ಕ್ರಿಕೆಟ್ ಅಂಗಳದ ಹೈವೋಲ್ಟೇಜ್ ಕದನಕ್ಕೆ ವೇದಿಕೆ ಸಿದ್ಧವಾಗಿದೆ. ಆದರೆ ಈ ಬಾರಿ ಸಾಂಪ್ರದಾಯಿಕ ಎದುರಾಳಿಗಳು ಮುಖಾಮುಖಿಯಾಗುತ್ತಿರುವುದು ವಿಶ್ವದ ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಂನಲ್ಲಿ ಎಂಬುದೇ ವಿಶೇಷ. ಹೌದು, ಅಕ್ಟೋಬರ್ 14 ರಂದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ವಿಶ್ವಕಪ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ ಮುಖಾಮುಖಿಯಾಗಲಿದೆ.
ಈ ಪಂದ್ಯಕ್ಕೂ ಮುನ್ನ ಮಾಜಿ ಕ್ರಿಕೆಟಿಗರೊಬ್ಬರು ನೀಡಿದ ಹೇಳಿಕೆಯು ಇದೀಗ ಚರ್ಚೆಗೆ ಗ್ರಾಸವಾಗಿದೆ. ಭಾರತದ ವಿರುದ್ಧ ಆಡುವಾಗ ಪಾಕಿಸ್ತಾನ್ ಆಟಗಾರರು ಗಡ ಗಡ ನಡುಗುತ್ತಾರೆ ಎಂಬ ಬಹಿರಂಗ ಹೇಳಿಕೆ ನೀಡಿದ್ದಾರೆ. ಹೀಗೆ ಹೇಳಿರುವುದು ಮತ್ಯಾರೂ ಅಲ್ಲ ಪಾಕಿಸ್ತಾನದ ಮಾಜಿ ಆಟಗಾರ ಎಂಬುದೇ ಇಲ್ಲಿ ವಿಶೇಷ.
ಇಂಡೊ-ಪಾಕ್ ಪಂದ್ಯದ ಬಗ್ಗೆ ಮಾತನಾಡಿದ ಪಾಕಿಸ್ತಾನ್ ತಂಡದ ಮಾಜಿ ವಿಕೆಟ್ ಕೀಪರ್ ಮೊಯೀನ್ ಖಾನ್, ಟೀಮ್ ಇಂಡಿಯಾ ವಿರುದ್ಧ ಆಡುವಾಗ ಪಾಕಿಸ್ತಾನಿ ಕ್ರಿಕೆಟಿಗರು ತುಂಬಾ ಭಯಪಡುತ್ತಾರೆ. ಇದನ್ನು ನಾನು ಹಲವು ಬಾರಿ ನೋಡಿದ್ದೇನೆ ಎಂದಿದ್ದಾರೆ.
ಇದನ್ನು ನಾನು ಸುಮ್ಮನೆ ಹೇಳುತ್ತಿಲ್ಲ. ಇದು ನೂರಕ್ಕೆ ನೂರಷ್ಟು ನಿಜ. ಭಾರತದ ವಿರುದ್ಧದ ಪಂದ್ಯದ ವೇಳೆ ಬಾಬರ್ ಆಝಂಗೆ ಸಲಹೆಗಳನ್ನು ನೀಡಲು ಮೊಹಮ್ಮದ್ ರಿಝ್ವಾನ್, ಶಾಹೀನ್ ಅಫ್ರಿದಿ ಅಥವಾ ಶಾದಾಬ್ ಖಾನ್ ಸೇರಿದಂತೆ ಹಲವರು ಹಿಂಜರಿಯುತ್ತಿದ್ದರು. ಇದಕ್ಕೆ ಕಾರಣ ಅವರೆಲ್ಲರೂ ಭಯಭೀತರಾಗಿದ್ದರು ಎಂದು ಮೊಯೀನ್ ಖಾನ್ ಹೇಳಿದ್ದಾರೆ.
ಏಷ್ಯಾಕಪ್ನಲ್ಲಿನ ಹೀನಾಯ ಸೋಲಿಗೆ ಪಾಕ್ ಆಟಗಾರರ ಈ ಭಯವೇ ಕಾರಣ. ಇದೀಗ ಪಾಕಿಸ್ತಾನ್ ಭಾರತದಲ್ಲೇ ಟೀಮ್ ಇಂಡಿಯಾವನ್ನು ಎದುರಿಸಬೇಕಿದೆ. ಇಲ್ಲೂ ಕೂಡ ಭಯಪಡುತ್ತಾರೆ ಎಂದೆನಿಸುತ್ತದೆ ಎಂದು ಮೊಯೀನ್ ಖಾನ್ ಹೇಳಿದರು.
ತಂಡದಲ್ಲಿರುವ ಆಟಗಾರರು ಎದುರಾಳಿಗಳ ಬಗ್ಗೆ ಭಯಗೊಂಡರೆ, ಅವರು ನೀಡುವ ಸಲಹೆಗಳು ಕೆಲಸ ಮಾಡುವುದಿಲ್ಲ. ನೀವು ಕ್ರಿಕೆಟಿಗರಾಗಿ ನಿಮ್ಮ 100 ಪ್ರತಿಶತವನ್ನು ನೀಡಬೇಕು. ಸಲಹೆಗಳು ಕೆಲವೊಮ್ಮೆ ಕೈಕೊಡುವ ಸಾಧ್ಯತೆಗಳಿರುತ್ತವೆ. ಆದರೆ ನೀವು ಯಾವುದೇ ಭಯವಿಲ್ಲದೆ ಆಡುವ ಮನಸ್ಥಿತಿ ಹೊಂದಿರಬೇಕು ಎಂದು ಪಾಕ್ ತಂಡಕ್ಕೆ ಮೊಯೀನ್ ಖಾನ್ ಸಲಹೆ ನೀಡಿದ್ದಾರೆ.
ಇದೀಗ ಪಾಕಿಸ್ತಾನ್ ತಂಡವನ್ನು ಬಹಿರಂಗವಾಗಿ ಟೀಕಿಸಿರುವ ಮಾಜಿ ಕ್ರಿಕೆಟಿಗನ ಹೇಳಿಕೆಗೆ ಸೋಷಿಯಲ್ ಮೀಡಿಯಾದಲ್ಲಿ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಇತ್ತ ಮೊಯೀನ್ ಖಾನ್ ಮಾತು ನಿಜ, ಇದಕ್ಕೆ ಸಾಕ್ಷಿಯೇ ಏಕದಿನ ವಿಶ್ವಕಪ್ನಲ್ಲಿ ಭಾರತ ಎದುರು ಪಾಕಿಸ್ತಾನ್ ತಂಡ 7 ಬಾರಿ ಸೋತಿರುವುದು ಎಂಬ ವಾದವನ್ನು ಟೀಮ್ ಇಂಡಿಯಾ ಅಭಿಮಾನಿಗಳು ಮುಂದಿಟ್ಟಿದ್ದಾರೆ.
Published On - 11:07 pm, Mon, 2 October 23