ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟೆಸ್ಟ್ ಸರಣಿಯ ಕೊನೆಯ ಪಂದ್ಯ ಮುಂಬೈನಲ್ಲಿ ಇಂದಿನಿಂದ ಆರಂಭವಾಗಿದೆ. ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ನಾಯಕ ಟಾಮ್ ಲೇಥಮ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಹೀಗಾಗಿ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 235 ರನ್‌ಗಳಿಗೆ ಆಲೌಟ್ ಆಯಿತು. ಇದಕ್ಕೆ ಉತ್ತರವಾಗಿ ಭಾರತ ತಂಡ ದಿನದಾಟದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 86 ರನ್‌ಗಳಿಸಿದೆ. ಟೀಂ ಇಂಡಿಯಾಕ್ಕೆ ಮತ್ತೊಮ್ಮೆ ಟಾಪ್ ಆರ್ಡರ್ ಕೈಕೊಟ್ಟಿದ್ದು, ನಾಯಕ ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್ ಹಾಗೂ ವಿರಾಟ್ ಕೊಹ್ಲಿ ತೀರ ಅಗ್ಗವಾಗಿ ತಮ್ಮ ವಿಕೆಟ್ ಒಪ್ಪಿಸಿದರು. ಪ್ರಸ್ತುತ ಕ್ರೀಸ್ನಲ್ಲಿರುವ ಶುಭ್‌ಮನ್ ಗಿಲ್ ಹಾಗೂ ರಿಷಬ್ ಪಂತ್ ಎರಡನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಕಿವೀಸ್ ತಂಡವನ್ನು ಬೇಗನೇ ಆಲೌಟ್ ಮಾಡಿ ಮೂರನೇ ಸೆಷನ್ನಲ್ಲೇ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ ಒಂದು ಹಂತದಲ್ಲಿ ಕೇವಲ 1 ವಿಕೆಟ್ ಕಳೆದುಕೊಂಡು 78 ರನ್ ಕಲೆಹಾಕಿತ್ತು. ಆದರೆ ಆ ಬಳಿಕ ಕೇವಲ 6 ರನ್ ಕಲೆಹಾಕುವಷ್ಟರಲ್ಲಿ ತಂಡದ ಮೂರು ವಿಕೆಟ್ ಪತನವಾದವು. ಮೊದಲು ಎಜಾಜ್ ಪಟೇಲ್, ಸತತ ಎರಡು ಎಸೆತಗಳಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ಮೊಹಮ್ಮದ್ ಸಿರಾಜ್ ಅವರನ್ನು ಔಟ್ ಮಾಡಿದರು. ಆದಾದ ಬಳಿಕ ಬಂದ ವಿರಾಟ್ ಕೊಹ್ಲಿ ಇಲ್ಲದ ರನ್ ಕದಿಯಲು ಹೋಗಿ ರನೌಟ್ ಆದರು.
ಕೊಹ್ಲಿ ಕೇವಲ ನಾಲ್ಕು ರನ್ ಗಳಿಸಿ ಸುಸ್ತಾದರೆ, ಯಶಸ್ವಿ ಜೈಸ್ವಾಲ್ 30 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ದಿನದಾಟದಂತ್ಯದಲ್ಲಿ ಜೈಸ್ವಾಲ್ ರಿವರ್ಸ್ವೀಪ್ ಹೊಡೆಯುವ ಯತ್ನ ಮಾಡುವ ಅಗತ್ಯವಿರಲಿಲ್ಲ. ಏಕೆಂದರೆ ಗಿಲ್ ಹಾಗೂ ಜೈಸ್ವಾಲ್ ನಡುವೆ ಅರ್ಧಶತಕದ ಜೊತೆಯಾವಿತ್ತು. ಹೀಗಾಗಿ ಈ ಇಬ್ಬರೇ ದಿನದಾಟವನ್ನು ಮುಗಿಸಿ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದರೆ, ಟೀಂ ಇಂಡಿಯಾಕ್ಕೆ ಉತ್ತಮ ಆರಂಭ ಸಿಕ್ಕಂತ್ತಾಗುತ್ತಿತ್ತು. ಆದರೆ ಜೈಸ್ವಾಲ್ ವಿಕೆಟ್ ಪತನದ ಬಳಿಕ ಇನ್ನೇರಡು ವಿಕೆಟ್ಗಳು ನ್ಯೂಜಿಲೆಂಡ್ಗೆ ಉಚಿತವಾಗಿ ಸಿಕ್ಕಂತ್ತಾಯಿತು. ಜೈಸ್ವಾಲ್ ವಿಕೆಟ್ ಬಳಿಕ ನೈಟ್ ವಾಚ್ಮನ್ ಆಗಿ ಬಂದ ಸಿರಾಜ್ಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಇದೀಗ ಮೊದಲ ದಿನದಾಟದಲ್ಲಿ ಪ್ರಮುಖ 4 ವಿಕೆಟ್ ಕಳೆದುಕೊಂಡಿರುವ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ ಇನ್ನೂ ನ್ಯೂಜಿಲೆಂಡ್‌ಗಿಂತ 149 ರನ್ ಹಿಂದಿದ್ದು, ಸಂಕಷ್ಟಕ್ಕೆ ಸಿಲುಕಿದೆ.
ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್‌ನ ಮೊದಲ ಇನಿಂಗ್ಸ್ 235 ರನ್‌ಗಳಿಗೆ ಕೊನೆಗೊಂಡಿತು. ಕಿವೀಸ್ ಪರ ಡೆರಿಲ್ ಮಿಚೆಲ್ ಗರಿಷ್ಠ 82 ರನ್ ಗಳಿಸಿದರೆ, ವಿಲ್ ಯಂಗ್ 71 ರನ್ಗಳ ಇನಿಂಗ್ಸ್ ಆಡಿದರು. ಭಾರತದ ಪರ ರವೀಂದ್ರ ಜಡೇಜಾ ಐದು ಮತ್ತು ವಾಷಿಂಗ್ಟನ್ ಸುಂದರ್ ನಾಲ್ಕು ವಿಕೆಟ್ ಪಡೆದರು. ಆಕಾಶ್ ದೀಪ್ ಒಂದು ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:36 pm, Fri, 1 November 24