India Playing XI vs ZIM: ಧವನ್ ಔಟ್?: 2ನೇ ಏಕದಿನಕ್ಕೆ ಭಾರತದ ಬ್ಯಾಟಿಂಗ್ ವಿಭಾಗದಲ್ಲಿ ದೊಡ್ಡ ಬದಲಾವಣೆ
Zimbabwe vs India, 2nd ODI: ಜಿಂಬಾಬ್ವೆ ವಿರುದ್ಧದ ಎರಡನೇ ಏಕದಿನ ಪಂದ್ಯಕ್ಕೆ ಟೀಮ್ ಇಂಡಿಯಾದಲ್ಲಿ ಮಹತ್ವದ ಬದಲಾವಣೆ ನಿರೀಕ್ಷಿಸಲಾಗಿದೆ. ಮುಖ್ಯವಾಗಿ ಉಪ ನಾಯಕ ಶಿಖರ್ ಧವನ್ ಕಣಕ್ಕಿಳಿಯುವುದು ಅನುಮಾನ. ಇಲ್ಲಿದೆ ನೋಡಿ ಭಾರತದ ಸಂಭಾವ್ಯ ಪ್ಲೇಯಿಂಗ್ XI.
ಹರಾರೆಯ ಸ್ಪೋರ್ಟ್ಸ್ ಕ್ಲಬ್ನಲ್ಲಿ ಇಂದು ಭಾರತ ಹಾಗೂ ಜಿಂಬಾಬ್ವೆ (India vs Zimbabwe) ನಡುವೆ ಎರಡನೇ ಏಕದಿನ ಪಂದ್ಯ ಆಯೋಜಿಸಲಾಗಿದೆ. ಮೊದಲ ಪಂದ್ಯದಲ್ಲಿ 10 ವಿಕೆಟ್ಗಳಿಂದ ಗೆದ್ದು ಬೀಗಿದ ಟೀಮ್ ಇಂಡಿಯಾ ಇಂದಿನ ಪಂದ್ಯ ಗೆದ್ದರೆ ಸರಣಿ ವಶಪಡಿಸಿಕೊಂಡ ಸಾಧನೆ ಮಾಡಲಿದೆ. ಕಳೆದ ಪಂದ್ಯದಲ್ಲಿ ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿದ ಜಿಂಬಾಬ್ವೆ 189 ರನ್ಗೆ ಸರ್ವಪತನ ಕಂಡಿತ್ತು. ಭಾರತ ಈ ಮೊತ್ತವನ್ನು ಒಂದೂ ವಿಕೆಟ್ ಕಳೆದುಕೊಳ್ಳದೆ ಗೆದ್ದು ಬೀಗಿತ್ತು. ಶಿಖರ್ ಧವನ್ (Shikhar Dhawan) ಹಾಗೂ ಶುಭ್ಮನ್ ಗಿಲ್ ಬಿಟ್ಟರೆ ಉಳಿದ ಯಾವ ಬ್ಯಾಟರ್ಗೂ ಅವಕಾಶ ಸಿಕ್ಕಿರಲಿಲ್ಲ. ನಾಯಕ ಕೆಎಲ್ ರಾಹುಲ್ (KL Rahul) ಕೂಡ ತಮ್ಮ ಆರಂಭಿಕ ಸ್ಥಾನವನ್ನು ಗಿಲ್ಗೆ ಬಿಟ್ಟುಕೊಟ್ಟು ಮಧ್ಯಮ ಕ್ರಮಾಂಕಕ್ಕೆ ಬಂದಿದ್ದರು.
ಜಿಂಬಾಬ್ವೆ ಸರಣಿ ಮುಗಿದ ಬಳಿಕ ಭಾರತ ಏಷ್ಯಾಕಪ್ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಇದಕ್ಕಾಗಿ ಬ್ಯಾಟಿಂಗ್ ಅಭ್ಯಾಸ ಮುಖ್ಯ. ಕೆಎಲ್ ರಾಹುಲ್ ಕೂಡ ಫಾರ್ಮ್ಗೆ ಮರಳಬೇಕದೆ. ಹೀಗಾಗಿ ಇಂದಿನ ಪಂದ್ಯಕ್ಕೆ ಟೀಮ್ ಇಂಡಿಯಾದಲ್ಲಿ ಮಹತ್ವದ ಬದಲಾವಣೆ ನಿರೀಕ್ಷಿಸಲಾಗಿದೆ. ಮುಖ್ಯವಾಗಿ ಉಪ ನಾಯಕ ಶಿಖರ್ ಧವನ್ ಕಣಕ್ಕಿಳಿಯುವುದು ಅನುಮಾನ. ಮೊದಲ ಏಕದಿನದ ವೇಳೆ ಧವನ್ ಅವರ ಎಡಗೈಗೆ ಚೆಂಡು ಬಡಿದು ಗಾಯವಾಗಿತ್ತು. ಅದೊಂದು ವೇಳೆ ಗಂಭೀರವಾಗಿದ್ದರೆ ಈ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಆಗ ಶುಭ್ಮನ್ ಗಿಲ್ ಜೊತೆಗೆ ಕೆಎಲ್ ರಾಹುಲ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಧವನ್ ಸ್ಥಾನವನ್ನು ರಾಹುಲ್ ತ್ರಿಪಾಠಿ ತುಂಬಬಹುದು.
ಉಳಿದಂತೆ ಇಶಾನ್ ಕಿಶನ್, ಸಂಜು ಸ್ಯಾಮ್ಸನ್ ಮತ್ತು ದೀಪಕ್ ಹೂಡ ಮಧ್ಯಮ ಕ್ರಮಾಂಕದಲ್ಲಿ ಬಲ ತುಂಬಲಿದ್ದಾರೆ. ಆಲ್ರೌಂಡರ್ಗಳಾಗಿ ಅಕ್ಷರ್ ಪಟೇಲ್ ಹಾಗೂ ದೀಪಕ್ ಚಹರ್ ಇದ್ದರೆ, ಕುಲ್ದೀಪ್ ಯಾದವ್, ಪ್ರಸಿದ್ಧ್ ಕೃಷ್ಣ ಮತ್ತು ಮೊಹಮ್ಮದ್ ಸಿರಾಜ್ ಮುಖ್ಯ ಬೌಲರ್ಗಳಾಗಿದ್ದಾರೆ.
ದೀರ್ಘ ಕಾಲದ ನಂತರ ಕಣಕ್ಕೆ ಮರಳಿರುವ ಬೌಲರ್ ದೀಪಕ್ ಚಹರ್ ಮೊದಲ ಪಂದ್ಯದಲ್ಲೇ ಮಾರಕ ದಾಳಿ ಸಂಘಟಿಸಿದರು. ಏಳು ಓವರ್ ಬೌಲಿಂಗ್ ಮಾಡಿ ಮೂರು ವಿಕೆಟ್ ಕಿತ್ತು ಪಂದ್ಯಶ್ರೇಷ್ಠ ಕೂಡ ಬಾಚಿಕೊಂಡರು. ಪ್ರಸಿದ್ಧ ಕೃಷ್ಣ ಕೂಡ ಮೂರು ವಿಕೆಟ್ ಕಬಳಿಸಿದ್ದರು. ಹೀಗಾಗಿ ಇವರ ಮೇಲೆ ಸಾಕಷ್ಟು ನಂಬಿಕೆ ಇಡಲಾಗಿದೆ.
ರೆಗಿಸ್ ಚಕಾಬ್ವಾ ನಾಯಕತ್ವದ ಜಿಂಬಾಬ್ವೆ ತಂಡವು ರಾಹುಲ್ ಬಳಗದ ಬ್ಯಾಟರ್ಗಳಿಗೆ ಹಾಗೂ ಬೌಲಿಂಗ್ ಪಡೆಯನ್ನು ಎಚ್ಚರಿಕೆಯಿಂದ ಎದುರಿಸಿದರೆ ಮಾತ್ರ ಗೆಲುವಿನ ಕನಸು ಕಾಣಬಹುದು. ಜಿಂಬಾಬ್ವೆ ತಂಡ ಏಕದಿನ ಮತ್ತು ಟಿ20 ಸರಣಿಯಲ್ಲಿ ಬಾಂಗ್ಲಾದೇಶವನ್ನು ಸೋಲಿಸಿದ್ದು ಮರೆಯುವಂತಿಲ್ಲ. ಸಿಕಂದರ್ ರಾಝಾ ತಂಡಕ್ಕೆ ಆಸರೆಯಾಗಿ, ಇನ್ನೋಸೆಂಟ್ ಕೈಯಾ ಮತ್ತು ರಿಯಾನ್ ಬರ್ಲ್ ಅವರಂತಹವರು ದೊಡ್ಡ ಪ್ರಮಾಣದಲ್ಲಿ ಪ್ರಭಾವ ಬೀರಿದರೆ ಭಾರತಕ್ಕೆ ಜಯ ಸುಲಭವಿಲ್ಲ.
ಭಾರತ ಮತ್ತು ಜಿಂಬಾಬ್ವೆ ನಡುವಿನ ಎರಡನೇ ಏಕದಿನ ಪಂದ್ಯ ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 12:45ಕ್ಕೆ ಪ್ರಾರಂಭವಾಗಲಿದೆ. ಸೋನಿ ಚಾನೆಲ್ (Sony Sports Network) ಲೈವ್ ಟೆಲಿಕಾಸ್ಟ್ ಮಾಡಲಿದೆ. ಹಾಗೆಯೇ ಸೋನಿ ಲೈವ್ ಆ್ಯಪ್ನಲ್ಲಿ ಲೈವ್ ಸ್ಟ್ರೀಮಿಂಗ್ ಲಭ್ಯವಿರುತ್ತದೆ.
ಭಾರತದ ಸಂಭಾವ್ಯ ಪ್ಲೇಯಿಂಗ್ XI: ಶುಭ್ಮನ್ ಗಿಲ್, ಕೆಎಲ್ ರಾಹುಲ್, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ದೀಪಕ್ ಹೂಡಾ, ಅಕ್ಷರ್ ಪಟೇಲ್, ದೀಪಕ್ ಚಾಹರ್, ಕುಲ್ದೀಪ್ ಯಾದವ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್.
Published On - 9:18 am, Sat, 20 August 22