IND vs ENG: 2ನೇ ಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲಿ ಒಂದಂಕಿಗೆ ಸುಸ್ತಾದ ರಾಹುಲ್

India vs England 2nd Test: ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡಕ್ಕೆ ನಿರಾಶಾದಾಯಕ ಆರಂಭ. ಕೆಎಲ್ ರಾಹುಲ್ ಕೇವಲ 2 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. ಮೊದಲ ಟೆಸ್ಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ರಾಹುಲ್ ಅವರ ಈ ವೈಫಲ್ಯ ಭಾರತ ತಂಡಕ್ಕೆ ಆಘಾತ ನೀಡಿದೆ. ಜೈಸ್ವಾಲ್ ಮತ್ತು ಕರುಣ್ ನಾಯರ್ ಕ್ರೀಸ್‌ನಲ್ಲಿದ್ದಾರೆ.

IND vs ENG: 2ನೇ ಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲಿ ಒಂದಂಕಿಗೆ ಸುಸ್ತಾದ ರಾಹುಲ್
Kl Rahul

Updated on: Jul 02, 2025 | 4:59 PM

ಇಂದಿನಿಂದ ಅಂದರೆ ಜುಲೈ 2 ರಿಂದ ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯ ಎಡ್ಜ್‌ಬಾಸ್ಟನ್‌ನಲ್ಲಿ ಶುರುವಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ಮೂರು ಬದಲಾವಣೆಗಳೊಂದಿಗೆ ಎರಡನೇ ಟೆಸ್ಟ್​ಗೆ ಕಣಕ್ಕಿಳಿದಿರುವ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ ಆರಂಭಿಸಿದೆ. ಆದರೆ ಮೊದಲ ಇನ್ನಿಂಗ್ಸ್​ನಲ್ಲಿ ಭಾರತ ತಂಡಕ್ಕೆ ನಿರೀಕ್ಷಿತ ಆರಂಭ ಸಿಕ್ಕಿಲ್ಲ. ಲೀಡ್ಸ್‌ನಲ್ಲಿ ನಡೆದ ಮೊದಲ ಟೆಸ್ಟ್​ನಲ್ಲಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದ್ದ ರಾಹುಲ್ ಹಾಗೂ ಜೈಸ್ವಾಲ್ ಜೋಡಿ, ಎರಡನೇ ಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲಿ ಕಮಾಲ್ ಮಾಡುವಲ್ಲಿ ಎಡವಿದೆ. ಲೀಡ್ಸ್ ಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲಿ 42 ರನ್​ಗಳ ಇನ್ನಿಂಗ್ಸ್ ಆಡಿದ್ದ ಕನ್ನಡಿಗ ಕೆಎಲ್ ರಾಹುಲ್ (KL Rahul), ಎರಡನೇ ಪಂದ್ಯದಲ್ಲಿ ಒಂದಂಕಿ ದಾಟಲು ಸಾಧ್ಯವಾಗದೆ ವಿಕೆಟ್ ಒಪ್ಪಿಸಿದ್ದಾರೆ.

2 ರನ್​ಗಳಿಸಿ ರಾಹುಲ್ ಔಟ್

ಟಾಸ್ ಸೋತು ಮೊದಲ ಇನ್ನಿಂಗ್ಸ್ ಆರಂಭಿಸಿರುವ ಟೀಂ ಇಂಡಿಯಾ 15 ರನ್ ಗಳಿಸುವಷ್ಟರಲ್ಲಿ ತನ್ನ ಮೊದಲ ವಿಕೆಟ್ ಕಳೆದುಕೊಂಡಿದೆ. ಇನ್ನಿಂಗ್ಸ್‌ನ ಒಂಬತ್ತನೇ ಓವರ್‌ ಬೌಲ್ ಮಾಡಿದ ವೋಕ್ಸ್ ಅವರ ಎಸೆತವನ್ನು ಡಿಫೆಂಡ್ ಮಾಡುವ ಪ್ರಯತ್ನದಲ್ಲಿ ಆರಂಭಿಕ ರಾಹುಲ್ ಕ್ಲೀನ್ ಬೌಲ್ಡ್ ಆಗಿದ್ದಾರೆ. ಚೆಂಡು ರಾಹುಲ್ ಅವರ ಬ್ಯಾಟ್‌ಗೆ ತಗುಲಿ ವಿಕೆಟ್‌ಗೆ ಬಡಿಯಿತು. ಹೀಗಾಗಿ ರಾಹುಲ್ ಮೊದಲ ಇನ್ನಿಂಗ್ಸ್​ನಲ್ಲಿ 26 ಎಸೆತಗಳನ್ನು ಎದುರಿಸಿ ಕೇವಲ ಎರಡು ರನ್ ಕಲೆಹಾಕಲಷ್ಟೇ ಶಕ್ತರಾದರು.

ಮೊದಲ ಟೆಸ್ಟ್​ನಲ್ಲಿ ಭರ್ಜರಿ ಶತಕ

ಮೇಲೆ ಹೇಳಿದಂತೆ ಕಳೆದ ಟೆಸ್ಟ್‌ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ರಾಹುಲ್, ಮೊದಲ ಇನ್ನಿಂಗ್ಸ್​ನಲ್ಲಿ 42 ರನ್ ಬಾರಿಸಿದ್ದರೆ, ಎರಡನೇ ಇನ್ನಿಂಗ್ಸ್​ನಲ್ಲಿ 137 ರನ್​ಗಳ ಸ್ಮರಣೀಯ ಇನ್ನಿಂಗ್ಸ್ ಆಡಿದ್ದರು. ಇದರ ಹೊರತಾಗಿಯೂ ತಂಡಕ್ಕೆ ಮೊದಲ ಟೆಸ್ಟ್ ಗೆಲ್ಲಲು ಸಾಧ್ಯವಾಗಿರಲಿಲ್ಲ. ಇದೀಗ ಎರಡನೇ ಟೆಸ್ಟ್ ಗೆಲ್ಲುವ ಇರಾದೆಯೊಂದಿಗೆ ಕಣಕ್ಕಿಳಿದಿರುವ ಭಾರತ ತಂಡಕ್ಕೆ ರಾಹುಲ್ ಉತ್ತಮ ಆರಂಭ ಒದಿಗಿಸಿಕೊಡುವಲ್ಲಿ ವಿಫಲರಾಗಿದ್ದಾರೆ. ಆದಾಗ್ಯೂ ಎರಡನೇ ಇನ್ನಿಂಗ್ಸ್​ನಲ್ಲಿ ಮಿಂಚುವ ಅವಕಾಶ ರಾಹುಲ್​ಗಿದೆ. ರಾಹುಲ್ ಔಟಾದ ನಂತರ ಮತ್ತೊಬ್ಬ ಕನ್ನಡಿಗ ಕರುಣ್ ನಾಯರ್ ಬ್ಯಾಟಿಂಗ್‌ಗೆ ಬಂದಿದ್ದು, ಅವರೊಂದಿಗೆ ಯಶಸ್ವಿ ಜೈಸ್ವಾಲ್ ಕ್ರೀಸ್‌ನಲ್ಲಿದ್ದಾರೆ.

IND vs ENG: ಟಾಸ್ ಗೆದ್ದ ಇಂಗ್ಲೆಂಡ್‌; ಟೀಂ ಇಂಡಿಯಾದಲ್ಲಿ 3 ಬದಲಾವಣೆ

ಉಭಯ ತಂಡಗಳು

ಭಾರತ ತಂಡ; ಯಶಸ್ವಿ ಜೈಸ್ವಾಲ್, ಶುಭ್​ಮನ್ ಗಿಲ್, ಕರುಣ್ ನಾಯರ್, ಕೆಎಲ್ ರಾಹುಲ್, ರಿಷಭ್ ಪಂತ್, ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಆಕಾಶ್ ದೀಪ್

ಇಂಗ್ಲೆಂಡ್ ತಂಡ: ಜ್ಯಾಕ್ ಕ್ರಾಲಿ, ಬೆನ್ ಡಕೆಟ್, ಓಲಿ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಜೇಮೀ ಸ್ಮಿತ್ (ವಿಕೆಟ್ ಕೀಪರ್), ಕ್ರಿಸ್ ವೋಕ್ಸ್, ಬ್ರೈಡನ್ ಕಾರ್ಸೆ, ಜೋಶ್ ಟಂಗ್, ಶೋಯೆಬ್ ಬಶೀರ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:56 pm, Wed, 2 July 25