ನಾಯಕ- ಮಾಜಿ ನಾಯಕನ ನಡುವೆ ಕಿತ್ತಾಟ; ವಿಶ್ವಕಪ್ಗೂ ಮುನ್ನ ಬಾಂಗ್ಲಾ ತಂಡದಲ್ಲಿ ಭಿನ್ನಮತ ಸ್ಫೋಟ
ODI World Cup 2023: ವಿಶ್ವಕಪ್ ತಂಡದ ಆಯ್ಕೆಯ ವಿಚಾರದಲ್ಲಿ ತಂಡದ ಹಾಲಿ ನಾಯಕ ಶಕೀಬ್ ಅಲ್ ಹಸನ್ ಮತ್ತು ಮಾಜಿ ನಾಯಕ ತಮೀಮ್ ಇಕ್ಬಾಲ್ ನಡುವೆ ವಾಗ್ವಾದ ನಡೆದಿದೆ. ಹೀಗಾಗಿಯೇ ತಮೀಮ್ ಇಕ್ಬಾಲ್ ಅವರನ್ನು ವಿಶ್ವಕಪ್ ತಂಡದಿಂದ ಹೊರಗಿಡಲಾಗಿದೆ ಎಂದು ವರದಿಯಾಗಿದೆ.
2023ರ ಏಕದಿನ ವಿಶ್ವಕಪ್‌ಗೆ (ODI World Cup 2023) ಬಾಂಗ್ಲಾದೇಶ ತನ್ನ ತಂಡವನ್ನು ಪ್ರಕಟಿಸಿದೆ. ಆದರೆ ತಂಡ ಪ್ರಕಟವಾದ ಬೆನ್ನಲ್ಲೇ ತಂಡದಲ್ಲಿ ಭಿನ್ನಮತ ಸ್ಫೋಟವಾಗಿದೆ ಎಂದು ವರದಿಯಾಗಿದೆ. ವಾಸ್ತವವಾಗಿ ಈ ಬಾರಿ ಬಾಂಗ್ಲಾದೇಶ ಏಕದಿನ ವಿಶ್ವಕಪ್ ತಂಡದಲ್ಲಿ ತಂಡದ ಮಾಜಿ ನಾಯಕ ತಮೀಮ್ ಇಕ್ಬಾಲ್‌ಗೆ (Tamim Iqbal) ಸ್ಥಾನ ನೀಡಿಲ್ಲ. ಇದು ತಂಡದ ಆಯ್ಕೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇದಲ್ಲದೆ ಇದೀಗ ಹೊರಬಿದ್ದಿರುವ ಮಾಹಿತಿ ಪ್ರಕಾರ ವಿಶ್ವಕಪ್ ತಂಡದ ಆಯ್ಕೆಯ ವಿಚಾರದಲ್ಲಿ ತಂಡದ ಹಾಲಿ ನಾಯಕ ಶಕೀಬ್ ಅಲ್ ಹಸನ್ (Shakib Al Hasan) ಮತ್ತು ಮಾಜಿ ನಾಯಕ ತಮೀಮ್ ಇಕ್ಬಾಲ್ ನಡುವೆ ವಾಗ್ವಾದ ನಡೆದಿದೆ. ಹೀಗಾಗಿಯೇ ತಮೀಮ್ ಇಕ್ಬಾಲ್ ಅವರನ್ನು ವಿಶ್ವಕಪ್ ತಂಡದಿಂದ ಹೊರಗಿಡಲಾಗಿದೆ ಎಂದು ವರದಿಯಾಗಿದೆ.
ಕೇವಲ 5 ಪಂದ್ಯಗಳನ್ನಾಡುತ್ತೇನೆ; ತಮೀಮ್
ಬಾಂಗ್ಲಾದೇಶದ ಸ್ಥಳೀಯ ಮಾಧ್ಯಮಗಳ ಪ್ರಕಾರ, ತಮೀಮ್ ಇಕ್ಬಾಲ್ ಅವರು ಸಂಪೂರ್ಣವಾಗಿ ಫಿಟ್ ಆಗಿಲ್ಲ. ಹೀಗಾಗಿ ನಾನು ಇಡೀ ವಿಶ್ವಕಪ್ ಆಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ನಾನು ಕೇವಲ 5 ಪಂದ್ಯಗಳಲ್ಲಿ ಆಡುವುದಾಗಿ ತಮೀಮ್ ಅವರು ಮಂಡಳಿಗೆ ತಿಳಿಸಿದ್ದರು. ಆದರೆ ತಮೀಮ್ ಅವರ ಈ ನಿರ್ಧಾರ ನಾಯಕ ಶಕೀಬ್ ಅಲ್ ಹಸನ್ ಅವರಿಗೆ ಇಷ್ಟವಾಗಿಲ್ಲ. ಹೀಗಾಗಿ ಶಕೀಬ್ ಸಂಪೂರ್ಣ ಫಿಟ್ ಇಲ್ಲದ ಆಟಗಾರ ತಂಡದಲ್ಲಿ ಸ್ಥಾನ ಪಡೆಯವುದರ ಬಗ್ಗೆ ಅಸಮಾದಾನ ಹೊರಹಾಕಿದ್ದಾರೆ ಎಂದು ವರದಿಯಾಗಿದೆ.
IND vs BAN: ನೋ ಬಾಲ್ ನೀಡಿದಕ್ಕೆ ಅಂಪೈರ್ ಜೊತೆ ಜಗಳಕ್ಕಿಳಿದ ಶಕೀಬ್! ಬುದ್ಧಿ ಹೇಳಿದ ಕೊಹ್ಲಿ; ವಿಡಿಯೋ
ನಾನು ತಂಡದ ನಾಯಕನಾಗುವುದಿಲ್ಲ; ಶಕೀಬ್
ಸೋಮವಾರವೇ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಅಧ್ಯಕ್ಷ ನಜ್ಮುಲ್ ಹುಸೇನ್ ಅವರ ಮನೆಯಲ್ಲಿ ಸಭೆ ನಡೆದಿದ್ದು, ಶಕೀಬ್ ಅಲ್ ಹಸನ್ ಮತ್ತು ತಂಡದ ಕೋಚ್ ಕೂಡ ಈ ಸಭೆಯಲ್ಲಿ ಉಪಸ್ಥಿತರಿದ್ದರು. ಅಲ್ಲಿಯೇ ಶಕೀಬ್ ಅಲ್ ಹಸನ್ ಅರ್ಧ ಫಿಟ್ ಇರುವ ಆಟಗಾರನನ್ನು ವಿಶ್ವಕಪ್‌ಗೆ ತೆಗೆದುಕೊಂಡರೆ ನಾನು ತಂಡದ ನಾಯಕನಾಗುವುದಿಲ್ಲ ಎಂದು ಅಧ್ಯಕ್ಷರ ಮುಂದೆ ಹೇಳಿದ್ದರು. ಇದಾದ ನಂತರ ಮಂಡಳಿಯು ನಾಯಕನ ಸಲಹೆಯನ್ನು ಸ್ವೀಕರಿಸಿದ್ದು, ಮಾಜಿ ನಾಯಕ ತಮೀಮ್ ಇಕ್ಬಾಲ್ ಅವರನ್ನು ತಂಡದಿಂದ ಹೊರಗಿಡಲಾಗಿದೆ. ಅಷ್ಟೇ ಅಲ್ಲ, ತಮೀಮ್ ಇಕ್ಬಾಲ್ ಸಹೋದರನಾಗಿರುವ ತಂಡದ ಮ್ಯಾನೇಜರ್ ನಫೀಸ್ ಇಕ್ಬಾಲ್ ಅವರನ್ನು ಕೂಡ ಮಂಡಳಿಯಿಂದ ತೆಗೆದುಹಾಕಲಾಗಿದೆ ಎಂದು ಹೇಳಲಾಗುತ್ತಿದೆ.
27 ರೊಳಗೆ ಭಾರತಕ್ಕೆ ಬರುವ ಸಾಧ್ಯತೆ
ವಿಶ್ವಕಪ್‌ನಂತಹ ದೊಡ್ಡ ಟೂರ್ನಿಗೂ ಮುನ್ನ ಬಾಂಗ್ಲಾದೇಶ ತಂಡದಲ್ಲಿ ಈ ರೀತಿಯ ವಿವಾದ ನಡೆದಿದ್ದು, ಇದು ತಂಡದ ಪ್ರದರ್ಶನದ ಮೇಲೆ ಪರಿಣಾಮ ಬೀರಬಹುದು. ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ಏಕದಿನ ಸರಣಿಯನ್ನು ಕಳೆದುಕೊಂಡಿರುವ ಬಾಂಗ್ಲಾದೇಶ ತಂಡ ವಿಶ್ವಕಪ್ಗಾಗಿ ಸೆಪ್ಟೆಂಬರ್ 27 ರೊಳಗೆ ಭಾರತಕ್ಕೆ ಬರುವ ಸಾಧ್ಯತೆ ಇದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:11 am, Wed, 27 September 23