
2025 ರ ಏಷ್ಯಾಕಪ್‌ನ (Asia Cup 2025) ಆರನೇ ಪಂದ್ಯದಲ್ಲಿ ಟೀಂ ಇಂಡಿಯಾ ಪಾಕಿಸ್ತಾನವನ್ನು (India vs Pakistan) ಏಳು ವಿಕೆಟ್‌ಗಳಿಂದ ಸೋಲಿಸುವ ಮೂಲಕ ಬದ್ಧವೈರಿಗೆ ತಕ್ಕ ತಿರುಗೇಟು ನೀಡಿತು. ಆದರೆ ಪಂದ್ಯದ ನಂತರ ಉಭಯ ತಂಡಗಳ ನಡುವಿನ ಈ ಕಾಳಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ವಾಸ್ತವವಾಗಿ ಪಂದ್ಯದ ಟಾಸ್ನಿಂದ ಹಿಡಿದು ಪಂದ್ಯ ಮುಗಿಯುವವರೆಗೂ ಭಾರತ ಹಾಗೂ ಪಾಕ್ ಆಟಗಾರರ ನಡುವೆ ಯಾವುದೇ ಮಾತುಕತೆ ಇರಲಿಲ್ಲ. ಇದರ ಜೊತೆಗೆ ಉಭಯ ತಂಡಗಳ ನಾಯಕರು ಟಾಸ್ ಸಮಯದಲ್ಲಿ ಹಸ್ತಲಾಘವ ಮಾಡಲಿಲ್ಲ ಹಾಗೆಯೇ ಮುಖ ಕೊಡು ನೋಡಲಿಲ್ಲ. ಪಂದ್ಯ ಮುಗಿದ ಬಳಿಕ ಟೀಂ ಇಂಡಿಯಾ ಆಟಗಾರರು ಪಾಕಿಸ್ತಾನಿ ಆಟಗಾರರಿಗೆ ಶೇಕ್ ಹ್ಯಾಂಡ್ ಮಾಡಲಿಲ್ಲ. ಇದು ಕ್ರೀಡಾ ಸ್ಫೂರ್ತಿಗೆ ವಿರುದ್ಧವಾಗಿದೆ ಎಂದು ಪಾಕಿಸ್ತಾನ ತಂಡ ದೂರುತ್ತಿದೆ. ಹೀಗಾಗಿ ಟೀಂ ಇಂಡಿಯಾ ಆಟಗಾರರು ಐಸಿಸಿಯಿಂದ ಶಿಕ್ಷೆಗೆ ಗುರಿಯಾಗುತ್ತಾರಾ? ನಿಯಮ ಏನು ಹೇಳುತ್ತದೆ ಎಂಬುದನ್ನು ನೋಡುವುದಾದರೆ..
ಮೇಲೆ ಹೇಳಿದಂತೆ ಭಾರತ ಶೇಕ್ ಹ್ಯಾಂಡ್ ಮಾಡದಿರುವುದರ ಜೊತೆಗೆ ಪಂದ್ಯದ ಪ್ರಸ್ತುತಿಯಲ್ಲಿ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ನೀಡಿದ ಹೇಳಿಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಸಮಾಧಾನಕ್ಕೆ ಕಾರಣವಾಗಿದೆ. ವಾಸ್ತವವಾಗಿ ಪಂದ್ಯದ ಪ್ರಸ್ತುತಿಯಲ್ಲಿ ಸೂರ್ಯ, ಏಪ್ರಿಲ್‌ನಲ್ಲಿ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಅಮಾಯಕ ಭಾರತೀಯರು ಪ್ರಾಣ ಕಳೆದುಕೊಂಡ ಸಂತ್ರಸ್ತರಿಗೆ ಹಾಗೂ ಭಾರತೀಯ ಸಶಸ್ತ್ರ ಪಡೆಗಳಿಗೆ ಈ ಗೆಲುವನ್ನು ಅರ್ಪಿಸಿದರು. ಇದು ಪಾಕ್ ಕ್ರಿಕೆಟ್ ಮಂಡಳಿಯನ್ನು ಕೆರಳಿಸಿದ್ದು, ಪಾಕಿಸ್ತಾನ ಕ್ರಿಕೆಟ್ ತಂಡದ ವ್ಯವಸ್ಥಾಪಕ ನವೇದ್ ಅಕ್ರಮ್, ಇದು ‘ಆಟದ ಉತ್ಸಾಹಕ್ಕೆ ವಿರುದ್ಧವಾಗಿದೆ’ ಎಂದು ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್‌ಗೆ ದೂರು ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.
IND vs PAK: ಪಾಕ್ ವಿರುದ್ಧ ಆಡಲು ಟೀಂ ಇಂಡಿಯಾಗೆ ಒತ್ತಡ ಹೇರಿತಾ ಬಿಸಿಸಿಐ? ಸುರೇಶ್ ರೈನಾ ಸ್ಫೋಟಕ ಹೇಳಿಕೆ
ಪಾಕಿಸ್ತಾನ ನೀಡಿರುವ ಈ ದೂರನ್ನು ಐಸಿಸಿ ಗಂಭೀರವಾಗಿ ಪರಿಗಣಿಸುತ್ತದೆಯೇ ಎಂಬುದು ಪ್ರಶ್ನೆಯಾಗಿದೆ. ಐಸಿಸಿ ನೀತಿ ಸಂಹಿತೆಯ ಪ್ರಕಾರ, ‘ಆಟದ ಉತ್ಸಾಹಕ್ಕೆ ವಿರುದ್ಧವಾದ ನಡವಳಿಕೆ’ಯನ್ನು ವಿಭಾಗ 2.1.1 ರಲ್ಲಿ ಲೆವೆಲ್-1 ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ. ಈ ನಿಯಮವು ಇತರ ನಿರ್ದಿಷ್ಟ ನಿಯಮಗಳಲ್ಲಿ ಒಳಗೊಂಡಿರದ ಸಣ್ಣ ಘಟನೆಗಳಿಗೆ ಅನ್ವಯಿಸುತ್ತದೆ. ಇದರಲ್ಲಿ ಆಟದ ಗೌರವ ಮತ್ತು ಅದರ ಸಾಂಪ್ರದಾಯಿಕ ಮೌಲ್ಯಗಳನ್ನು ಅನುಸರಿಸುವುದು ಸೇರಿದೆ. ಯಾವುದೇ ನಡವಳಿಕೆಯು ಆಟಕ್ಕೆ ಅಪಖ್ಯಾತಿ ತರುತ್ತಿದೆ ಎಂದು ಕಂಡುಬಂದರೆ, ಅದು ಈ ವರ್ಗಕ್ಕೂ ಸೇರಬಹುದು. ಆದಾಗ್ಯೂ, ಅಂತಿಮ ನಿರ್ಧಾರವು ಮ್ಯಾಚ್ ರೆಫರಿ ಮತ್ತು ಐಸಿಸಿಯನ್ನು ಅವಲಂಬಿಸಿರುತ್ತದೆ.
ಭಾರತೀಯ ಆಟಗಾರರ ವಿರುದ್ಧದ ಆರೋಪಗಳು ಸಾಬೀತಾದರೆ, ಐಸಿಸಿ ವಾಗ್ದಂಡನೆಯ ಶಿಕ್ಷೆ ನೀಡಬಹುದು. ಇದಲ್ಲದೆ, ಆಟಗಾರರ ಪಂದ್ಯ ಶುಲ್ಕದ ಒಂದು ನಿರ್ದಿಷ್ಟ ಶೇಕಡಾವಾರು ಮೊತ್ತವನ್ನು ಕಡಿತಗೊಳಿಸಬಹುದು. ಹಾಗೆಯೇ ಒಂದು ಅಥವಾ ಎರಡು ಡಿಮೆರಿಟ್ ಅಂಕಗಳನ್ನು ನೀಡಬಹುದು. ಭವಿಷ್ಯದಲ್ಲಿ ಈ ರೀತಿಯ ಘಟನೆಗಳು ಜರುಗದಿರಲಿ ಎಂಬ ಕಾರಣಕ್ಕೆ ಐಸಿಸಿ ಈ ನಿರ್ಧಾರ ತೆಗೆದುಕೊಳ್ಳಬಹುದು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ