ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ನಡುವಣ ಎರಡನೇ ಟೆಸ್ಟ್ ಪಂದ್ಯ ಶುಕ್ರವಾರದಿಂದ ಆರಂಭವಾಗಲಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂ (Wankhede Stadium, Mumbai) ಈ ಕುತೂಹಲಕಾರಿ ಪಂದ್ಯಕ್ಕೆ ವೇದಿಕೆ ಸಜ್ಜು ಮಾಡುತ್ತಿದೆ. ಹೀಗಿರುವಾಗ ದೊಡ್ಡ ಆಘಾತವೊಂದು ಎದುರಾಗಿದೆ. ನ್ಯೂಜಿಲೆಂಡ್ ವಿರುದ್ಧ ತನ್ನ ಅಜೇಯ ಸರಣಿ ಗೆಲುವಿನ ಓಟ ಮುಂದುವರೆಸುವ ಇರಾದೆಯಲ್ಲಿದ್ದ ವಿರಾಟ್ ಕೊಹ್ಲಿ (Virat Kohli) ಪಡೆಗೆ ವರುಣ ವಿಲನ್ ಆಗಿ ಪರಿಣಮಿಸಿದ್ದಾರೆ. ಹೌದು, ಬರೋಬ್ಬರಿ ಐದು ವರ್ಷಗಳ ಬಳಿಕ ಟೆಸ್ಟ್ ಕ್ರಿಕೆಟ್ಗೆ ಮುಂಬೈನ ವಾಂಖೆಡೆ ಕ್ರೀಡಾಂಗಣ ಆತಿಥ್ಯ ವಹಿಸುತ್ತಿದೆ. ಆದರೆ, ಈ ರೋಚಕ ಪಂದ್ಯಕ್ಕೆ ಮಳೆರಾಯ ತಣ್ಣೀರೆರಚುವ ಸಾಧ್ಯತೆ ಇದೆ (Mumbai Rain). ಹವಾಮಾನ ವೈಪರೀತ್ಯ ಕಾರಣ ಎಡೆ ಬಿಡದೇ ಮಳೆ ಸುರಿಯುತ್ತಿರುವ ಕಾರಣ ಟೆಸ್ಟ್ ಪಂದ್ಯದ ಮೊದಲ ಎರಡೂ ದಿನದಾಟ ಅನುಮಾನ ಎಂಬಂತ್ತಾಗಿದೆ. ಹೀಗಾಗಿ ಶುಕ್ರವಾರ ಪಂದ್ಯ ಆರಂಭವಾಗುವುದು ಅನುಮಾನ.
ಬುಧವಾರ ಡಿಸೆಂಬರ್ 1 ರಂದು ದಿನವಿಡೀ ಮಳೆಯಿಂದಾಗಿ ಎರಡೂ ತಂಡಗಳು ತಮ್ಮ ತರಬೇತಿಯನ್ನು ಕೂಡ ರದ್ದುಗೊಳಿಸಬೇಕಾಯಿತು. “ಮಳೆ ಕಾರಣ ಟೀಮ್ ಇಂಡಿಯಾದ ಅಭ್ಯಾಸವನ್ನು ರದ್ದು ಪಡಿಸಲಾಗಿದೆ,” ಎಂದು ಬಿಸಿಸಿಐ ಬುಧವಾರ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಗುರುವಾರ ಕೂಡ ಮಳೆಯಾಗುವ ಮುನ್ಸೂಚನೆ ನೀಡಲಾಗಿದ್ದು, ಔಟ್ ಫೀಲ್ಡ್ ತೇವವಾಗಿರುತ್ತದೆ. ಹೀಗಾಗಿ ಇಂದು ಕೂಡ ಅಭ್ಯಾಸ ನಡೆಸುವುದು ಅನುಮಾನ ಎಂದು ಹೇಳಲಾಗಿದೆ.
ಉತ್ತರ ಗುಜರಾತ್ ವಾಯುವ್ಯ ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಳೆಯಿಂದಾಗಿ ಪಾಲ್ಘರ್, ಥಾಣೆ, ಮುಂಬೈನಲ್ಲಿ ಹೆಚ್ಚು ಹಾನಿಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ. ಹೀಗಾಗಿ ಎರಡನೇ ಟೆಸ್ಟ್ಗೆ ವರುಣನ ಕಾಟ ಇರುವುದು ಖಚಿತ.
ವಾಂಖೆಡೆ ಕ್ರೀಡಾಂಗಣದಲ್ಲಿ ಶುಕ್ರವಾರದಿಂದ ನಡೆಯಲಿರುವ 2ನೇ ಹಾಗೂ ನಿರ್ಣಾಯಕ ಅಂತಿಮ ಟೆಸ್ಟ್ ಪಂದ್ಯಕ್ಕೆ ಸಂಪೂರ್ಣವಾಗಿ ಸ್ಪಿನ್ ಸ್ನೇಹಿಯಾದ ಪಿಚ್ ನಿರ್ಮಾಣಗೊಳ್ಳುವ ನಿರೀಕ್ಷೆ ಇದೆ. ಆದರೆ ಪಿಚ್ ಹಸಿರಾಗಿರಲಿದೆ ಎಂದು ಕೆಲ ವರದಿಗಳು ತಿಳಿಸಿವೆ. ಇದರಿಂದಾಗಿ ವಾಂಖೆಡೆ ಪಿಚ್ ಬಗ್ಗೆ ಹೆಚ್ಚಿನ ಕುತೂಹಲ ಮೂಡಿದೆ. ಮೊದಲ ದಿನದಿಂದಲೇ ಸ್ಪಿನ್ನರ್‌ಗಳಿಗೆ ನೆರವಾಗುವ ಪಿಚ್ ಸಿದ್ಧಗೊಳಿಸಿದ್ದೇವೆ. ಆತಿಥೇಯ ತಂಡದ ಬಲಕ್ಕೆ ತಕ್ಕ ಪಿಚ್ ನಿರ್ಮಿಸಿದ್ದೇವೆ ಎಂದು ಆತಿಥೇಯ ಮುಂಬೈ ಕ್ರಿಕೆಟ್ ಸಂಸ್ಥೆಯ ಮೂಲಗಳು ತಿಳಿಸಿವೆ. ಇದರಿಂದಾಗಿ ಈ ಬಾರಿ ಕಿವೀಸ್‌ಗೆ ಹೆಚ್ಚಿನ ಸ್ಪಿನ್ ಸವಾಲು ಎದುರಾಗುವ ನಿರೀಕ್ಷೆ ಇದೆ.
ಅಲ್ಲದೆ ಮಳೆಯಿಂದಾಗಿ ಪಿಚ್ ಮೇಲೆ ತೇವಾಂಶ ಉಳಿದುಕೊಂಡರೆ ಕೂಡ ವೇಗಿಗಳಿಗೆ ಅದು ನೆರವಾಗಲಿದೆ. ಇದರಿಂದ ಭಾರತ ಮತ್ತೊಮ್ಮೆ 3 ಸ್ಪಿನ್ನರ್ ಗಳನ್ನು ಆಡಿಸುವ ಬಗ್ಗೆ ಅನುಮಾನವಿದೆ. ಮೂರನೇ ವೇಗಿಯಾಗಿ ಅಥವಾ ಇಶಾಂತ್ ಶರ್ಮ ಬದಲಿಗೆ ಮೊಹಮದ್ ಸಿರಾಜ್ ಆಡಲಿದ್ದಾರೆ ಎಂದೂ ಹೇಳಲಾಗಿದೆ. ಕೋಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ವಿರಾಟ್ ಕೊಹ್ಲಿ ಗುರುವಾರ ಪಿಚ್ ಪರಿಶೀಲಿಸಿದ ಬಳಿಕವೇ ತಂಡ ಸಂಯೋಜನೆ ಅಂತಿಮವಾಗಲಿದೆ ಎನ್ನಲಾಗಿದೆ.
ಭಾರತ ಸಂಭಾವ್ಯ ಪ್ಲೇಯಿಂಗ್ XI: ಕೆಎಸ್ ಭರತ್ (ವಿಕೆಟ್ ಕೀಪರ್), ಶುಭ್ಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ(ನಾಯಕ), ಅಜಿಂಕ್ಯಾ ರಹಾನೆ, ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ಆರ್ ಅಶ್ವಿನ್, ಅಕ್ಷರ್ ಪಟೇಲ್, ಉಮೇಶ್ ಯಾದವ್, ಇಶಾಂತ್ ಶರ್ಮಾ/ ಮೊಹಮ್ಮದ್ ಸಿರಾಜ್.
India vs South Africa: ಓಮಿಕ್ರಾನ್ ಭೀತಿ: ಭಾರತ ಕ್ರಿಕೆಟ್ ತಂಡದ ದಕ್ಷಿಣ ಆಫ್ರಿಕಾ ಪ್ರವಾಸ ಮುಂದೂಡಿಕೆ
(India vs New Zealand 2nd Test likely to postponed duto rain in Mumbai know here the mumbai weather)