ಭಾರೀ ಕುತೂಹಲ ಕೆರಳಿಸಿರುವ ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಣ ನಾಲ್ಕನೇ ಟೆಸ್ಟ್ ಪಂದ್ಯ ಇಂದಿನಿಂದ ಆರಂಭವಾಗಲಿದೆ. ಲಂಡನ್ನ ಕೆನ್ನಿಂಗ್ಟನ್ ಓವಲ್ ಮೈದಾನ ರೋಚಕ ಪಂದ್ಯಕ್ಕೆ ತಯಾರಾಗಿದ್ದು, ಉಭಯ ತಂಡದ ಆಟಗಾರರು ಭರ್ಜರಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಭಾರತದ ಕಾಲಮಾನದ ಪ್ರಕಾರ ಪಂದ್ಯ ಮಧ್ಯಾಹ್ನ 3:30ಕ್ಕೆ ಆರಂಭವಾಗಲಿದೆ. ಟೀಮ್ ಇಂಡಿಯಾ (Team India) ನಾಲ್ಕನೇ ಟೆಸ್ಟ್ಗೆ ಕೆಲವು ಬದಲಾವಣೆಯೊಂದಿಗೆ ಕಣಕ್ಕಿಳಿಯುವುದು ಖಚಿತವಾಗಿದೆ. ಹಾಗಾದ್ರೆ ಕೊಹ್ಲಿ ಪಡೆಯ ಪ್ಲೇಯಿಂಗ್ XI (India Playing XI) ಹೇಗಿರಲಿದೆ ಎಂಬುದನ್ನು ನೋಡೋಣ.
ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಭಾರತದಲ್ಲಿ ಮೂರು ಬದಲಾವಣೆ ಖಚಿತ ಎಂದೇ ಹೇಳಬಹುದು. ಟೀಮ್ ಇಂಡಿಯಾ ಪರ ಓಪನರ್ಗಳಾಗಿ ರೋಹಿತ್ ಶರ್ಮಾ ಹಾಗೂ ಕೆ. ಎಲ್ ರಾಹುಲ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಮೂರನೇ ಸ್ಥಾನದಲ್ಲಿ ಚೇತೇಶ್ವರ್ ಪೂಜಾರ ಆಡಲಿದ್ದಾರೆ. ಕಳೆದ ಟೆಸ್ಟ್‌ನಲ್ಲಿ ಶತಕ ವಂಚಿತರಾದ ಟೆಸ್ಟ್ ಸ್ಪೆಷಲಿಸ್ಟ್ ಫಾರ್ಮ್ ಕಂಡುಕೊಂಡಿದ್ದು ತಂಡಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ನಾಯಕ ವಿರಾಟ್ ಕೊಹ್ಲಿ ನಾಲ್ಕನೇ ಕ್ರಮಾಂಕದಲ್ಲಿ ಆಡಲಿದ್ದಾರೆ.
ಇತ್ತ 5ನೇ ಸ್ಥಾನಕ್ಕೆ ತಂಡದಲ್ಲಿ ಬದಲಾವಣೆ ನಿರೀಕ್ಷಿಸಲಾಗಿದೆ. ಸತತ ವೈಫಲ್ಯ ಅನಭವಿಸುತ್ತಿರುವ ಉಪ ನಾಯಕ ಅಜಿಂಕ್ಯ ರಹಾನೆ ಅವರ ಬದಲು ಹನುಮ ವಿಹಾರಿ ಕಾಣಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಉಪ ನಾಯಕನ ಪಟ್ಟ ರೋಹಿತ್ ಶರ್ಮಾ ಹೆಗಲಮೇಲೇರಲಿದೆ. ಆಸ್ಟ್ರೇಲಿಯಾ ವಿರುದ್ಧ ಮೆಲ್ಬೋರ್ನ್ ಟೆಸ್ಟ್‌ನಲ್ಲಿ ಶತಕ ಸಿಡಿಸಿದ್ದ ಬಳಿಕ ರಹಾನೆ ರನ್ ಗಳಿಸುವಲ್ಲಿ ಪರದಾಡುತ್ತಿದ್ದಾರೆ. ಈ ಕಾರಣದಿಂದಾಗಿ ಅವರು ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದ್ದಾರೆ.
ವಿಹಾರಿ ಕಳೆದ ಬಾರಿ ಇಂಗ್ಲೆಂಡ್‌ನಲ್ಲಿ ಒಂದೇ ಒಂದು ಟೆಸ್ಟ್ ಪಂದ್ಯವಾಡಿದ್ದರು ಹಾಗೂ ಎರಡೂ ಇನಿಂಗ್ಸ್‌ಗಳಿಂದ 56 ರನ್ ಗಳಿಸಿದ್ದರು. ಇದರ ಹೊರತಾಗಿಯೂ ಅವರು ಆಸ್ಟ್ರೇಲಿಯಾ ವಿರುದ್ಧ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ತೋರಿದ್ದರು. ಬ್ಯಾಟಿಂಗ್ ಜೊತೆಗೆ ಬೌಲಿಂಗ್ನಲ್ಲೂ ಸಹಕಾರ ನೀಡಲಿರುವ ವಿಹಾರಿಗೆ ನಾಲ್ಕನೇ ಟೆಸ್ಟ್‌ನಲ್ಲಿ ಅವಕಾಶ ಸಿಗುವ ಸಾಧ್ಯತೆಯಿದೆ.
ಬ್ಯಾಟಿಂಗ್ನಲ್ಲಿ ರಿಷಭ್ ಪಂತ್ ಅಷ್ಟೇನು ಉತ್ತಮ ಪ್ರದರ್ಶನ ನೀಡುತ್ತಿಲ್ಲವಾದರೂ ವಿಕೆಟ್ ಹಿಂಭಾಗದಲ್ಲಿ ತಂಡಕ್ಕೆ ನೆರವಾಗುತ್ತಿದ್ದಾರೆ. ಅಲ್ಲದೆ ಯಾವುದೇ ಸಂದರ್ಭದಲ್ಲಿ ಅಬ್ಬರಿಸುವ ಸಾಮರ್ಥ್ಯ ಇವರಲ್ಲಿದೆ. ಹೀಗಾಗಿ 6ನೇ ಕ್ರಮಾಂಕದಲ್ಲಿ ಪಂತ್ ಸ್ಥಾನ ಭದ್ರವಾಗಿದೆ. ಏಳನೇ ಕ್ರಮಾಂಕಕ್ಕೆ ರವಿಚಂದ್ರನ್ ಅಶ್ವಿನ್ ಸ್ಥಾನ ಪಡೆಯುವುದು ಬಹುತೇಕ ಖಚಿತವಾಗಿದೆ. ರವಿಂದ್ರ ಜಡೇಜಾ ಇಂಜುರಿಯಿಂದ ಗುಣಮುಖರಾಗಿದ್ದಾರೆ ಆದರೂ ಅವರಿಗೆ ವಿಶ್ರಾಂತಿ ನೀಡಿ ಅಶ್ವಿನ್ರನ್ನು ಆಡಿಸುವುದು ಅನಿವಾರ್ಯವಾಗಿದೆ.
ವಿಕೆಟ್ ಕೀಳಲು ಪರದಾಡುತ್ತಿರುವ ಇಶಾಂತ್ ಶರ್ಮಾ ಔಟ್ ಆಫ್ ಫಾರ್ಮ್ನಲ್ಲಿದ್ದಾರೆ. ಹೀಗಾಗಿ ಶಾರ್ದುಲ್ ಠಾಕೂರ್ಗೆ ಅವಕಾಶ ಸಿಗಬಹುದು. ಸರಣಿಯ ಆರಂಭಿಕ ಪಂದ್ಯದಲ್ಲಿ ನಾಲ್ಕು ವಿಕೆಟ್ ಪಡೆದುಕೊಂಡಿದ್ದ ಠಾಕೂರ್ ಗಾಯದಿಂದಾಗಿ ಎರಡನೇ ಹಾಗೂ ಮೂರನೇ ಪಂದ್ಯಕ್ಕೆ ಅಲಭ್ಯರಾಗಿದ್ದರು. ಇದೀಗ ಅವರು ಸಂಪೂರ್ಣ ಫಿಟ್ ಆಗಿದ್ದು, ಓವಲ್ ಟೆಸ್ಟ್‌ನ ಭಾರತ ತಂಡದ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಜೊತೆಗೆ ಠಾಕೂರ್ ಬ್ಯಾಟಿಂಗ್ನಲ್ಲೂ ಟೆಕ್ನಿಕ್ ಹೊಂದಿದ್ದಾರೆ. ಉಳಿದಂತೆ ವೇಗಿಗಳಾದ ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಸ್ಥಾನ ಭದ್ರವಾಗಿದೆ.
(India vs England 4th Test Main Three changes India can make in playing XI Ashwin Thakuar likely to be included)