ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಮೊದಲ ಎರಡು ಪಂದ್ಯ ಜಯಿಸಿ 2-0 ಮುನ್ನಡೆ ಪಡೆದುಕೊಂಡಿರುವ ಭಾರತ (India vs Australia) ಇದೀಗ ತೃತೀಯ ಟಿ20 ಪಂದ್ಯಕ್ಕೆ ಸಜ್ಜಾಗಿದೆ. ಇಂದು ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಮೂರನೇ ಟಿ20 ಪಂದ್ಯ ಆಯೋಜಿಸಲಾಗಿದೆ. ಇಂದಿನ ಪಂದ್ಯ ಗೆದ್ದರೆ ಟೀಮ್ ಇಂಡಿಯಾ ಸರಣಿ ವಶಪಡಿಸಿಕೊಳ್ಳಲಿದೆ. ಅತ್ತ ವಿಶ್ವ ಚಾಂಪಿಯನ್ ಕಾಂಗರೂ ಪಡೆಗೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು, ಗೆದ್ದರಷ್ಟೇ ಉಳಿಗಾಲ. ಹೀಗಾಗಿ ಇಂದು ಮೂರನೇ ಟಿ20 ಸಾಕಷ್ಟು ರೋಚಕತೆ ಸೃಷ್ಟಿಸಿದೆ.
ಭಾರತ ಟಿ20 ತಂಡದಲ್ಲಿ ಆಡುತ್ತಿರುವ ಎಲ್ಲ ಆಟಗಾರರು ಭರ್ಜರಿ ಫಾರ್ಮ್ನಲ್ಲಿದ್ದಾರೆ. ಹೀಗಾಗಿ ತಂಡದಲ್ಲಿ ಬದಲಾವಣೆ ಅನುಮಾನ. ಗೆದ್ದ ತಂಡದ ಆಟಗಾರರೇ ಕಣಕ್ಕಿಳಿಯಬಹುದು. ಬದಲಾವಣೆ ಬಯಸಿದರೆ ಬೌಲಿಂಗ್ ವಿಭಾಗದಲ್ಲಿ ಆಗಬಹುದು. ಕಳೆದ ಎರಡೂ ಪಂದ್ಯಗಳಲ್ಲಿ ಪ್ರಸಿದ್ಧ್ ಕೃಷ್ಣ ದುಬಾರಿ ಆಗಿದ್ದಾರೆ. ಹೀಗಾಗಿ ಇವರ ಜಾಗಕ್ಕೆ ಆವೇಶ್ ಖಾನ್ ಅಥವಾ ಶಿವಂ ದುಬೆ ಅವರನ್ನು ಕರೆತಂದರೆ ಅಚ್ಚರಿ ಪಡಬೇಕಿಲ್ಲ.
ಉಳಿದಂತೆ ರುತುರಾಜ್ ಗಾಯಕ್ವಾಡ್- ಯಶಸ್ವಿ ಜೈಸ್ವಾಲ್ ಸ್ಫೋಟಕ ಆರಂಭ ಒದಗಿಸುತ್ತಿದ್ದಾರೆ. ಇಶಾನ್ ಕಿಶನ್, ನಾಯಕ ಸೂರ್ಯಕುಮಾರ್ ಯಾದವ್ ಹಾಗೂ ತಿಲಕ್ ವರ್ಮಾ ಮಧ್ಯಮ ಕ್ರಮಾಂಕದಲ್ಲಿ ರನ್ ಕಲೆಹಾಕುತ್ತಿದ್ದಾರೆ. ರಿಂಕು ಸಿಂಗ್ ಫಿನಿಶಿಂಗ್ ಜವ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಬೌಲಿಂಗ್ನಲ್ಲಿ ಭಾರತ ಕೊಂಚ ಸುಧಾರಣೆ ಕಂಡರೆ ಇಂದಿನ ಪಂದ್ಯದಲ್ಲಿ ಗೆಲುವು ಖಚಿತ.
ಅಧಿಕೃತವಾಗಿ ಮುಂಬೈ ಸೇರಿದ ಹಾರ್ದಿಕ್ ಪಾಂಡ್ಯ; ಆರ್ಸಿಬಿಗೆ ಕಾಲಿಟ್ಟ ಆಸೀಸ್ ಆಲ್ರೌಂಡರ್ ಗ್ರೀನ್..!
ಗೆಲ್ಲಲೇಬೇಕಾದ ಪಂದ್ಯವಾಗಿದ್ದರಿಂದ ಆಸ್ಟ್ರೇಲಿಯ ಪ್ಲೇಯಿಂಗ್ XI ನಲ್ಲಿ ವಿಶ್ವಕಪ್ ಫೈನಲ್ ಹೀರೋ ಟ್ರಾವಿಸ್ ಹೆಡ್ ಆಡುವ ಸಂಭವವಿದೆ. ಮೊದಲ ಟಿ20I ಪಂದ್ಯದ ಸೋಲಿನ ನಂತರ, ತಂಡ ಸೇರಿಕೊಂಡ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಸ್ಪಿನ್ನರ್ ಆ್ಯಡಂ ಅಷ್ಟೇನು ಪರಿಣಾಮಕಾರಿ ಆಗಲಿಲ್ಲ. ಭಾರತೀಯ ಬ್ಯಾಟರ್‌ಗಳನ್ನು ನಿರ್ಬಂಧಿಸಲು ಆಸೀಸ್ ಮ್ಯಾನೇಜ್‌ಮೆಂಟ್ ಮೂರನೇ ಟಿ20I ಗೆ ಸೀನ್ ಅಬಾಟ್ ಬದಲಿಗೆ ಜೇಸನ್ ಅವರನ್ನು ಕರೆತರುವ ಸಾಧ್ಯತೆ ಕೂಡ ಇದೆ.
ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿನ ಪಿಚ್ ನಿಧಾನವಾಗಿದೆ. ಆದಾಗ್ಯೂ ಇತ್ತೀಚಿನ ದಾಖಲೆ ಗಮನಿಸಿದರೆ ಇದು ಬ್ಯಾಟಿಂಗ್‌ಗೆ ಅನುಕೂಲಕರ ಎಂದು ಹೇಳಬಹುದು. ಬೌಲರ್‌ಗಳಿಗೆ ಹೆಚ್ಚಿನ ಸಹಾಯ ಮಾಡುವುದಿಲ್ಲ. ಈ ಸ್ಥಳದಲ್ಲಿ ಆಯೋಜಿಸಲಾದ ಮೂರು T20I ಗಳಲ್ಲಿ, ಸರಾಸರಿ ಸ್ಕೋರ್ 118 ಆಗಿದೆ. ಮೊದಲು ಬ್ಯಾಟಿಂಗ್ ಮಾಡುವ ಮತ್ತು ಚೇಸಿಂಗ್ ಮಾಡುವ ತಂಡಗಳ ಗೆಲುವು-ಸೋಲಿನ ದಾಖಲೆಯು 1-1 ರಲ್ಲಿ ಸಮಬಲವಿದೆ. ಆಟ ಶುರುವಾದ ನಂತರ ಇಬ್ಬನಿಯ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹೀಗಾಗಿ ಈ ಪಂದ್ಯದಲ್ಲಿ ಮೊದಲು ಟಾಸ್ ಗೆದ್ದ ತಂಡವು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವುದು ಉತ್ತಮ ಆಯ್ಕೆ. ಪಂದ್ಯಕ್ಕೆ ಯಾವುದೇ ಮಳೆಯ ನಿರೀಕ್ಷೆಯಿಲ್ಲ.
ಉಭಯ ತಂಡಗಳು:
ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ರುತುರಾಜ್ ಗಾಯಕ್ವಾಡ್ (ಉಪನಾಯಕ), ಇಶಾನ್ ಕಿಶನ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಶಿವಂ ದುಬೆ, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್, ಮುಖೇಶ್ ಕುಮಾರ್.
ಆಸ್ಟ್ರೇಲಿಯಾ ತಂಡ: ಮ್ಯಾಥ್ಯೂ ವೇಡ್ (ನಾಯಕ), ಟ್ರಾವಿಸ್ ಹೆಡ್, ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಮ್ಯಾಟ್ ಶಾರ್ಟ್, ಮಾರ್ಕಸ್ ಸ್ಟೊಯಿನಿಸ್, ಟಿಮ್ ಡೇವಿಡ್, ಜೋಶ್ ಇಂಗ್ಲಿಸ್, ಜೇಸನ್ ಬೆಹ್ರೆಂಡಾರ್ಫ್, ಸೀನ್ ಅಬಾಟ್, ನಾಥನ್ ಎಲ್ಲಿಸ್, ಸ್ಪೆನ್ಸರ್ ಜಾನ್ಸನ್, ಆ್ಯಡಂ ಝಂಪಾ, ತನ್ವೀರ್ ಸಂಘ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ