ಐಸಿಸಿ ಏಕದಿನ ವಿಶ್ವಕಪ್ 2023 ರ ಗುಂಪು ಹಂತದ 9 ಪಂದ್ಯಗಳಲ್ಲಿ ಒಂಬತ್ತನ್ನೂ ಗೆದ್ದು ಬೀಗಿರುವ ಭಾರತ ಕ್ರಿಕೆಟ್ ತಂಡಕ್ಕೆ ಇದೀಗ ನಿಜವಾದ ಪರೀಕ್ಷೆ ಪ್ರಾರಂಭವಾಗಿದೆ. ಇಂದು ಐಸಿಸಿ ಏಕದಿನ ವಿಶ್ವಕಪ್ 2023 ಮೊದಲ ಸೆಮಿಫೈನಲ್‌ನಲ್ಲಿ ಟೀಮ್ ಇಂಡಿಯಾ ನ್ಯೂಝಿಲೆಂಡ್ (India vs New Zealand) ತಂಡವನ್ನು ಎದುರಿಸಲಿದೆ. ಮುಂಬೈನ ಪ್ರಸಿದ್ಧ ವಾಂಖೆಡೆ ಕ್ರೀಡಾಂಗಣ ಈ ಹೈವೋಲ್ಟೇಜ್ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಭಾರತಕ್ಕೆ ಇದೊಂದು ಸೇಡಿನ ಪಂದ್ಯ ಎಂದು ಕೂಡ ಹೇಳಬಹುದು. ಯಾಕೆಂದರೆ, ಕಿವೀಸ್ ವಿರುದ್ಧ 2019 ರ ವಿಶ್ವಕಪ್ ಸೆಮಿ-ಫೈನಲ್ನಲ್ಲಿ ಭಾರತ ಸೋತು ಟೂರ್ನಿಯಿಂದ ನಿರ್ಗಮಿಸಿತ್ತು. ಈಗ ಮತ್ತೊಮ್ಮೆ ಉಭಯ ತಂಡಗಳು ಸೆಮಿಫೈನಲ್‌ನಲ್ಲಿ ಸೆಣೆಸಾಟ ನಡೆಸಲು ಸಜ್ಜಾಗುತ್ತಿದೆ.
ಪ್ರಸ್ತುತ ನಡೆಯುತ್ತಿರುವ ವಿಶ್ವಕಪ್‌ನಲ್ಲಿ ಭಾರತ ಅತ್ಯಂತ ಬಲಿಷ್ಠವಾಗಿರುವ ತಂಡವಾಗಿದೆ. ಮೆನ್ ಇನ್ ಬ್ಲೂ ಗುಂಪು ಹಂತದಲ್ಲಿ ಒಂದೇ ಒಂದು ಸೋಲು ಕಾಣಲಿಲ್ಲ. ಎಲ್ಲ ಪಂದ್ಯವನ್ನು ಸುಲಭವಾಗಿ ಜಯಿಸಿದ್ದಾರೆ. ತಂಡದಲ್ಲಿ ಬದಲಾವಣೆ ಮಾಡಿದ್ದು ಕೂಡ ಕಡಿಮೆ. ಆದರೆ, ಈಗ ಸೆಮೀಸ್ ಕದನಕ್ಕೆ ಒಂದು ಬದಲಾವಣೆ ನಿರೀಕ್ಷಿಸಲಾಗಿದೆ. ಈ ಬಾರಿಯ ವಿಶ್ವಕಪ್‌ನಲ್ಲಿ ನ್ಯೂಝಿಲೆಂಡ್ ಭಾರತವನ್ನು ಒಂದು ಬಾರಿ ಎದುರಿಸಿದೆ. ಹೀಗಾಗಿ ಭಾರತದ ಬೌಲರ್ಗಳ ಕೆಲ ವರ್ಮವನ್ನು ಅವರು ಅರಿತಿರಬಹುದು. ಇದಕ್ಕಾಗಿ ಬೌಲಿಂಗ್ ವಿಭಾಗದಲ್ಲಿ ಹೊಸ ಆಟಗಾರ ಬರಬಹುದು.
ಸಚಿನ್ ತೆಂಡೂಲ್ಕರ್ ಅವರ ಈ ವಿಶ್ವ ದಾಖಲೆ ಮುರಿಯುವವರು ಯಾರು?
ವಿಶ್ವಕಪ್ ಆರಂಭದಲ್ಲಿ ಸ್ಪಿನ್ ಮೂಲಕ ಮಾರಕವಾಗಿದ್ದ ಕುಲ್ದೀಪ್ ಯಾದವ್ ಈಗ ಯಾಕೊ ಮಂಕಾದಂತಿದೆ. ಹೀಗಾಗಿ ಇವರು ಜಾಗಕ್ಕೆ ರವಿಚಂದ್ರನ್ ಅಶ್ವಿನ್ ಕರೆತರುವ ಪ್ಲಾನ್ ಭಾರತ ಮಾಡಬಹುದು. ಅಲ್ಲದೆ ಅಶ್ವಿನ್ ಪ್ಲೇಯಿಂಗ್ ಇಲೆವೆನ್ಗೆ ಬಂದರೆ ಸ್ಪಿನ್ ಜೊತೆ ಬ್ಯಾಟಿಂಗ್ನಲ್ಲೂ ಕೊಡುಗೆ ನೀಡಬಲ್ಲರು. ಉಳಿದಂತೆ ರೋಹಿತ್ ಹಾಗೂ ಗಿಲ್ ಟಿ20 ಮಾದರಿಯಂತೆ ತಂಡಕ್ಕೆ ಸ್ಫೋಟಕ ಆರಂಭ ಒದಗಿಸುತ್ತಿದ್ದಾರೆ. ಪ್ರಸ್ತುತ ಅತಿ ಹೆಚ್ಚು ರನ್ ಗಳಿಸಿದ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ವಿರಾಟ್ ಕೊಹ್ಲಿ ಮೇಲೆ ಎಲ್ಲರ ಕಣ್ಣಿದೆ.
ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಇಬ್ಬರೂ ನೆದರ್ಲೆಂಡ್ಸ್ ವಿರುದ್ಧ ಶತಕಗಳನ್ನು ಸಿಡಿಸಿ ಬೊಂಬಾಟ್ ಫಾರ್ಮ್ನಲ್ಲಿದ್ದಾರೆ. ಸೂರ್ಯಕುಮಾರ್ಗೆ ಅವಕಾಶ ಸಿಕ್ಕಿದ್ದು ಕಡಿಮೆ. ಸಿಕ್ಕ ಸಂದರ್ಭ ತಂಡಕ್ಕೆ ನೆರವಾಗಿದ್ದಾರೆ. ರವೀಂದ್ರ ಜಡೇಜಾ ಫಿನಿಶರ್ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ರವಿಚಂದ್ರನ್ ಅಶ್ವಿನ್ ಬಂದರೆ ಬ್ಯಾಟಿಂಗ್ ಡೆಪ್ತ್ ಹೆಚ್ಚಲಿದೆ. ವೇಗಿಗಳಾಗಿ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಮತ್ತು ಮೊಹಮ್ಮದ್ ಶಮಿ ತಮ್ಮ ಪ್ರಬಲ ಸ್ವಿಂಗ್ ಮತ್ತು ವೇಗದಿಂದ ಮಾರಕವಾಗಿದ್ದಾರೆ.
ಸದಾ ಸ್ಥಿರವಾಗಿರುವ ನ್ಯೂಜಿಲೆಂಡ್ ತಂಡವು ಸೆಮಿಫೈನಲ್ ಸ್ಥಾನವನ್ನು ಭದ್ರಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಮತ್ತು ತಮ್ಮ ಸತತ ಮೂರನೇ ವಿಶ್ವಕಪ್ ಫೈನಲ್‌ಗೆ ಮುನ್ನಡೆಯಲು ಕಣ್ಣಿಟ್ಟಿದೆ. ನವೆಂಬರ್ 15 ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ IND vs NZ ಕ್ರಿಕೆಟ್ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಆತಿಥೇಯ ಭಾರತವನ್ನು ಕಿವೀಸ್ ಎದುರಿಸಲಿದೆ .
ಕೇನ್ ವಿಲಿಯಮ್ಸನ್ ನೇತೃತ್ವದ ನ್ಯೂಝಿಲೆಂಡ್ ತಂಡ ಮಾಡು ಇಲ್ಲವೇ ಮಡಿ ಎಂಬ ಪಂದ್ಯ ಬಂದಾಗ ಅದ್ಭುತ ಪ್ರದರ್ಶನ ತೋರಿದೆ. ಪಂದ್ಯಾವಳಿಯ ಮಧ್ಯಮ ಹಂತದಲ್ಲಿ ಪ್ರಮುಖ ಆಟಗಾರರು ಗಾಯಕ್ಕೆ ತುತ್ತಾದರು. ಆದರೂ ಇದನ್ನೆಲ್ಲ ಎದುರಿಸಿ ಇಂದು ಸೆಮೀಸ್ಗೆ ಬಂದು ನಿಂತಿದೆ. ತಂಡದ ಪರ ರಚಿನ್ ರವೀಂದ್ರ ಭರ್ಜರಿ ಫಾರ್ಮ್ನಲ್ಲಿದ್ದಾರೆ. ಮಣಿಕಟ್ಟಿನ ಗಾಯದಿಂದಾಗಿ ಶ್ರೀಲಂಕಾದ ಪಂದ್ಯದಿಂದ ಹೊರಗುಳಿದಿದ್ದ ನ್ಯೂಜಿಲೆಂಡ್ ಆಲ್‌ರೌಂಡರ್ ಜೇಮ್ಸ್ ನೀಶಮ್ ಫಿಟ್ ಆಗಿದ್ದಾರೆ. ಕೇನ್, ಡೆವೊನ್ ಕಾನ್ವೇ, ಟಾಮ್ ಲೇಥಮ್, ಡೇರಿಲ್ ಮಿಚೆಲ್ ಮಹತ್ವದ ಪಂದ್ಯಕ್ಕೆ ಸಜ್ಜಾಗಿದ್ದಾರೆ. ಟ್ರೆಂಟ್ ಬೌಲ್ಟ್ ಭಾರತಕ್ಕೆ ಮಾರಕವಾಗಬಹುದು. ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ ಕೂಡ ತಂಡದಲ್ಲಿದ್ದಾರೆ.
ಉಭಯ ತಂಡಗಳು
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ಉಪನಾಯಕ), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ರವಿಚಂದ್ರನ್ ಅಶ್ವಿನ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಪ್ರಸಿದ್ಧ್ ಕೃಷ್ಣ.
ನ್ಯೂಝಿಲೆಂಡ್: ಕೇನ್ ವಿಲಿಯಮ್ಸನ್ (ನಾಯಕ), ಟ್ರೆಂಟ್ ಬೌಲ್ಟ್, ಮಾರ್ಕ್ ಚಾಪ್ಮನ್, ಡೆವೊನ್ ಕಾನ್ವೇ, ಲಾಕಿ ಫರ್ಗುಸನ್, ಮ್ಯಾಟ್ ಹೆನ್ರಿ, ಟಾಮ್ ಲೇಥಮ್, ಡೇರಿಲ್ ಮಿಚೆಲ್, ಜೇಮ್ಸ್ ನೀಶಮ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ವಿಲ್ ಯಂಗ್ , ಕೈಲ್ ಜಾಮಿಸನ್.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ