ಆಸ್ಟ್ರೇಲಿಯಾ ವಿರುದ್ಧ ಅಜೇಯ ದ್ವಿಶತಕ ಬಾರಿಸಿದ 17 ವರ್ಷದ ಲಕ್ಷ್ಯ ರಾಯ್‌ಚಂದಾನಿ
ರಾಜ್‌ಕೋಟ್‌ನಲ್ಲಿ ನಡೆಯುತ್ತಿರುವ ಭಾರತ U19 ಮತ್ತು ಆಸ್ಟ್ರೇಲಿಯಾ U19 ನಡುವಿನ ಮೊದಲ ಅನಧಿಕೃತ ಟೆಸ್ಟ್‌ನಲ್ಲಿ ಭಾರತ ಮೇಲುಗೈ ಸಾಧಿಸಿದೆ. ಆಸ್ಟ್ರೇಲಿಯಾ 217 ರನ್‌ಗಳಿಗೆ ಆಲೌಟ್ ಆದ ನಂತರ, ಭಾರತದ ಆರಂಭಿಕ ಬ್ಯಾಟ್ಸ್‌ಮನ್ ಲಕ್ಷ್ಯ ರಾಯ್‌ಚಂದಾನಿ ದಾಖಲೆಯ ದ್ವಿಶತಕ ಬಾರಿಸಿ ತಂಡವನ್ನು 400 ರನ್ ಗಡಿ ದಾಟಿಸಿದರು. ಈ ಭರ್ಜರಿ ಪ್ರದರ್ಶನದಿಂದ ಟೀಂ ಇಂಡಿಯಾ ಬೃಹತ್ ಮುನ್ನಡೆ ಗಳಿಸಿ ಗೆಲುವಿನತ್ತ ಹೆಜ್ಜೆ ಹಾಕಿದೆ.

ಭಾರತ ಅಂಡರ್-19 ಮತ್ತು ಆಸ್ಟ್ರೇಲಿಯಾ ಅಂಡರ್-19 ನಡುವಿನ ಎರಡು ಪಂದ್ಯಗಳ ಅನಧಿಕೃತ ಟೆಸ್ಟ್ ಸರಣಿಯ ಮೊದಲ ಪಂದ್ಯ ರಾಜ್‌ಕೋಟ್‌ನ ನಿರಂಜನ್ ಶಾ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಯುವ ಪಡೆ ಮೊದಲ ದಿನದಂದು 217 ರನ್‌ಗಳಿಗೆ ಆಲೌಟ್ ಆಗಿತ್ತು. ಇದಕ್ಕೆ ಪ್ರತಿಯಾಗಿ ಎರಡನೇ ದಿನದಂದು ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತದ ಪರ ಅರಂಭಿಕ ಲಕ್ಷ್ಯ ರಾಯ್‌ಚಂದಾನಿ ದಾಖಲೆಯ ದ್ವಿಶತಕ ಬಾರಿಸಿದ್ದಾರೆ. ಲಕ್ಷ್ಯ ಅವರ ಈ ದ್ವಿಶತಕದಿಂದಾಗಿ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ನಲ್ಲಿ 400 ರನ್ಗಳ ಗಡಿ ದಾಟಿದ್ದು, ಆಸ್ಟ್ರೇಲಿಯಾ ವಿರುದ್ಧ ಸಂಪೂರ್ಣ ಮೇಲುಗೈ ಸಾಧಿಸಿದೆ.
ಆರಂಭಿಕನಾಗಿ ಕಣಕ್ಕಿಳಿದಿದ್ದ ಲಕ್ಷ್ಯ ರಾಯ್‌ಚಂದಾನಿ 141 ಎಸೆತಗಳಲ್ಲಿ ಶತಕ ಬಾರಿಸಿದರು. ಅವರ ಈ ಶತಕದಲ್ಲಿ 12 ಬೌಂಡರಿ ಮತ್ತು ಎರಡು ಸಿಕ್ಸರ್‌ಗಳು ಸೇರಿದ್ದವು. ಇದು ಲಕ್ಷ್ಯ ರಾಯ್‌ಚಂದಾನಿ ಅವರ 19 ವರ್ಷದೊಳಗಿನವರ ಟೆಸ್ಟ್ ವೃತ್ತಿಜೀವನದಲ್ಲಿ ಮೂರನೇ ಶತಕವಾಗಿತ್ತು ಈ ಮೂರು ಶತಕಗಳಲ್ಲಿ ಒಂದು ದ್ವಿಶತಕವೂ ಸೇರಿತ್ತು. ಇದೀಗ ದ್ವಿಶತಕಗಳ ಸಂಖ್ಯೆ ಎರಡಕ್ಕೇರಿದೆ. ಇನ್ನು ಈ ದ್ವಿಶತಕ ಲಕ್ಷ್ಯ ರಾಯ್‌ಚಂದಾನಿ ಅವರು 19 ವರ್ಷದೊಳಗಿನವರ ಟೆಸ್ಟ್‌ನಲ್ಲಿ ಭಾರತದಲ್ಲಿ ಆಸ್ಟ್ರೇಲಿಯಾ ವಿರುದ್ಧ ದಾಖಲಿಸಿದ ಮೊದಲ ದ್ವಿಶತಕವಾಗಿದೆ.
247 ಎಸೆತಗಳಲ್ಲಿ ತಮ್ಮ ದ್ವಿಶತಕ ಪೂರೈಸಿದ ಲಕ್ಷ್ಯ ತಂಡವನ್ನು 400 ರನ್ಗಳ ಗಡಿ ದಾಟಿಸಿ ದಿನದಾಟದಂತ್ಯಕ್ಕೆ ಅಜೇಯರಾಗಿ ಉಳಿದಿದ್ದಾರೆ. ಪ್ರಸ್ತುತ 250 ಎಸೆತಗಳನ್ನು ಎದುರಿಸಿರುವ ಅವರು 20 ಬೌಂಡರಿ ಹಾಗೂ 4 ಸಿಕ್ಸರ್‌ಗಳ ಸಹಾಯದಿಂದ 210 ರನ್ ಬಾರಿಸಿ ಮೂರನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
Published On - 5:04 pm, Mon, 28 September 26




