IND vs SA: ದಟ್ಟ ಮಂಜಿನಿಂದ 4ನೇ ಟಿ20 ಪಂದ್ಯ ರದ್ದು; ಸರಣಿಯಲ್ಲಿ ಭಾರತದ ಮೇಲುಗೈ

India vs South Africa 4th T20 Cancelled:ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ನಾಲ್ಕನೇ ಟಿ20 ಪಂದ್ಯ ಲಕ್ನೋದಲ್ಲಿ ರದ್ದಾಗಿದೆ. ಹವಾಮಾನ ವೈಪರಿತ್ಯ, ದಟ್ಟ ಮಂಜು ಕ್ರೀಡಾಂಗಣವನ್ನು ಆವರಿಸಿದ್ದರಿಂದ ಪಂದ್ಯವನ್ನು ರದ್ದುಗೊಳಿಸಲು ಅಂಪೈರ್​ಗಳು ನಿರ್ಧರಿಸಿದರು. ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಈ ಪಂದ್ಯ ಟಾಸ್ ಕೂಡ ನಡೆಯದೆ ಸ್ಥಗಿತಗೊಂಡಿತು. ಇದು ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.

IND vs SA: ದಟ್ಟ ಮಂಜಿನಿಂದ 4ನೇ ಟಿ20 ಪಂದ್ಯ ರದ್ದು; ಸರಣಿಯಲ್ಲಿ ಭಾರತದ ಮೇಲುಗೈ
Ind Vs Sa 4th T20

Updated on: Dec 17, 2025 | 10:22 PM

ಭಾರತ ಮತ್ತು ದಕ್ಷಿಣ ಆಫ್ರಿಕಾ (India vs South Africa) ನಡುವಿನ ಟಿ20 ಸರಣಿಯ ನಾಲ್ಕನೇ ಪಂದ್ಯ ಇಂದು ಲಕ್ನೋದ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರೀಡಾಂಗಣದಲ್ಲಿ ನಡೆಯಬೇಕಿತ್ತು. ಆದರೆ ಹವಾಮಾನ ವೈಪರಿತ್ಯದಿಂದಾಗಿ ಉಭಯ ತಂಡಗಳ ನಡುವಿನ ಈ ಪಂದ್ಯವನ್ನು ರದ್ದುಗೊಳಿಸಲಾಗಿದೆ. ಭಾರೀ ಮುಸುಕು ಹಾಗೂ ದಟ್ಟ ಮಂಜು ಮೈದಾನದ ತುಂಬಾ ಹರಡಿದ್ದರಿಂದ ಅಂಪೈರ್​ಗಳು ಪಂದ್ಯವನ್ನು ರದ್ದುಗೊಳಿಸಲು ನಿರ್ಧರಿಸಿದ್ದಾರೆ. ಹೀಗಾಗಿ ಈ ಪಂದ್ಯ ಟಾಸ್ ಕೂಡ ನಡೆಯದೆ ರದ್ದಾಗಿದೆ. ವಾಸ್ತವವಾಗಿ ಪೂರ್ವನಿಗದಿಯಂತೆ ಈ ನಾಲ್ಕನೇ ಪಂದ್ಯದ ಟಾಸ್ ಭಾರತೀಯ ಕಾಲಮಾನ ಸಂಜೆ 6:30 ಕ್ಕೆ ನಡೆಯಬೇಕಿತ್ತು. ಆ ಬಳಿಕ ಸಂಜೆ 7 ಗಂಟೆಗೆ ಆಟ ಆರಂಭವಾಗಬೇಕಿತ್ತು. ಆದರೆ ರಾತ್ರಿ 9:30 ರವರೆಗೂ ಕಾದರೂ ಮಂಜು ಕಡಿಮೆಯಾಗದ ಕಾರಣ ಪಂದ್ಯವನ್ನು ರದ್ದುಗೊಳಿಸಲಾಯಿತು.

6 ಬಾರಿ ಟಾಸ್ ಮುಂದೂಡಿದ ಅಂಪೈರ್ಸ್​

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ20 ಪಂದ್ಯದ ಟಾಸ್ ಭಾರತೀಯ ಕಾಲಮಾನ ಸಂಜೆ 6:30 ಕ್ಕೆ ನಡೆಯಬೇಕಿತ್ತು. ಆ ಬಳಿಕ ಪಂದ್ಯ ಸಂಜೆ 7 ಗಂಟೆಗೆ ಪ್ರಾರಂಭವಾಗಬೇಕಿತ್ತು. ಆದರೆ ಲಕ್ನೋ ಮೈದಾನದಲ್ಲಿ ಮಂಜು ಆವರಿಸಿದರಿಂದ ಟಾಸ್ ನಡೆಯಲು ಅವಕಾಶ ನೀಡಲಿಲ್ಲ. ಪಂದ್ಯದ ಅಧಿಕಾರಿಗಳು ಬರೋಬ್ಬರಿ 6 ಬಾರಿ ಟಾಸ್ ಮುಂದೂಡಿದರು. ಆದಾಗ್ಯೂ ಪಂದ್ಯವನ್ನು ನಡೆಸಲು ಸಾಧ್ಯವಾಗಲಿಲ್ಲ. ಮಂಜಿನ ಕಾರಣ, ಪಂದ್ಯದ ಅಧಿಕಾರಿಗಳು ಮೊದಲ ತಪಾಸಣೆಯನ್ನು ಸಂಜೆ 6:50 ಕ್ಕೆ ನಿಗದಿಪಡಿಸಿದರು. ಪರಿಸ್ಥಿತಿ ಹದಗೆಟ್ಟಂತೆ, ತಪಾಸಣೆ ಸಮಯವನ್ನು ಹಲವಾರು ಬಾರಿ ವಿಸ್ತರಿಸಲಾಯಿತು. ನಂತರದ ತಪಾಸಣೆಗಳನ್ನು ಸಂಜೆ 7:30 ಕ್ಕೆ, ನಂತರ ರಾತ್ರಿ 8:00, ರಾತ್ರಿ 8:30, ರಾತ್ರಿ 9:00 ಕ್ಕೆ ಮತ್ತು ಅಂತಿಮವಾಗಿ, ಅಂತಿಮ ತಪಾಸಣೆಯನ್ನು ರಾತ್ರಿ 9:25 ಕ್ಕೆ ನಡೆಸಲಾಯಿತು.

ಐಸಿಸಿ ನಿಯಮಗಳ ಪ್ರಕಾರ, ಭಾರತ ಹಾಗೂ ದಕ್ಷಿಣ ಆಫ್ರಿಕಾ ಪಂದ್ಯವನ್ನು ತಲಾ ಐದು ಓವರ್‌ಗಳಾದರೂ ಆಡಿಸಬೇಕಾದರೆ, ಪಂದ್ಯ ರಾತ್ರಿ 9:46 ರೊಳಗೆ ಆರಂಭವಾಗಬೇಕಿತ್ತು. ಆದರೆ ರಾತ್ರಿ 9:25 ಕ್ಕೆ ಅಂಪೈರ್​ಗಳು ಪರಿಶೀಲಿಸಿದಾಗ ಮೈದಾನ ಆಟಕ್ಕೆ ಸೂಕ್ತವಾಗಿರದ ಕಾರಣ, ಆಟಗಾರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಅಂಪೈರ್‌ಗಳು ಪಂದ್ಯವನ್ನು ರದ್ದುಗೊಳಿಸಲು ನಿರ್ಧರಿಸಿದರು.

IND vs SA: ಟಿ20 ಸರಣಿಯಿಂದ ಹೊರಬಿದ್ದ ಶುಭ್​ಮನ್ ಗಿಲ್! ಇಂಜುರಿಯೋ, ಉದ್ದೇಶಪೂರ್ವಕವೋ?

ಅಜೇಯ ಓಟ ಮುಂದುವರೆಸಿದ ಭಾರತ

4ನೇ ಟಿ20 ಪಂದ್ಯ ರದ್ದಾಗಿರುವುದರಿಂದ ಭಾರತ ತಂಡ ಸರಣಿ ಸೋಲುವ ಆತಂಕದಿಂದ ಹೊರಬಂದಿದೆ. ಈ ಸರಣಿಯಲ್ಲಿ ಈಗಾಗಲೇ 2-1 ಅಂತರದಿಂದ ಮುನ್ನಡೆ ಪಡೆದುಕೊಂಡಿರುವ ಸೂರ್ಯ ಪಡೆ, ಕೊನೆಯ ಪಂದ್ಯವನ್ನು ಗೆದ್ದರೆ, ಸರಣಿ 3-1 ಅಂತರದಿಂದ ಭಾರತದ ಪಾಲಾಗಲಿದೆ. ಒಂದು ವೇಳೆ ಸೋತರೆ ಸರಣಿ 2-2 ರಿಂದ ಅಂತ್ಯವಾಗಲಿದೆ.ಈ ಮೂಲಕ ಭಾರತ ಸತತ 11 ಸರಣಿಗಳ ಅಜೇಯ ಓಟವನ್ನು ಭಾರತ ಮುಂದುವರೆಸಲಿದೆ.

Published On - 9:37 pm, Wed, 17 December 25