
ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ಭಾರತ-ಇಂಗ್ಲೆಂಡ್ ನಡುವಣ 2ನೇ ಟೆಸ್ಟ್ ಪಂದ್ಯ ಶುರುವಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಇಂಗ್ಲೆಂಡ್ ನಾಯಕ ಜೋ ರೂಟ್ ಬೌಲಿಂಗ್ ಆಯ್ದುಕೊಂಡರು. ರೂಟ್ ಅವರ ಈ ನಿರ್ಧಾರವು ಕ್ರಿಕೆಟ್ ಪ್ರೇಮಿಗಳ ಅಚ್ಚರಿಗೆ ಕಾರಣವಾಗಿತ್ತು. ಏಕೆಂದರೆ ಸಾಮಾನ್ಯವಾಗಿ ಲಾರ್ಡ್ಸ್ ಮೈದಾನದಲ್ಲಿ ಟಾಸ್ ಗೆದ್ದ ತಂಡವು ಮೊದಲು ಬ್ಯಾಟಿಂಗ್ ಮಾಡುತ್ತದೆ. ಆದರೆ ಇಂಗ್ಲೆಂಡ್ ನಾಯಕ ಬೌಲಿಂಗ್ ಆಯ್ದುಕೊಂಡು ಎಲ್ಲರನ್ನೂ ಅಚ್ಚರಿಗೆ ದೂಡಿದ್ದರು. ಇದಕ್ಕೇನು ಕಾರಣ ಎಂಬುದನ್ನೂ ಕೂಡ ರೂಟ್ ಅವರೇ ವಿವರಿಸಿದ್ದಾರೆ.
ಹೌದು, ನ್ಯಾಟಿಂಗ್ಹ್ಯಾಮ್ ಟೆಸ್ಟ್ ಪಂದ್ಯದ ಅಂತಿಮ ದಿನ ಮಳೆ ಬಂದಿದ್ದರಿಂದ ಭಾರತ ಗೆಲ್ಲಬೇಕಿದ್ದ ಮ್ಯಾಚ್ ಡ್ರಾನಲ್ಲಿ ಅಂತ್ಯಗೊಂಡಿತ್ತು. ಇದೀಗ ಲಾರ್ಡ್ಸ್ನಲ್ಲೂ ಮಳೆ ಬರುವ ಸಾಧ್ಯತೆಯನ್ನು ಮೊದಲೇ ಇಂಗ್ಲೆಂಡ್ ನಾಯಕ ಜೋ ರೂಟ್ ಊಹಿಸಿದ್ದರು. ಅವರ ಊಹೆಯಂತೆ ತುಂತುರು ಮಳೆಯ ಕಾರಣ ಪಂದ್ಯದ ಟಾಸ್ ಪ್ರಕ್ರಿಯೆ 20 ನಿಮಿಷ ವಿಳಂಬವಾಯಿತು. ಇತ್ತ ಟಾಸ್ ಗೆಲ್ಲುತ್ತಿದ್ದಂತೆ ರೂಟ್ ಕೂಡ ಬೌಲಿಂಗ್ ಆಯ್ದುಕೊಂಡರು.
ಮಳೆಯನ್ನು ಎದುರು ನೋಡಿದ್ದ ರೂಟ್ ತಮ್ಮ ತಂಡದಲ್ಲಿ ಮೂರು ಬದಲಾವಣೆಯನ್ನು ಕೂಡ ಮಾಡಿಕೊಂಡಿದ್ದರು. ಇದಕ್ಕೆ ಕಾರಣ, ಲಾರ್ಡ್ಸ್ನಲ್ಲಿ ಮಳೆಯಾದರೆ ಪಿಚ್ ಪರಿಸ್ಥಿತಿ ಬದಲಾಗುವುದು. ಏಕೆಂದರೆ ಲಾರ್ಡ್ಸ್ ಮೈದಾನದ ಪಿಚ್ಗಳಲ್ಲಿ ಹುಲ್ಲುಗಳಿರುತ್ತವೆ. ಇತ್ತ ಹವಾಮಾನ ಬದಲಾವಣೆ ಹಾಗೂ ಮಳೆಯಿಂದ ಪಿಚ್ ಮೇಲ್ಮೈ ಕೂಡ ಬದಲಾಗುತ್ತದೆ. ಹೀಗಾಗಿ ತಂಡದಲ್ಲಿ ಜಾಕ್ ಕ್ರೌಲಿಯ ಬದಲಾಗಿ ಹಸೀಬ್ ಹಮೀದ್, ಡೇನಿಯಲ್ ಲಾರೆನ್ಸ್ ಬದಲಿಗೆ ಮೊಯೀನ್ ಅಲಿ ಹಾಗೂ ಗಾಯಗೊಂಡಿರುವ ಸ್ಟುವರ್ಟ್ ಬ್ರಾಡ್ ಬದಲಿಗೆ ಮಾರ್ಕ್ ವುಡ್ ಅವರನ್ನು ಪ್ಲೇಯಿಂಗ್ ಇಲೆವೆನ್ಗೆ ಆಯ್ಕೆ ಮಾಡಿಕೊಂಡಿದ್ದರು.
ಲಾರ್ಡ್ಸ್ ಮೈದಾನದಲ್ಲಿ ಚೆಂಡುಗಳು ತಿರುವು ಪಡೆದುಕೊಳ್ಳುತ್ತವೆ. ಅದರಲ್ಲೂ ಮಳೆಯಾದರೆ ಸ್ಪಿನ್ ಬೌಲಿಂಗ್ಗೆ ಹೆಚ್ಚಿನ ಸಹಕಾರಿ. ಹೀಗಾಗಿಯೇ ನಾವು ಮೊಯೀನ್ ಅಲಿ ಅವರಿಗೆ ಅವಕಾಶ ನೀಡಿದ್ದೇವೆ. ಅವರು ಅನುಭವಿ ಸ್ಪಿನ್ನರ್ ಮತ್ತು ಬ್ಯಾಟಿಂಗ್ನಲ್ಲೂ ರನ್ ಗಳಿಸುತ್ತಾರೆ. ಹಾಗೆಯೇ ಈ ಮೈದಾನದಲ್ಲಿ ವಿಕೆಟ್ ಕೂಡ ಪಡೆಯಲಿದ್ದಾರೆ ಎಂದು ಜೋ ರೂಟ್ ತಿಳಿಸಿದ್ದಾರೆ.
ಇದೀಗ ಮೊದಲ ದಿನವೇ ಲಾರ್ಡ್ಸ್ನಲ್ಲಿ ಮಳೆಯಾಗಿದೆ. ಜೋ ರೂಟ್ ಅವರ ಊಹೆ ಕೂಡ ನಿಜವಾಗಿದೆ. ಪಿಚ್ನ ಪರಿಸ್ಥಿತಿ ಬದಲಾಗುವ ನಿರೀಕ್ಷೆಯಲ್ಲಿ ತಂಡವನ್ನು ಕೂಡ ಆಯ್ಕೆ ಮಾಡಿಕೊಂಡಿದ್ದಾರೆ. ಇನ್ನಿರೋದು ಟೀಮ್ ಇಂಡಿಯಾ ಹೇಗೆ ಆಡಲಿದೆ ಎಂಬುದು. ಒಂದು ವೇಳೆ ಭಾರತ ತಂಡವನ್ನು ಕಡಿಮೆ ಮೊತ್ತಕ್ಕೆ ಮೊದಲ ಇನಿಂಗ್ಸ್ನಲ್ಲಿ ನಿಯಂತ್ರಿಸಿದರೆ ಇಂಗ್ಲೆಂಡ್ ತಂಡ ಬೃಹತ್ ಮೊತ್ತ ಪೇರಿಸುವ ಸಾಧ್ಯತೆಯಿದೆ. ಏಕೆಂದರೆ ಲಾರ್ಡ್ಸ್ ಮೈದಾನದಲ್ಲಿ ಈ ಹಿಂದಿನಿಂದಲೂ ಇಂಗ್ಲೆಂಡ್ ಆಟಗಾರರು ಭರ್ಜರಿ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಅಲ್ಲದೆ ಪ್ರವಾಸಿ ತಂಡಗಳು ಈ ಮೈದಾನದಲ್ಲಿ ಜಯ ಸಾಧಿಸಿದ್ದು ಕೂಡ ತುಂಬಾ ವಿರಳ. ಇದಕ್ಕೆ ಲಾರ್ಡ್ಸ್ ಮೈದಾನದ ಅಂಕಿ ಅಂಶಗಳೇ ಸಾಕ್ಷಿ.
ಲಾರ್ಡ್ಸ್ನಲ್ಲಿ ಆಡಿದ ಒಟ್ಟು ಟೆಸ್ಟ್ ಪಂದ್ಯಗಳು: 140
ಇಂಗ್ಲೆಂಡ್ ಗೆದ್ದ ಪಂದ್ಯಗಳು: 55
ಪ್ರವಾಸಿ ತಂಡಗಳು ಗೆದ್ದ ಪಂದ್ಯಗಳು: 32
ಡ್ರಾನಲ್ಲಿ ಅಂತ್ಯಗೊಂಡ ಪಂದ್ಯಗಳು: 51
ಅಂದರೆ ಈ ಮೈದಾನದಲ್ಲಿ ಇಂಗ್ಲೆಂಡ್ ತಂಡವು 106 ಪಂದ್ಯಗಳಲ್ಲಿ ಹಿಡಿತ ಸಾಧಿಸಿದೆ ಎಂದೇ ಹೇಳಬಹುದು. ಹಾಗೆಯೇ ಎದುರಾಳಿ ವಿರುದ್ದ ಮಂಡಿಯೂರಿದ್ದು ಕೇವಲ 32 ಪಂದ್ಯಗಳಲ್ಲಿ ಮಾತ್ರ. ಹೀಗಾಗಿ ಲಾರ್ಡ್ಸ್ ಮೈದಾನವನ್ನು ಆಂಗ್ಲ ಕ್ರಿಕೆಟಿಗರ ಅದೃಷ್ಟದ ಮೈದಾನ ಎಂದು ಪರಿಗಣಿಸಲಾಗುತ್ತದೆ. ಇದೀಗ ಅದೃಷ್ಟದ ಮೈದಾನದಲ್ಲಿ ಇಂಗ್ಲೆಂಡ್ ನಾಯಕ ಜೋ ರೂಟ್ ಅಂದುಕೊಂಡಂತೆ ಎಲ್ಲವೂ ನಡೆದಿದೆ. ಹಾಗಾಗಿ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಹೇಗೆ ಜಯಗಳಿಸಲಿದೆ ಎಂಬುದೇ ಇದೀಗ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್:
ಟೀಮ್ ಇಂಡಿಯಾ- ರೋಹಿತ್ ಶರ್ಮಾ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ರಿಷಭ್ ಪಂತ್, ರವೀಂದ್ರ ಜಡೇಜಾ, ಇಶಾಂತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್
ಇಂಗ್ಲೆಂಡ್ – ರೋರಿ ಬರ್ನ್ಸ್, ಡೊಮ್ ಸಿಬ್ಲಿ, ಹಸೀಬ್ ಹಮೀದ್, ಜೋ ರೂಟ್, ಜಾನಿ ಬೈರ್‌ಸ್ಟೊ, ಜೋಸ್ ಬಟ್ಲರ್, ಮೊಯೀನ್ ಅಲಿ, ಸ್ಯಾಮ್ ಕರನ್, ಓಲಿ ರಾಬಿನ್ಸನ್, ಮಾರ್ಕ್ ವುಡ್, ಜೇಮ್ಸ್ ಅಂಡರ್ಸನ್
ಇದನ್ನೂ ಓದಿ: Health Tips : ಇದು ನಿಮಗೆ ಗೊತ್ತೇ? ಬೆಳ್ಳುಳ್ಳಿ ಸಿಪ್ಪೆಯಿಂದ ಸಿಗುತ್ತೆ ಹಲವು ಪ್ರಯೋಜನಗಳು
ಇದನ್ನೂ ಓದಿ: Toyota Cars: ಜೋಳ ನೀಡಿ ಟೊಯೋಟಾ ಕಾರು ಖರೀದಿಸುವ ಅವಕಾಶ
(The reasons why Joe Root chose to bowl first at lords)