
ಭಾರತ-ನ್ಯೂಜಿಲೆಂಡ್ ಏಕದಿನ ಸರಣಿ ಅಂತ್ಯಗೊಂಡಿದೆ. ಐದನೇ ಹಾಗೂ ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾ 22 ರನ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಐದು ಪಂದ್ಯಗಳ ಸರಣಿಯನ್ನು 3-1 ಅಂತರದಿಂದ ತನ್ನದಾಗಿಸಿಕೊಂಡಿದೆ. ಒಂದು ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಈ ಸರಣಿಯ ಬಹುತೇಕ ಪಂದ್ಯಗಳು ಕಡಿಮೆ ಮೊತ್ತಕ್ಕೆ ಸಾಕ್ಷಿಯಾಗಿದ್ದವು. ಅದರಲ್ಲೂ ಅಂತಿಮ ಪಂದ್ಯದಲ್ಲಿ ವಿಶೇಷ ದಾಖಲೆಯೊಂದು ನಿರ್ಮಾಣವಾಗಿದೆ. ಇಡೀ ಪಂದ್ಯದಲ್ಲಿ ಎರಡೂ ತಂಡಗಳು ಸೇರಿ 400 ರನ್‌ಗಳನ್ನು ಗಳಿಸಲಿಲ್ಲ. ಅಷ್ಟೇ ಅಲ್ಲ, ಯಾವುದೇ ಬ್ಯಾಟ್ಸ್‌ಮನ್ ಅರ್ಧಶತಕವನ್ನೂ ಬಾರಿಸಲಿಲ್ಲ. ಆದರೂ ಈ ಪಂದ್ಯ ಬರೋಬ್ಬರಿ 45 ವರ್ಷಗಳ ಹಿಂದಿನ ದಾಖಲೆಯನ್ನು ಮುರಿಯುವಲ್ಲಿ ಯಶಸ್ವಿಯಾಗಿದೆ.
ಮೌಂಟ್ ಮೌಂಗನುಯಿಯ ಬೇ ಓವಲ್ ಮೈದಾನದಲ್ಲಿ ನಡೆದ ಸರಣಿಯ ಕೊನೆಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 209 ರನ್‌ಗಳಿಗೆ ಆಲೌಟ್ ಆಯಿತು. ಟೀಮ್ ಇಂಡಿಯಾ ಪರ ಅಕ್ಷರ್ ಪಟೇಲ್ ಮತ್ತು ಇಶಾನ್ ಕಿಶನ್ ತಲಾ 46 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ ಭಾರತದ ಬೌಲರ್‌ಗಳ ದಾಳಿಗೆ ತತ್ತರಿಸಿ 187 ರನ್‌ಗಳಿಗೆ ಸರ್ವಪತನ ಕಂಡಿತು. ಆ ಮೂಲಕ ಭಾರತ 22 ರನ್‌ಗಳ ಗೆಲುವು ದಾಖಲಿಸಿತು. ಕಿವೀಸ್ ಪರ ಡೀನ್ ಫಾಕ್ಸ್‌ಕ್ರಾಫ್ಟ್ 31 ರನ್ ಗಳಿಸಿ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ಈ ಪಂದ್ಯದಲ್ಲಿ ಭಾರತ ಗೆದ್ದರೂ, ನ್ಯೂಜಿಲೆಂಡ್ ಕೂಡ ದಾಖಲೆಯ ಭಾಗವಾಯಿತು. ಉಭಯ ತಂಡಗಳು ಸೇರಿ ಒಟ್ಟು 396 ರನ್ ಗಳಿಸಿದವು. ಆದರೆ ಅಚ್ಚರಿಯ ಸಂಗತಿಯೆಂದರೆ, ಎರಡೂ ತಂಡಗಳ ಯಾವುದೇ ಬ್ಯಾಟ್ಸ್‌ಮನ್ ಅರ್ಧಶತಕದ ಗಡಿ ದಾಟಲಿಲ್ಲ. ನ್ಯೂಜಿಲೆಂಡ್‌ನಲ್ಲಿ ನಡೆದ ಏಕದಿನ ಪಂದ್ಯಗಳ ಇತಿಹಾಸದಲ್ಲಿ ಅರ್ಧಶತಕವೊಂದೂ ದಾಖಲಾಗದೆ ಎರಡೂ ತಂಡಗಳು ಸೇರಿ ಗಳಿಸಿದ ಅತ್ಯಧಿಕ ಮೊತ್ತ ಇದಾಗಿದೆ. ಈ ಮೂಲಕ ಭಾರತ ಮತ್ತು ನ್ಯೂಜಿಲೆಂಡ್ ಜಂಟಿಯಾಗಿ 45 ವರ್ಷಗಳ ಹಿಂದಿನ ದಾಖಲೆಯನ್ನು ಅಳಿಸಿಹಾಕಿವೆ. 1981ರಲ್ಲಿ ನಡೆದಿದ್ದ ಪಂದ್ಯವೊಂದರಲ್ಲಿ ಉಭಯ ತಂಡಗಳು ಒಟ್ಟಾಗಿ 363 ರನ್ ಗಳಿಸಿದ್ದವು. ಆದರೆ ಆ ಪಂದ್ಯದಲ್ಲೂ ಯಾರೊಬ್ಬರೂ ಅರ್ಧಶತಕ ಗಳಿಸಿರಲಿಲ್ಲ.
2029ರ ಚಾಂಪಿಯನ್ಸ್ ಟ್ರೋಫಿಗೆ ಭಾರತದ ಆತಿಥ್ಯ; 2031ರ ವಿಶ್ವಕಪ್ ಕೂಡ ನಮ್ಮಲ್ಲೇ..!
ಈ ಗೆಲುವಿನೊಂದಿಗೆ ಭಾರತ ತಂಡ ನ್ಯೂಜಿಲೆಂಡ್‌ನ ತವರಿನ ಏಕದಿನ ಸರಣಿಗಳಲ್ಲಿನ ಸುದೀರ್ಘ ಗೆಲುವಿನ ಓಟಕ್ಕೆ ಅಂತ್ಯ ಹಾಡಿದೆ. 2019ರ ಬಳಿಕ ನ್ಯೂಜಿಲೆಂಡ್ ತವರಿನಲ್ಲಿ ಯಾವುದೇ ಏಕದಿನ ಸರಣಿಯನ್ನು ಸೋತಿರಲಿಲ್ಲ. ಅಂದು ಕೂಡ ಭಾರತವೇ ಕಿವೀಸ್ ತಂಡವನ್ನು ಮಣಿಸಿತ್ತು. ಆ ಬಳಿಕ ತವರಿನಲ್ಲಿ ಸತತ 11 ಏಕದಿನ ಸರಣಿಗಳನ್ನು ಗೆದ್ದು ಬೀಗಿದ್ದ ನ್ಯೂಜಿಲೆಂಡ್ ತಂಡಕ್ಕೆ ಇದೀಗ ಟೀಮ್ ಇಂಡಿಯಾ ಸೋಲಿನ ರುಚಿ ತೋರಿಸಿದೆ. ಈ ಮೂಲಕ ಏಳು ವರ್ಷಗಳ ಬಳಿಕ ಕಿವೀಸ್ ತವರಿನಲ್ಲಿ ಏಕದಿನ ಸರಣಿ ಸೋಲುವಂತಾಗಿದೆ. ಭಾರತ ತಂಡದ ಈ ಗೆಲುವು ನ್ಯೂಜಿಲೆಂಡ್‌ನ ಪ್ರಾಬಲ್ಯಕ್ಕೆ ಬ್ರೇಕ್ ಹಾಕಿದೆ.