IND vs IRE: ಇಬ್ಬರಲ್ಲಿ ಒಬ್ಬರು ಕಣಕ್ಕಿಳಿಯುವುದು ಬಹುತೇಕ ಖಚಿತ

| Updated By: ಝಾಹಿರ್ ಯೂಸುಫ್

Updated on: Jun 25, 2022 | 11:33 AM

India vs Ireland: ಮುಂಬರುವ ಇಂಗ್ಲೆಂಡ್ ವಿರುದ್ದ ಸರಣಿಗೆ ಟೀಮ್ ಇಂಡಿಯಾ ಇನ್ನಷ್ಟೇ ಆಯ್ಕೆಯಾಗಬೇಕಿದ್ದು, ಈ ವೇಳೆಗೆ ಯುವ ಬೌಲರ್​ಗಳಿಗೆ ಅವಕಾಶ ನೀಡಿ ಪರೀಕ್ಷಿಸಬೇಕಾದ ಅನಿವಾರ್ಯತೆಯಿದೆ.

IND vs IRE: ಇಬ್ಬರಲ್ಲಿ ಒಬ್ಬರು ಕಣಕ್ಕಿಳಿಯುವುದು ಬಹುತೇಕ ಖಚಿತ
Team India
Follow us on

ಸೌತ್ ಆಫ್ರಿಕಾ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯ ನಂತರ ಟೀಮ್ ಇಂಡಿಯಾ (Team India) ಇದೀಗ ಐರ್ಲೆಂಡ್ (IND vs IRE) ವಿರುದ್ಧ ಸೆಣಸಲು ಸಿದ್ಧವಾಗಿದೆ. ಉಭಯ ದೇಶಗಳ ನಡುವಿನ 2 ಪಂದ್ಯಗಳ ಟಿ20 ಸರಣಿಯು ಜೂನ್ 26 ರಿಂದ (ಭಾನುವಾರ) ಶುರುವಾಗಲಿದೆ. ವಿಶೇಷ ಎಂದರೆ ಈ ಸರಣಿಗಾಗಿ ಸೀಮಿತ ಆಟಗಾರರ ಭಾರತ ತಂಡವನ್ನು ಆಯ್ಕೆ ಮಾಡಲಾಗಿದೆ. ಅಂದರೆ ಟೀಮ್ ಇಂಡಿಯಾದ ಪ್ರಮುಖ ಆಟಗಾರರು ಇಂಗ್ಲೆಂಡ್ ವಿರುದ್ದದ ಟೆಸ್ಟ್ ಪಂದ್ಯಕ್ಕಾಗಿ ಸಜ್ಜಾಗುತ್ತಿದ್ದಾರೆ. ಹೀಗಾಗಿ ಐರ್ಲೆಂಡ್ ವಿರುದ್ದದ ಸರಣಿಗೆ ಮೀಸಲು ಪಡೆಯನ್ನು ಆಯ್ಕೆ ಮಾಡಿದೆ. ಈ ತಂಡದ ನಾಯಕರಾಗಿ ಹಾರ್ದಿಕ್ ಪಾಂಡ್ಯ ಕಾಣಿಸಿಕೊಳ್ಳುತ್ತಿದ್ದು, ಕೋಚ್ ಆಗಿ ವಿವಿಎಸ್​ ಲಕ್ಷ್ಮಣ್ ತಂಡದ ಸಾರಥ್ಯವನ್ನು ವಹಿಸಿಕೊಂಡಿದ್ದಾರೆ. ಇನ್ನು ತಂಡಕ್ಕೆ ಅನೇಕ ಆಟಗಾರರು ಕಂಬ್ಯಾಕ್ ಮಾಡಿರುವುದರಿಂದ ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾರಿಗೆ ಚಾನ್ಸ್ ಸಿಗಲಿದೆ ಎಂಬುದು ಕೂಡ ಚರ್ಚಾ ವಿಷಯವಾಗಿದೆ.

ಏಕೆಂದರೆ ಸೌತ್ ಆಫ್ರಿಕಾ ವಿರುದ್ದದ ಸರಣಿಗೆ ಆಯ್ಕೆಯಾದ ಹೊಸ ಆಟಗಾರರಿಗೆ ಆಡುವ ಬಳಗ ಅವಕಾಶ ದೊರೆತಿರಲಿಲ್ಲ. ಇದೀಗ ಐರ್ಲೆಂಡ್ ವಿರುದ್ದದ ಸರಣಿಯ ಮೂಲಕ ಪದಾರ್ಪಣೆ ಮಾಡುವುದನ್ನು ಈ ಆಟಗಾರರು ಎದುರು ನೋಡುತ್ತಿದ್ದಾರೆ. ಹೀಗೆ ಚೊಚ್ಚಲ ಅವಕಾಶವನ್ನು ಎದುರು ನೋಡುತ್ತಿರುವ ಆಟಗಾರರಲ್ಲಿ ಯುವ ವೇಗಿಗಳಾದ ಉಮ್ರಾನ್ ಮಲಿಕ್ ಮತ್ತು ಅರ್ಷದೀಪ್ ಸಿಂಗ್ ಹೆಸರು ಮುಂಚೂಣಿಯಲ್ಲಿದೆ. ಈ ಇಬ್ಬರೂ ಆಟಗಾರರು ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ ವೇಳೆ ಭಾರತ ತಂಡದಲ್ಲಿದ್ದರು. ಆದರೆ, ಇಬ್ಬರಿಗೂ ಚೊಚ್ಚಲ ಪಂದ್ಯವಾಡುವ ಅವಕಾಶ ಸಿಕ್ಕಿರಲಿಲ್ಲ. ಆದರೆ, ಐರ್ಲೆಂಡ್ ವಿರುದ್ದ ಕೋಚ್ ಆಗಿ ಕಾರ್ಯ ನಿರ್ವಹಿಸಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಮೊದಲ ಟಿ20ಯಲ್ಲಿ ಈ ಇಬ್ಬರಲ್ಲಿ ಒಬ್ಬ ಬೌಲರ್​ನನ್ನು ಪರೀಕ್ಷೆಗೊಳಪಡಿಸಬಹುದು.

ಏಕೆಂದರೆ ಐಪಿಎಲ್ 2022 ರಲ್ಲಿ ಉಮ್ರಾನ್ ಮಲಿಕ್ ಮತ್ತು ಅರ್ಷದೀಪ್ ಸಿಂಗ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಪಂಜಾಬ್ ಕಿಂಗ್ಸ್ ಪರ ಆಡಿದ ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ ನಂತರ ಡೆತ್ ಓವರ್‌ನಲ್ಲಿ ಎರಡನೇ ಅತ್ಯುತ್ತಮ ಬೌಲರ್ ಆಗಿ ಹೊರಹೊಮ್ಮಿದ್ದರು. ಮತ್ತೊಂದೆಡೆ ಸನ್ ರೈಸರ್ಸ್ ಹೈದರಾಬಾದ್ ಪರ ಆಡಿದ ಉಮ್ರಾನ್ ಮಲಿಕ್ ತಮ್ಮ ವೇಗದ ಬೌಲಿಂಗ್​ನಿಂದಾಗಿ ಸ್ಟಾರ್​ ಬ್ಯಾಟ್ಸ್‌ಮನ್‌ಗಳನ್ನು ಇಕ್ಕಟಿಗೆ ಸಿಲುಕಿಸಿದ್ದರು. ಅಷ್ಟೇ ಅಲ್ಲದೆ 22 ವಿಕೆಟ್‌ಗಳನ್ನು ಕಬಳಿಸಿ ಮಿಂಚಿದ್ದರು.

ಇದನ್ನೂ ಓದಿ
Irfan Pathan: ಟಿ20 ವಿಶ್ವಕಪ್​ಗೆ ಇರ್ಫಾನ್ ಪಠಾಣ್​ರ ಟೀಮ್ ಇಂಡಿಯಾ ಪ್ಲೇಯಿಂಗ್ 11
Team India: 8 ತಿಂಗಳಲ್ಲಿ 6 ನಾಯಕರನ್ನು ಕಣಕ್ಕಿಳಿಸಿದ ಟೀಮ್ ಇಂಡಿಯಾ
ಪೆಟ್ರೋಲ್ ಪಂಪ್​ನಲ್ಲಿ ಚಹಾ ನೀಡುತ್ತಿರುವ ಶ್ರೀಲಂಕಾ ಕ್ರಿಕೆಟಿಗ
Rishabh Pant: ನಾಯಕನಾಗಿ ಅತ್ಯಂತ ಕೆಟ್ಟ ದಾಖಲೆ ಬರೆದ ರಿಷಭ್ ಪಂತ್

ಇದಾಗ್ಯೂ ಸೌತ್ ಆಫ್ರಿಕಾ ವಿರುದ್ದದ ಸರಣಿಯು ಟೀಮ್ ಇಂಡಿಯಾ ಪಾಲಿಗೆ ಬಹಳ ಮಹತ್ವದ್ದಾಗಿದ್ದರಿಂದ ಇಬ್ಬರನ್ನು ಕಣಕ್ಕಿಳಿಸಲು ಕೋಚ್ ರಾಹುಲ್ ದ್ರಾವಿಡ್ ಮುಂದಾಗಿರಲಿಲ್ಲ. ಇದೀಗ ವಿವಿಎಸ್​ ಲಕ್ಷ್ಮಣ್ ಮೇಲೆ ಯಾವುದೇ ಒತ್ತಡವಿಲ್ಲ. ಅದರಲ್ಲೂ ಐರ್ಲೆಂಡ್ ತಂಡಕ್ಕಿಂತ ಭಾರತವೇ ಬಲಿಷ್ಠವಾಗಿದೆ. ಹೀಗಾಗಿ ಪ್ಲೇಯಿಂಗ್ ಇಲೆವೆನ್​ನಲ್ಲಿ ಹೊಸ ಆಟಗಾರರಿಗೆ ಚಾನ್ಸ್ ನೀಡುವ ಸಾಧ್ಯತೆ ಹೆಚ್ಚಿದೆ.

ಈ ಇಬ್ಬರಲ್ಲಿ ಒಬ್ಬರಿಗೆ ಅವಕಾಶ ನೀಡಬೇಕಿದ್ದರೆ ಹರ್ಷಲ್ ಪಟೇಲ್, ಅವೇಶ್ ಖಾನ್ ಹಾಗೂ ಭುವನೇಶ್ವರ್ ಕುಮಾರ್…ಈ ಮೂವರಲ್ಲಿ ಒಬ್ಬರು ಹೊರಗುಳಿಯಬೇಕಾಗುತ್ತದೆ. ಅತ್ತ ಸೌತ್ ಆಫ್ರಿಕಾ ವಿರುದ್ದ ಅವೇಶ್ ಖಾನ್ ಹಾಗೂ ಹರ್ಷಲ್ ಪಟೇಲ್ 4 ಪಂದ್ಯಗಳನ್ನಾಡಿರುವ ಕಾರಣ ಇವರಿಬ್ಬರಲ್ಲಿ ಒಬ್ಬರಿಗೆ ವಿಶ್ರಾಂತಿ ನೀಡಬಹುದು. ಇನ್ನು ಅನುಭವಿ ವೇಗಿಯಾಗಿರುವ ಭುವನೇಶ್ವರ್ ಕುಮಾರ್ ಐರ್ಲೆಂಡ್ ವಿರುದ್ದ ಕೂಡ ಬೌಲಿಂಗ್ ವಿಭಾಗವನ್ನು ಮುನ್ನಡೆಸಬಹುದು.

ಮುಂಬರುವ ಇಂಗ್ಲೆಂಡ್ ವಿರುದ್ದ ಸರಣಿಗೆ ಟೀಮ್ ಇಂಡಿಯಾ ಇನ್ನಷ್ಟೇ ಆಯ್ಕೆಯಾಗಬೇಕಿದ್ದು, ಈ ವೇಳೆಗೆ ಯುವ ಬೌಲರ್​ಗಳಿಗೆ ಅವಕಾಶ ನೀಡಿ ಪರೀಕ್ಷಿಸಬೇಕಾದ ಅನಿವಾರ್ಯತೆಯಿದೆ. ಏಕೆಂದರೆ ಅಕ್ಟೋಬರ್​ನಲ್ಲಿ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್​ ನಡೆಯಲಿದ್ದು, ಅದಕ್ಕೂ ಮುನ್ನ ಟೀಮ್ ಇಂಡಿಯಾ ಬಲಿಷ್ಠ ಪಡೆಯನ್ನೇ ರೂಪಿಸಿಕೊಳ್ಳಬೇಕಿದೆ. ಹೀಗಾಗಿ ಪ್ರಸ್ತುತ ತಂಡದಲ್ಲಿರುವ ಯುವ ಆಟಗಾರರಿಗೆ ಅವಕಾಶ ನೀಡುವ ಮೂಲಕ ಉತ್ತಮ ಪ್ಲೇಯಿಂಗ್ ಇಲೆವೆನ್​ನನ್ನು ಸಜ್ಜುಗೊಳಿಸಲು ಟೀಮ್ ಇಂಡಿಯಾ ಮ್ಯಾನೇಜ್​ಮೆಂಟ್ ಮುಂದಾಗಲಿದೆ ಎಂದೇ ಹೇಳಬಹುದು. ಅದರಂತೆ ಐರ್ಲೆಂಡ್​ ವಿರುದ್ದದ 2 ಪಂದ್ಯಗಳ ಮೂಲಕ ಅರ್ಷದೀಪ್ ಸಿಂಗ್ ಅಥವಾ ಉಮ್ರಾನ್ ಮಲಿಕ್ ಟೀಮ್ ಇಂಡಿಯಾ ಪರ ಪದಾರ್ಪಣೆ ಮಾಡುವ ಸಾಧ್ಯತೆಯಿದೆ.

ಐರ್ಲೆಂಡ್ ಸರಣಿಗೆ ಭಾರತ ಟಿ20 ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ಭುವನೇಶ್ವರ್ ಕುಮಾರ್, ಇಶಾನ್ ಕಿಶನ್, ರುತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ವೆಂಕಟೇಶ್ ಅಯ್ಯರ್, ರಾಹುಲ್ ತ್ರಿಪಾಠಿ, ದಿನೇಶ್ ಕಾರ್ತಿಕ್, ದೀಪಕ್ ಹೂಡಾ, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ರವಿ ಬಿಷ್ಣೋಯ್, ಅವೇಶ್ ಖಾನ್, ಅರ್ಷದೀಪ್ ಸಿಂಗ್ ಮತ್ತು ಉಮ್ರಾನ್ ಮಲಿಕ್