IND vs NZ: ಸರಣಿ ಕೈತಪ್ಪುವ ಭೀತಿಯಲ್ಲಿ ಟೀಂ ಇಂಡಿಯಾ; ಬೃಹತ್ ಮೊತ್ತದತ್ತ ಕಿವೀಸ್

|

Updated on: Oct 25, 2024 | 5:08 PM

IND vs NZ: ಪುಣೆಯಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ನ್ಯೂಜಿಲೆಂಡ್ ತಂಡವು ಭಾರೀ ಮುನ್ನಡೆ ಸಾಧಿಸಿದೆ. ನ್ಯೂಜಿಲೆಂಡ್ 198 ರನ್ ಗಳಿಸಿದ್ದು, ಭಾರತಕ್ಕೆ ಬೃಹತ್ ಗುರಿ ನಿಗದಿಯಾಗುವ ಸಾಧ್ಯತೆ ಹೆಚ್ಚಿದೆ. ಕಿವೀಸ್ ಪರ ಲೇಥಮ್ (86) ಮತ್ತು ಬ್ಲಂಡೆಲ್ (30*) ಗಮನಾರ್ಹ ಪ್ರದರ್ಶನ ನೀಡಿದರೆ, ಭಾರತದ ಪರ ವಾಷಿಂಗ್ಟನ್ ಸುಂದರ್ 4 ವಿಕೆಟ್ ಪಡೆದರು.

IND vs NZ: ಸರಣಿ ಕೈತಪ್ಪುವ ಭೀತಿಯಲ್ಲಿ ಟೀಂ ಇಂಡಿಯಾ; ಬೃಹತ್ ಮೊತ್ತದತ್ತ ಕಿವೀಸ್
ಟೀಂ ಇಂಡಿಯಾ
Follow us on

ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ಪುಣೆಯಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟ ಮುಕ್ತಾಯಗೊಂಡಿದೆ. ನ್ಯೂಜಿಲೆಂಡ್ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್ ಕಳೆದುಕೊಂಡು 198 ರನ್ ಗಳಿಸಿದ್ದು, ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದೆ. ಕಿವೀಸ್ ತಂಡ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 259 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಟೀಂ ಇಂಡಿಯಾ ಕೇವಲ 156 ರನ್‌ಗಳಿಗೆ ಆಲೌಟ್ ಆಗಿತ್ತು. ಈ ಮೂಲಕ ಎರಡನೇ ಇನಿಂಗ್ಸ್‌ನಲ್ಲಿ ನ್ಯೂಜಿಲೆಂಡ್ ತಂಡದ ಒಟ್ಟು ಮುನ್ನಡೆ 300 ರನ್‌ ದಾಟಿದೆ. ಇನ್ನೂ ಈ ಟೆಸ್ಟ್​ನಲ್ಲಿ ಮೂರು ದಿನಗಳ ಆಟ ಬಾಕಿ ಇದ್ದು ಈ ಪಂದ್ಯದ ಫಲಿತಾಂಶ ಹೊರಬೀಳುವುದು ಖಚಿತವಾಗಿದೆ. ಚೆಂಡು ಸ್ಪಿನ್ ಆಗುತ್ತಿರುವ ರೀತಿ ನೋಡಿದರೆ ನಾಲ್ಕನೇ ಇನ್ನಿಂಗ್ಸ್‌ನಲ್ಲಿ 300ಕ್ಕಿಂತ ಹೆಚ್ಚಿನ ಗುರಿ ಬೆನ್ನಟ್ಟುವುದು ಟೀಂ ಇಂಡಿಯಾಕ್ಕೆ ಸುಲಭವಲ್ಲದ ಸಂಗತಿಯಾಗಿಲ್ಲ.

300 ರ ಗಡಿ ದಾಟಿದ ಕಿವೀಸ್

ಇನ್ನು ಎರಡನೇ ಇನ್ನಿಂಗ್ಸ್​ನಲ್ಲಿ ಕಿವೀಸ್ ತಂಡದ ಪರ ನಾಯಕ ಟಾಮ್ ಲೇಥಮ್ 133 ಎಸೆತಗಳಲ್ಲಿ 10 ಬೌಂಡರಿಗಳ ಸಹಿತ 86 ರನ್ ಗಳಿಸಿ ಔಟಾದರೆ, ವಿಕೆಟ್‌ಕೀಪರ್ ಟಾಮ್ ಬ್ಲಂಡೆಲ್ 30 ರನ್ ಬಾರಿಸಿ ಅಜೇಯರಾಗಿ ಉಳಿದಿದ್ದು, ಮೂರನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಈ ಇಬ್ಬರ ಹೊರತಾಗಿ ಡೆವೊನ್ ಕಾನ್ವೆ 17 ರನ್, ವಿಲ್ ಯಂಗ್ 23, ರಚಿನ್ ರವೀಂದ್ರ 9 ಮತ್ತು ಡೇರಿಲ್ ಮಿಚೆಲ್ 18 ರನ್​ಗಳ ಕಾಣಿಕೆ ನೀಡಿದ್ದಾರೆ. ಇನ್ನು ಟೀಂ ಇಂಡಿಯಾ ಪರ ಮೊದಲ ಇನ್ನಿಂಗ್ಸ್​ನಲ್ಲಿ 7 ವಿಕೆಟ್ ಪಡೆದು ಮಿಂಚಿದ್ದ ವಾಷಿಂಗ್ಟನ್ ಸುಂದರ್, ಎರಡನೇ ಇನ್ನಿಂಗ್ಸ್​ನಲ್ಲೂ ಕಮಾಲ್ ಮಾಡಿದ್ದು, ಇದುವರೆಗೆ 4 ವಿಕೆಟ್ ಉರುಳಿಸಿದ್ದಾರೆ ಉಳಿದಂತೆ ರವಿಚಂದ್ರನ್ ಅಶ್ವಿನ್ 1 ವಿಕೆಟ್ ಪಡೆದಿದ್ದಾರೆ.

ಕುಸಿದ ಭಾರತದ ಇನ್ನಿಂಗ್ಸ್

ಹಾಗೆಯೇ ಭಾರತದ ಮೊದಲ ಇನ್ನಿಂಗ್ಸ್ ಬಗ್ಗೆ ಹೇಳುವುದಾದರೆ.. ಮೊದಲ ದಿನದಾಟದಂತ್ಯಕ್ಕೆ ಒಂದು ವಿಕೆಟ್‌ ಕಳೆದುಕೊಂಡು 16 ರನ್‌ ಬಾರಿಸಿದ್ದ ಟೀಂ ಇಂಡಿಯಾ ಇಲ್ಲಿಂದ ತನ್ನ ಇನ್ನಿಂಗ್ಸ್ ಮುಂದುವರೆಸಿದ್ದು, 140 ರನ್ ಗಳಿಸುವಷ್ಟರಲ್ಲಿ ಉಳಿದ 9 ವಿಕೆಟ್‌ಗಳನ್ನು ಕಳೆದುಕೊಂಡಿತು. ಎರಡನೇ ದಿನದಾಟದ ಆರಂಭದಲ್ಲಿ 30 ರನ್ ಕಲೆಹಾಕಿದ್ದ ಗಿಲ್, ಸ್ಯಾಂಟ್ನರ್ ಬೌಲಿಂಗ್​ನಲ್ಲಿ ವಿಕೆಟ್ ಒಪ್ಪಿಸಿದರೆ, ಆ ನಂತರ ಬಂದ ವಿರಾಟ್ ಕೊಹ್ಲಿ ಕೂಡ ವಿಶೇಷ ಏನನ್ನೂ ಮಾಡಲಾಗದೆ ಒಂದು ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಉಳಿದಂತೆ ರಿಷಬ್ ಪಂತ್ 18 ರನ್, ಸರ್ಫರಾಜ್ ಖಾನ್ 11 ರನ್, ಆರ್ ಅಶ್ವಿನ್ 4 ರನ್, ಆಕಾಶ್ ದೀಪ್ 6 ರನ್ ಕಲೆಹಾಕಿದರೆ, ಬುಮ್ರಾ ಖಾತೆ ತೆರೆಯದೆ ಔಟಾದರು. ತಂಡದ ಪರ ರವೀಂದ್ರ ಜಡೇಜಾ ಗರಿಷ್ಠ 38 ರನ್ ಬಾರಿಸಿದರೆ, ವಾಷಿಂಗ್ಟನ್ ಸುಂದರ್ 18 ರನ್ ಗಳಿಸಿ ಅಜೇಯರಾಗಿ ಉಳಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:08 pm, Fri, 25 October 24