ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾದ ಯುವ ಬ್ಯಾಟ್ಸ್‌ಮನ್ ಸರ್ಫರಾಜ್ ಖಾನ್ ಅವರ ಪ್ರದರ್ಶನ ಮಿಶ್ರವಾಗಿದೆ. ಮೊದಲ ಟೆಸ್ಟ್ ಪಂದ್ಯ ಬಿಟ್ಟರೆ ಉಳಿದ ಪಂದ್ಯಗಳಲ್ಲಿ ದೊಡ್ಡ ಇನ್ನಿಂಗ್ಸ್ ಆಡಲು ಸಾಧ್ಯವಾಗಿಲ್ಲ. ಮುಂಬೈನ ತವರು ಮೈದಾನದಲ್ಲಿ ನಡೆಯುತ್ತಿರುವ ಸರಣಿಯ ಮೂರನೇ ಪಂದ್ಯದಲ್ಲಿ ಸರ್ಫರಾಜ್ ಖಾನ್ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಈ ಪಂದ್ಯದಲ್ಲಿ ರವೀಂದ್ರ ಜಡೇಜಾ ನಂತರ 8ನೇ ಕ್ರಮಾಂಕದಲ್ಲಿ ಬಂದ ಸರ್ಫರಾಜ್ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಹೀಗಾಗಿ ಶೂನ್ಯಕ್ಕೆ ಔಟಾದ ಸರ್ಫರಾಜ್ ವಿರುದ್ಧ ಅಭಿಮಾನಿಗಳು ಆಕ್ರೋಶ ಹೊರಹಾಕುತ್ತಿದ್ದರೆ, ಇತ್ತ ಟೀಂ ಇಂಡಿಯಾದ ಮಾಜಿ ಆಟಗಾರ ಸಂಜಯ್ ಮಂಜ್ರೇಕರ್ ಅವರು ಸರ್ಫರಾಜ್ ಖಾನ್ ಅವರ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.
ವಾಸ್ತವವಾಗಿ, ಸರ್ಫರಾಜ್ ಖಾನ್ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್. ಅವರು ಸಾಮಾನ್ಯವಾಗಿ 5 ನೇ ಸ್ಥಾನದಲ್ಲಿ ಆಡುವುದನ್ನು ಕಾಣಬಹುದು. ಆದರೆ ಮುಂಬೈ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಅವರನ್ನು 8ನೇ ಕ್ರಮಾಂಕದಲ್ಲಿ ಕಳುಹಿಸಲಾಗಿತ್ತು. ಎಡ-ಬಲ ಸಂಯೋಜನೆಯನ್ನು ಕಾಪಾಡಿಕೊಳ್ಳಲು ನಾಯಕ ಹಾಗೂ ಕೋಚ್ ಈ ನಿರ್ಧಾರವನ್ನು ತೆಗೆದುಕೊಂಡಿದ್ದರು. ಆದರೆ ರೋಹಿತ್ ಶರ್ಮಾ ಮತ್ತು ಗೌತಮ್ ಗಂಭೀರ್ ಅವರ ಈ ನಿರ್ಧಾರ ಸಂಜಯ್ ಮಂಜ್ರೇಕರ್ ಕೋಪಗೊಳ್ಳುವಂತೆ ಮಾಡಿದೆ. ಈ ಇಬ್ಬರ ನಿರ್ಧಾರವನ್ನು ಟೀಕಿಸಿರುವ ಸಂಜಯ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ವೊಂದನ್ನು ಹಂಚಿಕೊಳ್ಳುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.
ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಸಂಜಯ್, ‘ಮೂರು ಟೆಸ್ಟ್ಗಳಲ್ಲಿ ಮೂರು ಅರ್ಧಶತಕ ಬಾರಿಸಿರುವ, ಬೆಂಗಳೂರು ಟೆಸ್ಟ್‌ನಲ್ಲಿ 150 ರನ್ ಬಾರಿಸಿರುವ, ಇದರ ಜೊತೆಗೆ ಸ್ಪಿನ್ ವಿರುದ್ಧ ಅದ್ಭುತವಾಗಿ ಆಡುವ ಆಟಗಾರನ ಬ್ಯಾಟಿಂಗ್ ಕ್ರಮಾಂಕವನ್ನ ನೀವು ಎಡ-ಬಲ ಸಂಯೋಜನೆಯನ್ನು ಕಾಯ್ದುಕೊಳ್ಳಲು ಬದಲಿಸಿದ್ರಾ? ಹೀಗೆ ಮಾಡುವುದರಲ್ಲಿ ಅರ್ಥವಿಲ್ಲ. ಸರ್ಫರಾಜ್ ಈಗ ಎಂಟನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾನೆ. ಇದು ಟೀಂ ಇಂಡಿಯಾ ಆಡಳಿತ ಮಂಡಳಿಯ ಕೆಟ್ಟ ನಿರ್ಧಾರ’ ಎಂದು ಬರೆದುಕೊಂಡಿದ್ದಾರೆ.
A guy in form, has 3 fifties in his first 3 Tests, gets 150 in the Bangalore Test, a good player of spin, pushed back in the order to keep left & right combination?? Makes no sense. Sarfraz now walking in at no 8! Poor call by India.
— Sanjay Manjrekar (@sanjaymanjrekar) November 2, 2024
ವಾಂಖೆಡೆ ಸ್ಟೇಡಿಯಂನಲ್ಲಿ ಸರ್ಫರಾಜ್ ಖಾನ್ ಅವರ ಅಂಕಿಅಂಶಗಳು ಸಾಕಷ್ಟು ಆಕರ್ಷಕವಾಗಿವೆ. ಇಲ್ಲಿ ಕಳೆದ 6 ಪ್ರಥಮ ದರ್ಜೆ ಪಂದ್ಯಗಳ ಇನ್ನಿಂಗ್ಸ್‌ನಲ್ಲಿ 150.25 ಸರಾಸರಿಯಲ್ಲಿ 601 ರನ್ ಗಳಿಸಿದ್ದಾರೆ. ಆದರೆ ಈ ಬಾರಿ ಅವರಿಗೆ ಖಾತೆ ತೆರೆಯಲೂ ಸಾಧ್ಯವಾಗಿಲ್ಲ. ಈ ಸರಣಿಯಲ್ಲಿ ಅವರು ಖಾತೆ ತೆರೆಯದೆ ಔಟಾಗಿರುವುದು ಇದು ಎರಡನೇ ಬಾರಿ. ಇದಕ್ಕೂ ಮೊದಲು, ಸರಣಿಯ ಆರಂಭಿಕ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಅವರು ಶೂನ್ಯಕ್ಕೆ ಔಟಾಗಿದ್ದರು. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ 150 ರನ್ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಹೀಗಾಗಿ ಇಂದಿನ ಪಂದ್ಯದಲ್ಲೂ ಸರ್ಫರಾಜ್ ಶತಕದ ಇನ್ನಿಂಗ್ಸ್ ಆಡಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ