ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ 263 ರನ್‌ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿರುವ ಟೀಂ ಇಂಡಿಯಾ, ಕಿವೀಸ್ ಪಡೆಯನ್ನು ಎರಡನೇ ಇನ್ನಿಂಗ್ಸ್ನಲ್ಲಿ ಅಲ್ಪ ರನ್‌ಗಳಿಗೆ ಕಟ್ಟಿ ಹಾಕುವ ಪ್ರಯತ್ನದಲ್ಲಿದೆ. ಇದಕ್ಕೂ ಮುನ್ನ ಮೊದಲ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 17 ರನ್ಗಳ ಮುನ್ನಡೆ ಕಾಯ್ದುಕೊಳ್ಳುವಲ್ಲಿ ರಿಷಬ್ ಪಂತ್ ಹಾಗೂ ಗಿಲ್ ಅವರ ಅರ್ಧಶತಕವೇ ಪ್ರಮಖ ಕಾರಣವಾಯಿತು.
ಅದರಲ್ಲೂ ಕಿವೀಸ್ ವಿರುದ್ಧ ಸ್ಫೋಟಕ ಬ್ಯಾಟಿಂಗ್ ನಡೆಸಿದ ರಿಷಬ್ ಪಂತ್, ಅತಿ ವೇಗದ ಅರ್ಧಶತಕ ಸಿಡಿಸಿ ದಾಖಲೆಯನ್ನು ನಿರ್ಮಿಸಿದರು. ವಾಸ್ತವವಾಗಿ ಭಾರತ ಮೊದಲ ದಿನದ ಕೊನೆಯ ಸೆಷನ್ನಲ್ಲಿ 4 ವಿಕೆಟ್ ಕಳೆದುಕೊಂಡು 86 ರನ್ ಗಳಿಸಿ ಸಂಕಷ್ಟಕ್ಕೆ ಸಿಲುಕಿತ್ತು.
ಎಂದಿನಂತೆ ರಿಷಬ್ ಪಂತ್ ಮತ್ತೊಮ್ಮೆ ತಮ್ಮದೇ ಶೈಲಿಯಲ್ಲಿ ಭರ್ಜರಿ ಅರ್ಧಶತಕ ಬಾರಿಸಿದರು. ಅವರು ಕೇವಲ 36 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ಬಿರುಸಿನ ಇನ್ನಿಂಗ್ಸ್‌ನೊಂದಿಗೆ ಟೀಂ ಇಂಡಿಯಾಕ್ಕೆ ನೆರವಾಗಿದ್ದು ಮಾತ್ರವಲ್ಲದೆ ಹೊಸ ದಾಖಲೆಯನ್ನೂ ನಿರ್ಮಿಸಿದ್ದಾರೆ.
ಎರಡನೇ ದಿನ ಕ್ರೀಸ್ಗೆ ಬಂದ ತಕ್ಷಣ ರಿಷಬ್ ಪಂತ್ ಹೊಡಿಬಡಿ ಆಟಕ್ಕೆ ಮುಂದಾದರು. ಹೀಗಾಗಿ ಎರಡನೇ ದಿನದ ಮೊದಲ ಗಂಟೆಯಲ್ಲಿಯೇ ಪಂತ್ ಕೇವಲ 36 ಎಸೆತಗಳಲ್ಲಿ 138 ಸ್ಟ್ರೈಕ್ ರೇಟ್‌ನಲ್ಲಿ 50 ರನ್ ಗಳಿಸಿದರು. ಇದರೊಂದಿಗೆ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್‌ನಲ್ಲಿ ಅತಿವೇಗದ ಅರ್ಧಶತಕ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡರು.
ಈ ಮೂಲಕ ಪುಣೆ ಟೆಸ್ಟ್‌ನಲ್ಲಿ 41 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಈ ಸಾಧನೆ ಮಾಡಿದ್ದ ಯಶಸ್ವಿ ಜೈಸ್ವಾಲ್ ಅವರ ದಾಖಲೆಯನ್ನು ಪಂತ್ ತನ್ನ ಖಾತೆಗೆ ಹಾಕಿಕೊಂಡರು. ಅಂತಿಮವಾಗಿ ಪಂತ್ 59 ಎಸೆತಗಳಲ್ಲಿ 60 ರನ್ ಗಳಿಸಿ ಇಶ್ ಸೋಧಿಗೆ ಬಲಿಯಾದರು. ಇದಲ್ಲದೆ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿವೇಗದ ಅರ್ಧಶತಕ ಗಳಿಸಿದ ಭಾರತೀಯ ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ ಪಂತ್ ಅವರದ್ದೇ ಮೊದಲ ಹೆಸರು. 2022 ರಲ್ಲಿ ಶ್ರೀಲಂಕಾ ವಿರುದ್ಧ ಪಂತ್ ಕೇವಲ 28 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು.
ಹಾಗೆಯೇ ಪಂತ್, 100 ಸ್ಟ್ರೈಕ್ ರೇಟ್‌ನೊಂದಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಅರ್ಧಶತಕಗಳನ್ನು ಗಳಿಸಿದ ಭಾರತೀಯ ವಿಕೆಟ್ಕೀಪರ್ಗಳ ವಿಚಾರದಲ್ಲಿ ಮಹೇಂದ್ರ ಸಿಂಗ್ ಧೋನಿ ಅವರನ್ನು ಹಿಂದಿಕ್ಕಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆಯು 100ಕ್ಕೂ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ 4 ಟೆಸ್ಟ್ ಅರ್ಧಶತಕಗಳನ್ನು ಗಳಿಸಿದ್ದ ಧೋನಿ ಹೆಸರಿನಲ್ಲಿತ್ತು. ಆದರೆ ಇದೀಗ ಪಂತ್ 100ಕ್ಕೂ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ 5 ಅರ್ಧಶತಕ ಸಿಡಿಸಿದ್ದಾರೆ.
ಮುಂಬೈ ಟೆಸ್ಟ್‌ನ ಮೊದಲ ದಿನ ಭಾರತ ತಂಡ ಕೇವಲ 6 ರನ್ ಗಳಿಸುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡಿತ್ತು. ಇದಾದ ಬಳಿಕ ರಿಷಬ್ ಪಂತ್, ಶುಭಮನ್ ಗಿಲ್ ಜೊತೆ 96 ರನ್ ಜೊತೆಯಾಟ ನಡೆಸಿದರು. ಈ ಮಹತ್ವದ ಜೊತೆಯಾಟದ ಬಳಿಕ ಟೀಂ ಇಂಡಿಯಾ ಇನ್ನಿಂಗ್ಸ್ ಮತ್ತೆ ಹಳಿಗೆ ಬಂತು.