ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯ ರೋಚಕ ಘಟ್ಟ ತಲುಪಿದೆ. ಉಭಯ ತಂಡಗಳು ಗೆಲುವಿಗಾಗಿ ಜಿದ್ದಾಜಿದ್ದಿನ ಹೋರಾಟ ನೀಡುತ್ತಿವೆ. ಪ್ರಸ್ತುತ ಪಂದ್ಯದಲ್ಲಿ ಮೇಲುಗೈ ಸಾಧಿಸಿರುವ ಟೀಂ ಇಂಡಿಯಾ ಎದುರಾಳಿ ತಂಡವನ್ನು ಎರಡನೇ ಇನ್ನಿಂಗ್ಸ್‌ನಲ್ಲಿ ಅಲ್ಪ ರನ್ಗಳಿಗೆ ಕಟ್ಟಿಹಾಕುವ ಸುಳಿವು ನೀಡಿದೆ. ಆ ಪ್ರಕಾರ, ಪಂದ್ಯದ ಎರಡನೇ ದಿನದ ಆಟ ಮುಗಿದಿದ್ದು, ನ್ಯೂಜಿಲೆಂಡ್ ತಂಡ ಎರಡನೇ ಇನ್ನಿಂಗ್ಸ್‌ನಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿದೆ. ಈ ಮೂಲಕ 143 ರನ್‌ಗಳ ಮುನ್ನಡೆ ಸಾಧಿಸಿದೆ.
ಎರಡನೇ ಇನ್ನಿಂಗ್ಸ್‌ನಲ್ಲಿ ಕಿವೀಸ್ ಪರ ವಿಲ್ ಯಂಗ್ 51 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಇವರಲ್ಲದೆ ಕಾನ್ವೆ 22, ಮಿಚೆಲ್ 21 ಮತ್ತು ಫಿಲಿಪ್ಸ್ 26 ರನ್‌ಗಳ ಕಾಣಿಕೆ ನೀಡಿದರು. ಭಾರತದ ಪರ ಜಡೇಜಾ ನಾಲ್ಕು ಹಾಗೂ ಅಶ್ವಿನ್ ಮೂರು ವಿಕೆಟ್ ಪಡೆದರು. ಉಳಿದಂತೆ ಆಕಾಶ್ ದೀಪ್ ಮತ್ತು ಸುಂದರ್ ತಲಾ ಒಂದು ವಿಕೆಟ್ ಪಡೆದಿದ್ದಾರೆ.
ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 235 ರನ್ ಗಳಿಸಿತು. ಆ ಬಳಿಕ ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತ 263 ರನ್ ಕಲೆಹಾಕುವ ಮೂಲಕ 28 ರನ್‌ಗಳ ಮುನ್ನಡೆ ಸಾಧಿಸಿತು. ತಂಡದ ಪರ ಶುಭ್‌ಮನ್ ಗಿಲ್ ಭಾರತದ ಪರ ಗರಿಷ್ಠ 90 ರನ್ ಗಳಿಸಿದರು. 4 ವಿಕೆಟ್ ಕಳೆದುಕೊಂಡು 86 ರನ್‌ಗಳೊಂದಿಗೆ ಎರಡನೇ ದಿನದಾಟ ಆರಂಭಿಸಿದ ಭಾರತ ಉಳಿದ 6 ವಿಕೆಟ್‌ಗಳನ್ನು 177 ರನ್ ಗಳಿಸುವಷ್ಟರಲ್ಲಿ ಕಳೆದುಕೊಂಡಿತು. ಶುಭ್‌ಮನ್ ಗಿಲ್ ಮತ್ತು ರಿಷಬ್ ಪಂತ್ ಇಂದು ಭಾರತದ ಇನ್ನಿಂಗ್ಸ್ ಅನ್ನು ಮುನ್ನಡೆಸಿದರು ಮತ್ತು ಆಕ್ರಮಣಕಾರಿ ಬ್ಯಾಟಿಂಗ್ ಮಾಡಿದರು.
ಇವರಿಬ್ಬರು ಐದನೇ ವಿಕೆಟ್‌ಗೆ 96 ರನ್‌ಗಳ ಜೊತೆಯಾಟ ನೀಡಿದರು. ಈ ಅವಧಿಯಲ್ಲಿ, ಪಂತ್ ತಮ್ಮ ಟೆಸ್ಟ್ ವೃತ್ತಿಜೀವನದ 13 ನೇ ಅರ್ಧಶತಕವನ್ನು ಗಳಿಸಿದರೆ, ಗಿಲ್ ಏಳನೇ ಅರ್ಧಶತಕವನ್ನು ಪೂರೈಸಿದರು. ಆದರೆ ಈ ವೇಳೆ ದೊಡ್ಡ ಹೊಡೆತಕ್ಕೆ ಕೈಹಾಕಿದ ಪಂತ್ ಎಲ್‌ಬಿಡಬ್ಲ್ಯು ಔಟಾದರು. ಅಂತಿಮವಾಗಿ ಪಂತ್ 59 ಎಸೆತಗಳಲ್ಲಿ ಎಂಟು ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳ ನೆರವಿನಿಂದ 60 ರನ್ ಗಳಿಸಿ ಔಟಾದರು. ಇದಾದ ಬಳಿಕ ಭಾರತದ ಇನ್ನಿಂಗ್ಸ್ ತತ್ತರಿಸಿತು. ಒಂದು ಹಂತದಲ್ಲಿ ಭಾರತದ ಸ್ಕೋರ್ ನಾಲ್ಕು ವಿಕೆಟ್‌ಗೆ 180 ರನ್ ಆಗಿದ್ದರೆ, ನಂತರ 83 ರನ್ ಗಳಿಸುವಷ್ಟರಲ್ಲಿ ಟೀಂ ಇಂಡಿಯಾ ಕೊನೆಯ ಆರು ವಿಕೆಟ್‌ಗಳನ್ನು ಕಳೆದುಕೊಂಡಿತು.
ಪಂತ್ ಔಟಾದ ನಂತರ ರವೀಂದ್ರ ಜಡೇಜಾ 14 ರನ್ ಗಳಿಸಿ ಔಟಾದರೆ, ರವಿಚಂದ್ರನ್ ಅಶ್ವಿನ್ ಆರು ರನ್ ಗಳಿಸಿ ಔಟಾದರು. ಶುಭ್‌ಮನ್ ಗಿಲ್ 146 ಎಸೆತಗಳಲ್ಲಿ ಏಳು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 90 ರನ್ ಗಳಿಸಿದರೆ, ಸರ್ಫರಾಜ್ ಖಾನ್ ಮತ್ತು ಆಕಾಶ್ ದೀಪ್ಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ವಾಷಿಂಗ್ಟನ್ ಸುಂದರ್ ಕೊನೆಯಲ್ಲಿ ಕೆಲವು ದೊಡ್ಡ ಹಿಟ್‌ಗಳನ್ನು ಹೊಡೆದು ಭಾರತವನ್ನು ಮುನ್ನಡೆಸಿದರು. ಅವರು 36 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳ ನೆರವಿನಿಂದ 38 ರನ್ ಗಳಿಸಿ ಅಜೇಯರಾಗಿ ಉಳಿದರು. ನ್ಯೂಜಿಲೆಂಡ್ ಪರ ಅಜಾಜ್ ಪಟೇಲ್ ಐದು ವಿಕೆಟ್ ಪಡೆದರೆ, ಮ್ಯಾಟ್ ಹೆನ್ರಿ, ಗ್ಲೆನ್ ಫಿಲಿಪ್ಸ್ ಮತ್ತು ಇಶ್ ಸೋಧಿ ತಲಾ ಒಂದು ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ