World Cup 2025: ಕಿವೀಸ್ ವಿರುದ್ಧ ಸ್ಫೋಟಕ ಶತಕ ಸಿಡಿಸಿದ ಸ್ಮೃತಿ ಮಂಧಾನ

Smriti Mandhana Century: ನವಿ ಮುಂಬೈನಲ್ಲಿ ನಡೆದ ಮಹಿಳಾ ಏಕದಿನ ವಿಶ್ವಕಪ್‌ನ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಸ್ಮೃತಿ ಮಂಧಾನ ತಮ್ಮ 14ನೇ ಏಕದಿನ ಶತಕ (88 ಎಸೆತ) ಸಿಡಿಸಿ ಮಿಂಚಿದರು. ನ್ಯೂಜಿಲೆಂಡ್ ವಿರುದ್ಧದ ಈ ನಿರ್ಣಾಯಕ ಪಂದ್ಯದಲ್ಲಿ, ಇದು ಸ್ಮೃತಿಯ ಮೊದಲ ವಿಶ್ವಕಪ್ ಶತಕವಾಗಿದೆ. ಪ್ರತಿಕಾ ರಾವಲ್ ಜೊತೆ ದ್ವಿಶತಕದ ಜೊತೆಯಾಟವಾಡಿ ಭಾರತಕ್ಕೆ ಭರ್ಜರಿ ಆರಂಭ ನೀಡಿದರು.

World Cup 2025: ಕಿವೀಸ್ ವಿರುದ್ಧ ಸ್ಫೋಟಕ ಶತಕ ಸಿಡಿಸಿದ ಸ್ಮೃತಿ ಮಂಧಾನ
Smriti Mandhana

Updated on: Oct 23, 2025 | 6:41 PM

ನವಿ ಮುಂಬೈನಲ್ಲಿ ನಡೆಯುತ್ತಿರುವ ಮಹಿಳಾ ಏಕದಿನ ವಿಶ್ವಕಪ್​ನ (Women’s ODI World Cup 2025) ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಪ್ರದರ್ಶನ ನೀಡುತ್ತಿದೆ. ನ್ಯೂಜಿಲೆಂಡ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುತ್ತಿರುವ ಟೀಂ ಇಂಡಿಯಾ ಪರ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ (Smriti Mandhana) ಏಕದಿನ ವೃತ್ತಿಜೀವನದ 14ನೇ ಶತಕ ಸಿಡಿಸಿ ಮಿಂಚಿದ್ದಾರೆ. ಕೇವಲ 88 ಎಸೆತಗಳಲ್ಲಿ ತನ್ನ ಸ್ಫೋಟಕ ಶತಕವನ್ನು ಪೂರೈಸಿದ ಸ್ಮೃತಿಗೆ ಪ್ರಸ್ತುತ ನಡೆಯುತ್ತಿರುವ ವಿಶ್ವಕಪ್‌ನಲ್ಲಿ ಇದು ಮೊದಲ ಶತಕವಾಗಿದೆ. ಅಲ್ಲದೆ ಸತತ ಮೂರನೇ ಪಂದ್ಯದಲ್ಲಿ 50 ರನ್​ಗಳ ಗಡಿ ದಾಟಿದ ಸ್ಮೃತಿ ಈ ಅರ್ಧಶತಕವನ್ನು ಶತಕವಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾದರು. ಮಾತ್ರವಲ್ಲದೆ ಮತ್ತೊರ್ವ ಆರಂಭಿಕ ಆಟಗಾರ್ತಿ ಪ್ರತಿಕಾ ರಾವಲ್ ಅವರೊಂದಿಗೆ ಮೊದಲ ವಿಕೆಟ್​ಗೆ ದ್ವಿಶತಕದ ಜೊತೆಯಾಟವನ್ನು ಆಡಿದ್ದಾರೆ.

ವಿಶ್ವಕಪ್​ನಲ್ಲಿ 3ನೇ ಶತಕ

ವಾಸ್ತವವಾಗಿ ಈ ವಿಶ್ವಕಪ್​ನಲ್ಲಿ ಸ್ಮೃತಿ ಉತ್ತಮ ಆರಂಭವೇನು ಸಿಕ್ಕಿರಲಿಲ್ಲ. ಮೊದಲ ಮೂರು ಇನ್ನಿಂಗ್ಸ್​ಗಳಲ್ಲಿ ಸ್ಮೃತಿ ಪ್ರದರ್ಶನ ಸಪ್ಪೆಯಾಗಿತ್ತು. ಆದರೆ ಆ ಬಳಿಕ ಲಯ ಕಂಡುಕೊಂಡಿದ್ದ ಸ್ಮೃತಿ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧ ಸತತ ಎರಡು ಅರ್ಧಶತಕಗಳ ಇನ್ನಿಂಗ್ಸ್ ಆಡಿದ್ದರು. ಆಸ್ಟ್ರೇಲಿಯಾ ವಿರುದ್ಧ 80 ರನ್ ಮತ್ತು ಇಂಗ್ಲೆಂಡ್ ವಿರುದ್ಧ 88 ರನ್​ಗಳ ಇನ್ನಿಂಗ್ಸ್ ಆಡಿದ್ದ ಸ್ಮೃತಿ ಶತಕದಂಚಿನಲ್ಲಿ ಎಡವಿದ್ದರು. ಆದರೆ ನ್ಯೂಜಿಲೆಂಡ್ ವಿರುದ್ಧ ತಮ್ಮ ಅರ್ಧಶತಕವನ್ನು ಶತಕವನ್ನಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಮಹಿಳಾ ವಿಶ್ವಕಪ್ ಇತಿಹಾಸದಲ್ಲಿ ಮಂಧಾನ ಅವರ ಮೂರನೇ ಶತಕವಾಗಿದೆ. ಈ ಹಿಂದೆ ಅವರು 2017 ಮತ್ತು 2022 ರ ವಿಶ್ವಕಪ್‌ಗಳಲ್ಲಿ ತಲಾ ಒಂದೊಂದು ಶತಕ ಬಾರಿಸಿದ್ದರು. ಇದರೊಂದಿಗೆ, ವಿಶ್ವಕಪ್‌ನಲ್ಲಿ ಭಾರತದ ಪರ ಅತಿ ಹೆಚ್ಚು ಶತಕ ಗಳಿಸಿದ ದಾಖಲೆಯನ್ನು ಅವರು ಸರಿಗಟ್ಟಿದರು.

ಅತ್ಯಧಿಕ ಶತಕಗಳ ಪಟ್ಟಿಯಲ್ಲಿ 2ನೇ ಸ್ಥಾನ

ಇಷ್ಟೇ ಅಲ್ಲ, ಮಹಿಳಾ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದವರ ಪಟ್ಟಿಯಲ್ಲಿ ಮಂಧಾನ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಆಸ್ಟ್ರೇಲಿಯಾದ ಮಾಜಿ ಶ್ರೇಷ್ಠ ಆಟಗಾರ್ತಿ ಮೆಗ್ ಲ್ಯಾನಿಂಗ್ 15 ಶತಕ ಬಾರಿಸಿದ್ದಾರೆ. ಕಾಕತಾಳೀಯವಾಗಿ, ಮಂಧಾನ ಮತ್ತು ನ್ಯೂಜಿಲೆಂಡ್‌ನ ಸುಜಿ ಬೇಟ್ಸ್ ಈ ಹಿಂದೆ ತಲಾ 13 ಶತಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರು. ಇದೀಗ ಮಂಧಾನ, ಅವರನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದ್ದಾರೆ. ಅಂತಿಮವಾಗಿ ಮಂಧಾನ ಈ ಪಂದ್ಯದಲ್ಲಿ 95 ಎಸೆತಗಳನ್ನು ಎದುರಿಸಿ 10 ಬೌಂಡರಿ ಮತ್ತು 4 ಸಿಕ್ಸರ್‌ ಸಹಿತ 109 ರನ್ ಗಳಿಸಿ ಔಟಾದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:55 pm, Thu, 23 October 25