IND vs NZ: ರಾಹುಲ್ ಶತಕ ವ್ಯರ್ಥ; 2ನೇ ಏಕದಿನ ಪಂದ್ಯ ಗೆದ್ದ ನ್ಯೂಜಿಲೆಂಡ್

India vs New Zealand 2nd ODI: ನ್ಯೂಜಿಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತಕ್ಕೆ 7 ವಿಕೆಟ್‌ಗಳ ಆಘಾತಕಾರಿ ಸೋಲು ಎದುರಾಗಿದೆ. ಕೆ.ಎಲ್. ರಾಹುಲ್ ಅವರ ಅಜೇಯ 112 ರನ್ ಶತಕ ವ್ಯರ್ಥವಾಯಿತು. ಡ್ಯಾರಿಲ್ ಮಿಚೆಲ್ ಅವರ ಭರ್ಜರಿ ಶತಕ ಹಾಗೂ ವಿಲ್ ಯಂಗ್ ಅವರ 87 ರನ್ ನೆರವಿನಿಂದ ನ್ಯೂಜಿಲೆಂಡ್ ಸುಲಭ ಗೆಲುವು ಸಾಧಿಸಿತು. ಭಾರತದ ಬೌಲರ್‌ಗಳ ಕಳಪೆ ಪ್ರದರ್ಶನ ಸೋಲಿಗೆ ಕಾರಣವಾಯಿತು. ಸರಣಿ ಈಗ 1-1ರಲ್ಲಿ ಸಮಬಲಗೊಂಡಿದೆ.

IND vs NZ: ರಾಹುಲ್ ಶತಕ ವ್ಯರ್ಥ; 2ನೇ ಏಕದಿನ ಪಂದ್ಯ ಗೆದ್ದ ನ್ಯೂಜಿಲೆಂಡ್
Ind Vs Nz

Updated on: Jan 14, 2026 | 9:45 PM

ನ್ಯೂಜಿಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯವನ್ನು ಗೆದ್ದು ಸರಣಿಯನ್ನು ಕೈವಶ ಮಾಡಿಕೊಳ್ಳಬೇಕೆಂಬ ಇರಾದೆಯಲ್ಲಿದ್ದ ಶುಭ್​ಮನ್ ಗಿಲ್ ಪಡೆಗೆ ರಾಜ್‌ಕೋಟ್ ಮೈದಾನದಲ್ಲಿ ಸೋಲಿನ ಆಘಾತ ಎದುರಾಗಿದೆ. ನ್ಯೂಜಿಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯವನ್ನು ಟೀಂ ಇಂಡಿಯಾ 7 ವಿಕೆಟ್​ಗಳಿಂದ ಸೋತಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಭಾರತ 284 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ಕೇವಲ 3 ವಿಕೆಟ್‌ ಕಳೆದುಕೊಂಡು ಏಕಪಕ್ಷೀಯ ಗೆಲುವು ಸಾಧಿಸಿತು. ಶತಕದ ಇನ್ನಿಂಗ್ಸ್ ಆಡಿದ ಡ್ಯಾರೆಲ್ ಮಿಚೆಲ್ ನ್ಯೂಜಿಲೆಂಡ್‌ ಗೆಲುವಿನ ರೂವಾರಿ ಎನಿಸಿಕೊಂಡರು. ಮಿಚೆಲ್ ಅವರಲ್ಲದೆ, ವಿಲ್ ಯಂಗ್ ಕೂಡ 87 ರನ್ ಗಳಿಸುವ ಮೂಲಕ ತಮ್ಮ ತಂಡದ ಗೆಲುವಿಗೆ ಮಹತ್ವದ ಕೊಡುಗೆ ನೀಡಿದರು. ಕೆಎಲ್ ರಾಹುಲ್ ಭಾರತ ಪರ ಅಜೇಯ 112 ರನ್ ಗಳಿಸಿದರಾದರೂ ಅವರ ಶತಕದ ಇನ್ನಿಂಗ್ಸ್ ವ್ಯರ್ಥವಾಯಿತು.

ರಾಹುಲ್ ಅಜೇಯ ಶತಕ

ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಭಾರತವನ್ನು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡದ ಪರ ಕೆ.ಎಲ್. ರಾಹುಲ್ 92 ಎಸೆತಗಳಲ್ಲಿ 11 ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿದಂತೆ ಅಜೇಯ 112 ರನ್ ಬಾರಿಸಿದರು. ರಾಹುಲ್ ಹೊರತುಪಡಿಸಿ ನಾಯಕ ಶುಭ್​ಮನ್ ಗಿಲ್ ಕೂಡ 56 ರನ್​ಗಳ ಇನ್ನಿಂಗ್ಸ್ ಆಡಿದರು. ಆದರೆ ಇವರಿಬ್ಬರನ್ನು ಬಿಟ್ಟರೆ ಉಳಿದ ಬ್ಯಾಟ್ಸ್‌ಮನ್‌ಗಳು ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲರಾದರು. ಅಂತಿಮವಾಗಿ ಭಾರತ ತಂಡ 50 ಓವರ್‌ಗಳಲ್ಲಿ ಏಳು ವಿಕೆಟ್‌ ಕಳೆದುಕೊಂಡು 284 ರನ್ ಕಲೆಹಾಕಿತು.

ಭಾರತದ ಪರ, ರಾಹುಲ್ ಮತ್ತು ಗಿಲ್ ಹೊರತುಪಡಿಸಿ, ರವೀಂದ್ರ ಜಡೇಜಾ 27, ರೋಹಿತ್ ಶರ್ಮಾ 24, ವಿರಾಟ್ ಕೊಹ್ಲಿ 23, ನಿತೀಶ್ ಕುಮಾರ್ ರೆಡ್ಡಿ 20, ಶ್ರೇಯಸ್ ಅಯ್ಯರ್ 8 ಮತ್ತು ಹರ್ಷಿತ್ ರಾಣಾ 2 ರನ್ ಗಳಿಸಿದರು. ಮೊಹಮ್ಮದ್ ಸಿರಾಜ್ 2 ರನ್ ಗಳಿಸಿ ಅಜೇಯರಾಗಿ ಉಳಿದರು. ನ್ಯೂಜಿಲೆಂಡ್ ಪರ, ಕ್ರಿಸ್ ಕ್ಲಾರ್ಕ್ ಮೂರು ವಿಕೆಟ್ ಪಡೆದರೆ, ಕೈಲ್ ಜೇಮಿಸನ್, ಜಕಾರಿ ಫೋಕ್ಸ್, ಜೇಡನ್ ಲಿನಾಕ್ಸ್ ಮತ್ತು ಮೈಕೆಲ್ ಬ್ರೇಸ್‌ವೆಲ್ ತಲಾ ಒಂದು ವಿಕೆಟ್ ಪಡೆದರು.

ಡ್ಯಾರೆಲ್ ಮಿಚೆಲ್ ಶತಕ

285 ರನ್‌ಗಳ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ ನಿಧಾನಗತಿಯ ಆರಂಭ ಪಡೆಯಿತು. ಹರ್ಷಿತ್ ರಾಣಾ, ಕಾನ್ವೇ ಅವರನ್ನು 16 ರನ್‌ಗಳಿಗೆ ಬೌಲ್ಡ್ ಮಾಡುವ ಮೂಲಕ ಭಾರತಕ್ಕೆ ಮೊದಲ ಬ್ರೇಕ್‌ಥ್ರೂ ನೀಡಿದರು. ಹೆನ್ರಿ ನಿಕೋಲ್ಸ್ ಕೂಡ ಪ್ರಸಿದ್ಧ್ ಕೃಷ್ಣ ಅವರಿಗೆ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು. ಭಾರತ ಪಂದ್ಯವನ್ನು ಹಿಡಿತಕ್ಕೆ ತೆಗೆದುಕೊಳ್ಳುತ್ತದೆ ಎಂದು ತೋರುತ್ತಿತ್ತು. ಆದರೆ ಆ ನಂತರ ಡ್ಯಾರಿಲ್ ಮಿಚೆಲ್, ವಿಲ್ ಯಂಗ್ ಜೊತೆಗೆ 152 ಎಸೆತಗಳಲ್ಲಿ 162 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡು ಪಂದ್ಯವನ್ನು ಭಾರತದ ಹಿಡಿತದಿಂದ ಸಂಪೂರ್ಣವಾಗಿ ದೂರ ಮಾಡಿದರು. ಡ್ಯಾರಿಲ್ ಮಿಚೆಲ್ 96 ಎಸೆತಗಳಲ್ಲಿ ಶತಕ ಗಳಿಸಿದರು. ಇದು ಭಾರತದ ವಿರುದ್ಧ ಮಿಚೆಲ್ ಅವರ ಕೊನೆಯ ನಾಲ್ಕು ಏಕದಿನ ಇನ್ನಿಂಗ್ಸ್‌ಗಳಲ್ಲಿ ಮೂರನೇ ಶತಕವಾಗಿದೆ.

ಬೌಲರ್‌ಗಳ ಕಳಪೆ ಬೌಲಿಂಗ್

ಕಿವೀಸ್ ಈ ಪಂದ್ಯವನ್ನು ಗೆಲ್ಲಲು ಪ್ರಮುಖ ಕಾರಣ ಡ್ಯಾರಿಲ್ ಮಿಚೆಲ್ ಮತ್ತು ವಿಲ್ ಯಂಗ್ ಅವರ ಜೊತೆಯಾಟ ಒಂದೆಡೆಯಾದರೆ, ಭಾರತೀಯ ಬೌಲರ್‌ಗಳ ಕಳಪೆ ಬೌಲಿಂಗ್ ಮತ್ತೊಂದು ಕಾರಣವಾಯಿತು. ವಿಶೇಷವಾಗಿ ಕುಲ್ದೀಪ್ ಯಾದವ್ ಮಧ್ಯಮ ಓವರ್‌ಗಳಲ್ಲಿ ತುಂಬಾ ದುಬಾರಿಯಾದರು. 10 ಓವರ್‌ಗಳಲ್ಲಿ 82 ರನ್‌ಗಳನ್ನು ಬಿಟ್ಟುಕೊಟ್ಟರು. ಮೊಹಮ್ಮದ್ ಸಿರಾಜ್ ಮತ್ತು ರವೀಂದ್ರ ಜಡೇಜಾ ಹೆಚ್ಚಿನ ಪರಿಣಾಮ ಬೀರುವಲ್ಲಿ ವಿಫಲರಾದರು.

ಕೆಎಲ್ ರಾಹುಲ್ ಶತಕ ವ್ಯರ್ಥ

ಟೀಂ ಇಂಡಿಯಾ ಪರ ಅದ್ಭುತ ಇನ್ನಿಂಗ್ಸ್ ಆಡಿದ ಕೆಎಲ್ ರಾಹುಲ್, ಆರಂಭಿಕ ಆಘಾತಕ್ಕೆ ಒಳಗಾಗಿದ್ದ ತಂಡದ ಇನ್ನಿಂಗ್ಸ್ ನಿಭಾಯಿಸಿದ್ದು ಮಾತ್ರವಲ್ಲದೆ ಕೇವಲ 87 ಎಸೆತಗಳಲ್ಲಿ ತಮ್ಮ ಎಂಟನೇ ಏಕದಿನ ಶತಕ ಬಾರಿಸಿದರು. ಆದರೆ ರಾಹುಲ್ ಅವರ ಶತಕವು ತಂಡಕ್ಕೆ ಗೆಲುವು ತಂದುಕೊಡುವಲ್ಲಿ ವಿಫಲವಾಯಿತು. ಏಕದಿನ ಸರಣಿಯು ಈಗ 1-1 ರಲ್ಲಿ ಸಮಬಲಗೊಂಡಿದ್ದು, ಜನವರಿ 18 ರಂದು ಇಂದೋರ್‌ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಸರಣಿ ವಿಜೇತರನ್ನು ನಿರ್ಧರಿಸಲಾಗುತ್ತದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ