ಏಷ್ಯಾಕಪ್ 2023ರ ಟೂರ್ನಿಯಲ್ಲಿಂದು ಮಹತ್ವದ ಪಂದ್ಯ ನಡೆಯಲಿದೆ. ಪಲ್ಲಕೆಲೆ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಐದನೇ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವ ಭಾರತ ರೋಹಿತ್ ಪೌಡೆಲ್ ನೇತೃತ್ವದ ನೇಪಾಳ (India vs Nepal) ತಂಡವನ್ನು ಎದುರಿಸಲಿದೆ. ವಿಶೇಷ ಎಂದರೆ ಉಭಯ ತಂಡಗಳಿಗೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಅಲ್ಲದೆ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಇಂಡೋ-ನೇಪಾಳ್ ಮುಖಾಮುಖಿ ಆಗುತ್ತಿರುವುದು ಇದೇ ಮೊದಲ ಬಾರಿ. ಪಾಕ್ ವಿರುದ್ಧದ ಪಂದ್ಯ ರದ್ದಾದ ಪರಿಣಾಮ ಇಂದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲ್ಲಲೇ ಬೇಕಿದೆ. ಅತ್ತ ನೇಪಾಳ ಕೂಡ ಪಾಕ್ ವಿರುದ್ಧ ಸೋತಿತ್ತು. ಹೀಗಾಗಿ ಇಂದಿನ ಪಂದ್ಯದಲ್ಲಿ ಗೆದ್ದ ತಂಡ ಸೂಪರ್-4 ಹಂತಕ್ಕೆ ತೇರ್ಗಡೆಯಾದರೆ, ಸೋತ ತಂಡ ಟೂರ್ನಿಯಿಂದ ಹೊರಬೀಳಲಿದೆ.
ಭಾರತ ತಂಡಕ್ಕೆ ಅಗ್ರಕ್ರಮಾಂಕದ್ದೇ ಚಿಂತೆ. ನಾಯಕ ರೋಹಿತ್ ಶರ್ಮಾ ಹಾಗೂ ಶುಭ್ಮನ್ ಗಿಲ್ ಉತ್ತಮ ಆರಂಭ ಒದಗಿಸುತ್ತಿಲ್ಲ. ವಿರಾಟ್ ಕೊಹ್ಲಿ ಮತ್ತೆ ಫಾರ್ಮ್ ಕಳೆದುಕೊಂಡಂತೆ ಕಾಣಿಸುತ್ತಿದೆ. ನಾಲ್ಕನೇ ಕ್ರಮಾಂಕಕ್ಕೆ ಬಂದ ಶ್ರೇಯಸ್ ಅಯ್ಯರ್ ಮೋಡಿ ಮಾಡುವಲ್ಲಿ ವಿಫಲರಾಗಿದ್ದಾರೆ. ಹೀಗೆ ಟೀಮ್ ಇಂಡಿಯಾ ಬ್ಯಾಟಿಂಗ್ನಲ್ಲಿ ಸಾಕಷ್ಟು ತೊಂದರೆಗಳಿವೆ. ಇವುಗಳನ್ನೆಲ್ಲ ಸರಿಪಡಿಸಿ ಇಂದು ಕಣಕ್ಕಿಳಿಯಬೇಕಿದೆ. ಇಶಾನ್ ಕಿಶನ್ ಹಾಗೂ ಹಾರ್ದಿಕ್ ಪಾಂಡ್ಯ ಮೇಲೆ ನಿರೀಕ್ಷೆ ಹೆಚ್ಚಿದೆ.
ಕಳೆದ ಪಂದ್ಯದಲ್ಲಿ ಭಾರತಕ್ಕೆ ಬೌಲಿಂಗ್ ಮಾಡಲು ಅವಕಾಶ ಸಿಗಲಿಲ್ಲ. ಆದರೆ, ಶಾರ್ದೂಲ್ ಥಾಕೂರ್ ಬ್ಯಾಟಿಂಗ್ನಲ್ಲಿ ವೈಫಲ್ಯ ಅನುಭವಿಸಿದ್ದರು. ಹೀಗಾಗಿ ಇವರ ಜಾಗಕ್ಕೆ ಮೊಹಮ್ಮದ್ ಶಮಿ ಬರುವ ಸಂಭವವಿದೆ. ಅಲ್ಲದೆ ವೈಯಕ್ತಿಕ ಕಾರಣದಿಂದ ಜಸ್ಪ್ರಿತ್ ಬುಮ್ರಾ ತವರಿಗೆ ಮರಳಿದ್ದಾರೆ ಎನ್ನಲಾಗಿದ್ದು, ಇಂದಿನ ಪಂದ್ಯಕ್ಕೆ ಅಲಭ್ಯರಾಗಲಿದ್ದಾರಂತೆ.
Tata Steel Chess: ಟಾಟಾ ಸ್ಟೀಲ್ ಚೆಸ್ ಸ್ಪರ್ಧೆಯಲ್ಲಿ ದಿವ್ಯಾ ದೇಶಮುಖ್ ಕ್ವೀನ್
ನೇಪಾಳ ತಂಡ ಪಾಕ್ ವಿರುದ್ಧದ ಉದ್ಘಾಟನಾ ಪಂದ್ಯದಲ್ಲಿ ಹೀನಾಯ ಪ್ರದರ್ಶನ ತೋರಿತ್ತು. ಕೇವಲ 104 ರನ್ಗಳಿಗೆ ಆಲೌಟ್ ಆಗಿತ್ತು. ಬೌಲಿಂಗ್ನಲ್ಲಿ ಕೂಡ ರೋಹಿತ್ ಪಡೆ ಯಶಸ್ಸು ಸಾಧಿಸಲಿಲ್ಲ. ಸ್ವತಃ ನಾಯಕನೇ ಸೊನ್ನೆ ಸುತ್ತಿದ್ದರು. ಹಿಂದಿನ ತಪ್ಪುಗಳನ್ನು ಸರಿಪಡಿಸಿ ನೇಪಾಳ ಇಂದು ಕಣಕ್ಕಿಳಿಯಬೇಕಿದೆ. ಬೌಲಿಂಗ್ನಲ್ಲೂ ಬಲಿಷ್ಠವಾಗಬೇಕು. ತಂಡದ ಪ್ಲೇಯಿಂಗ್ ಇಲೆವೆನ್ನಲ್ಲಿ ಬದಲಾವಣೆ ನಿರೀಕ್ಷಿಸಲಾಗಿದೆ.
ಇದು ನಿಧಾನಗತಿಯ ಪಿಚ್ ಆಗಿರುವುದರಿಂದ ಬ್ಯಾಟ್ಸ್ಮನ್ಗಳು ರನ್ ಕದಿಯಲು ಪರದಾಡುವುದು ಖಚಿತ. ಇದು ಕಳೆದ ಪಂದ್ಯದಲ್ಲಿ ಕೂಡ ಕಂಡುಬಂತು. ಇಲ್ಲಿ ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡುವುದು ಉತ್ತಮ. ಈ ಮೈದಾನದಲ್ಲಿ ರನ್ ಚೇಸ್ನ ದಾಖಲೆಯು ಅತ್ಯುತ್ತಮವಾಗಿದೆ. ಅಂಕಿಅಂಶಗಳ ಪ್ರಕಾರ, ಮೊದಲು ಬ್ಯಾಟಿಂಗ್ ಮಾಡಿದ ತಂಡವು 34 ಪಂದ್ಯಗಳಲ್ಲಿ 14 ರಲ್ಲಿ ಮಾತ್ರ ಗೆದ್ದಿದ್ದರೆ, 19 ಪಂದ್ಯಗಳಲ್ಲಿ ಮೊದಲು ಫೀಲ್ಡಿಂಗ್ ಮಾಡಿದ ತಂಡ ಗೆಲುವು ಸಾಧಿಸಿದೆ. ಇಲ್ಲಿ ವೇಗಿಗಳಿಗಿಂತ ಸ್ಪಿನ್ನರ್ಗಳೇ ಹೆಚ್ಚು ಮಿಂಚಿದ್ದಾರೆ. ಆದರೆ, ಭಾರತ ವಿರುದ್ಧದ ಪಂದ್ಯದಲ್ಲಿ ಪಾಖ್ ವೇಗಿಗಳು ಯಶಸ್ಸು ಸಾಧಿಸಿದ್ದರು.
ಭಾರತ-ನೇಪಾಳ ಪಂದ್ಯಕ್ಕೂ ವರುಣನ ಕಾಟ ಇರಲಿದೆ ಎಂದು ಹೇಳಲಾಗಿದೆ. ಪಂದ್ಯ ನಡೆಯುವ ಸಂದರ್ಭ ಶೇ. 76 ರಷ್ಟು ಮಳೆಯಾಗುವ ಸಾಧ್ಯತೆ ಇದೆಯಂತೆ. ಟಾಸ್ ಸಮಯದಲ್ಲಿ (ಮಧ್ಯಾಹ್ನ2:30) ಮಳೆಯಾಗುವ ಸಾಧ್ಯತೆ ತೀರ ಕಡಿಮೆ ಇದ್ದು, ಈ ಸಮಯದಲ್ಲಿ ಶೇಕಡ 22ರಷ್ಟು ಮಳೆಯಾಗಲಿದೆ. ಪಂದ್ಯದ ದ್ವಿತೀಯಾರ್ಧದಲ್ಲಿ ಅಂದರೆ ಸಂಜೆಯಾಗುವ ವೇಳೆಗೆ ಮಳೆಯಾಗುವ ಸಾಧ್ಯತೆ ಶೇಕಡ 66 ರಷ್ಟು ಹೆಚ್ಚಾಗಲಿದೆ. ಹೀಗಾಗಿ ಈ ಪಂದ್ಯವೂ ನಡೆಯುವುದು ಅನುಮಾನವಾಗಿದೆ. ಒಂದು ವೇಳೆ ಪಂದ್ಯ ರದ್ದಾದರೆ ಭಾರತಕ್ಕೆ ಒಂದು ಅಂಕ ಸಿಗಲಿದ್ದು, 2 ಪಾಯಿಂಟ್ನೊಂದಿಗೆ ಸೂಪರ್-4 ಹಂತಕ್ಕೆ ತಲುಪಲಿದೆ.
ಭಾರತ ಮತ್ತು ನೇಪಾಳ ನಡುವಿನ ಪಂದ್ಯ ಮಧ್ಯಾಹ್ನ 3 ಗಂಟೆಗೆ ಆರಂಭವಾಗಲಿದೆ. ಪಂದ್ಯಕ್ಕೆ ಅರ್ಧಗಂಟೆ ಮೊದಲು ಟಾಸ್ ನಡೆಯಲಿದೆ. ಪಂದ್ಯದ ಲೈವ್ ಸ್ಟ್ರೀಮಿಂಗ್ ಅನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೋಡಬಹುದು (ಸ್ಟಾರ್ ಸ್ಪೋರ್ಟ್ಸ್ 1, ಸ್ಟಾರ್ ಸ್ಪೋರ್ಟ್ಸ್ 3 ಮತ್ತು ಸ್ಟಾರ್ ಸ್ಪೋರ್ಟ್ಸ್ ಸೆಲೆಕ್ಟ್ ಎಚ್‌ಡಿ). ಇದಲ್ಲದೆ, ಇದನ್ನು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಅಪ್ಲಿಕೇಶನ್‌ನ ಮೊಬೈಲ್‌ನಲ್ಲಿಯೂ ಉಚಿತವಾಗಿ ವೀಕ್ಷಿಸಬಹುದು.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಶುಭ್ಮನ್ ಗಿಲ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ (ಉಪ ನಾಯಕ), ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್, ಪ್ರಸಿದ್ಧ್ ಕೃಷ್ಣ, ಸಂಜು ಸ್ಯಾಮ್ಸನ್ (ಮೀಸಲು ಆಟಗಾರ).
ನೇಪಾಳ ತಂಡ: ರೋಹಿತ್ ಪೌಡೆಲ್ (ನಾಯಕ), ಆಸಿಫ್ ಶೇಖ್, ಕುಶಾಲ್ ಭುರ್ಟೆಲ್, ಲಲಿತ್ ರಾಜಬಂಶಿ, ಭೀಮ್ ಸರ್ಕಿ, ಕುಶಾಲ್ ಮಲ್ಲಾ, ದೀಪೇಂದ್ರ ಸಿಂಗ್ ಐರಿ, ಸಂದೀಪ್ ಲಮಿಚಾನೆ, ಕರಣ್ ಕೆಸಿ, ಗುಲ್ಶನ್ ಝಾ, ಸೋಂಪಾಲ್, ಆರಿಫ್ ಶೇಖ್, ಪ್ರತಿಸ್ ಜಿಸಿ, ಕಿಶೋರ್ ಮಹತೋ, ಅರ್ಜುನ್, ಸಂದೀಪ್ ಜೋರಾ, ಸೌದ್ ಮತ್ತು ಶ್ಯಾಮ್ ಧಾಕಲ್.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ