ಶ್ರೀಲಂಕಾ ವಿರುದ್ಧದ ಸೀಮಿತ ಓವರ್ಗಳ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ತೋರಿ ಯಶಸ್ಸು ಸಾಧಿಸಿರುವ ಭಾರತ (India vs Sri Lanka) ತಂಡ ಇದೀಗ ಟೆಸ್ಟ್ ಸರಣಿಯನ್ನು ಆಡುತ್ತಿದೆ. ಇದೀಗ ಮೊಹಾಲಿಯ ಪಂಜಾಬ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಮೊದಲ ಟೆಸ್ಟ್ ಪ್ರಾರಂಭವಾಗಿದೆ. ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಟಿ20 ಸರಣಿಯಿಂದ ವಿಶ್ರಾಂತಿ ಪಡೆದುಕೊಂಡಿದ್ದ ವಿರಾಟ್ ಕೊಹ್ಲಿ(Virat Kohli) ಹಾಗೂ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದಾರೆ. ಸಾಕಷ್ಟು ಕುತೂಹಲ ಕೆರಳಿಸಿದ್ದ ರಹಾನೆ- ಪೂಜಾರ ಜಾಗಕ್ಕೆ ಸೂಕ್ತ ಆಟಗಾರರನ್ನೇ ಆಯ್ಕೆ ಮಾಡಲಾಗಿದೆ. ಈ ಟೆಸ್ಟ್ನ ಪ್ರಮುಖ ಹೈಲೇಟ್ ಕೊಹ್ಲಿಯಾಗಿದ್ದು, 100ನೇ ಟೆಸ್ಟ್ ಪಂದ್ಯ ಆಡಲಿದ್ದಾರೆ. ಇನ್ನು ಪಂತ್-ಕೊಹ್ಲಿ ತಂಡ ಸೇರಿಕೊಂಡಿರುವುದು ರೋಹಿತ್ಗೆ ಆನೆಬಲ ಬಂದಂತಾಗಿದೆ. ಹಾಗಾದ್ರೆ ಮೊದಲ ಟೆಸ್ಟ್ಗೆ ಟೀಮ್ ಇಂಡಿಯಾ ಹೇಗಿದೆ?, ಇಲ್ಲಿದೆ ನೋಡಿ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ (India Playing XI).
ನಾಯಕ ರೋಹಿತ್ ಶರ್ಮಾ ಜೊತೆ ಓಪನರ್ ಆಗಿ ಮಯಾಂಕ್ ಅಗರ್ವಾಲ್ ಮತ್ತು ಶುಭ್ಮನ್ ಗಿಲ್ ಪೈಕಿ ಯಾರು ಕಣಕ್ಕಿಳಿಯಲಿದ್ದಾರೆ ಎಂಬ ಗೊಂದಲವಿತ್ತು. ಇದಕ್ಕೀಗ ಉತ್ತರ ಸಿಕ್ಕಿದೆ. ಶುಭ್ಮನ್ ಗಿಲ್ರನ್ನು ಕೈಬಿಡಲಾಗಿದ್ದು, ರೋಹಿತ್ ಹಾಗೂ ಮಯಾಂಕ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಚೇತೇಶ್ವರ್ ಪೂಜಾರ ಇಲ್ಲದಿರುವ ಕಾರಣ ಮೂರನೇ ಕ್ರಮಾಂಕದಲ್ಲಿ ಹನುಮಾ ವಿಹಾರಿಗೆ ಅವಕಾಶ ನೀಡಲಾಗಿದೆ. ಮಾಜಿ ನಾಯಕ ವಿರಾಟ್ ಕೊಹ್ಲಿ 100ನೇ ಟೆಸ್ಟ್ ಪಂದ್ಯವನ್ನಾಡಲು 4ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಬರಲಿದ್ದಾರೆ.
ಈ ವರ್ಷದ ಆರಂಭದಲ್ಲಿ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಶ್ರೇಯಸ್ ಅಯ್ಯರ್ ಚೊಚ್ಚಲ ಪಂದ್ಯದಲ್ಲೇ ಶತಕ ಮತ್ತು ಅರ್ಧಶತಕ ಸಿಡಿಸಿ ಅಬ್ಬರಿಸಿದ್ದರು. ಹೀಗಾಗಿ ರಹಾನೆ ಆಡುತ್ತಿದ್ದ ಐದನೇ ಕ್ರಮಾಂಕದಲ್ಲಿ ಅಯ್ಯರ್ ಕಣಕ್ಕಿಳಿಯಲಿದ್ದಾರೆ. ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ ನಂತರದ ಸ್ಥಾನದಲ್ಲಿ ಆಡಲಿದ್ದಾರೆ. ಆಲ್ರೌಂಡರ್ ರವೀಂದ್ರ ಜಡೇಜಾ ಕೂಡ ಹಲವು ತಿಂಗಳುಗಳ ಬಳಿಕ ಟೆಸ್ಟ್ ಕ್ರಿಕೆಟ್ನಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಇವರಿಗೆ ಜೊತೆಯಾಗಿ ರವಿಚಂದ್ರನ್ ಅಶ್ವಿನ್ ಪ್ಲೇಯಿಂಗ್ ಇಲೆವೆನ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಮೂವರು ಸ್ಪಿನ್ನರ್ಗಳ ಪೈಕಿ ಮತ್ತೊಬ್ಬ ಸ್ಪಿನ್ನರ್ ಜಯಂತ್ ಯಾದವ್ ಆಗಿದ್ದಾರೆ. ವೇಗಿಗಳಾಗಿ ಇಬ್ಬರಷ್ಟೆ ತಂಡದಲ್ಲಿದ್ದಾರೆ. ಉಪ ನಾಯಕ ಜಸ್ಪ್ರೀತ್ ಬುಮ್ರಾ ಮುಂದಾಳತ್ವದಲ್ಲಿ ಮೊಹಮ್ಮದ್ ಶಮಿ ಸ್ಥಾನ ಪಡೆದುಕೊಳ್ಳಬಹುದು.
ಭಾರತ ಪ್ಲೇಯಿಂಗ್ XI: ರೋಹಿತ್ ಶರ್ಮಾ (ನಾಯಕ), ಮಯಾಂಕ್ ಅಗರ್ವಾಲ್, ಹನುಮಾ ವಿಹಾರಿ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಆರ್. ಅಶ್ವಿನ್, ಜಯಂತ್ ಯಾದವ್, ಜಸ್ಪ್ರೀತ್ ಬುಮ್ರಾ (ಉಪ ನಾಯಕ), ಮೊಹಮ್ಮದ್ ಶಮಿ.
ಇತ್ತ ಶ್ರೀಲಂಕಾ ತಂಡ ಕೂಡ ಬಲಿಷ್ಠ ಆಡುವ 11 ಆಟಗಾರರನ್ನೇ ಕಣಕ್ಕಿಳಿಸದೆ. ನಾಯಕ ದಿಮುತ್ ಕರುಣರತ್ನೆ ಒಂದು ಕಡೆಯಾದರೆ ಏಂಜೆಲೊ ಮ್ಯಾಥ್ಯೂಸ್, ಲಹಿರು ತಿರುಮನೆ ಅವರಂಥ ಅನುಭವಿಗಳ ಬಲ ಹೊಂದಿದೆ. ಬೌಲಿಂಗ್‌ನಲ್ಲೂ ಲಸಿತ್ ಎಂಬುಲ್ಡೆನಿಯಾ, ಸುರಂಗ ಲಕ್ಮಲ್, ಆಲ್ರೌಂಡರ್ ಧನಂಜಯ ಡಿಸಿಲ್ವ ಅಪಾಯಕಾರಿಯಾಗಿದ್ದಾರೆ. ಟೆಸ್ಟ್ ಮಾದರಿಯಲ್ಲಿ ಅತ್ಯಂತ ಬಲಿಷ್ಠವಾಗಿರುವ ಭಾರತ ತಂಡವನ್ನು ದಿಟ್ಟವಾಗಿ ಎದುರಿಸಲು ಶ್ರೀಲಂಕಾ ಪಡೆ ರಣತಂತ್ರಗಳನ್ನು ಹೆಣೆದಿದ್ದು ಅದಕ್ಕಾಗಿ ಬಲಿಷ್ಠ ಪಡೆಯನ್ನೇ ಕಣಕ್ಕಿಳಿಸದೆ.
ಶ್ರೀಲಂಕಾ ಪ್ಲೇಯಿಂಗ್ XI: ದಿಮುತ್ ಕರುಣರತ್ನೆ (ನಾಯಕ), ಪತುಮ್ ನಿಸಂಕ, ಲಾಹಿರು ತಿರಿಮನ್ನೆ, ಚರಿತ್ ಅಸಲಂಕ, ಏಂಜೆಲೊ ಮ್ಯಾಥ್ಯೂಸ್, ಧನಂಜಯ ಡಿಸಿಲ್ವಾ (ಉಪ ನಾಯಕ), ನಿರೋಷನ್ ಡಿಕ್ವೆಲ್ಲ (ವಿಕೆಟ್ ಕೀಪರ್), ಸುರಂಗ ಲಕ್ಮಲ್, ವಿಶ್ವ ಫರ್ನಾಂಡೊ, ಲಸಿತ್ ಎಂಬುಲ್ದೇನಿಯ, ಲಹಿರು ಕುಮಾರ.