವಾಸ

ಸೆಪ್ಟೆಂಬರ್ 27, 2026 ರಂದು ವೆಸ್ಟ್ ಇಂಡೀಸ್‌ ಪ್ರವಾಸದೊಂದಿಗೆ ಈ ಸೀಸನ್ ಆರಂಭವಾಗಲಿದೆ. ಕೆರಿಬಿಯನ್ ತಂಡ ಮೊದಲಿಗೆ ಮೂರು ಪಂದ್ಯಗಳ ಏಕದಿನ ಸರಣಿಯನ್ನು ನಂತರ ಐದು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಅದರಂತೆ ಏಕದಿನ ಪಂದ್ಯಗಳು ತಿರುವನಂತಪುರ, ಗುವಾಹಟಿ ಮತ್ತು ನ್ಯೂ ಚಂಡೀಗಢದಲ್ಲಿ ನಡೆದರೆ, ಟಿ20 ಸರಣಿ ಲಕ್ನೋ, ರಾಂಚಿ, ಇಂದೋರ್, ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ ನಡೆಯಲಿದೆ.

ವೆಸ್ಟ್ ಇಂಡೀಸ್ ಪ್ರವಾಸ

ಶ್ರೀಲಂಕಾ ಪ್ರವಾಸ

ನಂತರ ಡಿಸೆಂಬರ್ ತಿಂಗಳಲ್ಲಿ ಶ್ರೀಲಂಕಾ ತಂಡ ಮೂರು ಪಂದ್ಯಗಳ ಏಕದಿನ ಸರಣಿ ಮತ್ತು 3 ಪಂದ್ಯಗಳ ಟಿ20 ಸರಣಿಗಾಗಿ ಭಾರತಕ್ಕೆ ಬರಲಿದೆ. ಏಕದಿನ ಪಂದ್ಯಗಳು ದೆಹಲಿ, ಬೆಂಗಳೂರು ಮತ್ತು ಅಹಮದಾಬಾದ್‌ನಲ್ಲಿ ನಡೆಯಲಿದ್ದು, ರಾಜ್‌ಕೋಟ್, ಕಟಕ್ ಮತ್ತು ಪುಣೆಯಲ್ಲಿ ಟಿ20 ಪಂದ್ಯಗಳನ್ನು ಆಯೋಜಿಸಲಾಗುತ್ತದೆ.

ಶ್ರೀಲಂಕಾ ಪ್ರವಾಸ

ಜಿಂಬಾಬ್ವೆ ಪ್ರವಾಸ

ಹೊಸ ವರ್ಷದ ಆರಂಭದಲ್ಲಿ ಅಂದರೆ 2027 ರ ಜನವರಿಯಲ್ಲಿ ಜಿಂಬಾಬ್ವೆ ತಂಡ ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಭಾರತಕ್ಕೆ ಪ್ರವಾಸ ಕೈಗೊಳ್ಳಲಿದೆ. ಈ ಮೂರು ಪಂದ್ಯಗಳು ಕೋಲ್ಕತ್ತಾ, ಹೈದರಾಬಾದ್ ಮತ್ತು ಮುಂಬೈನಲ್ಲಿ ನಡೆಯಲಿವೆ.

ಜಿಂಬಾಬ್ವೆ ಪ್ರವಾಸ

ಆಸ್ಟ್ರೇಲಿಯಾ ಪ್ರವಾಸ

ಆಸ್ಟ್ರೇಲಿಯಾ ಪ್ರವಾಸ

ಆ ನಂತರ ಆಸ್ಟ್ರೇಲಿಯಾ ತಂಡ ಭಾರತಕ್ಕೆ ಬರಲಿದ್ದು, ಉಭಯ ತಂಡಗಳು ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಮುಖಾಮುಖಿಯಾಗಲಿವೆ. ಮೊದಲ ಪಂದ್ಯ ಜನವರಿ 21, 2027 ರಂದು ನಾಗ್ಪುರದಲ್ಲಿ ನಡೆಯಲಿದ್ದು, ಉಳಿದ ಪಂದ್ಯಗಳು ಕ್ರಮವಾಗಿ ಚೆನ್ನೈ, ಗುವಾಹಟಿ, ರಾಂಚಿ ಮತ್ತು ಅಹಮದಾಬಾದ್​ನಲ್ಲಿ ನಡೆಯಲಿವೆ. ಒಟ್ಟು ಐದು ಪಂದ್ಯಗಳ ಈ ಟೆಸ್ಟ್ ಸರಣಿಯ ಮುಕ್ತಾಯದೊಂದಿಗೆ ಈ ವೇಳಾಪಟ್ಟಿಯೂ ಅಂತ್ಯವಾಗಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:11 pm, Thu, 26 March 26

Follow Us