ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿಂದು ಮಹತ್ವದ ಪಂದ್ಯ ನಡೆಯಲಿದೆ. ಈ ಬಾರಿಯ ಟೂರ್ನಿಯಲ್ಲಿ ಒಂದೇ ಒಂದು ಸೋಲು ಕಾಣದಿರುವ ರೋಹಿತ್ ಶರ್ಮಾ (Rohit Sharma) ನೇತೃತ್ವದ ಭಾರತ ಹಾಗೂ ನ್ಯೂಝಿಲೆಂಡ್ ತಂಡಗಳು ಸೆಣೆಸಾಟ ನಡೆಸಲಿದೆ. ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣ ಈ ಹೈವೋಲ್ಟೇಜ್ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಉಭಯ ತಂಡಗಳು ನಾಲ್ಕು ಪಂದ್ಯಗಳನ್ನು ಆಡಿದ್ದು ನಾಲ್ಕರಲ್ಲೂ ಜಯ ಸಾಧಿಸಿದೆ. ರನ್ರೇಟ್ ಆಧಾರದ ಮೇಲೆ ಪಾಯಿಂಟ್ ಪಟ್ಟಿಯಲ್ಲಿ ಕಿವೀಸ್ ಪಡೆ ಅಗ್ರಸ್ಥಾನದಲ್ಲಿದ್ದರೆ, ಭಾರತ ದ್ವಿತೀಯ ಸ್ಥಾನದಲ್ಲಿದೆ.
ಟೀಮ್ ಇಂಡಿಯಾ ಏಷ್ಯಾಕಪ್ನಿಂದಲೂ ಭರ್ಜರಿ ಫಾರ್ಮ್ನಲ್ಲಿದೆ. ಬ್ಯಾಟಿಂಗ್ ವಿಭಾಗದಲ್ಲಂತು ಬಲಿಷ್ಠವಾಗಿದೆ. ಮೊದಲ 4 ಬ್ಯಾಟರ್ಗಳೇ ಪಂದ್ಯವನ್ನು ಗೆಲ್ಲಿಸಿಕೊಡುತ್ತಿದ್ದಾರೆ. ರೋಹಿತ್, ಗಿಲ್, ಕೊಹ್ಲಿ, ರಾಹುಲ್ ಮಿಂಚುತ್ತಿದ್ದಾರೆ. ಶ್ರೇಯಸ್ ಅಯ್ಯರ್ ಬ್ಯಾಟ್ನಿಂದ ಮಾತ್ರ ನಿರೀಕ್ಷೆಗೆ ತಕ್ಕಂತ ಆಟ ಬರಲಿಲ್ಲ. ಇದರ ನಡುವೆ ಇಂಜುರಿಗೆ ತುತ್ತಾಗಿರುವ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಈ ಪಂದ್ಯದಿಂದ ಹೊರಗುಳಿದಿದ್ದಾರೆ.
ಪಾಂಡ್ಯ ಜಾಗದಲ್ಲಿ ಸೂರ್ಯಕುಮಾರ್ ಯಾದವ್ ಕಣಕ್ಕಿಳಿಯುವ ಸಂಭವವಿದೆ. ಇವರು ಶನಿವಾರ ರಾತ್ರಿ ಕಠಿಣ ಬ್ಯಾಟಿಂಗ್ ಅಭ್ಯಾಸ ಕೂಡ ನಡೆಸಿದರು. ಅಂತೆಯೆ ಅವಕಾಶ ಕೊಟ್ಟರೂ ಉತ್ತಮ ಪ್ರದರ್ಶನ ನೀಡದ ಕಾರಣ ಶಾರ್ದೂಲ್ ಠಾಕೂರ್ ಬದಲಿಗೆ ಮೊಹಮ್ಮದ್ ಶಮಿಯನ್ನು ಆಡಿಸುವ ಪ್ಲಾನ್ನಲ್ಲಿದೆ. ಧರ್ಮಶಾಲಾ ಮೇಲ್ಮೈ ವೇಗಿಗಳಿಗೆ ಸಾಕಷ್ಟು ನೆರವು ನೀಡುತ್ತದೆ. ಹೀಗಾಗಿ ಶಮಿ 2023 ಆವೃತ್ತಿಯ ಮೊದಲ ವಿಶ್ವಕಪ್ ಆಡಲಿದ್ದಾರೆ ಎಂದು ಹೇಳಲಾಗಿದೆ.
ವಿಶ್ವ ದಾಖಲೆಯ ಶತಕ ಸಿಡಿಸಿದ ಹೆನ್ರಿಕ್ ಕ್ಲಾಸೆನ್
ಇತ್ತ ಉತ್ತಮ ಫಾರ್ಮ್‌ನಲ್ಲಿರುವ ನ್ಯೂಝಿಲೆಂಡ್ ತಂಡ ವಿಶ್ವಕಪ್‌ನಲ್ಲಿ ಸತತ ನಾಲ್ಕು ಪಂದ್ಯಗಳನ್ನು ಗೆದ್ದು ಇಂಗ್ಲೆಂಡ್, ನೆದರ್ಲೆಂಡ್ಸ್, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನವನ್ನು ಸೋಲಿಸಿದೆ. ನಾಯಕ ಕೇನ್ ವಿಲಿಯಮ್ಸನ್ ಮತ್ತೊಮ್ಮೆ ಗಾಯಗೊಂಡಿದ್ದು, ಈ ಪಂದ್ಯದಲ್ಲಿ ಕೂಡ ಆಡುವುದು ಅನುಮಾನವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕಿವೀಸ್ ತಂಡವನ್ನು ಟಾಮ್ ಲಾಥಮ್ ಮುನ್ನಡೆಸಲಿದ್ದಾರೆ. ವಿಲ್ ಯಂಗ್, ಪಿಲಿಪ್ಸ್ ಸ್ಫೋಟಕ ಬ್ಯಾಟಿಂಗ್ ತಂಡಕ್ಕೆ ನೆರವಾಗಿದೆ. ಅಂತೆಯೆ ಫರ್ಗುಸನ್ ಹಾಗೂ ಸ್ಯಾಂಟನರ್ ಬೌಲಿಂಗ್ನಲ್ಲಿ ಮಿಂಚುತ್ತಿದ್ದಾರೆ.
ಈ ಪಂದ್ಯಕ್ಕೆ ಮಳೆ ಅಡ್ಡಿ ಸಾಧ್ಯತೆ ಇದೆ. ಭಾನುವಾರದ ಪಂದ್ಯಕ್ಕೆ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ. MET ಇಲಾಖೆಯ ಪ್ರಕಾರ, ಮಧ್ಯಾಹ್ನ ಟಾಸ್ ಪ್ರಕ್ರಿಯೆ ವೇಳೆಗೆ, ಗುಡುಗು ಸಹಿತ ಮಳೆಯಾಗುವ ಸಾಧ್ಯತೆಗಳಿವೆ ಮತ್ತು 43 ರಷ್ಟು ಮಳೆಯಾಗಲಿದೆ ಎಂದು ಹೇಳಲಾಗಿದೆ. ಹೀಗಾಗಿ ಟಾಸ್ ಅನ್ನು ವಿಳಂಬಗೊಳಿಸಬಹುದು. ಭಾರತ-ನ್ಯೂಝಿಲೆಂಡ್ ನಡುವಿನ ಲೀಗ್ ಪಂದ್ಯಕ್ಕೆ ಐಸಿಸಿ ಷರತ್ತುಗಳಲ್ಲಿ ‘ರಿಸರ್ವ್ ಡೇ’ಗೆ ಯಾವುದೇ ಅವಕಾಶವಿಲ್ಲ. ಭಾನುವಾರದ ಪಂದ್ಯವು ಮಳೆಯಿಂದಾಗಿ ರದ್ದಾದರೆ, ಉಭಯ ತಂಡಗಳು ತಲಾ ಒಂದು ಅಂಕವನ್ನು ಪಡೆಯುತ್ತಾರೆ.
ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ ಪಿಚ್ ವೇಗದ ಬೌಲರ್‌ಗಳಿಗೆ ಸಹಾಯಕವಾಗಿದೆ. ಈ ಪಿಚ್ನಲ್ಲಿ ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್ 231 ಆಗಿದ್ದು, ಎರಡನೇ ಇನ್ನಿಂಗ್ಸ್‌ನಲ್ಲಿ 199 ರನ್ ಕಲೆಹಾಕಿರುವುದೇ ಇಲ್ಲಿನವರೆಗಿನ ದಾಖಲೆಯಾಗಿದೆ. ಮೊದಲ ಬ್ಯಾಟಿಂಗ್ ಮಾಡುವ ತಂಡಕ್ಕೆ ಹೋಲಿಸಿದರೆ ಎರಡನೇ ಬ್ಯಾಟಿಂಗ್ ಮಾಡುವ ತಂಡಗಳಿಗೆ ಹೆಚ್ಚಿನ ಯಶಸ್ಸು ಲಭಿಸಿದೆ.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ರವಿಚಂದ್ರನ್ ಅಶ್ವಿನ್. , ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್.
ನ್ಯೂಝಿಲೆಂಡ್ ತಂಡ: ಕೇನ್ ವಿಲಿಯಮ್ಸನ್ (ನಾಯಕ), ಟ್ರೆಂಟ್ ಬೌಲ್ಟ್, ಮಾರ್ಕ್ ಚಾಪ್ಮನ್, ಡೆವೊನ್ ಕಾನ್ವೆ, ಲಾಕಿ ಫರ್ಗುಸನ್, ಮ್ಯಾಟ್ ಹೆನ್ರಿ, ಟಾಮ್ ಲ್ಯಾಥಮ್, ಡೇರಿಲ್ ಮಿಚೆಲ್, ಜಿಮ್ಮಿ ನೀಶಮ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಟಿಮ್ ಸೌಥಿ, ವಿಲ್ ಯಂಗ್.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:48 am, Sun, 22 October 23