IND vs NZ: ಶತಕದಂಚಿನಲ್ಲಿ ಎಡವಿದ ಗಿಲ್: ಟೀಮ್ ಇಂಡಿಯಾ ಆಲೌಟ್
India vs New Zealand, 3rd Test: ಮುಂಬೈನಲ್ಲಿ ನಡೆಯುತ್ತಿರುವ ಭಾರತ-ನ್ಯೂಝಿಲೆಂಡ್ ನಡುವಣ 3ನೇ ಟೆಸ್ಟ್ ಪಂದ್ಯದ 2ನೇ ದಿನದಾಟ ಮುಂದುವರೆದಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡವು ಪ್ರಥಮ ಇನಿಂಗ್ಸ್ನಲ್ಲಿ 235 ರನ್ ಕಲೆಹಾಕಿದೆ. ಇದಕ್ಕುತ್ತರವಾಗಿ ಟೀಮ್ ಇಂಡಿಯಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದೆ.
Updated on: Nov 02, 2024 | 1:23 PM

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ನ್ಯೂಝಿಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಆರಂಭಿಕ ಆಟಗಾರ ಶುಭ್ಮನ್ ಗಿಲ್ ಶತಕದಂಚಿನಲ್ಲಿ ಎಡವಿದ್ದಾರೆ. ಈ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಗಿಲ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರು.

ಆದರೆ 144 ಎಸೆತಗಳಲ್ಲಿ 4 ಫೋರ್, 1 ಸಿಕ್ಸ್ನೊಂದಿಗೆ 90 ರನ್ ಬಾರಿಸಿ ಶತಕದತ್ತ ದಾಪುಗಾಲಿಟ್ಟಿದ್ದ ಗಿಲ್, ಎಜಾಝ್ ಪಟೇಲ್ ಎಸೆತದಲ್ಲಿ ಸ್ಲಿಪ್ನಲ್ಲಿದ್ದ ಡೇರಿಲ್ ಮಿಚೆಲ್ಗೆ ಕ್ಯಾಚ್ ನೀಡಿದರು. ಈ ಮೂಲಕ ಕೇವಲ 10 ರನ್ಗಳಿಂದ ಶತಕ ವಂಚಿತರಾದರು.

ಇದಕ್ಕೂ ಮುನ್ನ ಶುಭ್ಮನ್ ಗಿಲ್ ಟೆಸ್ಟ್ ಕ್ರಿಕೆಟ್ನಲ್ಲಿ 5 ಬಾರಿ ಶತಕ ಬಾರಿಸಿದ್ದಾರೆ. ಬಾಂಗ್ಲಾದೇಶ್ ಹಾಗೂ ಇಂಗ್ಲೆಂಡ್ ವಿರುದ್ಧ ತಲಾ 2 ಶತಕ ಸಿಡಿಸಿದ್ದ ಗಿಲ್, ಆಸ್ಟ್ರೇಲಿಯಾ ವಿರುದ್ಧ 1 ಸೆಂಚುರಿ ಸಿಡಿಸಿದ್ದರು. ಇದೀಗ ನ್ಯೂಝಿಲೆಂಡ್ ವಿರುದ್ಧ ಚೊಚ್ಚಲ ಶತಕ ಬಾರಿಸುವ ಅವಕಾಶ ಹೊಂದಿದ್ದ ಗಿಲ್ ಕೇವಲ ಹತ್ತು ರನ್ಗಳಿಂದ ಮೂರಂಕಿ ಮೊತ್ತವನ್ನು ತಪ್ಪಿಸಿಕೊಂಡರು.

ಇನ್ನು ಶುಭ್ಮನ್ ಗಿಲ್ ಅವರ 90 ರನ್ಗಳ ನೆರವಿನಿಂದ ಟೀಮ್ ಇಂಡಿಯಾ 2ನೇ ದಿನದಾಟದ 2ನೇ ಸೆಷನ್ನಲ್ಲಿ 200 ರನ್ ಕಲೆಹಾಕಿತು. ಆದರೆ ಗಿಲ್ ಬಳಿಕ ಬಂದ ಬ್ಯಾಟರ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ.

ಅಂತಿಮವಾಗಿ ಟೀಮ್ ಇಂಡಿಯಾ 263 ರನ್ಗಳಿಗೆ ಆಲೌಟ್ ಆಯಿತು. ಈ ಮೂಲಕ ಭಾರತ ತಂಡವು ಮೊದಲ ಇನಿಂಗ್ಸ್ನಲ್ಲಿ ಕೇವಲ 28 ರನ್ಗಳ ಮುನ್ನಡೆ ಪಡೆದುಕೊಂಡಿದೆ. ಇದೀಗ ನ್ಯೂಝಿಲೆಂಡ್ ತಂಡವು ದ್ವಿತೀಯ ಇನಿಂಗ್ಸ್ ಆರಂಭಿಸಲು ಸಜ್ಜಾಗಿ ನಿಂತಿದೆ.



















