ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ (ICC World Cup) ಅಕ್ಟೋಬರ್ 5 ರಂದು ಚಾಲನೆ ಸಿಗಲಿದೆ. ಇದಕ್ಕೂ ಮುನ್ನ ಎಲ್ಲ ತಂಡಗಳು ಅಭ್ಯಾಸ ಪಂದ್ಯ ಆಡುತ್ತಿದೆ. ಭಾರತ ತನ್ನ ಎರಡನೇ ಹಾಗೂ ಕೊನೆಯ ವಾರ್ಮ್-ಅಪ್ ಮ್ಯಾಚ್ ಅನ್ನು ಇಂದು (ಅ. 3) ನೆದರ್ಲೆಂಡ್ಸ್ ವಿರುದ್ಧ ತಿರುವನಂತಪುರಂನ ಗ್ರೀನ್ ಫೀಲ್ಡ್ ಕ್ರೀಡಾಂಗಣದಲ್ಲಿ ಆಡಲಿದೆ. ಈಗಾಗಲೇ ಟೀಮ್ ಇಂಡಿಯಾ ತಿರುವನಂತಪುರಂಗೆ ತಲುಪಿದ್ದು ವಿಶೇಷ ರೀತಿಯಲ್ಲಿ ಆಟಗಾರರು ಅಭ್ಯಾಸ ನಡೆಸುತ್ತಿದ್ದಾರೆ.
ರೋಹಿತ್ ಶರ್ಮಾ, ಕೋಚ್ ದ್ರಾವಿಡ್, ಹಾರ್ದಿಕ್ ಪಾಂಡ್ಯ ಸೇರಿದಂತೆ ವಿಶ್ವಕಪ್ ತಂಡದಲ್ಲಿರುವ ಎಲ್ಲ ಆಟಗಾರರು ಭಾನುವಾರ (ಅಕ್ಟೋಬರ್ 1) ತಿರುವನಂತಪುರಕ್ಕೆ ತಲುಪಿದ್ದರು. ಸೋಮವಾರ ಆಟಗಾರರು ಮೈದಾನದಲ್ಲಿ ಬೆವರು ಹರಿಸಿದರು. ಅಭ್ಯಾಸಕ್ಕೆ ಕೊಂಚ ಮಳೆ ಕೂಡ ಅಡ್ಡಿಪಡಿಸಿತು. ಆದರೆ, ಭಾರತ ತಂಡದ ಬ್ಯಾಟಿಂಗ್ ಸೂಪರ್‌ಸ್ಟಾರ್ ವಿರಾಟ್ ಕೊಹ್ಲಿ ಭಾಗವಾಗಿರಲಿಲ್ಲ. ಕೌಟುಂಬಿಕ ತುರ್ತುಪರಿಸ್ಥಿತಿಯಿಂದಾಗಿ ಕೊಹ್ಲಿ ಮುಂಬೈನಲ್ಲಿದ್ದು, ಇಂದಿನ ಅಭ್ಯಾಸ ಪಂದ್ಯ ಆಡುತ್ತಾರ ಎಂಬುದು ಖಚಿತವಾಗಿಲ್ಲ.
ಒಂದಲ್ಲ, ಎರಡಲ್ಲ…ಬಾಬರ್ ಬ್ಯಾಟ್ನಿಂದ 4 ಶತಕಗಳು ಖಚಿತ ಎಂದ ಗಂಭೀರ್
ಇತ್ತ ನೆದರ್ಲೆಂಡ್ಸ್ ತಂಡ ದುರ್ಬಲ ಎಂದು ಹೇಳಲು ಸಾಧ್ಯವಿಲ್ಲ. ಯಾಕೆಂದರೆ, ತನ್ನ ಮೊದಲ ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಬೌಲಿಂಗ್ನಲ್ಲಿ ಉತ್ತಮ ಪ್ರದರ್ಶನ ತೋರಿತ್ತು. ಬ್ಯಾಟಿಂಗ್ನಲ್ಲಿ ಸಾಧಾರಣವಾಗಿ ಆಟವಾಡಿತ್ತಷ್ಟೆ. ಆದರೆ, ಆಸೀಸ್-ನೆದರ್ಲೆಂಡ್ಸ್ ಪಂದ್ಯ ಮಳೆಯಿಂದಾಗಿ ಯಾವುದೇ ಫಲಿತಾಂಶ ಕಾಣದೆ ಕೊನೆಗೊಳಿಸಲಾಗಿತ್ತು.
ಭಾರತ-ನೆದರ್ಲೆಂಡ್ಸ್ ನಡುವಿನ ಅಭ್ಯಾಸ ಪಂದ್ಯವು ಮಧ್ಯಾಹ್ನ 2 ಗಂಟೆಗೆ ಶುರುವಾಗಲಿದೆ. 1:30ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಸ್ಟಾರ್ ಸ್ಪೋರ್ಟ್ಸ್ ಚಾನೆಲ್‌ಗಳಲ್ಲಿ ನೇರ ಪ್ರಸಾರ ವೀಕ್ಷಿಸಬಹುದು. ಹಾಗೆಯೆ ಹಾಟ್‌ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮ್ ಇರಲಿದೆ.
ತಿರುವನಂತಪುರಂನ ಗ್ರೀನ್ ಫೀಲ್ಡ್ ಕ್ರೀಡಾಂಗಣದ ಪಿಚ್ ಬೌಲರ್‌ಗಳಿಗೆ ವಿಶೇಷವಾಗಿ ಸ್ಪಿನ್ನರ್‌ಗಳಿಗೆ ಹಾಗೂ ವೇಗದ ಬೌಲರ್‌ಗಳ ಹೆಚ್ಚು ಸಹಕಾರಿಯಾಗಿದೆ. ಆದಾಗ್ಯೂ, ಪಂದ್ಯದ ಸಮಯದಲ್ಲಿ ಮೋಡ ಕವಿದ ವಾತಾವರಣವು ವೇಗಿಗಳಿಗೆ ಕೊಂಚ ಹೆಚ್ಚು ನೆರವಾಗಲಿದೆ. ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು, ಟಾಸ್-ವಿಜೇತ ನಾಯಕನು ಮೊದಲು ಬ್ಯಾಟಿಂಗ್ ಮಾಡುವ ಸಾಧ್ಯತೆಗಳು ಹೆಚ್ಚಿವೆ.
ಹವಾಮಾನ ವರದಿಯ ಪ್ರಕಾರ ಪಂದ್ಯದ ದಿನದಂದು ತಿರುವನಂತಪುರಂನಲ್ಲಿ 94% ಮಳೆಯಾಗಲಿದೆ. ಆರ್ದ್ರತೆಯ ಮಟ್ಟವು ಸುಮಾರು 94% ಇದ್ದು, ಹೆಚ್ಚು ಗಾಳಿ ಬೀಸಲು ಸಾಧ್ಯತೆಗಳಿಲ್ಲ. ಹೀಗಾಗಿ ಮಳೆಯ ಸಾಧ್ಯತೆಯು ಮತ್ತಷ್ಟು ಹೆಚ್ಚಾಗುತ್ತದೆ ಎಂದು ಹವಾಮಾನ ವರದಿ ತಿಳಿಸಿದೆ. ಪ್ರಸ್ತುತ ತಿರುವನಂತಪುರಂನಲ್ಲಿ ಭಾರಿ ಮಳೆಯಾಗುತ್ತಿದ್ದು, ಇಲ್ಲಿ ನಡೆಯಬೇಕಿದ್ದ ಅಭ್ಯಾಸ ಪಂದ್ಯಗಳಲ್ಲಿ ಭಾಗಶಃ ಮಳೆಗಾಹುತಿಯಾಗಿವೆ. ದಕ್ಷಿಣ ಆಫ್ರಿಕಾ ಮತ್ತು ಅಫ್ಘಾನಿಸ್ತಾನ ನಡುವಿನ ಪಂದ್ಯ ಕೂಡ ಆರಂಭವಾಗದೆ ರದ್ದಾಗಿದ್ದರೆ, ಆಸ್ಟ್ರೇಲಿಯಾ ಮತ್ತು ನೆದರ್ಲೆಂಡ್ಸ್ ನಡುವಿನ ಪಂದ್ಯವೂ ಹಾಗೆಯೇ ರದ್ದಾಯಿತು.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ.
ನೆದರ್ಲೆಂಡ್ಸ್ ತಂಡ: ಸ್ಕಾಟ್ ಎಡ್ವರ್ಡ್ಸ್ (ನಾಯಕ), ವಿಕ್ರಮಜಿತ್ ಸಿಂಗ್, ಮ್ಯಾಕ್ಸ್ ಓಡೌಡ್, ಶರೀಜ್ ಅಹ್ಮದ್, ವೆಸ್ಲಿ ಬ್ಯಾರೆಸಿ, ಆರ್ಯನ್ ದತ್, ರೋಲೋಫ್ ವ್ಯಾನ್ ಡೆರ್ ಮೆರ್ವೆ, ಲೋಗನ್ ವ್ಯಾನ್ ಬೀಕ್, ತೇಜಾ ನಿಡಮನೂರು, ಪಾಲ್ ವ್ಯಾನ್ ಮೀಕೆರೆನ್, ರಿಯಾನ್ ಕ್ಲೈನ್, ಸಿಬ್ರಾಂಡ್, ಬಾಸ್ ಡಿ ಲೀಡೆ, ಎಂಗೆಲ್‌ಬ್ರೆಚ್ಟ್ನ್, ಎಂಗೆಲ್‌ಬ್ರೆಚ್ಟ್ ಸಾಕಿಬ್ ಜುಲ್ಫಿಕರ್.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ