ಭಾರತ ಕ್ರಿಕೆಟ್ ತಂಡ ಹಾಗೂ ಆಸ್ಟ್ರೇಲಿಯಾ (India vs Australia) ನಡುವಣ ಮೂರು ಪಂದ್ಯಗಳ ಏಕದಿನ ಸರಣಿಗೆ ಇಂದು ಚಾಲನೆ ಸಿಗಲಿದೆ. ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ಮೊದಲ ಏಕದಿನ ಪಂದ್ಯ ಆಯೋಜಿಸಲಾಗಿದೆ. ಐಸಿಸಿ ಏಕದಿನ ವಿಶ್ವಕಪ್ ಅಕ್ಟೋಬರ್ 5 ರಂದು ಪ್ರಾರಂಭವಾಗುವ ಮೊದಲು ಎರಡೂ ತಂಡಗಳಿಗೆ ಈ ಸರಣಿಯು ಅಂತಿಮ ತಯಾರಿಯಾಗಿದೆ. ಮೊದಲ ಎರಡು ಏಕದಿನ ಪಂದ್ಯದಂದ ಕೆಲ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದ್ದು, ಕೆಎಲ್ ರಾಹುಲ್ ನಾಯಕನಾಗಿ ಮುನ್ನಡೆಸಲಿದ್ದಾರೆ.
ಟೀಮ್ ಇಂಡಿಯಾ ಪರ ಓಪನರ್ ಆಗಿ ಯಾರು ಆಡಲಿದ್ದಾರೆ ಎಂಬ ಗೊಂದಲ ಎಲ್ಲರಲ್ಲಿದೆ. ಶುಭ್ಮನ್ ಗಿಲ್, ಇಶಾನ್ ಕಿಶನ್ ಜೊತೆ ರುತುರಾಜ್ ಗಾಯಕ್ವಾಡ್ ಇರುವುದರಿಂದ ಯಾರಿಗೆ ಸ್ಥಾನ ಎಂಬುದು ನೋಡಬೇಕಿದೆ. ಅಂತೆಯೆ ಶ್ರೇಯಸ್ ಅಯ್ಯರ್ ಫಿಟ್ ಆಗಿದ್ದಾರಾ ಎಂಬ ಬಗ್ಗೆ ಸ್ಪಷ್ಟನೆ ಇಲ್ಲ. ಇದರ ನಡುವೆ ಈ ಸರಣಿಯ ಮೂಲಕ ರವಿಚಂದ್ರನ್ ಅಶ್ವಿನ್ ಟೀಮ್ ಇಂಡಿಯಾಗೆ ಮರಳಿದ್ದಾರೆ. ಅಂದರೆ ಏಷ್ಯಾಕಪ್ ಟೂರ್ನಿಗೆ ಅಶ್ವಿನ್ ಅವರನ್ನು ಆಯ್ಕೆ ಮಾಡಿರಲಿಲ್ಲ. ಇದೀಗ ಆಸ್ಟ್ರೇಲಿಯಾ ಸರಣಿಗೆ ಆಯ್ಕೆಯಾಗಿರುವುದು ವಿಶೇಷ.
ಸಚಿನ್ರ ಈ ವಿಶ್ವ ದಾಖಲೆ ಕೊಹ್ಲಿ ಮುರಿಯುವುದು ಅಸಾಧ್ಯ: ಸಂಜಯ್ ಮಂಜ್ರೇಕರ್
ಹೀಗೆ ಪ್ರತಿಯೊಬ್ಬರಿಗೂ ಈ ಸರಣಿ ಬಹುಮುಖ್ಯವಾಗಿದೆ. ಸಂಭಾವ್ಯ ತಂಡ ನೋಡುವುದಾದರೆ, ಗಿಲ್, ಕಿಶನ್ ಆರಂಭಿಕರಾಗಿ ಆಡಲಿದ್ದಾರೆ. ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ ನಂತರದಲ್ಲಿ ಕಾಣಿಸಿಕೊಳ್ಳಬಹುದು. ತಿಲಕ್ ವರ್ಮಾ ಅಥವಾ ವಾಷಿಂಗ್ಟನ್ ಸುಂದರ್ ಪೈಕಿ ಯಾರಿಗೆ ಸ್ಥಾನ ನೋಡಬೇಕಿದೆ. ರವೀಂದ್ರ ಜಡೇಜಾ, ಶಾರ್ದೂಲ್ ಥಾಕೂರ್, ಆರ್. ಅಶ್ವಿನ್, ಜಸ್ಪ್ರಿತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಬಹುದು.
ಇತ್ತ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಪ್ರಮುಖ ವೇಗಿ ಮಿಚೆಲ್ ಸ್ಟಾರ್ಕ್ ಕಣಕ್ಕಿಳಿಯುವುದಿಲ್ಲ. ಹಾಗೆಯೇ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ ಕೂಡ ಮೊದಲ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ. ಹೀಗಿದ್ದರೂ ಕಾಂಗರೂ ಪಡೆ ಬಲಿಷ್ಠವಾಗಿದೆ. ಆಸೀಸ್ ಪರ ಡೇವಿಡ್ ವಾರ್ನರ್, ಮಿಚೆಲ್ ಮಾರ್ಶ್ ಆರಂಭಿಕರಾಗಿ ಆಡಲಿದ್ದಾರೆ. ಸ್ಟೀವ್ ಸ್ಮಿತ್, ಮಾರ್ನಸ್ ಲಾಬುಶೇನ್, ಕ್ಯಾಮ್ರೋನ್ ಗ್ರೀನ್ ಮಧ್ಯಮ ಕ್ರಮಾಂಕದ ಆಧಾರವಾಗಿದ್ದಾರೆ. ಅಲೆಕ್ಸ್ ಕ್ಯಾರಿ, ಮಾರ್ನಸ್ ಸ್ಟೊಯಿನಿಸ್ ಕೂಡ ಇದ್ದಾರೆ. ಸೀನ್ ಅಬಾಟ್, ಪ್ಯಾಟ್ ಕಮಿನ್ಸ್, ಜೋಶ್ ಹ್ಯಾಝಲ್ವುಡ್, ಆ್ಯಡಮ್ ಝಂಪಾ ಪ್ರಮುಖ ಬೌಲರ್ಗಳಾಗಿದ್ದಾರೆ.
ದೇಶದ ಇತರ ನಗರಗಳ ಮೈದಾನಗಳಿಗೆ ಹೋಲಿಸಿದರೆ ಪಂಜಾಬ್ ಕ್ರಿಕೆಟ್ ಅಸೋಸಿಯೇಶನ್ ಪಿಚ್ ಹೆಚ್ಚು ಹಸಿರಿನಿಂದ ಕೂಡಿದೆ. ಹೀಗಾಗಿ ವೇಗದ ಬೌಲರ್‌ಗಳು ಈ ಪಿಚ್‌ನಿಂದ ಹೆಚ್ಚಿನ ನೆರವನ್ನು ನಿರೀಕ್ಷಿಸಬಹುದು. ಅಲ್ಲದೆ ಬೌನ್ಸ್ ಕೂಡ ವೇಗಿಗಳಿಗೆ ನೆರವಾಗುವ ಸಾಧ್ಯತೆಯಿದೆ. ಮೊಹಾಲಿ ಸ್ಟೇಡಿಯಂನಲ್ಲಿ ನಡೆದ ಕೊನೆಯ ಐದು ಏಕದಿನ ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ ಗೆದ್ದಿದ್ದು ಒಂದು ಪಂದ್ಯ ಮಾತ್ರ. ಉಳಿದ ನಾಲ್ಕು ಪಂದ್ಯಗಳಲ್ಲಿ ಮೊದಲು ಬೌಲಿಂಗ್ ಮಾಡಿದ ತಂಡ ಗೆಲುವು ಸಾಧಿಸಿದೆ. ಟಾಸ್ ಗೆದ್ದ ನಾಯಕನು ಮೊದಲು ಬೌಲ್ ಅನ್ನು ಆಯ್ಕೆ ಮಾಡುವುದು ಉತ್ತಮ ಆಯ್ಕೆ.
ಭಾರತ-ಆಸ್ಟ್ರೇಲಿಯಾ ಮೊದಲ ಏಕದಿನ ಪಂದ್ಯ ಸ್ಪೋರ್ಟ್ಸ್ 18 ಇಂಗ್ಲಿಷ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಜೊತೆಗೆ ಪಂದ್ಯವನ್ನು JioCinema ದಲ್ಲಿ ಉಚಿತವಾಗಿ ವೀಕ್ಷಿಸಬಹುದು. ಮಧ್ಯಾಹ್ನ 1:00 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದ್ದು, 1:30ಕ್ಕೆ ಪಂದ್ಯ ಶುರುವಾಗಲಿದೆ.
ಭಾರತ ತಂಡ: ಕೆಎಲ್ ರಾಹುಲ್ (ನಾಯಕ), ಶುಭ್ಮನ್ ಗಿಲ್, ರುತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ತಿಲಕ್ ವರ್ಮಾ, ಪ್ರಸಿದ್ಧ್ ಕೃಷ್ಣ, ರವಿಚಂದ್ರನ್ ಅಶ್ವಿನ್ ಮತ್ತು ವಾಷಿಂಗ್ಟನ್ ಸುಂದರ್.
ಆಸ್ಟ್ರೇಲಿಯಾ ತಂಡ: ಪ್ಯಾಟ್ ಕಮ್ಮಿನ್ಸ್, ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್, ಅಲೆಕ್ಸ್ ಕ್ಯಾರಿ, ಮಾರ್ನಸ್ ಲಾಬುಶೇನ್, ಸೀನ್ ಅಬಾಟ್, ನಾಥನ್ ಎಲ್ಲಿಸ್, ಕ್ಯಾಮರೋನ್ ಗ್ರೀನ್, ಜೋಶ್ ಹ್ಯಾಝಲ್ವುಡ್, ಜೋಶ್ ಇಂಗ್ಲಿಸ್, ಸ್ಪೆನ್ಸರ್ ಜಾನ್ಸನ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್ವೆಲ್, ತನ್ವೀರ್ ಸಾಂಘಾ, ಮ್ಯಾಟ್ ಶಾರ್ಟ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೊಯಿನಿಸ್, ಆ್ಯಡಮ್ ಝಂಪಾ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ