ಬಾಂಗ್ಲಾ ಬೌಲರ್​ಗಳನ್ನು ಚೆಂಡಾಡಿದ ಭಾರತೀಯ ಬ್ಯಾಟರ್​ಗಳು: ಇಲ್ಲಿದೆ ಹೈಲೈಟ್ಸ್​ ವಿಡಿಯೋ

|

Updated on: Oct 13, 2024 | 7:55 AM

India vs Bangladesh T20I: ಬಾಂಗ್ಲಾದೇಶ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯನ್ನು ಟೀಮ್ ಇಂಡಿಯಾ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಮೊದಲ ಮ್ಯಾಚ್​ನಲ್ಲಿ 7 ವಿಕೆಟ್​ಗಳ ಜಯ ಸಾಧಿಸಿದ್ದ ಭಾರತ, ಎರಡನೇ ಪಂದ್ಯವನ್ನು 86 ರನ್​ಗಳ ಅಂತರದಿಂದ ಗೆದ್ದುಕೊಂಡಿತು. ಇದೀಗ ಮೂರನೇ ಮ್ಯಾಚ್​ನಲ್ಲಿ 133 ರನ್​ಗಳ ಅಮೋಘ ಗೆಲುವು ದಾಖಲಿಸಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯನ್ನು 3-0 ಅಂತರದಿಂದ ಗೆದ್ದುಕೊಂಡಿದೆ.

ಹೈದರಾಬಾದ್​ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ಶನಿವಾರ ರನ್​ ಸುರಿಮಳೆಯಾಗಿದೆ. ಅದು ಕೂಡ ದಾಖಲೆಯ 297 ರನ್​ಗಳನ್ನು ಸಿಡಿಸುವ ಮೂಲಕ ಎಂಬುದು ವಿಶೇಷ. ಬಾಂಗ್ಲಾದೇಶ್ ವಿರುದ್ದದ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ಬ್ಯಾಟಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಪರ ಆರಂಭಿಕನಾಗಿ ಕಣಕ್ಕಿಳಿದ ಅಭಿಷೇಕ್ ಶರ್ಮಾ (4) ಬೇಗನೆ ಔಟಾದರು. ಈ ವೇಳೆ ಜೊತೆಗೂಡಿದ ಸಂಜು ಸ್ಯಾಮ್ಸನ್ ಹಾಗೂ ಸೂರ್ಯಕುಮಾರ್ ಯಾದವ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು.

ಕೇವಲ 47 ಎಸೆತಗಳನ್ನು ಎದುರಿಸಿದ ಸಂಜು ಸ್ಯಾಮ್ಸನ್ 11 ಫೋರ್ ಹಾಗೂ 8 ಸಿಕ್ಸ್​ಗಳೊಂದಿಗೆ 111 ರನ್ ಚಚ್ಚಿದರು. ಮತ್ತೊಂದೆಡೆ ಸೂರ್ಯಕುಮಾರ್ ಯಾದವ್ 35 ಎಸೆತಗಳಲ್ಲಿ 5 ಸಿಕ್ಸ್ ಹಾಗೂ 8 ಫೋರ್​ಗಳೊಂದಿಗೆ 75 ರನ್ ಬಾರಿಸಿದರು. ಆ ಬಳಿಕ ಬಂದ ರಿಯಾನ್ ಪರಾಗ್ 13 ಎಸೆತಗಳಲ್ಲಿ 34 ರನ್ ಬಾರಿಸಿದರೆ, ಹಾರ್ದಿಕ್ ಪಾಂಡ್ಯ 18 ಎಸೆತಗಳಲ್ಲಿ 47 ರನ್ ಸಿಡಿಸಿದರು. ಇನ್ನು ಕೊನೆಯ ಎಸೆತದಲ್ಲಿ ರಿಂಕು ಸಿಂಗ್ ಸಿಕ್ಸ್ ಸಿಡಿಸುವ ಮೂಲಕ ಟೀಮ್ ಇಂಡಿಯಾ ಮೊತ್ತವನ್ನು 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 297 ರನ್​ಗೆ ತಂದು ನಿಲ್ಲಿಸಿದರು.

298 ರನ್​ಗಳ ಕಠಿಣ ಗುರಿ ಬೆನ್ನತ್ತಿದ ಬಾಂಗ್ಲಾದೇಶ್ ಪರ ತೌಹಿದ್ ಹೃದೋಯ್ 63 ರನ್ ಬಾರಿಸಿದರೆ, ಲಿಟ್ಟನ್ ದಾಸ್ 42 ರನ್​ ಕಲೆಹಾಕಿದರು. ಇವರಿಬ್ಬರನ್ನು ಹೊರತುಪಡಿಸಿ ಉಳಿದ ಬ್ಯಾಟರ್​ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಅಂತಿಮವಾಗಿ ಬಾಂಗ್ಲಾದೇಶ್ ತಂಡವು 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 164 ರನ್​ಗಳಿಸಿ ಇನಿಂಗ್ಸ್​ ಅಂತ್ಯಗೊಳಿಸಿತು. ಈ ಮೂಲಕ ಟೀಮ್ ಇಂಡಿಯಾ 133 ರನ್​ಗಳ ಭರ್ಜರಿ ಜಯ ಸಾಧಿಸಿದೆ.

 

Follow us on