ಕೊನೆಯ ಹಾಗೂ ಮೊದಲ ಸೋಲು; ಗಂಭೀರ್ ವೃತ್ತಿಬದುಕಿನಲ್ಲಿ ಹೀಗೊಂದು ಕಾಕತಾಳೀಯ

|

Updated on: Oct 26, 2024 | 10:05 PM

Gautam Gambhir: ನ್ಯೂಜಿಲೆಂಡ್ ತಂಡವು ಭಾರತದ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿದೆ. ಗೌತಮ್ ಗಂಭೀರ್ ಅವರ ಕೋಚಿಂಗ್ ಅಡಿಯಲ್ಲಿ ಭಾರತ ತಂಡದ ಮೊದಲ ಟೆಸ್ಟ್ ಸರಣಿ ಇದಾಗಿದ್ದು, ತವರಿನಲ್ಲಿ ಸೋಲು ಅನುಭವಿಸಿದೆ. ಈ ಸೋಲಿನಿಂದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಲುಪುವ ಭಾರತದ ಅವಕಾಶ ಕಡಿಮೆಯಾಗಿದೆ. 2012 ರ ನಂತರ ಭಾರತ ತವರಿನಲ್ಲಿ ಟೆಸ್ಟ್ ಸರಣಿ ಸೋತಿದ್ದು ಇದೇ ಮೊದಲು.

ಕೊನೆಯ ಹಾಗೂ ಮೊದಲ ಸೋಲು; ಗಂಭೀರ್ ವೃತ್ತಿಬದುಕಿನಲ್ಲಿ ಹೀಗೊಂದು ಕಾಕತಾಳೀಯ
ಗೌತಮ್ ಗಂಭೀರ್
Follow us on

ಮೂರು ಪಂದ್ಯಗಳಲ್ಲಿ ಟೆಸ್ಟ್ ಸರಣಿಯಲ್ಲಿ ಭಾರತವನ್ನು 2-0 ಅಂತರದಿಂದ ಸೋಲಿಸಿರುವ ನ್ಯೂಜಿಲೆಂಡ್ ತಂಡ ಟೆಸ್ಟ್ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಪುಣೆಯಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ 113 ರನ್‌ಗಳಿಂದ ಸೋತಿತ್ತು. ಇದಕ್ಕೂ ಮುನ್ನ ನಡೆದ ಬೆಂಗಳೂರು ಟೆಸ್ಟ್‌ನಲ್ಲಿ ನ್ಯೂಜಿಲೆಂಡ್ ಎಂಟು ವಿಕೆಟ್‌ಗಳ ಜಯ ಸಾಧಿಸಿತ್ತು. ಗೌತಮ್ ಗಂಭೀರ್ ಮುಖ್ಯ ಕೋಚ್ ಆದ ನಂತರ ಟೀಂ ಇಂಡಿಯಾದ ಎರಡನೇ ಟೆಸ್ಟ್ ಸರಣಿ ಇದಾಗಿದ್ದು, ತವರಿನಲ್ಲಿ ಭಾರತ ಸೋಲನ್ನು ಎದುರಿಸಬೇಕಾಯಿತು. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಲುಪಲು ಟೀಮ್ ಇಂಡಿಯಾಗೆ ಈ ಟೆಸ್ಟ್ ಸರಣಿ ಅತ್ಯಂತ ಮಹತ್ವದ್ದಾಗಿತ್ತು. ಆದರೆ ಇದೀಗ ಈ ಸೋಲು ತಂಡದ ಸಮಸ್ಯೆಗಳನ್ನು ಹೆಚ್ಚಿಸಿದೆ.

ಈಗ ಭಾರತ ಫೈನಲ್‌ಗೆ ಅರ್ಹತೆ ಪಡೆಯಲು ಉಳಿದಿರುವ ಆರು ಟೆಸ್ಟ್‌ಗಳಲ್ಲಿ ನಾಲ್ಕರಲ್ಲಿ ಗೆಲ್ಲಬೇಕಾಗಿದೆ. ಅಂದರೆ ಭಾರತ 2 ಅಥವಾ 3 ಪಂದ್ಯಗಳಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಬೇಕಾಗಿದೆ. ಗಂಭೀರ್ ಕೋಚ್ ಆದ ನಂತರ ಇದು ದೊಡ್ಡ ಸೋಲು. ಏಕೆಂದರೆ ನ್ಯೂಜಿಲೆಂಡ್ ಭಾರತದಲ್ಲಿ ಮೊದಲ ಬಾರಿಗೆ ಟೆಸ್ಟ್ ಸರಣಿಯನ್ನು ಗೆದ್ದಿದೆ. ಅದೇ ಸಮಯದಲ್ಲಿ, ಭಾರತವು 12 ವರ್ಷಗಳ ನಂತರ ತವರಿನಲ್ಲಿ ಟೆಸ್ಟ್ ಸರಣಿಯನ್ನು ಕಳೆದುಕೊಂಡಿದೆ. ಈ ಮೂಲಕ ಗಂಭೀರ್‌ ಅವರೊಂದಿಗೆ ವಿಚಿತ್ರ ಕಾಕತಾಳೀಯವೊಂದು ತಳುಕು ಹಾಕಿಕೊಂಡಿದೆ.

ಹೀಗೊಂದು ಕಾಕತಾಳೀಯ

ವಾಸ್ತವವಾಗಿ, 2012-13 ರಲ್ಲಿ ಭಾರತವು ಕೊನೆಯ ಬಾರಿಗೆ ತವರಿನಲ್ಲಿ ಟೆಸ್ಟ್ ಸರಣಿಯನ್ನು ಸೋತಿತ್ತು. ಆ ಸಂದರ್ಭದಲ್ಲಿ ಗೌತಮ್ ಗಂಭೀರ್ ಆಟಗಾರನಾಗಿ ಆ ತಂಡದ ಭಾಗವಾಗಿದ್ದರು. ಇಂಗ್ಲೆಂಡ್ ವಿರುದ್ಧದ ಆ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು ಭಾರತ 2-1 ಅಂತರದಲ್ಲಿ ಕಳೆದುಕೊಂಡಿತ್ತು. ಇದೀಗ 2024 ರಲ್ಲಿ ಟೀಂ ಇಂಡಿಯಾ ಟೆಸ್ಟ್ ಸರಣಿಯನ್ನು ಸೋತಿದ್ದು, ಗೌತಮ್ ಗಂಭೀರ್ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿದ್ದಾರೆ. ಇಷ್ಟೇ ಅಲ್ಲ, 2012-13ರಲ್ಲಿ ಆಡಿದ ಆ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಮತ್ತು ಆರ್ ಅಶ್ವಿನ್ ಕೂಡ ತಂಡದ ಭಾಗವಾಗಿದ್ದರು. ಇದೀಗ ಅವರೂ ಸಹ ಈ ಸೋತ ತಂಡದ ಭಾಗವಾಗಿದ್ದಾರೆ.

ನಾಲ್ಕನೇ ಟೆಸ್ಟ್ ಸರಣಿ ಸೋಲು

2000ನೇ ಇಸವಿಯ ನಂತರ ತವರಿನಲ್ಲಿ ಭಾರತಕ್ಕೆ ಇದು ನಾಲ್ಕನೇ ಟೆಸ್ಟ್ ಸರಣಿ ಸೋಲಾಗಿದೆ. 2000 ರಲ್ಲಿ, ಹ್ಯಾನ್ಸಿ ಕ್ರೋನಿಯೆ ನಾಯಕತ್ವದಲ್ಲಿ, ದಕ್ಷಿಣ ಆಫ್ರಿಕಾ ಎರಡು ಪಂದ್ಯಗಳ ಸರಣಿಯಲ್ಲಿ ಭಾರತವನ್ನು 2-0 ಅಂತರದಲ್ಲಿ ಸೋಲಿಸಿತು. ಇದರ ನಂತರ, 2004 ರಲ್ಲಿ ಆಸ್ಟ್ರೇಲಿಯಾ, ಭಾರತವನ್ನು 2-1 ಅಂತರದಿಂದ ಸೋಲಿಸಿತ್ತು. ಇದಾದ ಬಳಿಕ 2012ರಲ್ಲಿ ಅಲಿಸ್ಟರ್ ಕುಕ್ ನಾಯಕತ್ವದಲ್ಲಿ ಇಂಗ್ಲೆಂಡ್ 2-1ಅಂತರದಿಂದ ಭಾರತವನ್ನು ಸೋಲಿಸಿತ್ತು. ಇದೀಗ ಈ ಪಟ್ಟಿಗೆ ಟಾಮ್ ಲೇಥಮ್ ಸೇರಿಕೊಂಡಿದ್ದಾರೆ.

ಪಂದ್ಯ ಹೀಗಿತ್ತು

ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 259 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಭಾರತದ ಮೊದಲ ಇನಿಂಗ್ಸ್ 156 ರನ್‌ಗಳಿಗೆ ಆಲೌಟ್ ಆಯಿತು. 103 ರನ್‌ ಮುನ್ನಡೆಯೊಂದಿಗೆ ನ್ಯೂಜಿಲೆಂಡ್ ಎರಡನೇ ಇನ್ನಿಂಗ್ಸ್‌ನಲ್ಲಿ 255 ರನ್ ಗಳಿಸಿ ಒಟ್ಟಾರೆ 358 ರನ್‌ಗಳ ಗುರಿ ನೀಡಿತು. ಈ ಗುರಿಯನ್ನು ಬೆನ್ನಟ್ಟಿದ ಟೀಂ ಇಂಡಿಯಾ 245 ರನ್​ಗಳಿಗೆ ಆಲೌಟ್ ಆಗುವ ಮೂಲಕ 113 ರನ್​ಗಳಿಂದ ಪಂದ್ಯದ ಜೊತೆಗೆ ಸರಣಿಯನ್ನು ಕಳೆದುಕೊಂಡಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ