ಭಾರತ ಹಾಗೂ ಆಸ್ಟ್ರೇಲಿಯಾ (India vs Australia) ನಡುವಣ ಅಂತಿಮ ಮೂರನೇ ಏಕದಿನ ಪಂದ್ಯ ಇಂದು ರಾಜ್ಕೋಟ್ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯಲಿದೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯನ್ನು ಭಾರತ ಈಗಾಗಲೇ 2-0 ಅಂತರದಿಂದ ವಶಪಡಿಸಿಕೊಂಡಿದೆ. ಹೀಗಿದ್ದರೂ ಟೀಮ್ ಇಂಡಿಯಾಕ್ಕಿದು ಔಪಚಾರಿಕ ಪಂದ್ಯವಲ್ಲ. ಐಸಿಸಿ ಏಕದಿನ ವಿಶ್ವಕಪ್ ದೃಷ್ಟಿಯಿಂದ ಭಾರತಕ್ಕೆ ಇದು ಮಹತ್ವದ ಪಂದ್ಯವಾಗಿದೆ. ಅಲ್ಲದೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ತಂಡಕ್ಕೆ ಮರಳಿದ್ದು, ಗೆದ್ದು ಪ್ರತಿಷ್ಠೆ ಉಳಿಸಬೇಕಿದೆ. ಅತ್ತ ಕಾಂಗರೂ ಪಡೆ ಮಾನ ಉಳಿಸಿಕೊಳ್ಳಲು ಕೊನೇ ಪಂದ್ಯ ಗೆಲ್ಲುವ ಪ್ಲಾನ್ನಲ್ಲಿದೆ.
ಭಾರತ ತಂಡ ಬ್ಯಾಟಿಂಗ್- ಬೌಲಿಂಗ್ನಲ್ಲಿ ಭರ್ಜರಿ ಫಾರ್ಮ್ನಲ್ಲಿದೆ. ಶುಭ್ಮನ್ ಗಿಲ್ಗೆ ವಿಶ್ರಾಂತಿ ನೀಡಿರುವ ಪರಿಣಾಮ ನಾಯಕ ರೋಹಿತ್ ಶರ್ಮಾ ಜೊತೆ ಇಶಾನ್ ಕಿಶನ್ ಕಣಕ್ಕಿಳಿಯಲಿದ್ದಾರೆ. ಶ್ರೇಯಸ್ ಅಯ್ಯರ್ ಮೂರನೇ ಕ್ರಮಾಂಕವನ್ನು ವಿರಾಟ್ ಕೊಹ್ಲಿಗೆ ಬಿಟ್ಟುಕೊಡಬೇಕು. ಹಾರ್ದಿಕ್ ಪಾಂಡ್ಯ ತಂಡ ಸೇರಿರುವ ಕಾರಣ ಸೂರ್ಯಕುಮಾರ್ ಯಾದವ್ ಪ್ಲೇಯಿಂಗ್ ಇಲೆವೆನ್ನಿಂದ ಹೊರಬೀಳಬಹುದು. ಶಾರ್ದೂಲ್ ಥಾಕೂರ್ಗೆ ವಿಶ್ರಾಂತಿ ನೀಡಲಾಗಿದೆ. ಕುಲ್ದೀಪ್ ಯಾದವ್ ಇವರ ಜಾಗಕ್ಕೆ ಬರುವ ಸಂಭವವಿದೆ.
ಭಾರತ-ಆಸ್ಟ್ರೇಲಿಯಾ ಮೂರನೇ ಏಕದಿನಕ್ಕೆ ಮಳೆಯ ಕಾಟ?: ರಾಜ್ಕೋಟ್ ಹವಾಮಾನ ಹೀಗಿದೆ
ಇತ್ತ ಕಾಂಗರೂ ಪಡೆ ಸರಣಿ ಕಳೆದುಕೊಂಡಿದೆ. ಮಾನ ಉಳಿಸಿಕೊಳ್ಳಲು ಕನಿಷ್ಠ ಇಂದಿನ ಪಂದ್ಯ ಗೆಲ್ಲಬೇಕಿದೆ. ತಂಡ ಉತ್ತಮ ಆರಂಭ ಪಡೆದುಕೊಳ್ಳುವಲ್ಲಿ ಎಡವುತ್ತಿದೆ. ಮಿಚೆಲ್ ಮಾರ್ಶ್ ಕಡೆಯಿಂದ ಉತ್ತಮ ಆಟ ಬರುತ್ತಿಲ್ಲ. ಮಧ್ಯಮ ಕ್ರಮಾಂಕದ ಬ್ಯಾಟರ್ಗಳು ತಂಡಕ್ಕೆ ಇನ್ನಷ್ಟು ಆಸರೆಯಾಗಬೇಕಿದೆ. ಆಸ್ಟ್ರೇಲಿಯಾ ತಂಡದಲ್ಲಿ ಮಾರಕ ಬೌಲರ್ಗಳಿದ್ದರೂ ಪರಿಣಾಮಕಾರಿ ಆಗಿ ಗೋಚರಿಸುತ್ತಿಲ್ಲ. ಪ್ಯಾಟ್ ಕಮಿನ್ಸ್, ಸ್ಟೊಯಿನಿಸ್, ಝಂಪಾ, ಅಬಾಟ್ ಮೇಲೆ ಹೆಚ್ಚಿನ ಒತ್ತಡವಿದೆ.
ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನ ಪಿಚ್ ಬ್ಯಾಟಿಂಗ್ ಸ್ನೇಹಿ ಆಗಿದೆ. ದೇಶೀಯ ಮತ್ತು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಇಲ್ಲಿ ದೊಡ್ಡ ಸ್ಕೋರ್ ಆಗುತ್ತದೆ. ಇಲ್ಲಿಯವರೆಗೆ ನಡೆದ ಮೂರು ಏಕದಿನ ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ ಎಲ್ಲ ಪಂದ್ಯಗಳನ್ನು ಗೆದ್ದಿದೆ. ಬ್ಯಾಟರ್‌ಗಳಿಗೆ ಈ ಪಿಚ್ ಸ್ವರ್ಗ ಎಂದೇ ಹೇಳಬಹುದು. ಈ ಮೈದಾನವು ಇಂದೋರ್‌ಗಿಂತ ದೊಡ್ಡದಾಗಿದೆ, ಆದರೆ ಇಲ್ಲಿನ ಪಿಚ್ ಬ್ಯಾಟರ್‌ಗಳಿಗೆ ಸಂಪೂರ್ಣ ತಲೆಬಾಗುತ್ತದೆ. ಎರಡೂ ಬದಿಯಲ್ಲಿ ಬೌಂಡರಿಗಳು ಚಿಕ್ಕದಾಗಿರುವುದರಿಂದ ರನ್‌ಗಳು ಹೆಚ್ಚು ಬರುತ್ತದೆ.
ಇಂಡೋ-ಆಸೀಸ್ ತೃತೀಯ ಏಕದಿನಕ್ಕೆ ವರುಣನ ಕಾಟ ಇಲ್ಲ. ಬುಧವಾರ (ಸೆಪ್ಟೆಂಬರ್ 27) ಹೆಚ್ಚಾಗಿ ಮೋಡ ಕವಿದ ವಾತಾವರಣ ಇರಲಿದೆ. ಇಂದು ಮಳೆ ಬೀಳುವ ನಿರೀಕ್ಷೆ ಇದ್ದು, ಪಂದ್ಯದ ದಿನ ಮಳೆಯ ಸಾಧ್ಯತೆ ಕಮ್ಮಿ. ಗರಿಷ್ಠ ತಾಪಮಾನವು 34 C ಆಗಿರಬಹುದು ಎಂದು ನಿರೀಕ್ಷಿಸಲಾಗಿದೆ, ಆದರೆ ದಿನದ ಆಟದ ಕೊನೆಯಲ್ಲಿ 25 C ಗೆ ಕಡಿಮೆಯಾಗುತ್ತದೆ. ಬುಧವಾರ ಕೇವಲ 6 ಪ್ರತಿಶತದಷ್ಟು ಮಳೆ ಬೀಳುವ ಸಾಧ್ಯತೆ ಮಾತ್ರ ಇದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ