IND vs ENG: ಟೆಸ್ಟ್‌ನಲ್ಲಿ ಏಕದಿನ ಪಂದ್ಯವನ್ನಾಡಿದ ಜೇಮೀ ಸ್ಮಿತ್; ದಾಖಲೆಯ ಶತಕ ಬಾರಿಸಿದ ವಿಕೆಟ್​ಕೀಪರ್

Jamie Smith's Record-Breaking Century: ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಭಾರತ-ಇಂಗ್ಲೆಂಡ್ ಟೆಸ್ಟ್ ಪಂದ್ಯದಲ್ಲಿ ಜೇಮಿ ಸ್ಮಿತ್ ಅವರ ಅದ್ಭುತ ಬ್ಯಾಟಿಂಗ್ ಎಲ್ಲರ ಗಮನ ಸೆಳೆಯಿತು. 80 ಎಸೆತಗಳಲ್ಲಿ ಶತಕ ಸಿಡಿಸಿದ ಸ್ಮಿತ್, ಭಾರತದ ವಿರುದ್ಧ ಒಂದೇ ಸೆಷನ್‌ನಲ್ಲಿ ಶತಕ ಸಿಡಿಸಿದ ಮೊದಲ ಇಂಗ್ಲೆಂಡ್ ಆಟಗಾರ ಎನಿಸಿಕೊಂಡರು. ಇಂಗ್ಲೆಂಡ್ ತಂಡವು ಕಷ್ಟದ ಸ್ಥಿತಿಯಲ್ಲಿದ್ದಾಗ ಕ್ರೀಸ್‌ಗೆ ಬಂದ ಸ್ಮಿತ್, ತಮ್ಮ ವೇಗದ ಶತಕದಿಂದ ತಂಡದ ಇನ್ನಿಂಗ್ಸ್ ನಿಭಾಯಿಸಿದರು.

IND vs ENG: ಟೆಸ್ಟ್‌ನಲ್ಲಿ ಏಕದಿನ ಪಂದ್ಯವನ್ನಾಡಿದ ಜೇಮೀ ಸ್ಮಿತ್; ದಾಖಲೆಯ ಶತಕ ಬಾರಿಸಿದ ವಿಕೆಟ್​ಕೀಪರ್
Jamie Smith

Updated on: Jul 04, 2025 | 6:45 PM

ಎಡ್ಜ್‌ಬಾಸ್ಟನ್ ಟೆಸ್ಟ್‌ನಲ್ಲಿ ಟೀಂ ಇಂಡಿಯಾವನ್ನು (Team India) ಮೊದಲ ಇನ್ನಿಂಗ್ಸ್‌ನಲ್ಲಿ 587 ರನ್​ಗಳಿಗೆ ಆಲೌಟ್ ಮಾಡಿದ್ದ ಆತಿಥೇಯ ಇಂಗ್ಲೆಂಡ್‌ ಕೂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದೆ. ಅದರಲ್ಲೂ ತಂಡ 84 ರನ್​ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದಾಗ ಬ್ಯಾಟಿಂಗ್​ಗೆ ಬಂದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜೇಮೀ ಸ್ಮಿತ್ (Jamie Smith) ದಾಖಲೆಯ ಶತಕ ಸಿಡಿಸಿ ಮಿಂಚಿದ್ದಾರೆ. ಈ ಬಲಗೈ ಬ್ಯಾಟ್ಸ್‌ಮನ್ ಕೇವಲ 80 ಎಸೆತಗಳಲ್ಲಿ 14 ಬೌಂಡರಿ ಹಾಗೂ 3 ಸಿಕ್ಸರ್​ಗಳ ಸಹಾಯದಿಂದ ತಮ್ಮ ಟೆಸ್ಟ್ ವೃತ್ತಿಜೀವನದ ಎರಡನೇ ಶತಕ ದಾಖಲಿಸಿದರು. ಶತಕದ ಜೊತೆಗೆ ತಮ್ಮ ಹೆಸರಿನಲ್ಲಿ ಒಂದು ದೊಡ್ಡ ದಾಖಲೆಯನ್ನು ನಿರ್ಮಿಸಿದರು.

ಜೇಮೀ ಸ್ಮಿತ್ ದಾಖಲೆ

ಜೇಮೀ ಸ್ಮಿತ್ ಕೇವಲ 80 ಎಸೆತಗಳಲ್ಲಿ ಶತಕ ಬಾರಿಸುವ ಮೂಲಕ ಇಂಗ್ಲೆಂಡ್‌ ಪರ ವೇಗದ ಟೆಸ್ಟ್ ಶತಕ ಸಿಡಿಸಿದ ನಾಲ್ಕನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಅಲ್ಲದೆ ಒಂದೇ ಸೆಷನ್​ನಲ್ಲಿ ಭಾರತದ ವಿರುದ್ಧ ಶತಕ ಸಿಡಿಸಿದ ಮೊದಲ ಇಂಗ್ಲೆಂಡ್ ಆಟಗಾರ ಎಂಬ ದಾಖಲೆಯೂ ಸ್ಮಿತ್ ಪಾಲಾಗಿದೆ. ಇದಕ್ಕೂ ಮೊದಲು, ಈ ಸಾಧನೆಯನ್ನು ಎಬಿ ಡಿವಿಲಿಯರ್ಸ್ 10 ವರ್ಷಗಳ ಹಿಂದೆ ಮಾಡಿದ್ದರು.

ಜೇಮೀ ಸ್ಮಿತ್ ಕ್ರೀಸ್‌ಗೆ ಬಂದಾಗ ಇಂಗ್ಲೆಂಡ್ ದೊಡ್ಡ ಸಂಕಷ್ಟದಲ್ಲಿ ಸಿಲುಕಿತ್ತು. ಮೊಹಮ್ಮದ್ ಸಿರಾಜ್ ಸತತ ಎರಡು ಎಸೆತಗಳಲ್ಲಿ ಜೋ ರೂಟ್ ಮತ್ತು ಬೆನ್ ಸ್ಟೋಕ್ಸ್ ಅವರನ್ನು ಔಟ್ ಮಾಡುವ ಮೂಲಕ ಇಂಗ್ಲೆಂಡ್ ತಂಡವನ್ನು ಬ್ಯಾಕ್‌ಫೂಟ್‌ಗೆ ತಳ್ಳಿದ್ದರು. ಆದರೆ ಇದಾದ ನಂತರ ಸ್ಮಿತ್ ಕ್ರೀಸ್‌ಗೆ ಬಂದು ಇಡೀ ವಾತಾವರಣವನ್ನೇ ಬದಲಾಯಿಸಿದರು. ಸ್ಮಿತ್ ಬಂದ ತಕ್ಷಣ, ಪ್ರಸಿದ್ಧ್ ಕೃಷ್ಣ ಮತ್ತು ಜಡೇಜಾ ಮೇಲೆ ದಾಳಿ ಮಾಡಿದರು. ವಿಶೇಷವಾಗಿ ಸ್ಮಿತ್, ಪ್ರಸಿದ್ಧ್ ಕೃಷ್ಣ ಬೌಲ್ ಮಾಡಿದ ಒಂದು ಓವರ್‌ನಲ್ಲಿ 23 ರನ್ ಕಲೆಹಾಕಿದರು. ಈ ಮೂಲಕ ಕೇವಲ 43 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅದಾದ ಬಳಿಕ ಊಟದ ವಿರಾಮಕ್ಕೆ ಸ್ವಲ್ಪ ಮೊದಲು ತಮ್ಮ ಶತಕವನ್ನು ಪೂರೈಸಿದರು.

IND vs ENG: ಕ್ಯಾಚ್ ಬಿಟ್ಟ ಶುಭ್​ಮನ್ ಗಿಲ್ ಹಣೆಗೆ ಬಡಿದ ಚೆಂಡು; ತಪ್ಪಿದ ಅನಾಹುತ

ಸ್ಮಿತ್-ಬ್ರೂಕ್ ಜೊತೆಯಾಟ

ಸ್ಮಿತ್ ಮತ್ತು ಬ್ರೂಕ್ ಜೊತೆಯಾಗಿ ಒಂದು ಸೆಷನ್​ನಲ್ಲಿ ಬರೋಬ್ಬರಿ 172 ರನ್ ಸೇರಿಸಿದರು. ಆದಾಗ್ಯೂ ಈ ಸೆಷನ್​ನಲ್ಲಿ ಬ್ರೂಕ್ ಮತ್ತು ಜೇಮಿ ಸ್ಮಿತ್ ಅವರ ಪಾಲುದಾರಿಕೆಯನ್ನು ಮುರಿಯಲು ಎರಡು ಅವಕಾಶ ಸಿಕ್ಕಿದವು. ಆದರೆ ನಾಯಕ ಗಿಲ್ ಜಡೇಜಾ ಅವರ ಬೌಲಿಂಗ್​ನಲ್ಲಿ ಬ್ರೂಕ್ ಅವರ ಕ್ಯಾಚ್ ಅನ್ನು ಕೈಬಿಟ್ಟರು. ಇತ್ತ ವಾಷಿಂಗ್ಟನ್ ಸುಂದರ್, ಸ್ಮಿತ್ ಅವರ ಕ್ಯಾಚ್ ಅನ್ನು ತಮ್ಮದೇ ಬೌಲಿಂಗ್‌ನಲ್ಲಿ ಕೈಬಿಟ್ಟರು. ಕ್ಯಾಚ್‌ಗಳನ್ನು ತೆಗೆದುಕೊಂಡಿದ್ದರೆ, ಎಡ್ಜ್‌ಬಾಸ್ಟನ್ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಪ್ರಾಬಲ್ಯ ಸಾಧಿಸುತ್ತಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ